ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚೀತು ಜೋಕೆ!

ನಾಯಿ ಕಡಿತದಿಂದ ಪಾರಾಗಲು ಸೂಕ್ತ ಮಾರ್ಗ ಇಲ್ಲಿದೆ...
Last Updated 31 ಮೇ 2019, 19:45 IST
ಅಕ್ಷರ ಗಾತ್ರ

ಬೀದಿ ನಾಯಿಗಳ ಹಾವಳಿಹೆಚ್ಚುತ್ತಿರುವುದರಿಂದ ನಗರವಾಸಿಗಳು ಬೇಸತ್ತಿದ್ದಾರೆ. ನಾಯಿ ಮನುಷ್ಯರಿಗೆ ಕಚ್ಚಲು ಕಾರಣ ಏನು ಎಂಬುದನ್ನು ತಿಳಿದುಕೊಂಡು ಆ ಬಗ್ಗೆ ಜಾಗೃತಿ ವಹಿಸಿದರೆ ಬೀದಿನಾಯಿ ಕಡಿತದಿಂದ ಪಾರಾಗಬಹುದು ಎಂಬುದು ತಜ್ಞರ ಅಭಿಪ್ರಾಯ.‌ ಬೀದಿನಾಯಿಗಳಾಗಲಿ, ಸಾಕುನಾಯಿಗಳಾಗಲಿ ಅವು ಮನುಷ್ಯರಿಗೆ ಕಚ್ಚಲು ಕಾರಣಗಳು ಹಲವು ಎನ್ನುತ್ತಾರೆ ಬನಶಂಕರಿಯ ‘ಕೆ9’ ಶ್ವಾನ ತರಬೇತಿ ಕೇಂದ್ರದ ಶಿವು ಸ್ವಾಮಿ.

ನಾಯಿ ಕಚ್ಚಲು ಇರುವ ಕಾರಣಗಳು

ಬೆದರಿಸುವುದು: ನಾಯಿಗಳ ಮನಃಶಾಸ್ತ್ರದ ಪ್ರಕಾರ ಅವುಗಳ ಮೇಲೆ ದಬ್ಬಾಳಿಕೆ ಮಾಡಿದರೆ ಅವು ಕಚ್ಚುತ್ತವೆ. ಬೀದಿ ನಾಯಿಗಳು ಹತ್ತಿರ ಬಂದಾಗ ಬೆದರಿಸಿದರೆ ಅವು ಭಯಗೊಂಡು ತಮ್ಮ ಭದ್ರತೆಗಾಗಿ ಎದುರಾಳಿಯ ಮೇಲೆ ದಾಳಿ ಮಾಡುತ್ತವೆ.

ಭಯದಿಂದ ಓಡುವುದು: ಬೀದಿಯಲ್ಲಿ ನಾಯಿಗಳನ್ನು ಕಂಡರೆ ಅವುಗಳನ್ನು ದಿಟ್ಟಿಸಿ ನೋಡುವುದು, ಭಯದಿಂದ ಓಡುವುದು ಮಾಡಿದರೆ ಅವು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಕೆಲವರು ತಮ್ಮ ರಕ್ಷಣೆಗಾಗಿ ಅವನ್ನು ಓಡಿಸಲು ಅವುಗಳತ್ತ ಕಲ್ಲು ಬೀಸುತ್ತಾರೆ. ಆಗಲೂ ತಮ್ಮ ರಕ್ಷಣೆಗಾಗಿ ಅವು ಮನುಷ್ಯರ ಮೇಲೆರಗುತ್ತವೆ.

ಬೈಕ್ ಡಿಕ್ಕಿ: ಬೈಕ್ ಸವಾರಿ ಮಾಡುವಾಗ ನಾಯಿಗಳಿಗೆ ಹೆದರಿಸುವುದು, ಅವುಗಳಿಗೆ ಡಿಕ್ಕಿ ಹೊಡೆಯುವುದುಸಹ ಕಚ್ಚುವುದಕ್ಕೆ ಕಾರಣ. ಯಾರೋ ಒಬ್ಬರು ಮಾಡುವ ಇಂತಹ ತಪ್ಪಿಗೆ ಎಲ್ಲಾ ವಾಹನ ಸವಾರರು ಈ ನಾಯಿ ದಾಳಿಗೆ ಸಿಲುಕುತ್ತಾರೆ.

ಮಾಂಸ ತಿನ್ನುವಾಗ: ಮಾಂಸ ತಿನ್ನುವಾಗ ಯಾರಾದರು ಪಕ್ಕದಲ್ಲಿ ಹೋದರೆ ಕಸಿದುಕೊಳ್ಳುವ ಭಯದಿಂದ ಕೆಲವು ನಾಯಿಗಳು ಬೊಗಳುತ್ತವೆ. ಇನ್ನೂ ಕೆಲವು ಕಚ್ಚಲು ಮುಂದಾಗುತ್ತವೆ. ಅವುಗಳು ತಿನ್ನುವ ಕಡೆ ಕಚ್ಚಾಟ ನಡೆಯುವುದು ಸಾಮಾನ್ಯ, ಆ ಸಮಯಲ್ಲಿ ಮನುಷ್ಯರು ಪಕ್ಕದಲ್ಲಿದ್ದರೆ ಕಡಿತಕ್ಕೆ ಒಳಗಾಗುತ್ತಾರೆ.

ಸಾಕು ನಾಯಿ ಕಚ್ಚುವುದೇಕೆ?

ಹೆಚ್ಚು ಕ‌ಟ್ಟಿ ಹಾಕುವುದು: ಸಾಕು ನಾಯಿಗಳು ಮನುಷ್ಯರೊಂದಿಗೆ ಬೆಳೆಯುವುದರಿಂದ ಅವು ಸಾಮಾನ್ಯವಾಗಿ ಕಚ್ಚುವುದಿಲ್ಲ. ಆದರೆ, ಅವುಗಳನ್ನು ಹೆಚ್ಚಾಗಿ ಮನೆಯೊಳಗೆ ಕಟ್ಟಿಹಾಕುವುದರಿಂದ ಹೊರಗಿನ ಪರಿಸರಕ್ಕೆ ಅವು ಹೊಂದಿಕೊಂಡಿರುವುದಿಲ್ಲ. ಹಾಗಾಗಿ ಅಪರೂಪಕ್ಕೆ ಹೊರಗಡೆ ಬಿಟ್ಟಾಗ ಸಾರ್ವಜನಿಕರ ಮೇಲೆ ಎರಗುತ್ತವೆ.

ಒತ್ತಡ ಹೇರುವುದು: ಕಚ್ಚುತ್ತದೆ ಎಂದು ಕೆಲವರು ಸಾಕು ನಾಯಿಯನ್ನು ಹೊರಗಡೆ ಬಿಡುವುದಿಲ್ಲ. ಅಪರಿಚಿತರು ಬಂದಾಗ ಬೊಗಳುವುದನ್ನು ತಡೆಯಲು ಅದರ ಮೇಲೆ ಹೆಚ್ಚು ಒತ್ತಡ ಹೇರುವುದು, ಬೆದರಿಸುವುದು, ಹೊಡೆಯುವುದು ಮಾಡುತ್ತಾರೆ. ಒತ್ತಡ ಹೆಚ್ಚಾದಂತೆ ಅವು ಕಚ್ಚಲು ಆರಂಭಿಸುತ್ತವೆ. ಸಾಕು ನಾಯಿಯಾಗಲಿ ಬೀದಿ ನಾಯಿಯಾಗಲಿ ಅವುಗಳ ಮುಂದೆ ಓಡುವುದರಿಂದ ಕಚ್ಚಲು ಹಿಂಬಾಲಿಸುತ್ತವೆ. ಹೆಚ್ಚಾಗಿ ಸಾಕು ನಾಯಿಗಳು ಹೀಗೆ ಮಾಡುತ್ತವೆ.

ಸಾಕುನಾಯಿ ಮತ್ತು ಬೀದಿನಾಯಿಗಳ ಕಡಿತದಿಂದ ಹೇಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು?

ಶ್ವಾನ ಪ್ರೇಮಿ ಶಿವಕುಮಾರ್‌ ಸಲಹೆಗಳಿವು.

ಬೀದಿ ನಾಯಿಗಳ ಗುಂಪು ಕಂಡುಬಂದಲ್ಲಿ, ಅವುಗಳತ್ತ ಗುರಾಯಿಸಿ ನೋಡದೆ, ಓಡದೆ ಸುಮ್ಮನೆ ನಡೆದುಕೊಂಡು ಹೋಗಬೇಕು. ಗುರಾಯಿಸುವುದು, ಓಡುವುದು ಮಾಡುವುದರಿಂದಲೇ ಚಿಕ್ಕ ಮಕ್ಕಳು ಹೆಚ್ಚು ಕಡಿತಕ್ಕೆ ಒಳಗಾಗಿದ್ದಾರೆ.ಅವು ಧ್ವನಿ ಮಾಡಿ ಗುರಾಯಿಸುವಾಗ ಬೆದರಿಸದೆ ಲೊಚಗುಟ್ಟುವ ಶಬ್ದ ಮಾಡಿ ಅವುಗಳಿಂದ ತಪ್ಪಿಸಿಕೊಳ್ಳಬಹುದು.

ಚಿಕ್ಕಂದಿನಿಂದಲೂ ಜೊತೆಯಲ್ಲಿ ಬೆಳೆದ ನಾಯಿಗಳಲ್ಲಿ ಒಂದು ನಾಯಿ ವಾಹನ ಅಪಘಾತದಲ್ಲಿ ಮೃತಪಟ್ಟರೆ ಆ ಘಟನೆಯನ್ನು ಕಣ್ಣಾರೆ ಕಂಡ ಇತರ ನಾಯಿಗಳು ವಾಹನ ಸವಾರರನ್ನು ಕಚ್ಚಲು ಹಿಂಬಾಲಿಸುತ್ತವೆ. ರಸ್ತೆಯಲ್ಲಿ ವಾಹನಗಳು ಸಾಗುವಾಗ ಹಿಂದಿನ ಅಪಘಾತದ ದೃಶ್ಯ ಕಣ್ಣ ಮುಂದೆ ಬಂದು ಅವುಗಳಿಗೆ ವಾಹನವನ್ನು ಹಿಂಬಾಲಿಸುವುದು ಅಭ್ಯಾಸವಾಗಿರುತ್ತದೆ.ಬೀದಿ ನಾಯಿಗಳು ಕಂಡುಬಂದಲ್ಲಿ ಆದಷ್ಟು ಅವುಗಳಿಂದ ದೂರದಲ್ಲಿ, ಜಾಗರೂಕತೆಯಿಂದ ಬೈಕ್ ಚಲಾಯಿಸಬೇಕು.

ಬಿಬಿಎಂಪಿಯವರು ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಲು ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಾರೆ. ನಂತರ ಅವುಗಳನ್ನು ಅದೇ ಬೀದಿಯಲ್ಲಿ ಬಿಡದೇ ಬೇರೊಂದು ಬೀದಿಗೆ ತಂದು ಬಿಡುತ್ತಾರೆ. ಆಗ ಅಲ್ಲಿರುವ ನಾಯಿಗಳು ಇದರ ಮೇಲೆ ದಾಳಿ ಮಾಡಿದಾಗಗಾಬರಿಗೊಂಡು ಮನುಷ್ಯರಿಗೆ ಕಚ್ಚಲು ಬರುತ್ತವೆ. ಗಾಬರಿಯಿಂದ ಓಡಾಡುವ ನಾಯಿಗಳು ಯಾವಾಗಬೇಕಾದರೂ ಕಚ್ಚಬಹುದು. ಅಂತಹ ನಾಯಿ ಕಂಡರೆ ದೂರವಿರುವುದು ಉತ್ತಮ. ಬೀದಿಯಲ್ಲಿ ಮಾಂಸ ತಿನ್ನುವ ನಾಯಿಗಳ ಹತ್ತಿರ ಹೋಗದಿರುವುದು ಸುರಕ್ಷಿತ.

ಸಾಕು ನಾಯಿಗಳನ್ನು ಹೆಚ್ಚಾಗಿ ಕಟ್ಟಿ ಹಾಕುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಹೆಚ್ಚು ಬದಲಾಗುತ್ತವೆ. ಸಾಕಿದವರ ಮೇಲೆ ಹಾರುವುದು, ಬಾಯಿ ಹಾಕುವುದು ಮಾಡುತ್ತಿರುತ್ತವೆ. ಅಂತಹ ನಾಯಿಗಳು ಕಂಡರೆ ಜಾಗೃತರಾಗಿರಿ.

ಮೊದಲು ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಅವುಗಳನ್ನು ಸುತ್ತಾಡಿಸಬೇಕು ಅಂದಾಗ ಅವು ಸಹಜವಾಗಿರುತ್ತವೆ. ಒತ್ತಡ ಹೇರುವುದು ಸರಿಯಲ್ಲ. ಹೆಚ್ಚು ಪ್ರೀತಿಯಿಂದ ಪಳಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT