ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ನೀರುಕಾಗೆ ‘ಬ್ಲ್ಯಾಕ್‌ ಕ್ರೇಕ್‌’

Last Updated 17 ಸೆಪ್ಟೆಂಬರ್ 2019, 16:16 IST
ಅಕ್ಷರ ಗಾತ್ರ

ಹೆಚ್ಚು ಜನರಿಗೆ ಚಿರಪರಿಚಿತವಾಗಿರುವ ಹಕ್ಕಿ ಕಾಗೆ. ಈ ಕಾಗೆಯನ್ನೇ ಹೋಲುವ ಪಕ್ಷಿಗಳು ಕೆಲವು ಇವೆ. ಅಂತಹ ಹಕ್ಕಿಗಳಲ್ಲಿ ನೀರುಕಾಗೆ ಎಂದು ಕರೆಯುವ ಬ್ಲ್ಯಾಕ್ ಕ್ರೇಕ್ (Black Crake) ಕೂಡ ಒಂದು. ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ವಿಶೇಷ ಹಕ್ಕಿಯ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಅಮೌರೊರ್ನಿಸ್‌ ಫ್ಲವಿರೊಸ್ಟ್ರ (Amaurornis flavirostra). ಇದು ಜಲವಾಸಿ ಹಕ್ಕಿಗಳ ರ‍್ಯಾಲಿಡೇ (Rallidae) ಕುಟುಂಬಕ್ಕೆ ಸೇರಿದ ಹಕ್ಕಿ.

ಹೇಗಿರುತ್ತದೆ?
ಇದು ಮಧ್ಯಮ ಗಾತ್ರದ ಹಕ್ಕಿ. ಕಪ್ಪು ಬಣ್ಣದ ಪುಕ್ಕ ದೇಹವನ್ನೆಲ್ಲಾ ಆವರಿಸಿರುತ್ತದೆ. ದೇಹದ ಪುಕ್ಕದಲ್ಲೇ ರೆಕ್ಕೆಗಳೂ ಹುದುಗಿ ಹೋಗಿರುವುದರಿಂದ ಸರಿಯಾಗಿ ಗೋಚರಿಸುವುದಿಲ್ಲ. ದುಂಡಾದ ತಲೆ ದೊಡ್ಡದಾಗಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕೆಂಪು ಮತ್ತು ಕಪ್ಪು ಬಣ್ಣದಲ್ಲಿರುತ್ತವೆ.

ಮಧ್ಯಮ ಗಾತ್ರದ, ದೃಢವಾದ ಕೊಕ್ಕು ಹಳದಿ ಮತ್ತು ಹಸಿರು ಮಿಶ್ರಿತ ಬಣ್ಣದಲ್ಲಿರುತ್ತದೆ. ಬಹುತೇಕ ಜಲವಾಸಿ ಹಕ್ಕಿಗಳಿಗೆ ಇರುವಂತೆ ಇದಕ್ಕೂ ನೀಳವಾದ ಕಾಲುಗಳಿದ್ದು, ಸಂಪೂರ್ಣ ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತಿರುತ್ತವೆ. ಕಪ್ಪು ಬಣ್ಣದ ಉಗುರುಗಳು ನೀಳವಾಗಿರುತ್ತವೆ.

ಎಲ್ಲಿದೆ?
ಆಫ್ರಿಕಾ ಖಂಡದಲ್ಲಿ ಮಾತ್ರ ಕಾಣಸಿಗುವ ಹಕ್ಕಿಗಳಲ್ಲಿ ಇದು ಕೂಡ ಒಂದು. ನೈರುತ್ಯ ಮತ್ತು ಈಶಾನ್ಯ ಆಫ್ರಿಕಾ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಸ್ವಚ್ಛ ಮತ್ತು ಸಿಹಿ ನೀರು ಇರುವಂತಹ ಪ್ರದೇಶಗಳಲ್ಲಿ ವಾಸಿಸುವುದಕ್ಕೆ ಹೆಚ್ಚು ಇಷ್ಟಪಡುತ್ತದೆ. ಕೆರೆ, ಕೊಳ, ಅಣೆಕಟ್ಟುಗಳು, ನದಿಗಳಲ್ಲಿ ವಾಸಿಸುತ್ತದೆ. ಜೌಗು ಪ್ರದೇಶಗಳು, ಹುಲ್ಲು, ಬಿದಿರು ಬೆಳೆದಿರುವ ಪ್ರದೇಶಗಳಲ್ಲಿ ಆಹಾರ ಅರಸುತ್ತಾ ಸುತ್ತುತ್ತಿರುತ್ತದೆ. ಬರಗಾಲ ಬಂದರೆ ನೀರು ಇರುವಂತಹ ಪ್ರದೇಶಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತದೆ.

ಜೀವನಕ್ರಮ ಮತ್ತು ವರ್ತನೆ
ನೀರು ಇರುವ ಪ್ರದೇಶಗಳಲ್ಲಿ ಮತ್ತು ಕೃಷಿ ಭೂಮಿಗಳಲ್ಲಿ ಆಹಾರ ಅರಸುತ್ತಾ ಹಗಲೆಲ್ಲಾ ಸುತ್ತುತ್ತದೆ. ಹುಲ್ಲು ಬೆಳೆದಿರುವ ನೀರಿಲ್ಲದ ಪ್ರದೇಶಗಳಲ್ಲೂ ಸುತ್ತುತ್ತದೆ. ರ‍್ಯಾಲಿಡೇ ಕುಟುಂಬದ ಇತರೆ ಹಕ್ಕಿಗಳಿಗೆ ಹೋಲಿಸಿದರೆ ಈ ಹಕ್ಕಿ ನಿರ್ಭಯವಾಗಿ ಓಡಾಡುತ್ತದೆ. ಸಂತಾನೋತ್ಪತ್ತಿ ಅವಧಿಯಲ್ಲಿ ನಿರ್ದಿಷ್ಟ ಗಡಿ ಗುರುತಿಸಿಕೊಂಡು, ಸುರಕ್ಷಿತ ಪ್ರದೇಶದಲ್ಲಿ ಗೂಡು ನಿರ್ಮಿಸಿಕೊಳ್ಳುತ್ತದೆ.

ಈ ಅವಧಿಯಲ್ಲಿ ವಿಶಿಷ್ಟ ಶಬ್ದಗಳನ್ನು ಹೊರಡಿಸಿ ಸೂಚನೆ ನೀಡುತ್ತದೆ. ಗಡಿಯೊಳಗೆ ಇತರೆ ಹಕ್ಕಿಗಳು ಬಂದರೆ ಆಕ್ರಣಮಕಾರಿ ಸ್ವಭಾವ ತೋರುತ್ತದೆ. ಮಳೆಯನ್ನು ಆಧರಿಸಿ ಇದು ಜೀವನ ನಡೆಸುತ್ತದೆ. ಅಪಾಯದ ಸಂದರ್ಭಗಳಲ್ಲಿ ವಿಶಿಷ್ಟ ಶಬ್ದಗಳಿಂದ ಎಚ್ಚರಿಸುತ್ತದೆ.

ಆಹಾರ
ಇದು ಸರ್ವಭಕ್ಷಕ ಹಕ್ಕಿ. ಮುಖ್ಯವಾಗಿ ಜಲವಾಸಿ ಕಶೇರುಕಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಮಣ್ಣು ಹುಳು, ಕಠಿಣಚರ್ಮಿಗಳು, ಮೃದ್ವಂಗಿಗಳಂತಹ ಅಕಶೇರುಕಗಳನ್ನೂ ಭಕ್ಷಿಸುತ್ತದೆ. ಲಾರ್ವಾಗಳು, ನೆಲವಾಸಿ ಕೀಟಗಳು, ಪುಟ್ಟ ಕಪ್ಪೆ, ಮೀನುಗಳು, ಕೆಲವು ಜೀವಿಗಳ ಮೊಟ್ಟೆಗಳೂ ಇದರ ಆಹಾರದ ಭಾಗವಾಗಿವೆ. ಏಡಿ, ಪುಟ್ಟ ಗಾತ್ರದ ಹಕ್ಕಿಗಳನ್ನು ಬೇಟೆಯಾಡುತ್ತದೆ. ಕೆಲವು ಬಗೆಯ ಜಲ ಸಸ್ಯಗಳು ಮತ್ತು ಕಾಳುಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿ
ವಯಸ್ಕ ಹಂತ ತಲುಪಿದ ಗಂಡು ಹಕ್ಕಿ, ಹೆಣ್ಣು ಹಕ್ಕಿಯ ಗಮನ ಸೆಳೆಯಲುವಿಶಿಷ್ಟ ಧ್ವನಿಗಳಿಂದ ಕೂಗುತ್ತದೆ. ಹೆಣ್ಣಿಗೆ ಇಷ್ಟವಾದರೆ ಗಂಡಿನ ಗಡಿಯೊಳಗೆಕೂಡಿ ಬಾಳುತ್ತದೆ. ಆಹಾರ ದೊರೆಯುವ ಪ್ರಮಾಣ ಮತ್ತು ವಾತಾವರಣಕ್ಕೆ ತಕ್ಕಂತೆ ಸಂತಾನೋತ್ಪತ್ತಿ ನಡೆಸುತ್ತವೆ. ಮಳೆಗಾಲ ಇದರ ಸಂತನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಈ ಅವಧಿಯಲ್ಲಿ ನೀರಿನ ಮೇಲೆ ತೇಲುವಂತಹ ಗೂಡು ನಿರ್ಮಿಸಿಕೊಳ್ಳುತ್ತವೆ.

ಕೆಲವೊಮ್ಮೆ ನೆಲದಿಂದ ಸುಮಾರು ಮೂರು ಅಡಿ ಎತ್ತರವಿರುವ ಪೊದೆಗಳಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಕಂದು ಬಣ್ಣದ ಮಚ್ಚೆಗಳಿರುವ ಮೂರು ಮೊಟ್ಟೆಗಳನ್ನು ಹೆಣ್ಣು ಹಕ್ಕಿ ಇಡುತ್ತದೆ. ಎರಡೂ ಹಕ್ಕಿಗಳು 13ರಿಂದ 19 ದಿನಗಳ ವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳು ಮೂರು ದಿನಗಳ ನಂತರ ಗೂಡು ಬಿಟ್ಟು ಸುತ್ತಲು ಆರಂಭಿಸುತ್ತವೆ. 3ರಿಂದ 6 ವಾರಗಳ ನಂತರ ಸ್ವತಂತ್ರವಾಗಿ ಆಹಾರ ಹುಡುಕಲು ಆರಂಭಿಸುತ್ತವೆ. 5ರಿಂದ 6 ವಾರಗಳ ನಂತರ ಹಾರಲು ಕಲಿಯುತ್ತವೆ.

ಸ್ವಾರಸ್ಯಕರ ಸಂಗತಿಗಳು
* ನೀರಾನೆ ಮತ್ತು ಎಮ್ಮೆಗಳಿಗೆ ಮೆತ್ತಿಕೊಂಡಿರುವ ಕೀಟಗಳನ್ನು ಈ ಹಕ್ಕಿ ತಿನ್ನುತ್ತದೆ.
* ಮೃದ್ವಿಂಗಿಗಳು, ಕಠಿಣಚರ್ಮಿಗಳನ್ನೂ ಭಕ್ಷಿಸಲು ನೆರವಾಗುವಂತೆ ಇದರ ಕೊಕ್ಕು ರಚನೆಯಾಗಿದೆ.
* ಗಂಡು ಮತ್ತು ಹೆಣ್ಣು ಎರಡೂ ಕ್ರೇಕ್‌ಗಳು ಗೂಡು ನಿರ್ಮಿಸಿಕೊಳ್ಳುತ್ತವೆ. ಮರಿಗಳು ಕೂಡ ಗೂಡು ನಿರ್ಮಿಸುವುದಕ್ಕೆ ನೆರವಾಗುತ್ತವೆ.
* ರೆಕ್ಕೆಗಳು ಇದ್ದರೂ ಸೀಮಿತ ದೂರದ ವರೆಗೆ ಮಾತ್ರ ಹಾರುತ್ತದೆ. ಹೆಚ್ಚು ಎತ್ತರದಲ್ಲಿ ಹಾರುವ ಸಾಮರ್ಥ್ಯ ಈ ಹಕ್ಕಿಗೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT