ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಜಿಂಕೆ ‘ಚವೆರಿಸ್‌ ಗಸೆಲ್’

Last Updated 15 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ವಿಶಿಷ್ಟ ಜಿಂಕೆ ಪ್ರಭೇದಗಳಲ್ಲಿ ಗಸೆಲ್‌ಗಳು ಕೂಡ ಒಂದು. ಈ ಪ್ರಭೇದದ ಜಿಂಕೆಗಳು ಆಫ್ರಿಕಾ ಖಂಡದಲ್ಲಿ ಹೆಚ್ಚಾಗಿವೆ. ಇತರೆ ಜಿಂಕೆಗಳಿಗೆ ಹೋಲಿಸಿದರೆ ಗಸೆಲ್‌ಗಳೇ ಹೆಚ್ಚು ಸುಂದರವಾಗಿರುತ್ತವೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಸುಂದರ ಜಿಂಕೆಗಳಲ್ಲಿ ಒಂದಾದ ಚವೆರಿಸ್‌ ಗಸೆಲ್‌ (Cuvier's Gazelle) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಗಸೆಲ್ಲಾ ಚವೆರಿ (Gazella cuvieri). ಇದು ಸಸ್ಯಾಹಾರಿ ಪ್ರಾಣಿಗಳ ಬೊವಿಡೇ (Bovidae) ಕುಟುಂಬಕ್ಕೆ ಮತ್ತು ಜಿಂಕೆಗಳ ಆ್ಯಂಟಿಲೊಪಿನೇ (Antilopinae) ಉಪ ಕುಟುಂಬಕ್ಕೆ ಸೇರಿದ ಸಸ್ತನಿ.

ಹೇಗಿರುತ್ತದೆ?

ಕಂದು, ಕಪ್ಪು ಮತ್ತು ಬಿಳಿ ಬಣ್ಣದ ಕೂದಲಿನಿಂದ ಕೂಡಿದ ನಯವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ದೇಹವೆಲ್ಲಾ ಕಂದು ಬಣ್ಣದಲ್ಲಿದ್ದರೆ, ಸೊಂಟದ ಬಳಿ ಕಪ್ಪು ಬಣ್ಣದ ಕೂದಲು ಬೆಳೆದಿರುತ್ತವೆ. ಉದರ ಮತ್ತು ಎದೆ ಭಾಗ ಸಂಪೂರ್ಣ ಬಿಳಿ ಬಣ್ಣದಲ್ಲಿರುತ್ತದೆ. ಬಾಲ ಪುಟ್ಟದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತದೆ. ಕಾಲುಗಳು ನೀಳವಾಗಿದ್ದು, ಅಂಚುಗಳಲ್ಲಿ ಕಪ್ಪು ಬಣ್ಣವಿರುತ್ತದೆ. ಎರಡು ಗೊರಸುಗಳು ಕಪ್ಪು ಬಣ್ಣದಲ್ಲಿರುತ್ತವೆ. ಕತ್ತು ನೀಳವಾಗಿರುತ್ತದೆ. ಮೂತಿ ಮೇಕೆಯ ಮೂತಿಯನ್ನೇ ಹೋಲುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ನೀಳವಾದ ಎಲೆಯಾಕಾರದ ಕಿವಿಗಳು ಆಕರ್ಷಕವಾಗಿ ಕಾಣುತ್ತವೆ. ಸುರುಳಿ ಸುತ್ತಿರುವ ನೀಳವಾದ ಕೋಡುಗಳು ತುದಿಯಲ್ಲಿ ಚೂಪಾಗಿರುತ್ತವೆ.

ಎಲ್ಲಿದೆ?

ಆಫ್ರಿಕಾ ಖಂಡದ ಮರುಭೂಮಿ ಪ್ರದೇಶದಲ್ಲಿರುವ ಮೊರಾಕೊ, ಅಲ್ಜೀರಿಯಾ, ಟುನಿಷಿಯಾ ದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. 1900ರ ಆರಂಭದಲ್ಲಿ ಮೊರಾಕೊ ಪರ್ವತ ಶ್ರೇಣಿ ಪ್ರದೇಶದಲ್ಲಿ ಇದರ ಸಂತತಿ ಹೆಚ್ಚಾಗಿತ್ತು. 1972ರಿಂದ ಇದರ ಸಂತತಿ ಕ್ಷೀಣಿಸುತ್ತಿದೆ. ಓಕ್ ಮತ್ತು ಪೈನ್ ಮರಗಳು ಬೆಳೆಯುವ ಕಾಡು ಪ್ರದೇಶ, ಬಯಲು ಪ್ರದೇಶ, ಹುಲ್ಲುಗಾವಲು, ಮರುಭೂಮಿಗೆ ಸನಿಹದಲ್ಲಿರುವ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಪುಟ್ಟ ಗುಂಪುಗಳನ್ನು ರಚಿಸಿಕೊಂಡು ಜೀವಿಸುತ್ತದೆ. ಗುಂಪಿನಲ್ಲಿ ಗರಿಷ್ಠ ಎಂಟು ಗಸೆಲ್‌ಗಳು ಇರುತ್ತವೆ. ಇದರಲ್ಲಿ ಒಂದು ವಯಸ್ಕ ಜಿಂಕೆ ಇದ್ದರೆ, ಉಳಿದವು ಹೆಣ್ಣ ಗಸೆಲ್‌ಗಳು ಮತ್ತು ಮರಿಗಳು. ಗಂಡು ಜಿಂಕೆಗಳು ಮೂತ್ರ ವಿಸರ್ಜಿಸಿ ಅಥವಾ ಕಣ್ಣುಗಳ ಕೆಳಗಿರುವ ಗ್ರಂಥಿಗಳಿಂದ ರಾಸಾಯನಿಕಗಳನ್ನು ಸ್ರವಿಸಿ ನಿರ್ದಿಷ್ಟ ಗಡಿ ಗುರುತಿಸಿಕೊಂಡಿರುತ್ತವೆ. ಗಡಿ ವಿಷಯದಲ್ಲಿ ಉಗ್ರ ಸ್ವಭಾವ ತೋರುತ್ತವೆ. ಬಯಲು ಪ್ರದೇಶದಲ್ಲಿ ಆಹಾರ ಹೆಚ್ಚಾಗಿದ್ದರೆ, ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ದಟ್ಟವಾಗಿ ಹುಲ್ಲು ಬೆಳದಿರುವ ಪ್ರದೇಶಗಳಾದರೆ ಹಗಲಿನಲ್ಲಿ ಚುರುಕಾಗಿರುತ್ತದೆ. ಗಸೆಲ್‌ಗಳ ಪ್ರಭೇದಗಳ ಪೈಕಿ ಇದೇ ಹೆಚ್ಚು ಸೋಮಾರಿ. ಆಹಾರ ದೊರೆಯದೇ ಇದ್ದಾಗ ಮಾತ್ರ ಬೇರೆ, ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತದೆ. ದೇಹದ ಭಂಗಿಗಳು ಮತ್ತು ವಿಶಿಷ್ಟ ಶಬ್ದಗಳ ಮೂಲಕ ಸಂವಹನ ನಡೆಸುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಹಾರಿ ಪ್ರಾಣಿ. ವಿವಿಧ ಬಗೆಯ ಎಲೆಗಳು ಮತ್ತು ಹುಲ್ಲು ಇದರ ಪ್ರಮುಖ ಆಹಾರ. ಮೃದುವಾದ ಮರ ಕಾಂಡ, ಬಳ್ಳಿ, ಹೂ ಮತ್ತು ಹಣ್ಣುಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿ

ಗುಂಪಿನ ನೇತೃತ್ವ ವಹಿಸಿರುವ ಪ್ರಬಲ ಗಂಡು ಗಸೆಲ್ ಗುಂಪಿನಲ್ಲಿರುವ ಎಲ್ಲ ಹೆಣ್ಣು ಜಿಂಕೆಗಳೊಂದಿಗೆ ಜೊತೆಯಾಗುತ್ತದೆ. ವಯಸ್ಕ ಹಂತ ತಲುಪಿದ ನಂತರ ಗಡಿ ಗುರುತಿಸಿಕೊಳ್ಳಲು ವಯಸ್ಕ ಗಂಡು ಜಿಂಕೆಗಳು ಕಾಳಗ ನಡೆಸುತ್ತವೆ.ಮಳೆಬೀಳುವ ಪ್ರಮಾಣಕ್ಕೆ ಅನುಗುಣವಾಗಿ ಇದು ಸಂತಾನೋತ್ಪತ್ತಿ ಅವಧಿಯನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಸುಮಾರು 180 ದಿನ ಗರ್ಭ ಧರಿಸಿದ ನಂತರ ಒಂದು ಅಥವಾ ಎರಡು ಮರಿಗಳು ಜನಿಸುತ್ತವೆ. ಮರಿಯನ್ನು ತಾಯಿ ಜಿಂಕೆ ದಟ್ಟವಾಗಿ ಬೆಳೆದಿರುವ ಪೊದೆಗಳ ಮಧ್ಯೆ ಬಚ್ಚಿಟ್ಟು ಜೋಪಾನ ಮಾಡುತ್ತದೆ. ಈ ಅವಧಿಯಲ್ಲಿ ಹಾಲು ಮಾತ್ರ ಉಣಿಸಿ ಬೆಳೆಸುತ್ತದೆ. ಒಂದು ತಿಂಗಳ ನಂತರ ಮರಿ ಘನ ಆಹಾರ ಸೇವಿಸಲು ಆರಂಭಿಸುತ್ತದೆ. ನಂತರ ಗುಂಪಿನಲ್ಲಿ ಸೇರಿ ಜೀವಿಸಲು ಕಲಿಯುತ್ತದೆ. ಏಳು ತಿಂಗಳ ನಂತರ ಮರಿ ಪ್ರೌಢಾವಸ್ಥೆಗೆ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಅಪಾಯ ಎದುರಾದಾಗ ವಿಶಿಷ್ಠ ಶಬ್ದಗಳನ್ನು ಹೊರಡಿಸುವ ಮೂಲಕ ಮತ್ತು ಬಾಲದ ಚಲನೆ ಮೂಲಕ ಸೂಚನೆ ನೀಡಿ ಇತರೆ ಜಿಂಕೆಗಳನ್ನು ಎಚ್ಚರಿಸುತ್ತದೆ.

*ಒಮ್ಮೆಗೆ ನಾಲ್ಕು ಕಾಲುಗಳನ್ನು ನೆಲದ ಮೇಲೆ ಊರುತ್ತಾ ವೇಗವಾಗಿ ಓಡುವ ಸಾಮರ್ಥ್ಯ ಈ ಜಿಂಕೆಗೆ ಇದೆ. ಅಂಕುಡೊಂಕಾಗಿ ಓಡುವುದರಿಂದ ಚಿರತೆಯಂತಹ ಪರಭಕ್ಷಕ ಪ್ರಾಣಿಗಳ ಕಣ್ಣು ತಪ್ಪಿಸುವ ಚಾಕಚಕ್ಯತೆ ಕಲಿತಿದೆ.

* ಪ್ರಸ್ತುತ ಕೇವಲ ಮೂರು ಸಾವಿರ ಚೆವಿಯರ್‌ ಗಸೆಲ್‌ಗಳು ಮಾತ್ರ ಉಳಿದಿದ್ದು, ಎಲ್ಲ ಗಸೆಲ್‌ಗಳ ಪೈಕಿ ಇದರ ಸಂತತಿಯೇ ಕಡಿಮೆ ಇದೆ.

* ಮರುಭೂಮಿ ಪ್ರದೇಶದಲ್ಲಿ ವಾಸಿಸುವುದರಿಂದ ನೀರು ಕುಡಿಯದೇ ಹೆಚ್ಚು ಕಾಲ ಜೀವಿಸುವ ಸಾಮರ್ಥ್ಯ ಇದಕ್ಕಿದೆ. ದೇಹಕ್ಕೆ ಬೇಕಾದ ನೀರನ್ನು ಎಲೆಗಳ ಮೂಲಕವೇ ಪಡೆಯುತ್ತದೆ.

* ವಿಶ್ವದ ಅತಿ ಸುಂದರ ಜಿಂಕೆಗಳಲ್ಲಿ ಇದು ಕೂಡ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT