ನಾಗರಹೊಳೆಯ ಅರಣ್ಯದಲ್ಲಿ ಪತಂಗಗಳ ಲೆಕ್ಕಾಚಾರ...

7

ನಾಗರಹೊಳೆಯ ಅರಣ್ಯದಲ್ಲಿ ಪತಂಗಗಳ ಲೆಕ್ಕಾಚಾರ...

Published:
Updated:

ಒಂದು ಕಾಡು ಸಮೃದ್ಧಿಯಾಗಿದೆ, ಜೀವವೈವಿಧ್ಯದಿಂದ ಕೂಡಿದೆ ಎಂಬುದನ್ನು ಅಲ್ಲಿರುವ ಚಿಟ್ಟೆ–ಪತಂಗಗಳೇ ಹೇಳುತ್ತವೆ. ಇವು ಹೆಚ್ಚು ಸಂಖ್ಯೆಯಲ್ಲಿ ಜೀವಿಸುತ್ತಿವೆ ಎಂದರೆ ಆ ಅರಣ್ಯದಲ್ಲಿ ಪರಿಸರ ಸಮತೋಲನ ಉತ್ತಮವಾಗಿದೆ ಎಂದು ಅರ್ಥ.

ಇದೀಗ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಕೂಡ ಸಸ್ಯ ಸಂಪದ್ಭರಿತವಾಗಿದೆ, ಆರೋಗ್ಯಪೂರ್ಣವಾಗಿದೆ ಎಂದು ಅಲ್ಲಿರುವ ವೈವಿಧ್ಯಮಯ ಚಿಟ್ಟೆಗಳೇ ರುಜುವಾತು ಮಾಡುತ್ತಿವೆ. ಬೆಂಗಳೂರಿನ ನಾಗರಹೊಳೆ ಸಂರಕ್ಷಣಾ ಸೊಸೈಟಿ ಸಹಭಾಗಿತ್ವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿವಿಜ್ಞಾನ ಅಧ್ಯಯನ ವಿಭಾಗದ ಸಂಶೋಧಕರ ತಂಡ ನಾಗರಹೊಳೆಯಲ್ಲಿನ ಇವುಗಳ ಅಧ್ಯಯನ ಮಾಡಿ (Study of Butterfly Diversity at Nagarahole) ಮೊದಲ ವರ್ಷದ ವರದಿ ಸಿದ್ಧಪಡಿಸಿದೆ. ಅರಣ್ಯವು ಜೀವಪೋಷಕ ವಾತಾವರಣ ಹೊಂದಿದೆ ಎಂಬುದನ್ನು ಈ ವರದಿಯು ಪುಷ್ಟೀಕರಿಸುತ್ತಿದೆ.

ಅಧ್ಯಯನಕ್ಕಾಗಿ ಅರಣ್ಯ ಪ್ರವೇಶ

ಈ ಚಿಟ್ಟೆಗಳ ಬದುಕೇ ವಿಶೇಷ. ಅವು ನಿರಾಳ ಜೀವಿಗಳು. ತಮ್ಮ ಜೀವನವನ್ನು ನಿಶ್ಯಬ್ದ ವಾತಾವರಣದಲ್ಲಿ ಕಳೆಯಲು ಬಯಸುತ್ತವೆ. ಏಕಾಂತದಲ್ಲಿರುವುದಕ್ಕೂ ಸುರಕ್ಷಿತ ಜಾಗವನ್ನು ಹುಡುಕಿಕೊಳ್ಳುತ್ತವೆ. ಅಂಥ ಸ್ಥಳಗಳಲ್ಲೇ ವಾಸ ಮಾಡಲು ಇಚ್ಛಿಸುತ್ತವೆ. ತಾವು ಇಷ್ಟಪಡುವ ಸಂಗಾತಿಯನ್ನು ಗುರುತಿಸಿಕೊಳ್ಳಲೂ ಅವಕ್ಕೆ ಗಜಿಬಿಜಿ ವಾತಾವರಣ ಇರಕೂಡದು. ಸಂತಾನೋತ್ಪತ್ತಿಯಂತಹ ನೈಸರ್ಗಿಕ ಕ್ರಿಯೆಗೆ ಯಾರೂ ತೊಂದರೆ ಮಾಡಬಾರದು. ಮೊಟ್ಟೆಯಿಟ್ಟು, ಹುಳುವಾಗಿ, ಕೋಶ ಧರಿಸಿ, ಚಿಟ್ಟೆಯಾಗಿ ಹೊರಬರುವ ಅವುಗಳ ಜೀವನಚಕ್ರ ಸಂಪೂರ್ಣವಾಗಿ ಇದೆಲ್ಲವನ್ನೂ ಬಯಸುತ್ತದೆ.

‌ಸಂಶೋಧನಾ ತಂಡದ ಸದಸ್ಯರು ಈ ಅಂಶಗಳನ್ನೇ ಮನದಲ್ಲಿಟ್ಟುಕೊಂಡು ನಾಗರಹೊಳೆ ಪ್ರವೇಶಿಸಿದ್ದರು. ಅಲ್ಲಿನ ಪರಿಸರ ಹೇಗಿದೆ ಎಂಬ ಅಧ್ಯಯನ ಅವರಿಗೆ ಮುಖ್ಯವಾಗಿತ್ತು. ಮುಖ್ಯ ಸಂಶೋಧಕರಾದ ಡಾ.ಎಸ್.ಬಸವರಾಜಪ್ಪ, ಸದಸ್ಯರಾದ ವಿ.ಗೋಪಿಕೃಷ್ಣ ಹಾಗೂ ಡಾ.ಎಸ್.ಸಂತೋಷ್ ಕಾಡು ಅಲೆಯುತ್ತ ಇದನ್ನೇ ಗಮನಿಸುತ್ತಿದ್ದರು. ಚಿಟ್ಟೆಗಳನ್ನು ಗಮನಿಸುತ್ತ ಅವು ಸಂತಸದಿಂದಿವೆಯೇ, ಅಳಿವಿನತ್ತ ಮುಖ ಮಾಡಿವೆಯೇ, ವಲಸೆ ಹೋಗಲು ತುದಿಗಾಲಲ್ಲಿ ನಿಂತಿವೆಯೇ ಎನ್ನುವುದನ್ನೇ ತದೇಕಚಿತ್ತದಿಂದ ಗಮನಿಸುತ್ತಿದ್ದರು.

ಈ ವೇಳೆ ಅವರಿಗೆ ಕಂಡುಬಂದ ವಿಚಾರ ವಿಶೇಷವಾದುದು. ನಾಗರಹೊಳೆಯಲ್ಲಿ ಮಾನವ ಹಸ್ತಕ್ಷೇಪ ಹೆಚ್ಚು ಎಂಬ ಆರೋಪವಿದೆ. ಆದರೆ, ಇದರ ಹೊರತಾಗಿಯೂ, ಕಾಡು ಸುಂದರವಾಗಿದ್ದು, ಜೀವವೈವಿಧ್ಯವನ್ನೊಳಗೊಂಡ ನಿಶ್ಯಬ್ಧ ತಾಣವಾಗಿದೆ ಎಂಬುದನ್ನು ಅಲ್ಲಿನ ಚಿಟ್ಟೆಗಳೇ ವಿಜ್ಞಾನಿಗಳಿಗೆ ತಿಳಿಸಿಕೊಟ್ಟಿವೆ. ಸ್ವಚ್ಛಂದವಾಗಿ ಕಾಡಿನಲ್ಲಿ ಹಾರಾಡುತ್ತ, ನಿಶ್ಚಿಂತೆಯಿಂದ ತಮ್ಮ ಸಂತತಿ ವೃದ್ಧಿಸಿಕೊಳ್ಳುವ ಅಂಶಗಳನ್ನು ಅಧ್ಯಯನ ತಂಡ ಗಮನಿಸಿದೆ. 

ಅಚ್ಚರಿ ಮೂಡಿಸುವ ಸಂಖ್ಯೆ

ನಾಗರಹೊಳೆಯಲ್ಲಿ ದೊಡ್ಡ ಸಂಖ್ಯೆಯ ಚಿಟ್ಟೆಗಳಿವೆ ಎಂಬ ವಿಚಾರ ಎಲ್ಲೆಡೆಯೂ ಹರಿದಾಡುತ್ತಿತ್ತು. ಅದನ್ನು ವೈಜ್ಞಾನಿಕವಾಗಿ ದಾಖಲೀಕರಿಸುವ ಕೆಲಸ ಆಗಿರಲಿಲ್ಲ. ಅಧ್ಯಯನಕ್ಕೆ ಹೊರಟ ತಂಡ ಇದಕ್ಕಾಗಿ ಒಂದು ವರ್ಷದಲ್ಲಿ 18ಕ್ಕೂ ಹೆಚ್ಚು ಬಾರಿ ಅರಣ್ಯದೊಳಗೆ ಸುತ್ತಾಡಿ, ಇವುಗಳ ಪ್ರಭೇದಗಳನ್ನು ಅಧ್ಯಯನ ಮಾಡಿತು. ಅಚ್ಚರಿ ಎಂಬಂತೆ ಇವರಿಗೆ 138 ಪ್ರಭೇದಗಳು ಕಂಡುಬಂದವು. ಅವುಗಳ ವೈವಿಧ್ಯವಂತೂ ಮನಮೋಹಕವಾಗಿತ್ತು. ಬಣ್ಣ ಬಣ್ಣದ ಚಿಟ್ಟೆಗಳು, ವಿವಿಧ ವಿನ್ಯಾಸ ಹಾಗೂ ಕಣ್ಣೆದುರು ಸ್ವರ್ಗವನ್ನೇ ತೆರೆದಿಟ್ಟುಬಿಟ್ಟವು.

ನಾಗರಹೊಳೆಯಲ್ಲಿ 5 ಚಿಟ್ಟೆ–ಪತಂಗ ಕುಟುಂಬಗಳನ್ನು ಈ ತಂಡ ದಾಖಲಿಸಿದೆ. ನಿಂಫಾಲಿಡೇ (Nymphalidae), ಲೈಂಕಾನಿಡೇ (Lycaenidae), ಹೆಸ್ಪೆರಿಡೇ (Hesperiidae), ಪೆರಿಡೇ (Pieridae) ಹಾಗೂ ಪ್ಯಾಪಿಲಿಯಾನಿಡೇ (Papilionidae). ಈ ಐದೂ ಕುಟುಂಬದಿಂದ 138 ಪ್ರಭೇದದ ಚಿಟ್ಟೆಗಳು ನಾಗರಹೊಳೆಯಾದ್ಯಂತ ಸಮಾನವಾಗಿ ಹಂಚಿಹೋಗಿವೆ. ಕೆಲವೇ ಕೆಲವು ಪ್ರಭೇದಗಳನ್ನು (14 ಪ್ರಭೇದಗಳು ಅಳಿವಿನಂಚಿನ ಪಟ್ಟಿಯಲ್ಲಿವೆ) ಬಿಟ್ಟರೆ ಮಿಕ್ಕೆಲ್ಲ ಚಿಟ್ಟೆಗಳು ಸುರಕ್ಷಿತವಾಗಿವೆ.


ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಕ್ಷೆ

ನಾಗರಹೊಳೆಯು ರಾಷ್ಟ್ರೀಯ ಉದ್ಯಾನವಾಗಿರುವುದೇ ಚಿಟ್ಟೆಗಳಿಗೆ ವರದಾನ. ಈ ಕಾಡಿನಲ್ಲಿ ಅಷ್ಟಾಗಿ ಮಾನವ ಹಸ್ತಕ್ಷೇಪ ಇಲ್ಲದಿರುವುದೇ ಈ ಸುರಕ್ಷತೆಗೆ ಕಾರಣ. ಈ ಕಾಡನ್ನು ಸಂರಕ್ಷಿತ ಅರಣ್ಯದ ಬಫರ್ ವಲಯ (buffer zone) ಹಾಗೂ ಸಂರಕ್ಷಿಸಲ್ಪಟ್ಟ ತಿರುಳು ವಲಯ(Core zone) ಎಂದು ವಿಂಗಡಿಸಲಾಗಿದೆ. ಕೋರ್ ಜೋನ್ ಪೂರ್ಣ ನಿರ್ಜನವಾಗಿದ್ದು, ಪ್ರಾಣಿಗಳಿಗೂ ಅಪಾಯರಹಿತ ಸ್ಥಳವಾಗಿದೆ. ಇಲ್ಲಿ ಅರಣ್ಯದ ಬಹುತೇಕ ಪ್ರಾಣಿಗಳು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಅಂತೆಯೇ, ಕಾಡಿನ ಏಕಾಂತ ಅವುಗಳಿಗೆ ನೆಮ್ಮದಿ, ಆರೋಗ್ಯವನ್ನೂ ನೀಡುತ್ತಿದೆ. ಇದು ಬಹುತೇಕ ಚಿಟ್ಟೆಗಳಿಗೂ ಅನ್ವಯವಾಗುವಂಥದ್ದು.

ನಾಗರಹೊಳೆಯಲ್ಲಿ ಯಥೇಚ್ಛವಾಗಿ ಮರ, ಹುಲ್ಲು, ನಾಲ್ಕೈದು ಅಡಿ ಎತ್ತರದ ಗಿಡಗಳು ಇರುವುದು ಚಿಟ್ಟೆಗಳಿಗೆ ವರದಾನವಾಗಿದೆ. ಲಾರ್ವಾದಿಂದ ಪ್ಯೂಪಾ (ಕೋಶ) ಆಗಿ, ನಂತರ ಚಿಟ್ಟೆಯಾಗಿ ವಿಹರಿಸಲು ನಾಗರಹೊಳೆ ಹೇಳಿ ಮಾಡಿಸಿದ ವಾತಾವರಣ. ಹಾಗಾಗಿಯೇ, ಇವುಗಳ ಸಂತತಿ ಇಲ್ಲಿ ಸಮಾಧಾನಕರವಾಗಿ ವಿಸ್ತರಿಸಿದೆ.

ಆರು ವಿಭಾಗದಲ್ಲಿ ಅಧ್ಯಯನ

ನಾಗರಹೊಳೆಯಲ್ಲಿ ಒಟ್ಟು ಆರು ವಿಭಾಗಗಳನ್ನಾಗಿಸಿ, ಅಧ್ಯಯನ ನಡೆಸಲಾಗಿದೆ. ಆನೆಚೌಕೂರು, ಕಲ್ಲಹಳ್ಳ, ವೀರನಹೊಸಹಳ್ಳಿ, ಮತ್ತಿಕುಪ್ಪೆ, ನಾಗರಹೊಳೆ, ಅಂತರಸಂತೆ ಹಾಗೂ ಡಿ.ಬಿ.ಕು‍ಪ್ಪೆ. ಇವೇ ಆ ಭಾಗಗಳು. ಇವುಗಳಲ್ಲಿ ಹೆಚ್ಚೂ ಕಡಿಮೆ ಸಮಾನವಾಗಿ ಐದೂ ಕುಟುಂಬಗಳು ಹರಡಿಕೊಂಡಿವೆ. ನಿಂಫಾಲಿಡೇ (ಶೇ 42.66), ಲೈಂಕಾನಿಡೇ (ಶೇ 24.33), ಹೆಸ್ಪೆರಿಡೇ (ಶೇ 25.33), ಪೆರಿಡೇ (ಶೇ 19.5) ಹಾಗೂ ಪ್ಯಾಪಿಲಿಯಾನಿಡೇ (ಶೇ 10.5) ‍‍ಪ್ರಭೇದಗಳು ಬಹುತೇಕ ಎಲ್ಲ ವಿಭಾಗಗಳಲ್ಲೂ ಇರುವುದು ವಿಶೇಷ. ಆದರೆ, ಕೆಲವು ಪ್ರಭೇದಗಳು ಕೆಲವೇ ವಿಭಾಗಗಳಲ್ಲಿ ಮಾತ್ರ ಇರುವುದೂ ಈ ಅಧ್ಯಯನ ತಂಡದ ಗಮನಕ್ಕೆ ಬಂದಿತು. ಉದಾಹರಣೆಗೆ ನಿಂಫಾಲಿಡೇ ಕುಟುಂಬದ ಕಾಮನ್‌ ಪಾಮ್ ಫ್ಲೈ (Common Palm Fly) ಎಂಬ ಚಿಟ್ಟೆಯು ವೀರನಹೊಸಹಳ್ಳಿಯಲ್ಲಿ ಮಾತ್ರ ಕಾಣುವಂಥದ್ದು. ಬೇರೆಡೆ ಹುಡುಕಿದರೂ ಸಿಗುವುದಿಲ್ಲ. ಚಿಟ್ಟೆಗಳ ಈ ವಿಶೇಷ ಸ್ವಭಾವ ವಿಜ್ಞಾನಿಗಳಿಗೆ ಕುತೂಹಲ ಮೂಡಿಸಿವೆ. ಇದೇ ರೀತಿ ಒಟ್ಟು 25 ಪ್ರಭೇದದ ಚಿಟ್ಟೆಗಳ ಆರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿವೆ.

ಅಧ್ಯಯನಕಾರರ ಪ್ರಕಾರ ಇದಕ್ಕೆ ಹಲವು ಕಾರಣಗಳಿವೆ. ಕೆಲವು ಪ್ರಭೇದದ ಚಿಟ್ಟೆಗಳಿಗೆ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಸುರಕ್ಷಿತ ವಾತಾವರಣ ಇರಬಹುದು. ಅಂದರೆ, ಸಂತಾನಾಭಿವೃದ್ಧಿಗೆ ಹೇಳಿ ಮಾಡಿಸಿದ ವಾತಾವರಣ. ಕೋಶಾವಸ್ಥೆಗೆ ಹೋಗಲು ಬೇಕಾದ ನಿರ್ದಿಷ್ಟ ಜಾತಿಯ ಗಿಡ. ಕೋಶದಿಂದ ಹೊರ ಬರುವ ಇವಕ್ಕೆ ತಿನ್ನಲು ಬೇಕಾದ ನಿರ್ದಿಷ್ಟ ಗಿಡದ ಎಲೆ. ಶತ್ರುಗಳಿಲ್ಲದೇ ಇರುವುದು. ಇವೆಲ್ಲಾ ಚಿಟ್ಟೆಗಳಿಗೆ ಬೇಕಾದ ಪೂರಕ ಅಂಶಗಳು. ಇವನ್ನೆಲ್ಲಾ ಅಧ್ಯಯನಕ್ಕೆ ಅಳವಡಿಸಿ ವೈಜ್ಞಾನಿಕ ಉತ್ತರಗಳನ್ನು ಕಂಡುಕೊಳ್ಳಬೇಕು ಎಂದು ಡಾ.ಬಸವರಾಜು ಹೇಳುತ್ತಾರೆ.

ಅಳಿವಿನಂಚಿನ ಜೀವಿಗಳು

ನಾಗರಹೊಳೆಯಲ್ಲಿ ಈ ವಿಜ್ಞಾನಿಗಳು ಒಟ್ಟು 14 ಅಳಿವಿನಂಚಿನಲ್ಲಿರುವ ಚಿಟ್ಟೆ ಪ್ರಭೇದಗಳನ್ನು ಗುರುತಿಸಿದ್ದಾರೆ. 1972ರ ಭಾರತೀಯ ವನ್ಯಜೀವಿ ರಕ್ಷಣೆ ಕಾಯ್ದೆಯ ಅನ್ವಯ ಗುರುತಿಸಿರುವ ಚಿಟ್ಟೆಗಳು ಇಲ್ಲೂ ಕಂಡು ಬಂದಿವೆ. ಹೆಸ್ಪೆರಿಡೇ ಕುಟುಂಬದ ಅಡಿಯಲ್ಲಿ ಇಂಡಿಯನ್ ಏಸ್, ಪೇಯಿಂಟ್ ಬ್ರಷ್ ಸ್ವಿಫ್ಟ್‌, ಲೈಂಕಾನಿಡೇ ಕುಟುಂಬದಲ್ಲಿ ಕಾಮನ್‌ ಆನಿಕ್ಸ್, ಕಾಮನ್ ಪ್ಯಾರೆಟ್, ಪೀ ಬ್ಲೂ, ನಿಂಫಾಲಿಡೇ ಕುಟುಂಬದಲ್ಲಿ ಬ್ಯಾಂಬೂ ಟ್ರೀ ಬ್ರೌನ್, ಕಾಮನ್‌ ಕ್ರೋ, ಡ್ಯಾನೈಡ್ ಎಗ್ ಫ್ಲೈ, ಗ್ರೇಟ್ ಈವನಿಂಗ್ ಬ್ರೌನ್, ಪ್ಯಾಪಿಲಿಯಾನಿಡೇ ಕುಟುಂಬದಲ್ಲಿ ಕ್ರಿಮ್ಸನ್ ರೋಸ್, ಮಲಬಾರ್ ಬ್ಯಾಂಡೆಡ್ ಪೀಕಾಕ್ ಹಾಗೂ ಪೆರಿಡೇ ಕುಟುಂಬದಲ್ಲಿ ಚಾಕೊಲೇಟ್ ಆಲ್ಬಟ್ರಾಸ್, ಕಾಮನ್ ಆಲ್ಬಟ್ರಾಸ್ ಮತ್ತು ಕಾಮನ್ ಗಲ್‌ ಪ್ರಭೇದದ ಪತಂಗಗಳು ನಾಗರಹೊಳೆಯಲ್ಲಿ ಇರುವುದನ್ನು ಗುರುತಿಸಿದ್ದಾರೆ.

ಪತಂಗಕ್ಕೂ ಚಿಟ್ಟೆಗೂ ನಡುವಣ ವ್ಯತ್ಯಾಸ

ಸಾಮಾನ್ಯವಾಗಿ ಚಿಟ್ಟೆ (Butterfly) ಹಾಗೂ ಪತಂಗ (Moth) ಗಳನ್ನು ಒಂದೇ ಎಂದು ಭಾವಿಸುವುದುಂಟು. ಇವೆರಡೂ ಒಂದೇ ಜಾತಿಯ ಜೀವಿಗಳಾದರೂ ಇವುಗಳ ಲಕ್ಷಣದಲ್ಲಿ ಸಾಕಷ್ಟು ವ್ಯತ್ಯಾಸವಿದೆ.

ಚಿಟ್ಟೆಗಳು ತುಂಬ ಚುರುಕಿನ ಜೀವಿಗಳು. ಹಗಲಿನಲ್ಲೇ ಇವುಗಳ ಸಂಚಾರ. ಗಿಡದಿಂದ ಗಿಡಕ್ಕೆ ಪಟ ಪಟನೇ ಹಾರುತ್ತವೆ. ಇವು ತುಂಬ ಸುಂದರ. ಸಾಕಷ್ಟು ವರ್ಣ ವೈವಿಧ್ಯ. ಆದರೆ, ಪತಂಗಗಳು ಹಾಗಲ್ಲ. ಇವು ಮಂದಗತಿಯ ಜೀವಿಗಳು. ಕುಳಿತಾಗ ರೆಕ್ಕೆಗಳನ್ನು ಬಿಚ್ಚಿಕೊಳ್ಳುತ್ತವೆ. ಇವುಗಳ ಚಟುವಟಿಕೆ ರಾತ್ರಿ ಸಮಯದಲ್ಲಿ ಹೆಚ್ಚು. ಚಿಟ್ಟೆಗೆ ಹೋಲಿಸಿದರೆ ಸಾಮಾನ್ಯವಾಗಿ ಪತಂಗದ ಹುಳು ದಪ್ಪ.

ಈ ತಂಡವು ನಾಗರಹೊಳೆಯಲ್ಲಿ ನಡೆಸಿರುವುದು ಚಿಟ್ಟೆಗಳ ಅಧ್ಯಯನ.

ಹೀಗೊಂದು ಸಹಬಾಳ್ವೆ!

ನಾಗರಹೊಳೆಯ ಪರಿಸರವನ್ನು ಅಧ್ಯಯನ ಮಾಡುತ್ತ ಈ ತಂಡಕ್ಕೊಂದು ವಿಶೇಷ ಜೀವ ವ್ಯವಸ್ಥೆಯ ಪರಿಚಯವಾಯಿತು. ಈ ಚಿಟ್ಟೆಗಳ ಸಹಬಾಳ್ವೆ ತಿಳಿಯಿತು. ಅಂದರೆ, ತಾವು ಜೀವಿಸಲು ಮತ್ತೊಂದು ಬೇರೆ ಜಾತಿಯ ಜೀವಿಯ ಮೇಲೆ ಅವಲಂಬಿತವಾಗಿರುವುದು. ಕೆಲವು ಚಿಟ್ಟೆಗಳ ಮುಖ್ಯ ಆಹಾರ ಮಕರಂದ. ಹೂವಿನಿಂದ ಹೂವಿಗೆ ಹಾರುತ್ತ ಮಕರಂದ ಹೀರುತ್ತ ಇವು ಜೀವಿಸುತ್ತವೆ. ಆದರೆ, ಮಕರಂದಕ್ಕಾಗಿ ಇರುವೆಗಳನ್ನು ಅವಲಂಬಿಸಿರುವ ವಿಶೇಷ ಚಿಟ್ಟೆಗಳು ಅಧ್ಯಯನಕಾರರಿಗೆ ಎದುರಾದವು!

ಕೆಲವು ಇರುವೆಗಳು ತಮ್ಮ ದೇಹದಿಂದ ಸಿಹಿಯಾದ ದ್ರವವನ್ನು ಹೊರಸೂಸುತ್ತವೆ. ಈ ದ್ರವವನ್ನು ಸೇವಿಸುತ್ತ, ಇರುವೆಗಳಿಗೆ ಹಾನಿಯಾಗದೇ ಅವುಗಳ ಜತೆಯೇ ಜೀವಿಸುವ ಪದ್ಧತಿ ಅಳವಡಿಸಿಕೊಂಡಿರುವುದನ್ನು ಇವರು ದಾಖಲಿಸಿದರು. ಇರುವೆಗಳಿಗೆ ಇವುಗಳಿಂದ ಏನು ಉಪಯೋಗ ಎನ್ನುವ ವಿಚಾರವನ್ನು ಇನ್ನೂ ಅಧ್ಯಯನ ಮಾಡಬೇಕಿದೆ. ಇದನ್ನು ತಮ್ಮ ಮುಂದಿನ ಸಂಶೋಧನೆಯಲ್ಲಿ ಪತ್ತೆ ಹಚ್ಚುವುದು ತಂಡದ ಉದ್ದೇಶ.


ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಂಡು ಬರುವ ಪತಂಗಗಳು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !