ಪಕ್ಷಿಗಳ ಸಂಗಾತಿ ಮಹೇಶ್‌ ರೆಡ್ಡಿ

7

ಪಕ್ಷಿಗಳ ಸಂಗಾತಿ ಮಹೇಶ್‌ ರೆಡ್ಡಿ

Published:
Updated:

ವನ್ಯಜೀವಿ ಛಾಯಾಗ್ರಹಣದ ಆಸಕ್ತಿ ಬೆಳೆದಿದ್ದು ಹೇಗೆ?

ಕಾಡಿನ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ ಇತ್ತು. ಒಂಬತ್ತು ವರ್ಷಗಳ ಹಿಂದೆ ಸ್ನೇಹಿತರ ಜೊತೆ ಪ್ರವಾಸ ಹೋಗಿದ್ದೆ. ಆಗ ಪ್ರಾಣಿ, ಪಕ್ಷಿಗಳ ಬಗ್ಗೆ ಆಸಕ್ತಿ ಹೆಚ್ಚಿತು. ಅವುಗಳ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಮೂಡಿತು. ಹಾಗಾಗಿ ಸೆಕೆಂಡ್ ಹ್ಯಾಂಡ್‌ ಕ್ಯಾಮೆರಾ ತೆಗೆದುಕೊಂಡು ಛಾಯಾಗ್ರಹಣ ಮಾಡಲು ಆರಂಭಿಸಿದೆ. ಪರಿಸರ, ವನ್ಯಜೀವಿಗಳ ಮೇಲೆ ಇದ್ದ ಆಸಕ್ತಿಯೇ ಛಾಯಾಗ್ರಹಣದ ಒಲವು ಬೆಳೆಸಿತು. 

ಈ ಕ್ಷೇತ್ರದ ಸವಾಲುಗಳೇನು?

ಪ್ರಾಣಿಗಳಿಗಿಂತಲೂ ಪಕ್ಷಿಗಳ ಬಗ್ಗೆ ನನಗೆ ವಿಶೇಷ ಆಸಕ್ತಿ. ಪಕ್ಷಿ ಸಂಕುಲದ ಬೆನ್ನುಹತ್ತಿ ಛಾಯಾಚಿತ್ರ ತೆಗೆಯುವುದು ಸುಲಭದ ಮಾತಲ್ಲ. ಹಾಗೆ ಬಂದು ಹೀಗೆ ಪುರ್‌ ಎಂದು ಹಾರುವ ಪಕ್ಷಿಗಳ ಚಿತ್ರಕ್ಕಾಗಿ ಗಂಟೆಗಟ್ಟಲೆ ತಾಳ್ಮೆಯಿಂದ ಸಿದ್ಧವಾಗಿ ಕುಳಿತಿರಬೇಕು. ದಿನಗಟ್ಟಲೆ ಕಾದರೂ ಒಂದೋ ಎರಡೋ ಚಿತ್ರಗಳು ದೊರಕುತ್ತವಷ್ಟೆ. ಪ್ರಾಣಿಗಳು ಸಿಕ್ಕಾಗ ಬೆಳಕು ಸರಿಯಾಗಿ ಇರುವುದಿಲ್ಲ. ಅಲ್ಲದೇ ಛಾಯಾಗ್ರಹಣಕ್ಕಾಗಿ ಕಾಡಿನೊಳಗೆ ಹೋಗಲು ಪ್ರವೇಶ ಶುಲ್ಕವೂ ಅಧಿಕವಾಗಿದೆ.

(ಕೀಲ್‌ಬಿಲ್ಡ್‌ಟೋಕಾನ್‌ )

ಪಕ್ಷಿಗಳ ಬಗ್ಗೆಯೇ ನಿಮಗೇಕೆ ಆಸಕ್ತಿ?

ಪಕ್ಷಿಗಳಲ್ಲಿ ಸಾಕಷ್ಟು ವೈವಿಧ್ಯವಿದೆ. ಭಾರತದಲ್ಲಿಯೇ 1,200 ವಿಭಿನ್ನ ಪಕ್ಷಿಗಳಿವೆ. ನಾನು 300ರಿಂದ 400 ಹಕ್ಕಿಗಳನ್ನು ನೋಡಿರಬಹುದು. ಉಳಿದವನ್ನು ನೋಡುವ ಆಸೆಯಿದೆ.

ಮರೆಯಲಾಗದ ಅನುಭವ?

ಪ್ರಾಣಿ–ಪ‍ಕ್ಷಿಗಳ ಒಡನಾಟ ಪ್ರತಿಬಾರಿಯು ಹೊಸ ಅನುಭವ ನೀಡುತ್ತದೆ. ಕಾಡಿಗೆ ಹೋದಾಗಲೆಲ್ಲ ಹೊಸ ವಿಷಯ ಕಲಿಯುತ್ತಲೇ ಇರುತ್ತೇನೆ. ಕೆಲವೊಮ್ಮೆ ಪ್ರಾಣಿಗಳು ಬರುತ್ತವೇ ಎಂದುಕೊಂಡಿರುವುದೇ ಇಲ್ಲ. ಅಚಾನಕ್ಕಾಗಿ ಅವುಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ಕೊಡಗಿನಲ್ಲಿ ವರ್ನಲ್‌ ಹ್ಯಾಂಗಿಗ್‌ ಪ್ಯಾರಟ್‌ ಎಂಬ ಪಕ್ಷಿ ಸುಂದರವಾದ ಹೂವಿನ ಮೇಲೆ ಬಂದು ಕೂತ ಚಿತ್ರ ತೆಗೆದೆ. ಅದು ನನಗೆ ತುಂಬಾ ಇಷ್ಟ.

ಎಲ್ಲೆಲ್ಲಿ ಛಾಯಾಗ್ರಹಣ ಮಾಡಿರುವಿರಿ?

ಕಬಿನಿ, ಬಂಡೀಪುರ, ನಾಗರಹೊಳೆ, ಮಹಾರಾಷ್ಟ್ರ, ಅಸ್ಸಾಂ, ಉತ್ತರಾಖಂಡದಲ್ಲಿ, ಅಮೆರಿಕದ ಕೋಸ್ಟರಿಕಾದಲ್ಲಿ ಛಾಯಾಗ್ರಹಣ ಮಾಡಿದ್ದೇನೆ.

ಛಾಯಾಗ್ರಾಹಣದಲ್ಲಿ ವೃತ್ತಿ ಅವಕಾಶ ಹೇಗಿದೆ?

ಸ್ವಲ್ಪ ಕಷ್ಟವೇ. ಇಲ್ಲಿ ಸಂಪಾದನೆ ಕಡಿಮೆ. ಆದರೆ ಸಂತೋಷಕ್ಕೆ ಕೊರತೆ ಇಲ್ಲ.

ವನ್ಯಜೀವಿ ಛಾಯಾಗ್ರಾಹಕ ವಹಿಸ ಬೇಕಾದ ಎಚ್ಚರಿಕೆ..

ಸಫಾರಿಗೆ ಹೋಗುವಾಗ ತೊಂದರೆ ಇರುವುದಿಲ್ಲ. ಆನೆಗಳು ಇರುವ ಜಾಗದಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು. ವನ್ಯಜೀವಿಗಳಿಂದ ಛಾಯಾಗ್ರಾಹಕ ಅಂತರ ಕಾಯ್ದುಕೊಳ್ಳಬೇಕು. ಇದು ಪ್ರಾಣಿ, ಮನುಷ್ಯ ಇಬ್ಬರಿಗೂ ಒಳ್ಳೆಯದು. ನಮ್ಮ ನಡೆಯಿಂದ ವನ್ಯಜೀವಿಗಳಿಗೆ ತೊಂದರೆ ಆಗಬಾರದು ಎಂಬ ಪ್ರಜ್ಞೆ ಇರಬೇಕು. ಪ್ರಾಣಿ–ಪಕ್ಷಿಗಳ ಬಗ್ಗೆ ಚಿತ್ರ ತೆಗೆಯುವಾಗ ನಮ್ಮ ಗಮನವೆಲ್ಲ ಅದರ ಮೇಲೆಯೇ ಇರುತ್ತದೆ. ಈ ವೇಳೆ ಬೇರೆ ಪ್ರಾಣಿಗಳು ದಾಳಿ ಮಾಡುವ ಸಂಭವವಿರುತ್ತದೆ. ಹಾಗಾಗಿ ಸುತ್ತಮುತ್ತ ಗಮನಿಸಬೇಕು.

ಯುವ ಛಾಯಾಗ್ರಹಕರಿಗೆ ನಿಮ್ಮ ಸಲಹೆ...

ಛಾಯಾಗ್ರಾಹಕರಿಗೆ ವೃತ್ತಿಪರತೆ ಇರಬೇಕು. ಪ್ರಾಣಿಗಳ ಏಕಾಂತಕ್ಕೆ ಭಂಗ ತಂದಾಗ ಅವುಗಳಿಗೆ ಭಯ ಉಂಟಾಗುತ್ತದೆ. ಹಾಗಾಗಿ ಅವುಗಳಿಗೆ ತೊಂದರೆಯಾಗದಂತೆ ವರ್ತಿಸಬೇಕು. ಛಾಯಾಗ್ರಾಹಕರು ಅರಣ್ಯ ಇಲಾಖೆಯ ನಿಯಮಗಳನ್ನು ಮೀರದೆ ಕೆಲಸ ಮಾಡುವುದು ಅವಶ್ಯ.

(ಮಲಬಾರ್‌ ಗ್ರೇ ಹಾರ್ನ್‌ಬಿಲ್‌ )

ಛಾಯಾಗ್ರಹಣಕ್ಕೆ ಯಾವ ಕ್ಯಾಮೆರಾ ಬಳಸುತ್ತೀರಿ, ಏನೆಲ್ಲಾ ಉಪಕರಣಗಳನ್ನು ಕೊಂಡೊಯ್ಯುತ್ತೀರಿ?

ಕೆನನ್‌ 5ಡಿ ಮಾರ್ಕ್‌ 4, 500 ಎಂ.ಎಂ ಲೆನ್ಸ್‌, ಬ್ಯಾಟರಿ, ಮೆಮೊರಿ ಕಾರ್ಡ್‌ ಅಗತ್ಯ.ನಮ್ಮ ಅನುಕೂಲಕ್ಕೆ ನಾವು ಮಾಡಿಕೊಂಡಿರುವ ಗಡಿಗಳು ಪ್ರಾಣಿಗಳಿಗಿಲ್ಲ. ಕಾಡು ನಾಶವಾದಂತೆ ಪ್ರಾಣಿಗಳು ನಗರಕ್ಕೆ ಬರುತ್ತವೆ. ಅವುಗಳೊಂದಿಗೆ ನಾವು ಸಂಘರ್ಷಕ್ಕೆ ಇಳಿಯದೇ ಬೇರೆ ದಾರಿಯ ಮೂಲಕ ವನ್ಯಜೀವಿಗಳಿಂದ ಮಾ ನವನಿಗೆ ಆಗುತ್ತಿರುವ ಹಾನಿ ತಪ್ಪಿಸಬಹುದು. ಆದರೆ ಅಂತಹ ಪ್ರಯತ್ನಗಳು ಆಗುತ್ತಿರುವುದು ಕಡಿಮೆ.

(ಮಹೇಶ್‌ ರೆಡ್ಡಿ)

ಸಂಪರ್ಕಕ್ಕೆ: reddy5460@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry