ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜ ಉತ್ಸವ: ಗಜಲೋಕದ ಸಂಭ್ರಮ

Published 27 ಏಪ್ರಿಲ್ 2023, 5:57 IST
Last Updated 27 ಏಪ್ರಿಲ್ 2023, 5:57 IST
ಅಕ್ಷರ ಗಾತ್ರ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ.

ಯು.ಟಿ. ಆಯಿಶ ಫರ್ಝಾನ

ಅಸ್ಸಾಂ ರಾಜ್ಯದ ಯುನೆಸ್ಕೊ(UNESCO) ವಿಶ್ವ ಪರಂಪರೆಯ ತಾಣ ಕಾಜಿರಂಗ ರಾಷ್ಟ್ರೀಯ ಉದ್ಯಾನ ಒಂಟಿಕೊಂಬಿನ ಘೇಂಡಾಮೃಗಗಳ ಆವಾಸಸ್ಥಾನವಾಗಿದೆ. ವಿಶ್ವದಾದ್ಯಂತವಿರುವ ಒಟ್ಟು ಒಂಟಿಕೊಂಬಿನ ಘೇಂಡಾಮೃಗಗಳಲ್ಲಿ, ಮೂರನೇ ಎರಡರಷ್ಟು ಇದೇ ಕಾಜಿರಂಗ ಅರಣ್ಯದಲ್ಲಿವೆ. ಘೇಂಡಾಮೃಗಗಳ ಜೊತೆಗೆ, ಆನೆಗಳು, ಜಿಂಕೆಗಳೂ ಇವೆ. ಹಾಗೆಯೇ, ಇದು ಬೃಹತ್ ಜೌಗುಪ್ರದೇಶ ಜೀವಿಗಳ ಸಂತಾನೋತ್ಪತ್ತಿಯ ತಾಣವೂ ಹೌದು.

ಇಂಥ ವಿಶಿಷ್ಟ ವಿಶ್ವ ಪಾರಂಪರಿಕ ವನ್ಯಜೀವಿ ತಾಣದಲ್ಲಿ ಇದೇ  ಏಪ್ರಿಲ್ 7 ಮತ್ತು 8ರಂದು ‘ಗಜ್ ಉತ್ಸವ್‌-2023’ (gaj utsav) ನಡೆಯಿತು. ಗಜಲೋಕದ ಸಂಭ್ರಮವಾಗಿರುವ ಈ ‘ಗಜ್‌ ಉತ್ಸವ್‌’ದ ನೆನಪದಲ್ಲಿ ಉತ್ಸವದ ಉದ್ದೇಶ, ಆನೆಗಳ ಜೀವನ ಕ್ರಿಯೆ ಹಾಗೂ ಆನೆ ಕಾರಿಡಾರ್‌ಗಳ ಕುರಿತು ಇಲ್ಲಿ ವಿವರಿಸಲಾಗಿದೆ.

ಗಜ್ ಉತ್ಸವ್‌ 2023

  • ಆನೆಗಳ ಸಂರಕ್ಷಣಾ ಪ್ರಯತ್ನಗಳನ್ನು ಉತ್ತೇಜಿಸುವ ಸಲುವಾಗಿ 1991-92ರಲ್ಲಿ ಪ್ರಾರಂಭವಾದ ಯೋಜನೆ ‘ಪ್ರಾಜೆಕ್ಟ್ ಎಲಿಫೆಂಟ್’. ಈ ಯೋಜನೆ 30ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ‘ಗಜ್ ಉತ್ಸವ್‌ 2023’ ಅನ್ನು ಆಚರಿಸಿತು.

  • ಕಾಡು ಆನೆಗಳಿಗೆ ಬಹುದೊಡ್ಡ ನೆಲೆಯಾಗಿರುವ ಭಾರತದ ಎರಡನೇ ರಾಜ್ಯ ಅಸ್ಸಾಂ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು, ಸಾಕು ಆನೆಗಳಾಗಿ ಮನುಷ್ಯರ ಆರೈಕೆಯಲ್ಲಿ ಪೋಷಿಸಲ್ಪಡುತ್ತಿವೆ. ಈ ಕಾರಣಗಳಿಗಾಗಿ ಅಸ್ಸಾಂ ರಾಜ್ಯವನ್ನು ಗಜ್‌ ಉತ್ಸವಕ್ಕೆ ಆಯ್ಕೆ ಮಾಡಲಾಯಿತು.

  • ಈ ಉತ್ಸವ ‘ಪ್ರಾಜೆಕ್ಟ್ ಎಲಿಫೆಂಟ್‌’ನ ಭಾಗವಾಗಿದೆ. ಆನೆಗಳ ಕಾರಿಡಾರ್‌ಗಳು ಮತ್ತು ಆವಾಸಸ್ಥಾನಗಳನ್ನು ಸಂರಕ್ಷಿಸುವುದು, ಈ ಮೂಲಕ ಆನೆ-ಮನುಷ್ಯ ಸಂಘರ್ಷಗಳನ್ನು ತಡೆಯುವುದು, ಆನೆಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದು ಈ ಉತ್ಸವದ ಉದ್ದೇಶ.

ಆನೆಗಳ ಜೀವನ ಕ್ರಮ

  • ಆನೆಗಳ ಜೀವನಕ್ರಮ ಎಲ್ಲ ಸಸ್ತನಿಗಳಿಗಿಂತಲೂ ಭಿನ್ನವಾಗಿದೆ. ಈ ಆನೆಗಳು ಸುಮಾರು 22 ತಿಂಗಳು ಗರ್ಭಾವಸ್ಥೆ ಹೊಂದಿರುತ್ತವೆ (ಹಾಗಾಗಿಯೇ ವಿಳಂಬದ ಫಲಿತಾಂಶಗಳಿಗೆ ಗಜಪ್ರಸವ ಎಂಬ ಮಾತು ಬಂದಿದೆ).  

  • ಹೆಣ್ಣಾನೆಗಳು ನಾಲ್ಕರಿಂದ ಐದು ವರ್ಷಗಳಿಗೊಮ್ಮೆ ಮರಿಗಳಿಗೆ ಜನ್ಮ ನೀಡುತ್ತವೆ.

  • ಆನೆಗಳು ಹಿಂಡುಹಿಂಡಾಗಿ ಜೀವಿಸುತ್ತವೆ. ಜೊತೆಗೆ, ಅವುಗಳದ್ದೇ ಆದ ಒಂದು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿವೆ.

  • ಆನೆಗಳಲ್ಲಿ ಮಾತೃಪ್ರಧಾನ ವ್ಯವಸ್ಥೆ ಇದೆ. ಅಂದರೆ ಹೆಣ್ಣಾನೆಗಳೇ ಹಿಂಡಿನ ಅಥವಾ ಗುಂಪಿನ ನೇತೃತ್ವವಹಿಸುತ್ತವೆ. ಆ ಗುಂಪಿನಲ್ಲಿ ಇತರೆ ವಯಸ್ಕ ಹೆಣ್ಣು ಮತ್ತು ಮರಿಗಳ ಗುಂಪನ್ನು ಒಳಗೊಂಡಿರುತ್ತವೆ.

  • ಆದರೆ ಗಂಡು ಆನೆಗಳು ಪ್ರತ್ಯೇಕವಾಗಿ ಅಥವಾ ಮರಿ ಆನೆಗಳಿರುವ ಗುಂಪುಗಳಲ್ಲಿ ವಾಸಿಸುತ್ತವೆ. ಪ್ರತ್ಯೇಕವಾಗಿ ತಿರುಗುವ ಗಂಡಾನೆಯನ್ನು ಸಲಗ ಎನ್ನುತ್ತಾರೆ.

  • ಆನೆಯ ಸೊಂಡಿಲು 40,000 ಸ್ನಾಯುಗಳನ್ನು ಹೊಂದಿರುತ್ತದೆ. ಹಾಗಾಗಿಯೇ ಅವು ಅಷ್ಟು ಫ್ಲೆಕ್ಸಿಬಲ್ ಆಗಿವೆ. (ಮನುಷ್ಯನ ಇಡೀ ದೇಹದಲ್ಲಿರುವುದು 600ಕ್ಕೂ ಹೆಚ್ಚು ಸ್ನಾಯುಗಳು)

  • ಆನೆಯ ದಂತಗಳಿಗೆ ಒಮ್ಮೆ ಹಾನಿಯಾದರೆ ಅಥವಾ ದಂತವನ್ನು ಮುರಿದರೆ ಅಥವಾ ತೆಗೆದರೆ, ಅದು ಮತ್ತೆ ಬೆಳೆಯಲು ಸಾಧ್ಯವಿಲ್ಲ.

  • ಏಷ್ಯಾದ ಆನೆಗಳು ಆಫ್ರಿಕನ್ ಆನೆಗಳಿಗಿಂತ ಹಲವಾರು ವಿಧಗಳಲ್ಲಿ ಭಿನ್ನವಾಗಿರುತ್ತವೆ. ಅವುಗಳ ನಡುವೆ 10ಕ್ಕಿಂತ ಹೆಚ್ಚು ರೀತಿಯ ದೈಹಿಕ ವ್ಯತ್ಯಾಸಗಳಿವೆ.

  • ಉದಾಹರಣೆಗೆ, ಆಫ್ರಿಕನ್ ಜಾತಿಯ ಆನೆಗಳಲ್ಲಿ ಕಂಡುಬರುವ ಮೊರದಗಲದ ಕಿವಿಗಳಿಗೆ ಹೋಲಿಸಿದರೆ ಏಷ್ಯಾದ ಆನೆಗಳ ಕಿವಿಗಳು ಚಿಕ್ಕದಾಗಿರುತ್ತವೆ.

  • ಏಷ್ಯನ್ ಆನೆಗಳಲ್ಲಿ ಕೆಲವು ಗಂಡು ಆನೆಗಳು ಮಾತ್ರ ದಂತಗಳನ್ನು ಹೊಂದಿದ್ದರೆ, ಆಫ್ರಿಕನ್ ಆನೆಗಳಲ್ಲಿ ಗಂಡು ಮತ್ತು ಹೆಣ್ಣುಗಳೆರಡೂ  ದಂತಗಳನ್ನು ಹೊಂದಿರುತ್ತವೆ.

  • ಆಫ್ರಿಕನ್ ಜಾತಿಗಳಲ್ಲೂ ಸವನ್ನಾ  ಮತ್ತು ಕಾಡು ಆನೆಗಳು ಎಂಬ ಎರಡು ವಿಭಿನ್ನ ತಳಿಗಳು ಅಸ್ತಿತ್ವದಲ್ಲಿವೆ. ಅವು ಸ್ಪಷ್ಟವಾಗಿ ಪ್ರತ್ಯೇಕಿಸುವ ಹಲವಾರು ಗುಣಲಕ್ಷಣಗಳನ್ನು ಹೊಂದಿವೆ.

  • ಆಫ್ರಿಕನ್ ಸವನ್ನಾ ಆನೆಗಳಿಗೆ ಹೋಲಿಸಿದರೆ ಏಷ್ಯನ್  ಕಾಡಾನೆ ಮತ್ತು ಆಫ್ರಿಕನ್ ಕಾಡಾನೆಗಳು ಗಾತ್ರದಲ್ಲಿ ಚಿಕ್ಕದಾಗಿವೆ. ಆಫ್ರಿಕನ್ ಸವನ್ನಾ ಆನೆಗಳು, ಆನೆ ಜಾತಿಗಳಲ್ಲೇ ಅತಿದೊಡ್ಡ ಆನೆಗಳಾಗಿವೆ.

ಆನೆ ಕಾರಿಡಾರ್‌ಗಳು

  • ಆನೆ ಕಾರಿಡಾರ್‌– ಇದು ಆನೆಗಳ ಎರಡು ದೊಡ್ಡ ಆವಾಸಸ್ಥಾನಗಳನ್ನು ಸಂಪರ್ಕಿಸುವ ಒಂದು ದಾರಿ.

  • ಆನೆ ಕಾರಿಡಾರ್‌, ಕಾಡುಗಳ ವಿಘಟನೆಯ ಕಾರಣದಿಂದಾಗಿ ಸಂಭವಿಸುವ ಅಪಘಾತಗಳು ಮತ್ತು ಇತರ ಕಾರಣಗಳಿಂದ ಉಂಟಾಗುವ ಪ್ರಾಣಿಗಳ ಸಾವುಗಳನ್ನು ಕಡಿಮೆ ಮಾಡುತ್ತದೆ.

  • ಆನೆಗಳು ಸಂಚಾರಕ್ಕೆ ವಿಶಾಲವಾದ ಅರಣ್ಯಪ್ರದೇಶಗಳನ್ನು ಬಳಸುತ್ತವೆ. ಆದ್ದರಿಂದ ಅವುಗಳಿಗೆ ಸಹಜ ಜೀವನಶೈಲಿಯನ್ನು ಒದಗಿಸಿಕೊಡುವ ಸಲುವಾಗಿ ಆನೆ ಕಾರಿಡಾರ್‌ಗಳನ್ನು ರಕ್ಷಿಸುವುದು ಅವಶ್ಯಕವಾಗಿದೆ.

  • ಆನೆ ಕಾರಿಡಾರ್ ರಕ್ಷಣೆಯಿಂದ, ಅದೇ ಅರಣ್ಯವನ್ನು ಅವಲಂಬಿಸಿರುವ ಇತರ ಪ್ರಭೇದದ ಪ್ರಾಣಿಗಳ ನೈಸರ್ಗಿಕ ಆವಾಸಸ್ಥಾನದ ರೂಪಿಸುವಿಕೆಗೂ ಸಹಾಯ ಮಾಡುತ್ತದೆ.

  • ಲಭ್ಯ ಮಾಹಿತಿಯ ಪ್ರಕಾರ ಶೇ 40  ಆನೆ ಮೀಸಲು ಅರಣ್ಯಗಳು ಯಾವುದೇ ಸಂರಕ್ಷಿತ ಉದ್ಯಾನಗಳು ಮತ್ತು ಅಭಯಾರಣ್ಯಗಳ ವ್ಯಾಪ್ತಿಗೆ ಸೇರದ ಕಾರಣ, ಆನೆಗಳು ಅಪಾಯದಂಚಿನಲ್ಲಿವೆ.

  • ಭಾರತದ 16 ರಾಜ್ಯಗಳಲ್ಲಿ ವಿಶೇಷವಾಗಿ ಪಶ್ಚಿಮ ಘಟ್ಟಗಳ ದಕ್ಷಿಣ ಭಾಗ, ಈಶಾನ್ಯ ಭಾರತ, ಪೂರ್ವ ಭಾರತ, ಮಧ್ಯ ಭಾರತ ಮತ್ತು ಉತ್ತರ ಭಾರತದಲ್ಲಿ ಆನೆಗಳು ವ್ಯಾಪಕವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT