ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಾಡಿಗಳ ಬೀಡು ಮಲ್ಯಾಡಿ

Last Updated 12 ಜೂನ್ 2018, 13:22 IST
ಅಕ್ಷರ ಗಾತ್ರ

ರಾತ್ರಿ ಬೆಂಗಳೂರಿನಿಂದ ಹೊರಟ ನಮ್ಮ ಕಾರು ಬೆಳಗಾಗುವ ಹೊತ್ತಿಗೆ ಸ್ನೇಹಿತನ ಮನೆಯಿದ್ದ ಕುಂದಾಪುರ ಸಮೀಪದ ತೆಕ್ಕಟ್ಟೆ ಗ್ರಾಮವನ್ನು ಸೇರಬೇಕಿತ್ತು. ಅಂದುಕೊಂಡಂತೆ ನಮ್ಮ ಡ್ರೈವರ್ ಕಾರನ್ನು ವೇಗವಾಗಿ ಓಡಿಸಿದ್ದ. ಮೊಬೈಲ್‍ನಲ್ಲಿ ತೋರಿಸಿದ ನೀಲಿ ಹಾದಿಯಗುಂಟ ಕಾರು ಓಡಿಸಿದ ನಮ್ಮ ಡ್ರೈವರ್ ಗಮ್ಯ ಸ್ಥಾನದಲ್ಲಿ ಕಾರು ನಿಲ್ಲಿಸಿ ನಿದ್ದೆಗೆ ಜಾರಿದ್ದ.

ಗಂಟೆ ಮೂರೂವರೆಯಾಗಿತ್ತು. ಹಾಗಾಗಿ ನಾನೂ ನಿದ್ದೆಗೆ ಜಾರಿದೆ. ಒಂದೂವರೆ ಗಂಟೆ ಕಳೆದಿರಬೇಕು ಅಷ್ಟೆ. ಒಂದಿಷ್ಟು ಹಕ್ಕಿಗಳ ಹಾಡು ಕಿವಿಗೆ ಅಪ್ಪಳಿಸಿತು. ನಿದ್ದೆ ಎದ್ದೋಡಿತು. ಕಣ್ಣು ಬಿಟ್ಟು ಆಚೀಚೆ ನೋಡಿದರೆ, ಸೂರ್ಯ ಇನ್ನೂ ಪೂರ್ವದಲ್ಲಿ ಮುಖ ತೋರಿಸಿರಿಲಿಲ್ಲ. ಮಬ್ಬುಗತ್ತಲು. ನಿಧಾನವಾಗಿ ಕಾರಿನಿಂದ ಇಳಿದು ಬಾಟಲಿ ನೀರಿನಿಂದ ಮುಖ ತೊಳೆದುಕೊಂಡು ನಿಚ್ಚಳಗೊಂಡು ಕಣ್ಣಾಡಿಸಿದೆ. ನಮ್ಮ ಕಾರು ಪುಟ್ಟ ಹಳ್ಳದ ದಂಡೆಯ ಬದಿಯಲ್ಲಿ ನಿಂತಿತ್ತು. ಸುತ್ತಲೂ ತೆಂಗಿನ ಮರಗಳ ಸಾಲು. ಒಂದಿಷ್ಟು ಎತ್ತರವಾದ ಮರಗಳು ಗಾಳಿಗೆ ಅತ್ತಿತ್ತ ಹೊಯಿದಾಡುತ್ತಿದ್ದವು. ಅಲ್ಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದರೆ ನಾವು ಎಲ್ಲೋ ಕಾಡಿನಲ್ಲಿ ಇದ್ದಂತಿತ್ತು. ಮೊಬೈಲ್ ನೆವಿಗೇಶನ್ ನಮ್ಮನ್ನು ಹಾದಿ ತಪ್ಪಿಸಿದೆ ಎಂದುಕೊಂಡೆ. ಅಷ್ಟರಲ್ಲಿ ಪೂರ್ವ ದಿಕ್ಕಿನಲ್ಲಿ ಕೊಂಚ ಬೆಳಕು ಕಾಣಿಸಿಕೊಳ್ಳತೊಡಗಿತು. ಆಗ ನಿಂತ ಜಾಗದಿಂದ ಹಿಂದಕ್ಕೆ ನೋಡಿದಾಗ ದೂರದಲ್ಲಿ ರಸ್ತೆ ಬದಿಯಲ್ಲಿನ ಕಲ್ಲಿನ ಮೇಲೆ ತೆಕ್ಕಟ್ಟೆ 1 ಕಿ.ಮೀ. ಅಂತ ಬರೆದಿತ್ತು. ಊರು ದಾಟಿ ನಾವು ಮುಂದೆ ಬಂದಿದ್ದೇವೆ ಅಂತ ಆಗ ಗೊತ್ತಾಯಿತು.

ಮತ್ತೆ ಕಾರು ಚಾಲು ಮಾಡಿ ತೆಕ್ಕಟ್ಟೆಯತ್ತ ಹೊರಡೋಣ ಎಂದು ಡ್ರೈವರ್‌ಗೆ ಹೇಳಲು ಮನಸ್ಸಾಗಲಿಲ್ಲ. ಕಾರಣ, ಆತ ರಾತ್ರಿ ಇಡೀ ಕಾರು ಓಡಿಸಿ ದಣಿದಿದ್ದ. ಹಾಗಾಗಿ ಆತನ ಗೊರಕೆಯ ನಿದ್ದೆಯನ್ನು ಕೆಡಿಸಲಿಲ್ಲ. ಇನ್ನೂ ಒಂದು ಗಂಟೆ ಮಲಗಲಿ ಎಂದು ಸುಮ್ಮನಿದ್ದೆ. ಕೆಲ ಸಮಯದ ಬಳಿಕ ಅದೇ ರಸ್ತೆಯಲ್ಲಿ ಎದುರುಬದಿಯಿಂದ ಸಾಂಬಾರ ಸೌತೆಗಳಿಂದ ತುಂಬಿದ ದೊಡ್ಡ ಬುಟ್ಟಿಯನ್ನು ಹೊತ್ತು ಬಂದ ವ್ಯಕ್ತಿಯೊಬ್ಬ ನಮ್ಮ ಕಾರಿನ ಬಳಿಗೆ ಬರುತ್ತಿದ್ದಂತೆ ನಿಂತುಬಿಟ್ಟ. ‘ಓಯ್ ನಿಮ್ದು ಯಾವುರಾಯಿತು? ಎಂಥ, ಹಕ್ಕಿ ನೋಡುಕೆ ಬಂದಿದ್ರಾ?’ ಎಂದು ನಗುಮೊಗದಿಂದ ಪ್ರಶ್ನಿಸಿದ.

ಆತ ಕೇಳಿದ ಮೊದಲ ಪ್ರಶ್ನೆಗೆ, ‘ನಮ್ಮದು ಬೆಂಗಳೂರು, ಫ್ರೆಂಡ್ ಮನೆಗೆ ಬಂದಿದ್ದೇವೆ. ಆದರೆ ನೀವು ಹಕ್ಕಿ ನೋಡುಕೆ ಅಂದ್ರಲ್ಲಾ... ಏನೂ ಅರ್ಥ ಆಗಿಲ್ಲ’ ಎಂದು ಕೇಳಿದೆ.

‘ಓ... ನೀವು ಹಕ್ಕಿ ನೋಡುಕೆ ಬಂದವರಲ್ಲ ಅಂತಾತು. ಇಲ್ಲೇ ಒಂಚೂರು ಮುಂದೆ ಹೋದ್ರೆ ಮಲ್ಯಾಡಿ ಸಿಕ್ಕತ್ತು. ಅಲ್ಲಿ ರಾಶಿ ರಾಶಿ ಹಕ್ಕಿಗಳು ಬಂದಿದ್ದವು. ಅದಕ್ಕೆ ದಿನ ಬೆಳಗಾಗತ್ತಿದ್ದಂಗೆ ಸುಮಾರು ಜನ್ರು ಬರ್ತಿತ್ರು ಮಾರಾಯ್ರೆ ಕ್ಯಾಮೆರಾ ಹಿಡ್ಕಂಡು... ಅದಕ್ಕೆ ಕೇಳ್ದೆ, ನಾ ಬತ್ತೆ ಮಾರಾಯ್ರೆ’ ಎಂದವ ಮುಂದಕ್ಕೆ ಹೆಜ್ಜೆ ಹಾಕಿದ್ದ.

ತಟ್ಟನೆ ಆತನನ್ನು ತಡೆದು ನಿಲ್ಲಿಸಿ, ಆ ವ್ಯಕ್ತಿಯಿಂದ ಎಲ್ಲಿ ಹಕ್ಕಿಗಳು ಬಂದಿವೆ, ಆ ಹಕ್ಕಿಗಳಿರುವ ಜಾಗಕ್ಕೆ ಹೇಗೆ ಹೋಗಬೇಕು ಎನ್ನುವ ಸಂಗತಿಯನ್ನು ತಿಳಿದುಕೊಂಡೆ. ಅಷ್ಟೊತ್ತಿಗೆ ನಮ್ಮಿಬ್ಬರ ಮಾತು ಕೇಳಿ ಎಚ್ಚರಗೊಂಡಿದ್ದ ಡ್ರೈವರ್ ಮುಖ ತೊಳೆದುಕೊಂಡ, ಕಾರನ್ನು ಚಾಲು ಮಾಡಿ ಆ ವ್ಯಕ್ತಿ ಹೇಳಿದ ಕಡೆಗೆ ಓಡಿಸಿದ. ಒಂದೆರಡು ನಿಮಿಷ ಆಗಿರಲಿಲ್ಲ. ರಸ್ತೆಯ ಎಡಬದಿಯಲ್ಲಿ ‘ಮಲ್ಯಾಡಿ ಪಕ್ಷಿಧಾಮಕ್ಕೆ ಸುಸ್ವಾಗತ’ ಎಂದು ನಾಮಫಲಕ ಕಾಣಿಸಿತು. ಅಲ್ಲಿಯೇ ಕಾರು ನಿಲ್ಲಿಸಿದೆವು. ಕಾರಿನ ಹಿಂಬದಿಯ ಡಿಕ್ಕಿಯಲ್ಲಿ ಭದ್ರವಾಗಿ ಮಲಗಿದ್ದ ಕ್ಯಾಮೆರಾವನ್ನು ಹೊರತೆಗೆದು ಲೆನ್ಸ್ ಅಳವಡಿಸಿದೆ. ಅದೇ ವೇಳೆಗೆ ಸೂರ್ಯ ಇಣುಕುತ್ತಿದ್ದ. ಹಕ್ಕಿಗಳು ರೆಕ್ಕೆ ಬಿಚ್ಚಿ ಸ್ವಚ್ಛಂದವಾಗಿ ಹಾರಾಡತೊಡಗಿದ್ದವು.

ಕೆಲ ಸಮಯದ ಬಳಿಕ ಹಕ್ಕಿಗಳು ತಮ್ಮ ಹಾರಾಟವನ್ನು ನಿಲ್ಲಿಸಿ ಅಲ್ಲಿದ್ದ ನೀರಿನಲ್ಲಿ ತೇಲಿಕೊಂಡು ಆಹಾರವನ್ನು ಹುಡುಕಾಡತೊಡಗಿದವು. ಆದರೆ ಅಲ್ಲಲ್ಲಿ ನೂರಾರು ಹಕ್ಕಿಗಳು ಗುಂಪು ಗುಂಪಾಗಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದ್ದವು. ಸೂಕ್ಷ್ಮವಾಗಿ ಕಣ್ಣಾಡಿಸಿದರೆ ನಿಜಕ್ಕೂ ಅವು ಧ್ಯಾನವನ್ನು ಮಾಡುತ್ತಿವೆ ಅನಿಸಿತು. ವಿಶೇಷವಾಗಿ ಅವು ಕಾವಿ ಬಟ್ಟೆಯನ್ನು ತೊಟ್ಟಂತೆ ಕಾಣುತ್ತಿದ್ದವು. ಅವುಗಳ ಮೈ ಸಂಪೂರ್ಣವಾಗಿ ಕಾವಿ ಬಣ್ಣವೇ ಆಗಿತ್ತು. ಸುಮಾರು ವರ್ಷಗಳಿಂದ ಹಕ್ಕಿಗಳ ಅಧ್ಯಯನದ ವಿದ್ಯಾರ್ಥಿಯಾದ ನನಗೆ ಅವು ವಿಶೇಷವಾಗಿ ಕಂಡವು.

ಚಳಿಗಾಲದಲ್ಲಿ ಹೆಚ್ಚಾಗಿ ಕಾಣುವಂತಹ ವಿದೇಶಿ ಹಕ್ಕಿಗಳು. ‘ರೂಡಿ ಶೆಲ್ಡಕ್’ ಎಂದು ಕರೆಯಲಾಗುವ ಈ ಹಕ್ಕಿಗಳು ಮಲ್ಯಾಡಿಯಲ್ಲಿ ಹೇರಳ ಪ್ರಮಾಣದಲ್ಲಿವೆ. ಬಾತು ಕೋಳಿಯ ಜಾತಿಗೆ ಸೇರಿದ ಈ ಹಕ್ಕಿಗಳನ್ನು ‘ಬ್ರಾಹ್ಮಿನಿ ಬಾತು’ ಎಂದು ಕರೆಯಲಾಗುತ್ತಿದೆ. ಎಲ್ಲ ಬಾತುಗಳಿಗಿಂತ ವಿಭಿನ್ನವಾದ ಬಣ್ಣವನ್ನು ಹೊಂದಿರುವ ರೂಡಿ ಶೆಲ್ಡಕ್‍ಗಳು ಸಂಘ ಜೀವಿಗಳು, ಸದಾ ಗುಂಪು ಗುಂಪಾಗಿಯೇ ಇರುತ್ತವೆ.

ವಲಸೆ ಹೋಗುವಾಗಲೂ ಅಷ್ಟೇ ಗುಂಪಾಗಿಯೇ ಹೋಗುತ್ತವೆ. ಏವ್ಸ್ ಎನ್ನುವ ವರ್ಗಕ್ಕೆ ಸೇರಿರುವ ಈ ಬಾತುಗಳು ಆಫ್ರಿಕಾದಲ್ಲಿ ಹೆಚ್ಚಾಗಿವೆ. ಪ್ರತಿವರ್ಷವೂ ನಮ್ಮ ದೇಶಕ್ಕೆ ಚಳಿಗಾಲಕ್ಕೆ ವಲಸೆ ಬರುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಮತ್ತೆ ಮರಳಿ ತಮ್ಮ ತವರು ದೇಶವನ್ನು ಸೇರಿಕೊಳ್ಳುತ್ತವೆ. ಸದ್ಯಕ್ಕೆ ರೂಡಿ ಶೆಲ್ಡಕ್‍ಗಳು ನಮ್ಮ ಮಲ್ಯಾಡಿಯಲ್ಲಿ ನೆಲೆಸಿವೆ.

ಈ ರೂಡಿ ಶೆಲ್ಡಕ್‍ಗಳು ಅನೇಕ ವರ್ಷಗಳಿಂದ ಮಲ್ಯಾಡಿಗೆ ಬರುತ್ತಿವೆ. ಅವುಗಳೊಂದಿಗೆ ಇತರೆ ವಲಸೆ ಹಕ್ಕಿಗಳು ಸಹ ಬರುತ್ತಿವೆ. ಅವುಗಳಿಗೆ ವಾಸಕ್ಕೆ ಯೋಗ್ಯವಾದ ಸ್ಥಳವನ್ನು ಸ್ಥಳೀಯರು ಗುರುತಿಸಿ ಕಾಪಾಡುತ್ತಿದ್ದಾರೆ. ನಿಜ ಹೇಳಬೇಕಂದರೆ ಮಲ್ಯಾಡಿ ಪಕ್ಷಿಧಾಮ ಆಗಿರುವ ಸಂಗತಿ ಆಶ್ಚರ್ಯಪಡುವಂತಿದೆ.

ಅನೇಕ ವರ್ಷಗಳ ಹಿಂದೆ ಮಲ್ಯಾಡಿ ಊರಿನ ಹೊರಗಿರುವ ಗದ್ದೆಗಳ ನಡುವೆ ನೀರು ಹರಿಯುವ ಸ್ಥಳದಲ್ಲಿ ಕೆಲಮಂದಿ ಮನೆಗಳನ್ನು ಕಟ್ಟಲು ಮಣ್ಣನ್ನು ಅಗೆದು ತೆಗೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಉಂಟಾದ ತಗ್ಗು ಪ್ರದೇಶದಲ್ಲಿ ಹೇರಳ ಪ್ರಮಾಣದಲ್ಲಿ ನೀರು ಸಂಗ್ರಹವಾಗತೊಡಗಿತು. ಸುಮಾರು 1.5 ಚದರ ಕಿ.ಮೀ. ವ್ಯಾಪ್ತಿಯ ಈ ಜಲತಾಣದ ಸುತ್ತಮುತ್ತ ಒಂದಿಷ್ಟು ಗಿಡಗಂಟಿಗಳು ಬೆಳೆದವು. ನೀರಿನ ನಡುವೆ ಸುಂದರವಾದ ಕಮಲಗಳು ಅರಳತೊಡಗಿದವು. ಮೀನುಗಳು ಜೀವಿಸತೊಡಗಿದವು.

ಆಗ ಚಳಿಗಾಲಕ್ಕೆ ಭೇಟಿಕೊಟ್ಟ ವಲಸೆ ಹಕ್ಕಿಗಳಾದ ಗೋಲ್ಡನ್ ಪ್ಲಾವರ್ಸ್, ಸ್ಯಾಂಡ್ ಪ್ಲಾವರ್, ವೈಟ್‍ನೆಕ್ಡ್ ಸ್ಟ್ರೋರ್ಕ್, ರಿವರ್ ಟರ್ನ್, ಬ್ರೌನ್‍ಹೆಡೆಡ್ ಗುಲ್, ಪ್ರಾಂಟಿನ್‍ಕೊಲ್, ಯಲ್ಲೊ ವ್ಯಾಗ್‍ಟೈಲ್, ಬ್ಲ್ಯಾಕ್ ನೇಪ್ಡ್ ಕಿಂಗ್‍ಫಿಷರ್, ಪೆಂಟೆಡ್ ಸ್ಟ್ರೋಕ್, ಬ್ಲಾಕ್ ಸ್ಲೀಟ್‍ಗಳು ಸೇರಿದಂತೆ ಅನೇಕ ಹಕ್ಕಿಗಳು ಪ್ರತಿವರ್ಷವೂ ಭೇಟಿ ನೀಡತೊಡಗಿವೆ.

ಕೆಲವು ಸ್ಥಳೀಯ ಹಕ್ಕಿಗಳಾದ ಸ್ಮಾಲ್‍ಬ್ಲೂ ಕಿಂಗ್‍ಫಿಷರ್, ವೈಟ್‍ಬ್ರಸ್ಟಡ್ ಕಿಂಗ್‍ಫಿಷರ್, ಫೈಡ್ ಕಿಂಗ್‍ಫಿಷರ್, ಹೆಬ್ಬಾತುಗಳು, ನಾಮು ಕೋಳಿಗಳು, ರಿವರ್‍ಟರ್ನ್, ಜಾನು ಬೆಳ್ಳಕ್ಕಿ, ಹರಟೆ ಮಲ್ಲಹಕ್ಕಿ, ಬಿಳಿ ಎದೆಯ ಮಿಂಚುಳ್ಳಿ, ನೀಲಕಂಠ, ಸಿಪಿಲೆ ಹಕ್ಕಿ, ಕೆಂಪು ಟಿಟ್ಟಿಭ, ಹಳದಿ ಟಿಟ್ಟಿಭ, ಹಸಿರು ಕಳ್ಳಿಪೀರ, ಮೊರನ್, ಚಿಕ್ಕ ಬೆಳ್ಳಕ್ಕಿ ಸೇರಿದಂತೆ ನೂರಾರು ಹಕ್ಕಿಗಳು ಕಾಯಂ ಆಗಿ ನೆಲೆನಿಂತಿವೆ. ಸ್ಥಳೀಯರ ಪ್ರೀತಿ, ಕಾಳಜಿಯಿಂದಾಗಿ ನಿರ್ಭಯದಿಂದ ಹಾಯಾಗಿವೆ.

ನೇರವಾಗಿ ತೆಕ್ಕಟ್ಟೆಯಲ್ಲಿನ ಸ್ನೇಹಿತರ ಮನೆಗೆ ಹೋಗಬೇಕಿದ್ದ ನಾವು ಬೆಳಂಬೆಳಿಗ್ಗೆ ಖಾವಿಧಾರಿಯಾದ ‘ರೂಡಿ ಶೆಲ್ಡಕ್’ಗಳ ದರ್ಶನ ಮಾಡಿದೆವು. ಅವುಗಳೊಂದಿಗೆ ವಿವಿಧ ಬಣ್ಣದ ಹಕ್ಕಿಗಳ ದರ್ಶನವೂ ಆಯಿತು. ನೀವು ಕೂಡ ಇಂತಹ ಹಕ್ಕಿಗಳ ದರ್ಶನ ಕಾಣಬೇಕೆಂದರೆ ಈಗಲೇ ಹೊರಡಿ. ಏಕೆಂದರೆ ಮೇ ತಿಂಗಳು ಕಳೆಯುತ್ತಲೇ ಮಳೆಗಾಲ ಆರಂಭವಾದರೆ ಈ ಹಕ್ಕಿಗಳು ತಮ್ಮ ಮೂಲಸ್ಥಾನಕ್ಕೆ ಹೊರಟು ಹೋಗುತ್ತವೆ. ಉಡುಪಿ ಕಡೆಯಿಂದ ಹೊರಟರೆ 24 ಕಿ.ಮೀ. ದೂರ ಕ್ರಮಿಸಬೇಕು. ಕುಂದಾಪುರದಿಂದ ಹೊರಟರೆ 8 ಕಿ.ಮೀ. ದೂರ ಕ್ರಮಿಸಬೇಕು. ಉಡುಪಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಿಂದ ಒಳಕ್ಕೆ ಅಂದರೆ ತೆಕ್ಕಟ್ಟೆಯಿಂದ ಮಲ್ಯಾಡಿ ಗ್ರಾಮದತ್ತ ಕೇವಲ 1.5 ಕಿ.ಮೀ. ಕ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT