ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಳ್ಳೆಯಂತೆ ಕಾಣುವ ಕ್ರೇನ್‌ಫ್ಲೈ ನೊಣ!

Last Updated 23 ನವೆಂಬರ್ 2018, 19:45 IST
ಅಕ್ಷರ ಗಾತ್ರ

ನೋಡುವುದಕ್ಕೆ ಸೊಳ್ಳೆಯಂತೆ ಕಾಣುವ ಕ್ರೇನ್ ಫ್ಲೈ (Crane Fly) ನಾವು ಸಾಮಾನ್ಯವಾಗಿ ಕಾಣುವ ನೊಣಗಳ ಡಿಪ್ಟೆರ (Diptera) ಗುಂಪು ಹಾಗೂ ಟಿಪುಲಿಡೆ (Tipulidae) ಕುಟುಂಬಕ್ಕೆ ಸೇರಿವೆ. ಇವಕ್ಕೆ ‘ಕ್ರೇನ್ ಫ್ಲೈ’ ಎಂದು ಕರೆಯಲು ಕಾರಣ, ಕ್ರೇನ್ ಪಕ್ಷಿಗಳಿಗಿರುವಂತೆ (Crane bird) ನೀಳವಾದ ಕಾಲುಗಳು ಇರುವುದು.

ಇವುಗಳನ್ನು ಡ್ಯಾಡಿ ಲಾಂಗ್ ಲೆಗ್ಸ್‌ಗಳೆಂದೇ (Daddy long legs) ವಿಶ್ವದೆಲ್ಲೆಡೆ ಕರೆಯುತ್ತಾರೆ. ಇದು ನೀಳವಾದ ಆರು ಕಾಲುಗಳನ್ನು ಹೊಂದಿದ್ದು, ದೇಹವೂ ನೀಳವಾಗಿರುತ್ತದೆ. ಹೀಗಾಗಿ ಇದರ ಸೌಂದರ್ಯ ನಯನ ಮನೋಹರವಾಗಿರುತ್ತದೆ.

ಈ ಕಾಲುಗಳು ಬಹಳ ಮೃದುವಾಗಿದ್ದು, ಹಿಡಿಯಲು ಹೋದರೆ ಬಹಳ ಸುಲಭವಾಗಿ ಮರಿದು ಹೋಗುತ್ತವೆ. ಹಾಗಾಗಿ ಪಕ್ಷಿಗಳಿಗಳಿಂದ ಮತ್ತು ಇತರೆ ಕೀಟಗಳಿಗಂದ ಇದು ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ.

ಇದರ ಆಕಾರ ಥೇಟ್ ಸೊಳ್ಳೆಯಂತೆಯೇ ಇರುತ್ತದೆ. ವ್ಯತ್ಯಾಸವೆಂದರೆ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತದೆ. ಜೋರಾಗಿ ಹಾರಾಡುವ ಶಕ್ತಿ ಇದಕ್ಕೆ ಇರುವುದಿಲ್ಲ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ದೀಪದ ಬೆಳಕಿನ ಆಕರ್ಷಣೆಗೆ ಒಳಗಾಗಿ ಮನೆಗಳನ್ನು ಪ್ರವೇಶಿಸುತ್ತದೆ. ಕೆಲವೊಮ್ಮೆ ಮಧ್ಯಾಹ್ನದ ವೇಳೆಯಲ್ಲೂ ಮನೆ, ಕಚೇರಿಗಳಿಗೆ ನುಗ್ಗುತ್ತದೆ.ನಾನು ಮಲೆನಾಡಿಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಚೇರಿಯಲ್ಲೂ ಇದನ್ನು ಗಮನಸಿದ್ದೇನೆ.

ಇದು ಗಾತ್ರದಲ್ಲಿ 15ಮಿಲಿಮೀಟರ್‌ನಷ್ಟು ಇರುತ್ತದೆ. 10 ಸೆಂಟಿಮೀಟರ್‌ಗಳಷ್ಟು ಗಾತ್ರದ ಕ್ರೇನ್‌ಫ್ಲೈಗಳೂ ಇವೆ.

ಮಲೆನಾಡಿನಲ್ಲಿ ಹಳದಿ ಮತ್ತು ಕಪ್ಪು ಮಿಶ್ರಿತ ಕ್ರೇನ್‌ಫ್ಲೈಗಳೇ ಹೆಚ್ಚಾಗಿ ಕಾಣಿಸುತ್ತವೆ.ಸಂಜೆಯ ವೇಳೆ, ಕಾಡಿನ ನೆರಳಿನಲ್ಲಿ ಕಂದು ಮತ್ತು ಕಪ್ಪು ಬಣ್ಣದಲ್ಲಿ ಕಂಗೊಳಿಸುವ ಕ್ರೇನ್‌ಫ್ಲೈಗಳನ್ನೂ ನೋಡಿದ್ದೇನೆ.

ಎಲೆಗಳ ತುದಿಯ ತಳಭಾಗದಲ್ಲಿ ಒಂದು ಅಥವಾ ಎರಡು ಕಾಲುಗಳ ಸಹಾಯದೊಂದಿಗೆ ಜೋತಾಡುತ್ತಾ ಕುಳಿತುಕೊಳ್ಳುವ ಇದರ ಸೊಬಗನ್ನು ನೋಡುವುದೇ ನಯನ ಮನೋಹರ.

ಕೆಲವೊಮ್ಮೆ ತೆಳುವಾದ ದಾರದೆಳೆಯಲ್ಲಿ ಹತ್ತು-ಹನ್ನೆರೆಡು ಕ್ರೇನ್ ಫ್ಲೈಗಳುಸಾಲಾಗಿ ಮುಂಗಾಲುಗಳಿಂದ ನೇತಾಡಿಕೊಂಡು ಉಳಿದ ಕಾಲುಗಳನ್ನು ಒಂದಕ್ಕೊಂದು ಹಿಡಿದುಕೊಂಡು ಮಾಡುವ ಗುಂಪು ನೃತ್ಯ ಇನ್ನೂ ಚೆನ್ನಾಗಿರುತ್ತದೆ. ಹೆಣ್ಣು ನೊಣಗಳು ಗಿಡಗಳಲ್ಲಿ, ಹುಲ್ಲಿನಲ್ಲಿ ಮೊಟ್ಟೆಗಳನ್ನಿಡುತ್ತವೆ. 14 ದಿನಗಳ ನಂತರ ಮರಿ ಹುಳುಗಳು ಹೊರ ಬರುತ್ತವೆ.

ಈ ಹುಳುಗಳನ್ನು ಲೆದೆರ್ ಜಾಕೇಟ್ಸ್ (Leather Jackets) ಎಂದು ಕರೆಯುತ್ತಾರೆ. ಕಾರಣ ಇವುಗಳ ದೇಹದ ಹೊರವಲಯ ದೃಢವಾದ ಚರ್ಮದ ಹೊದಿಕೆಯಿಂದ ರೂಪುಗೊಂಡಿರುತ್ತದೆ. ಸುಲಭವಾಗಿ ಹಾರಾಡುತ್ತಾ ಕೆಲವು ಗಿಡಗಳ ಮತ್ತು ರೈತರ ಬೆಳೆಗಳ ಬೇರುಗಳನ್ನು ತಿನ್ನುತ್ತವೆ.

ಸುಂದರ ಉದ್ಯಾನಗಳ ಹುಲ್ಲುಹಾಸಿಗೆಗಳ ಬೇರುಗಳನ್ನು ತಿಂದು ಒಣಗಿಸುತ್ತವೆ. ಇದರ ಇತರ ಪ್ರಬೇಧಗಳ ಮರಿಗಳು ನೀರಿನಲ್ಲಿ ವಾಸಿಸುತ್ತವೆ. ಮರಿಗಳು 3 ರಿಂದ 4 ಸೆಂಟಿಮೀಟರ್‌ಗಳಷ್ಟು ಗಾತ್ರವಾದಾಗ ಕೋಶಾವಸ್ಥೆಗೆ ತೆರಳಿ ನಂತರ ಪ್ರೌಢ ನೊಣಗಳು ಹೊರ ಬರುತ್ತವೆ. ಪ್ರೌಢವಸ್ಥೆಗೆ ತಲುಪಿದ ನಂತರ, ಸಂತಾನೋತ್ಪತ್ತಿ ನಡೆಸಿ 8 ರಿಂದ 10 ದಿನಗಳ ಕಾಲ ಮಾತ್ರ ಬದುಕುತ್ತವೆ. ಪ್ರೌಢ ಕ್ರೇನ್ ಫ್ಲೈಗಳು ಯಾವುದೇ ರೀತಿಯಲ್ಲಿ ನಮಗೆ ದೈಹಿಕವಾಗಿ ಹಾನಿಯನ್ನು ಉಂಟು ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT