ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಂತ ಸೇತುವೆಗಳ ಸೆರಗು

Last Updated 26 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಅ ದೇಕೋ ಗೊತ್ತಿಲ್ಲ ಸಣ್ಣ ಸಣ್ಣ ಊರುಗಳ ಸೆಳೆತವೇ ವಿಚಿತ್ರ. ದೊಡ್ಡ ಶಹರಕ್ಕಿಂತ ಪುಟಾಣಿ ಊರುಗಳೇ ನನಗಿಷ್ಟ. ಅಂತಹ ಒಂದು ಊರಿಗೆ ಹೋದ ನನ್ನ ಅನುಭವ ತುಂಬಾ ರೋಚಕ.

ಗೆಳೆಯ ನಾಗರಾಜ್ ನಾನ್ ಬ್ಲಾಂಗ್ ಊರಿಗೆ ಹೋಗೋಣ ಎಂದು ಹೇಳಿದರೂ ಈ ಹೆಸರು ನನ್ನ ಸುಲಭದ ನೆನಪಿಗೆ ದಕ್ಕದು. ಶಿಲ್ಲಾಂಗ್‍ನಿಂದ ಡಾಕಿಗೆ ಹೋಗುವ ದಾರಿಯಲ್ಲೇ ಒಂದರ್ಧ ಗಂಟೆಯ ದಾರಿಯಲ್ಲಿ ಚಲಿಸಿದರೆ ಸಿಗುವ ಪುಟಾಣಿ ಗ್ರಾಮ ‘ನಾನ್ ಬ್ಲಾಂಗ್!’. ಹೆಸರ ತರ್ಜುಮೆಗೆ ನಿಲುಕದ ಹಳ್ಳಿ. ತಪ್ಪಿದ್ದರೆ ಕ್ಷಮಿಸಿ. ಕಾಡಿನ ಪುಟಾಣಿ ಬಳ್ಳಿ. ಊರಿನ ಅನುಕೂಲಕ್ಕೆ ಮಾಡಿಕೊಂಡ ವಿಚಿತ್ರ ಜೀವಂತ ಸೇತುವೆಗಳನ್ನು ಮಾತನಾಡಿಸುವ ಮಾತಾಗಿತ್ತು. ‘ಖಾಸಿ’ ಭಾಷೆ ಮಾತನಾಡಬಲ್ಲ ನಾಗರಾಜ್‍ನ ಇಬ್ಬರು ಗೆಳೆಯರೂ ಬಂದಿದ್ದರು. ಶಿಲ್ಲಾಂಗ್‌ನ ಮುಖ್ಯ ರಸ್ತೆಯಿಂದ ಬಲಕ್ಕೆ ಹೊರಳಿ ಹರಡಿಕೊಂಡ ಕಾಲು ಹಾದಿ ಹಿಡಿಯಲು ಸುಮಾರು ಅರ್ಧ ತಾಸು ಬೇಕಾಯ್ತು. ಊರ ಬಾಗಿಲಲಿ ಸಿಕ್ಕ ಇಬ್ಬರು ಖಾಸಿ ಮಂದಿಯನ್ನು ಜೊತೆ ಮಾಡಿಕೊಂಡೆವು.

ನೀರವ ಏಕಾಂತದಲಿ ಇನಿಯನ ಬರುವಿಕೆಗೆ ಕಾದು ಕುಳಿತಂತಿರುವ ಒಂಟಿ ಮನೆಗಳು. ಮನೆ ಎದುರಿಗೆ ಬಿದರ ಬೇಲಿ. ಇಣುಕುವ ಪುಟಾಣಿ ಪೋರರು. ರಗ್ಗು ಹೊದ್ದುಕೊಂಡೇ ಬೀಡಿ ಎಳೆವ ಮುಗ್ಧ ಜನರ ವಿಚಿತ್ರ ನೋಟ. ಚಳಿಗೆ ಪ್ರಿಯತಮೆಯ ಅಪ್ಪುಗೆಯಂತಹ ಸೂರ್ಯನ ಬಿಸಿಲು ಆಹ್ಲಾದಕರವಾಗಿತ್ತು.

ಅರಳಿನಿಂತ ಮುಖಾರವಿಂದವನು ಹೊತ್ತು 9ರ ಹೊತ್ತಿಗೆ ನಾನ್ ಬ್ಲಾಂಗ್‍ನ ಹೊರಳು ದಾರಿ ಎದುರಿಗಿದ್ದೆವು. ಸರಿಸುಮಾರು 5-6 ಕಿ.ಮೀ. ಉದ್ದದ ಪ್ರಪಾತದ ಹಾವಿನ ಹಾದಿಗೆ ಅವರಿಬ್ಬರು ನಮ್ಮನ್ನು ತಂದು ನಿಲ್ಲಿಸಿ ಇಳಿಯಿರಿ ಎನ್ನಬೇಕೆ! ಅಕ್ಷರಶಃ ಆತ್ಮಹತ್ಯೆಗೆ ಸಜ್ಜಾದವರಂತೆ ನಿಂತುಬಿಟ್ಟೆವು. ನಮ್ಮ ಗ್ರಹಚಾರಕ್ಕೆ ಬುತ್ತಿ ಗಂಟನ್ನು ಗಾಡಿಯಲ್ಲೇ ಬಿಟ್ಟು ಬಂದಿದ್ದೆವು. ಇನ್ನೇನು ಮಾಡುವುದು ಬಂದಾಯಿತೆಂದು ಏರಿಳಿವ ಸಾಹಸಕ್ಕೆ ಅಂಟಿಕೊಂಡೆವು.

ಬಿದಿರ ಹಿಂಡಿಲುಗಳ ನಡುವೆ ಪ್ರಪಾತದ ಹಾದಿ ನುಂಗುವಂತೆ ಬಾಯಿ ತಳೆದಿತ್ತು. ಅಬ್ಬಾ ಎನಿಸುವ ಇಳಿಜಾರಿಗೆ ಮುಖಮಾಡಿದ್ದೆವು. ಹೆಜ್ಜೆ ಜಾರಿದರೆ ಪ್ರಪಾತದ ಆ ತುದಿಗೆ. ಯಾರೋ ಬೇಕಂತಲೇ ಬೇಕಾಬಿಟ್ಟಿ ಎಸೆದ ಅನಾಥ ಅಂಕುಡೊಂಕಿನ ನಡು ಹರಿವ ನಟೋರಿಯಸ್ ಹಾದಿ. ಹಳ್ಳಿಯಿಂದ ಕೇಳುವ ಮಕ್ಕಳ ಕೇಕೆ. ದೊಡ್ಡವರ ದನಿಯ ಪ್ರತಿಧ್ವನಿ! ಗಾಳಿಗೆ ಮೂಗೊಡ್ಡಿದರೆ ಕಾಡು ಏಲಕ್ಕಿಯ ಘಮಲು. ಇಳಿವ ಪ್ರತಿ ಹೆಜ್ಜೆಯಲೂ ಸೊಂಟದ ನೆಟ್ಟು ಬೋಲ್ಟುಗಳ ಟಿಕ್ ಟಿಕ್ ಸದ್ದು. ಬಾಕಿ ಎಲ್ಲಾ ಮೌನ.

ಮೊದಲಿದ್ದ ದೊಡ್ಡ ಮರಗಳ ದಟ್ಟನೆ ಕಡಿಮೆಯಾಗಿ ಬಿದಿರ ಹೊದ್ದ ಬೆಟ್ಟ ಸಾಲು ಶುರುವಾಗಿತ್ತು. ಇಲ್ಲಿನ ಬಿದಿರಿಗೆ ಅದರದೇ ಆದ ಅಸ್ಮಿತೆ ಇದೆ. ತೀರಾ ಉದ್ದವಾಗಿ ಬೆಳೆಯದ ಕುಳ್ಳ ಜಾತಿಯ ಸದೃಢವಾದ ಬಿದಿರು ಇಲ್ಲಿನದು. ಸ್ಥಳೀಯ ಹೆಂಗಸರು ಮತ್ತು ಗಂಡಸರು ಎಲೆ ಅಡಿಕೆ ಜಗಿಯುತ್ತಲೊ, ಹಾಡು ಕೇಳುತ್ತಲೊ, ಕೆಲವರು ಮಕ್ಕಳನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡು ಆರಾಮಾಗಿ ಇಳಿದು ಹೋಗುತ್ತಿದ್ದರು. ಕೆಲವರು ನಿಧಾನಕ್ಕೆ ಏರಿ ಬರುತಲಿದ್ದರು! ಅವರು ತಮ್ಮೊಳಗೆ ಚಯಾ ಪಯಾವೆಂದು ಹರಟುತ್ತಿದ್ದ ಖಾಸಿ ನುಡಿಗಳೊಂದೂ ನನ್ನ ಮಿದುಳಿನಲ್ಲಿ ದಾಖಲಾಗಲೇ ಇಲ್ಲ! ನಮ್ಮ ನಡುವಿನ ಸಾಮಾನ್ಯ ಶಬ್ದ ಶಿಲ್ಲಾಂಗ್ ಒಂದೇ
ಎಂದು ಗೆಳೆಯ ನಾಗರಾಜ್ ಜತೆ ತಮಾಷೆ ಮಾಡುತ್ತಾ ಇಳಿಯ ತೊಡಗಿದೆವು.

ಖಾಸಿ ಜನಾಂಗದ ಅಜ್ಜನೊಬ್ಬ ನಮ್ಮಿಬ್ಬರನ್ನು (ನನ್ನನ್ನು ಮತ್ತು ಗೆಳೆಯ ನಾಗರಾಜ್‌ನನ್ನು) ತಬ್ಬಿಕೊಂಡು ಖುಷಿಪಟ್ಟ! ಕಣಿವೆಯ ಎಡ ಮತ್ತು ಬಲ ಮಗ್ಗಲುಗಳಲ್ಲಿ ಜೀವಂತ ಸೇತುವೆಗಳ ತೋರಣಗಳನ್ನೇ ನಿರ್ಮಿಸಿದ್ದಾರೆ ಇಲ್ಲಿನ ಸ್ಥಳೀಯರು. ಅರ್ಧ ದಾರಿಗೆ ಕ್ರಮಿಸುತ್ತಲೆ ನಮ್ಮ ತಂಡದ ಲಕ್ಷ್ಮಿನಾರಾಯಣ ದಾರಿತಪ್ಪಿ ಮುಂದೆ ಹೋಗಿದ್ದರು. ಜೊತೆಯಾದ ಸ್ಥಳೀಯ ಖಾಸಿ ಗೆಳೆಯ ಸ್ಮಾಯಿಲ್ ಆತನನ್ನು ಕರೆತರಲು ಪುಟ ಪುಟನೇ ಕೆಳಗೋಡಿ ಕ್ಷಣಾರ್ಧದಲ್ಲಿ ಮೇಲೆ ಬಂದಿದ್ದ. ಇನ್ನೊಬ್ಬ ನಮ್ಮ ಖಾಸಿ ಜೊತೆಗಾರ ಸಿಮಜಿನ್‌ನ ಕೈಲ್ಲೊಂದು ವಿಚಿತ್ರ ಕತ್ತಿ ಯಾವಾಗಲೂ ತೊನೆದಾಡುತ್ತಲೇ ಇರುತ್ತಿತ್ತು. ಆತ ಮೇಲೆ ಬರುವುದರೊಳಗೆ ಎರಡು ಬೀಡಿ ಎಳೆದು ಬಿಸಾಕಿದ್ದ ಆಸಾಮಿ.

ಲಕ್ಷ್ಮಿನಾರಾಯಣ ಮೇಲೆ ಬರುತ್ತಲೇ ಆತನನ್ನು ಜೀವಂತ ಸೇತುವೆಗಳಿರುವ ದಾರಿಗೆ ನೂಕಿದೆವು. ಇಡಿ ಊರಿಗೂರೇ ಹಳ್ಳ ಕೊಳ್ಳ. ಈ ಕೊಳ್ಳಗಳನ್ನು ದಾಟಿಕೊಳ್ಳಲು ಅವರೇ ರಚಿಸಿಕೊಂಡ ನೂರಾರು ವರ್ಷಗಳಷ್ಟು ಹಳೆಯ ಜೀವಂತ ಸೇತುವೆಗಳು. ಮನುಜನ ಸೃಜನಶೀಲತೆಯ ಪರಾಕಾಷ್ಠೆ. ಸಿಮೆಂಟು ರಾಡುಗಳಿಲ್ಲದ ಕಾಲದಲ್ಲಿ ಬೇರು ನಾರುಗಳನ್ನು ಪಳಗಿಸಿದ ಪರಿ ಅನನ್ಯ. ಆಲದಂತಹ ಮರಗಳನ್ನು ಬಿದಿರಿನ ಬೊಂಬಿನೊಳಗೆ ತೂರಿಸಿ ಮತ್ತೊಂದು ಕಡೆ ಬರುವಂತೆ ನೋಡಿಕೊಳ್ಳುವರು. ಹೀಗೆ ತೂರಿದ ಬೇರಿಗೆ ಆಚೆ ಕಡೆಯ ಮತ್ತೊಂದು ಬೇರಿನೊಂದಿಗೆ ಹೆಣಿಗೆ ಹಾಕಲಾಗುತ್ತದೆ. ಅಂತಹುದೇ ಇನ್ನೊಂದು ಮರದ ಬೇರನ್ನು ಆಚೆಯ ತುದಿಯಿಂದ ಈಚೆಗೆ ಹರಿಯ ಬಿಡಲಾಗುತ್ತದೆ. ಒಟ್ಟು ಎರಡು ದೊಡ್ಡ ಬೇರುಗಳ ಮಹಾಜಾಲವೇರ್ಪಟ್ಟು ಒಂದರೊಳಗೆ ಬೆಸೆದು ಸೇತುವೆ ತಯಾರಾಗುತ್ತದೆ. ಕಾಲದ ತೆಕ್ಕೆಯಲಿ ಕರಗದ ಈ ಸೇತುವೆಗಳು ಇನ್ನೂ ಜೀವಂತ. ಇಂತಹ 25 ಸೇತುವೆಗಳಿವೆ ಎಂದ ಖಾಸಿ ಮಾರ್ಗದರ್ಶಕ ಗೆಳೆಯ! ಪ್ರತೀ ಸೇತುವೆಗೂ ಒಂದೊಂದು ಹೆಸರು. ನಾಮಫಲಕ ತೂಗುಹಾಕಲಾಗಿದೆ. ಕೆಲವು ಬೋರ್ಡುಗಳು ಮಳೆಗಾಳಿಗೆ ಹಾರಿಹೋಗಿವೆ. ಹೀಗೆ ಒಂದಾದ ಮೇಲೊಂದರಂತೆ 8 ಜೀವಂತ ಸೇತುವೆಗಳನ್ನು ನೋಡಿದೆವು. ಪ್ರತಿಯೊಂದು ಮತ್ತೊಂದರಂತಿಲ್ಲ! ಕೊನೆಗೆ ನೋಡಿದ ಎಂಟನೆಯ ಸೇತುವೆಯಂತೂ ಅತ್ಯದ್ಭುತ!

ಊಟವಿಲ್ಲದೆ ಹೊಟ್ಟೆ ಚುರುಗುಟ್ಟುತಲಿತ್ತು. ಅಂತೂ ಸರಪಂಚನ ಮನೆಯಲ್ಲಿ ಚಹಾ ಸತ್ಕಾರವಾಯಿತು. ಚಹಾದ ಜೋಡಿ ಬಿಸ್ಕೀಟು ಬಂತು. ಮುಲಾಜಿಲ್ಲದೆ ಹೊಟ್ಟೆಗಿಳಿದ ಬಿಸ್ಕೀಟುಗಳ ಲೆಕ್ಕ ಸಿಕ್ಕಲಿಲ್ಲ. ಮತ್ತೆ ಆಸಾಮಿ ಬಿಸ್ಕೀಟು ಬೇಕೆಂದರೆ ಬರೋಬ್ಬರಿ 4ರಿಂದ 5 ಗಂಟೆ ನಡೆಯಲೇಬೇಕು. ದುಡ್ಡು ಕೊಟ್ಟರೆ ಬೇಡವೆಂದ. ಪಾಪದವ! ‘ನೀವು ನನ್ನ ಅತಿಥಿಗಳು ನಿಮ್ಮಲ್ಲಿ ದುಡ್ಡು ತೆಗೆದುಕೊಳ್ಳುವುದಾ?’ ಅವನ ಮುಗ್ಧ ಪ್ರಶ್ನೆ. ಅತಿಥಿ ದೇವೋಭವ. ಹ್ಞಾಂ, ಹೇಳುವುದನ್ನು ಮರೆತೆ. ಈ ಜಾಗದಲ್ಲೇ ಗುಡ್ಡಗಾಡು ಓಟ ನಡೆಯುವುದು! ನಡೆಯುವಂತಿಲ್ಲ ಓಡಬೇಕು. ಹ್ಹ ಹ್ಹ. ನನ್ನಂಥವರಿಗಲ್ಲ ಬಿಡಿ. ಗುಡ್ಡ ಹತ್ತಿಳಿಯುವುದೇ ಕಷ್ಟ! ಹಂಬಲದ ಬೆಂಬಲವೊಂದೇ ನನ್ನ ಪಾಲಿಗೆ ಉಳಿದಿರುವ ಕರ್ತೃತ್ವ ಶಕ್ತಿ.

ಪೂರ್ವೋತ್ತರ ರಾಜ್ಯಗಳಲ್ಲಿ ಹಗಲು ಬೇಗ ಇಳಿಯುವುದರಿಂದ ಮೂರಕ್ಕೆ ವಾಪಾಸು ಹೊರಡಲೇ ಬೇಕಾಯ್ತು. ದಾರಿ ಸನಿಹದ ಎರಡು ಬಿಳಲುಗಳ ಸೇತುವೆಗೆ ಇನ್ನೊಮ್ಮೆ ಬರುತ್ತೇವೆಂದು ನಮ್ಮೂರಿನ ದಾರಿ ಹಿಡಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT