ಗುರುವಾರ , ಡಿಸೆಂಬರ್ 5, 2019
24 °C

ಆಕರ್ಷಕ ಕೋಡುಗಳ ಸಿಕಾ

Published:
Updated:

ಜಪಾನಿನಲ್ಲಿ ಸಿಕಾ ಎಂದರೆ ಜಿಂಕೆ. ಇದು ಜಪಾನಿನ ತಳಿಯೆಂದೇ ಹೆಸರು ಪಡೆದಿದೆ. ಇದರ ವೈಜ್ಞಾನಿಕ ಸರ್ವಸ್‌ ನಿಪ್ಪೊನ್ (Cervus nippon)ಹೆಸರು. ಇಂದಿನ ಪ್ರಾಣಿ ಪ್ರಂಪಚದಲ್ಲಿ ತಿಳಿದುಕೊಳ್ಳೋಣ.

ಹೇಗಿರುತ್ತೆ?

ಸಿಕಾ ಜಿಂಕೆಯನ್ನು ಕಪ್ಪು ಬಿಳಿ ಚುಕ್ಕೆ ಇರುವ ಜಿಂಕೆಯೆಂದೂ, ಜಪಾನೀಸ್‌ ಜಿಂಕೆಯೆಂದೂ ಕರೆಯಲಾಗುತ್ತದೆ. ಸಣ್ಣ ಅಥವಾ ಮಧ್ಯಮ ಗಾತ್ರದಲ್ಲಿರುತ್ತದೆ. ಪುಟ್ಟ ತಲೆ ಹಾಗೂ ಚಿಕ್ಕ ಕಾಲುಗಳಿರುತ್ತದೆ. ಹಳದಿ ಮಿಶ್ರಿತ ಕಂದುಬಣ್ಣ ಅಥವಾ ಕೆಂಪು ಮಿಶ್ರಿತ ಕಂದುಬಣ್ಣದಲ್ಲಿರುತ್ತದೆ. ಕಾಲಕ್ಕೆ ತಕ್ಕಂತೆ ಮೈಮೇಲಿನ ಚುಕ್ಕಿಗಳ ಬಣ್ಣಗಳು ಬದಲಾಗುತ್ತದೆ. ಬೇಸಿಗೆಯಲ್ಲಿ ಬಿಳಿ ಚುಕ್ಕೆ  ಹೆಚ್ಚಿದ್ದರೆ, ಚಳಿಗಾದಲ್ಲಿ ಗಾಢ ಬೂದು ಬಣ್ಣದಲ್ಲಿರುತ್ತದೆ. ಕೆಲವೊಮ್ಮೆ ಚುಕ್ಕೆಗಳೇ ಇಲ್ಲದಂತೆ ಕಾಣುತ್ತದೆ.  ಕುಳ್ಳಗಿದ್ದು, ಏನಾದರೂ ಅಪಾಯ ಸಂಭವಿಸಿದರೆ ದೊಡ್ಡದಾಗಿ ಕೂಗಿಕೊಳ್ಳುತ್ತದೆ. 1.7 ಮೀಟರ್‌ ಎತ್ತರದವರೆಗೆ ಹಾರಬಲ್ಲದು.  ಇದರ ಕಣ್ಣುಗಳು ಮುಖದ ತುದಿಯಲ್ಲಿದ್ದು, ಅಕ್ಕಪಕ್ಕ ನಡೆಯುವ ಸೂಕ್ಷ್ಮ ಸಂಗತಿಗಳನ್ನು ಬಹುಬೇಗ ಅರಿಯುತ್ತದೆ. 

ಎಲ್ಲಿರುತ್ತೆ? 

ಪೂರ್ವ ಏಷ್ಯಾ ಹಾಗೂ ಜಪಾನ್‌ನಲ್ಲಿ ಹೆಚ್ಚಾಗಿ ನೋಡಬಹುದು. ಇದಲ್ಲದೇ ಯುರೋಪ್‌, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಫಿಲಿಫೈನ್ಸ್‌ನಲ್ಲಿರುತ್ತದೆ. ದಟ್ಟ ಕಾಡು, ಸಸ್ಯ ಪ್ರಭೇದಗಳು ಹೆಚ್ಚಿರುವ ಪ್ರದೇಶದಲ್ಲಿ ಇರುವುದೆಂದರೆ ಇದಕ್ಕಿಷ್ಟ. ಸಿಹಿ ನೀರಿನ ಕೊಳಗಳ ಸಮೀಪವೂ ಇದು ಅಡ್ಡಾಡ್ಡಿಕೊಂಡು ಇರುತ್ತದೆ. 

ಆಹಾರ ಪದ್ಧತಿ ?‌

ಇದು ಸಸ್ಯಹಾರಿ. ಎಳೆಯ ಮರದ ಕೊಂಬೆಗಳು, ಉದುರಿ ಬಿದ್ದ ಎಲೆಗಳು, ಹುಲ್ಲು ಹಾಗೂ ಪೊದೆ, ಬಿದಿರಿನ ಮೆಳೆ, ಜೋಳ ಹಾಗೂ ಸೋಯಾ ಕಾಳು ಸೇರಿ ಬಗೆ ಬಗೆಯ ಕಾಳುಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತದೆ. 

ವರ್ತನೆ ಮತ್ತು ಜೀವನಕ್ರಮ 

ಇದು ರಾತ್ರಿಯಲ್ಲಿ ಚಟುವಟಿಕೆಯಿಂದ ಇರುತ್ತದೆ. ಹಗಲಿನಲ್ಲಿ ಆಹಾರಕ್ಕಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುತ್ತದೆ.  ಸಾಮಾನ್ಯವಾಗಿ ಎರಡರಿಂದ ಮೂರು ಸದಸ್ಯರಿರುವ ಗುಂಪುಗಳನ್ನು ರಚಿಸಿಕೊಳ್ಳೂತ್ತದೆ.  ಸಾಮಾನ್ಯವಾಗಿ ಪ್ರಾದೇಶಿಕ ಗಡಿಗಳನ್ನು ಗುರುತಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದಕ್ಕಾಗಿಯೇ ಈ ಜಿಂಕೆಗಳ ನಡುವೆ ಕಾದಾಟ ನಡೆಯುತ್ತದೆ. ಇವು ನೀರಿನಲ್ಲಿ ಬಹಳ ಸರಾಗವಾಗಿ ಈಜಬಲ್ಲದು. ಜೀವಕ್ಕೆ ಆಪತ್ತು ಇದೆ ಅನಿಸಿದಾಗ ನೀರಿಗೆ ಹಾರಿ ಜೀವ ಉಳಿಸಿಕೊಳ್ಳುತ್ತದೆ. 

ಸಂತಾನೋತ್ಪತ್ತಿ 

ಇದು ಬಹುಸಂಗಾತಿಯನ್ನು ಬಯಸುವ ಪ್ರಾಣಿ. ಒಂದು ಗಂಡು ಸಿಕಾವು 12 ಹೆಣ್ಣು ಸಿಕಾಗಳೊಂದಿಗೆ ಸಂಬಂಧ ಇರಿಸಿಕೊಳ್ಳಬಲ್ಲದು. ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಮೂವತ್ತು ವಾರಗಳ ಕಾಲ ಗರ್ಭ ಧರಿಸುತ್ತದೆ. ಜಿಂಕೆ ಮರಿಗಳು ಅಮ್ಮನೊಂದಿಗೆ ಸುರಕ್ಷಿತವಾಗಿ ಇರಲು ಇಚ್ಛಿಸುತ್ತವೆ. ಈ ಮರಿಗಳನ್ನು ಸುಲಭವಾಗಿ ಬೇಟೆಯಾಡದಂತೆ ಪ್ರಕೃತಿಯೇ ನೆರವಾಗಿದ್ದು, ಸುವಾಸನೆ  ಬೀರುವ ಗ್ರಂಥಿಗಳು ನಿಷ್ಕ್ರಿಯವಾಗಿರುತ್ತದೆ. 10 ತಿಂಗಳವರೆಗೆ ಮೊಲೆಹಾಲು ಕುಡಿದು ಬೆಳೆಯುತ್ತವೆ. ಒಂದು ವರ್ಷಗಳ ಮರಿಗಳನ್ನು ತಾಯಿ ಜಿಂಕೆ ಜತನ ಮಾಡುತ್ತದೆ.  18 ತಿಂಗಳ ನಂತರ ಪ್ರಾಯಕ್ಕೆ ಬರುತ್ತದೆ.

 ಸ್ವಾರಸ್ಯಕರ ಸಂಗತಿಗಳು 

* ಸಿಕಾ ಜಿಂಕೆಗಳ ಕೋಡುಗಳು ಮೂಳೆಯಿಂದ ರೂಪಿತಗೊಂಡಿದ್ದು, ಪ್ರತಿ ವರ್ಷವೂ ಉದುರಿ, ಹೊಸತು ಬೆಳೆಯುತ್ತದೆ. 

* ಸಂತಾನೋತ್ಪತ್ತಿ ಸಂದರ್ಭದಲ್ಲಿ ಈ ಕೋಡುಗಳು ಬಹಳ ಹರಿತವಾಗಿದ್ದು, ಆಕರ್ಷಕವಾಗಿ ಕಾಣುತ್ತದೆ. 

* ವಿಶಿಷ್ಟ ದನಿಗಳನ್ನು ಹೊರಡಿಸುತ್ತದೆ. ಕೆಲವೊಮ್ಮೆ ಅಳುವಂತೆ ಶಿಳ್ಳೆ ಹಾಕಿದರೆ, ಇನ್ನು ಕೆಲವೊಮ್ಮೆ ಹೂಂಕರಿಸುತ್ತದೆ.

ಗಾತ್ರ - 25 ರಿಂದ 110 ಕೆ.ಜಿ, ಜೀವಿತಾವಧಿ- 12ರಿಂದ 25  ವರ್ಷ , ಎತ್ತರ -50ರಿಂದ 110 ಸೆಂ.ಮೀ‌. 

ಪ್ರತಿಕ್ರಿಯಿಸಿ (+)