ಮಂಗಳವಾರ, ಅಕ್ಟೋಬರ್ 20, 2020
23 °C

PV Web Exclusive: ಚಾರಣಿಗರ ಟೆಂಟನ್ನು ಗೀಚಿದ ಕಾಡುಪ್ರಾಣಿ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ನ ಕಾರಣ ನಮ್ಮ ತಂಡದ ಹಳೆಯ ಚಾರಣಿಗರಲ್ಲಿ ಎಲ್ಲರೂ ಒಟ್ಟಿಗೆ ಸೇರಲು ಆಗಿರಲಿಲ್ಲ. ಈ ಶನಿವಾರ ಬಿಡುವಿದ್ದ ಕಾರಣ ಎಲ್ಲರೂ ಒಮ್ಮೆ ಸೇರಬೇಕು ಎಂದು ನಿರ್ಧರಿಸಿ, ಒಂದು ಸಣ್ಣ ಚಾರಣವನ್ನು ಆಯೋಜಿಸಿದ್ದೆವು. ಇದು ರಾತ್ರಿ ಚಾರಣವಾಗಿದ್ದ ಕಾರಣ, ಶಿವಗಂಗೆ ತಲುಪುವಷ್ಟರಲ್ಲಿ ಸಂಜೆ 6 ದಾಟಿತ್ತು. ಅಲ್ಲಿಂದ ತೋಟಕ್ಕೆ ಹೋಗಿ, ತೋಟದಲ್ಲಿ ಗಾಡಿಗಳನ್ನು ನಿಲ್ಲಿಸಿ ಚಾರಣಕ್ಕೆ ಹೊರಟೆವು. ಮಂಜ ಮತ್ತು ಬಸವ ಮೊದಲೇ ಸಿದ್ಧರಾಗಿ ನಮಗಾಗಿ ಕಾಯುತ್ತಿದ್ದರು. ಹೀಗಾಗಿ ನಾವೇನು ಸಿದ್ಧತೆ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ.

ಸುಮಾರು 6.30ರಷ್ಟರಲ್ಲಿ ಚಾರಣ ಆರಂಭಿಸಿದೆವು. 5 ಕಿ.ಮೀ.ನಷ್ಟು ದೂರವನ್ನು ಕಾಡಿನಲ್ಲಿ ಕ್ರಮಿಸಬೇಕಿತ್ತು. ಆನಂತರ ಕಾಡಂಚಿನ ತೋಟವೊಂದರಲ್ಲಿ ಟೆಂಟ್ ಹಾಕಬೇಕಿತ್ತು. ಸಣ್ಣ ಜಡಿ ಮಳೆ ಬರುತ್ತಿದ್ದ ಕಾರಣ, ಕಾಡೂ ನಿಶ್ಯಬ್ಧವಾಗಿತ್ತು. ನಾವೂ ನಿಶ್ಯಬ್ದವಾಗಿದ್ದೆವು. ಜನರ ಓಡಾಟ ಕಡಿಮೆಯಿದ್ದ ಕಾರಣ ಕಾಡಿನ ದಾರಿಗಳೆಲ್ಲಾ ಹಸಿರಿನಿಂದ ಮುಚ್ಚಿಹೋಗಿದ್ದವು. ಮಂಜ ಅವುಗಳನ್ನೇ ಸವರಿ ದಾರಿ ಮಾಡಿಕೊಂಡು ನಡೆದ. ನಾವು ಅವನನ್ನು ಹಿಂಬಾಲಿಸಿದೆವು. ಜಡಿ ಮಳೆ ಇದ್ದ ಕಾರಣ ಕಾಡಿನ ಜೀವಜಂತುಗಳ ಬಗ್ಗೆ ಯಾರ ಗಮನವೂ ಇರಲಿಲ್ಲ.

ಕಾಡು ದಾಟಿ, ಚಿಕ್ಕರಂಗನ ಕೋಸಿನತೋಟ ತಲುಪುವಷ್ಟರಲ್ಲಿ ರಾತ್ರಿ 8 ಆಗಿತ್ತು. ಹಿಂದೊಮ್ಮೆ ಕೋಸು ಬಳೆಯುತ್ತಿದ್ದ ಕಾರಣ ಅದನ್ನು ಕೋಸಿನತೋಟ ಎನ್ನುತ್ತಾರೆ. ಆದರೆ ಈಗ ಸುತ್ತ ಕಾಡು ಬೆಳೆದು, ತೋಟವನ್ನೂ ಕಾಡು ಆವರಿಸತೊಡಗಿದೆ. ಚಿಕ್ಕರಂಗನ ಮನೆಯವರ ಅನುಮತಿ ಪಡೆದು, ನಾವು ಅಲ್ಲಿ ಆಗ್ಗಾಗ್ಗೆ ಬಿಡಾರ ಊಡುತ್ತೇವೆ ಅಷ್ಟೆ. ತೋಟದಲ್ಲಿ ಕೃಷಿ ಮಾಡಿಯೇ ಇಲ್ಲದ ಸಾಕಷ್ಟು ಜಾಗವಿದೆ. ಸಣ್ಣಗುಡ್ಡಗಳು, ತೊರೆ, ಕೊರಕಲು, ಹಳ್ಳ ಎಲ್ಲವೂ ಇವೆ. ಹೀಗಾಗಿ ಕಾಡು ಪ್ರಾಣಿಗಳೂ ಇಲ್ಲಿಗೆ ಬರುತ್ತವೆ. ಸಾವನದುರ್ಗ ಕಾಡಿನಲ್ಲಿ ಬರ ಬಿದ್ದಾಗ ಅಲ್ಲಿರುವ ಆನೆಗಳು ಈ ಕಾಡಿಗೆ ಬರುತ್ತವೆ. ಇಲ್ಲಿಂದ ಶಿವಗಂಗೆ, ಹೊನ್ನುಡಿಕೆ ಮಾರ್ಗವಾಗಿ ಗುಬ್ಬಿ–ನಿಟ್ಟೂರು ತಲುಪುತ್ತವೆ. ಆದರೆ ದಟ್ಟ ಕಾಡು ಇರುವ ಕಾರಣ, ಸಾಕಷ್ಟು ದಿನ ಇಲ್ಲಿ ತಂಗುತ್ತವೆ. ಹೀಗೆ ಕಾಡುಪ್ರಾಣಿಗಳು ಅಡ್ಡಾಡುವ ದಾರಿಯಲ್ಲೇ ಈ ತೋಟವಿತ್ತು. ಬಾರಿ ಪ್ರಾಣಿಗಳನ್ನು ಹತ್ತಿರದಿಂದ ನೋಡಿದ್ದೆವು. 

ಟೆಂಟು ಹಾಕಿ, ಅಡುಗೆಗೆ ಸಿದ್ಧಮಾಡುವಷ್ಟರಲ್ಲಿ 9 ಗಂಟೆಯಾಗಿತ್ತು. ಅಡುಗೆ ಬೇಯುತ್ತಿತ್ತು. ಮತ್ತೊಂದೆಡೆ ಬಸವ ಫೈರ್‌ಕ್ಯಾಂಪ್‌ ಆರಿಹೋಗದಂತೆ ನೋಡಿಕೊಳ್ಳುತ್ತಿದ್ದ. ಚಳಿ ಇದ್ದ ಕಾರಣ ಎಲ್ಲರೂ ಫೈರ್‌ಕ್ಯಾಂಪ್ ಮುಂದೆ ಕುಳಿತಿದ್ದೆವು. ಎಲ್ಲರೂ ಸುಮ್ಮನೆ ಇದ್ದೆವು. ಮಂಜನೇ ಮಾತು ಶುರು ಮಾಡಿದ. ‘ಚಿರತೆ ಕಾಟ ಜಾಸ್ತಿ ಆಗೋಗಿದೆ. ಆ ತಣ್ಣೀರು ಗುಂಡಿ ಹತ್ರ ಪಾಳು ಗುಡಿ ಇದ್ಯಲ್ಲ ಅದ್ರಲ್ಲಿ ಸೇರ್ಕೊಂಡು ನಾಲ್ಕು ಮರಿ ಹಾಕಿದ್ಯಂತೆ. ಊರಿಗೆ ಹತ್ರ ಅಲ್ವ ಆ ಜಾಗ, ಕಾಲೊನಿ ಹತ್ರಾನೆ ಇರತ್ತೆ ಯಾವಾಗ್ಲು. ಕೃಷ್ಣಪ್ಪಂದು ಒಂದು ಕುರಿ, ಒಂದು ಕರ ತಿನ್ಕೊಂಡು ಹೋಯ್ತು’ ಅಂದ.

ಅಲ್ಲಿ ಚಿರತೆ ಬರುವುದು ಸಾಮಾನ್ಯವಾಗಿದ್ದ ಕಾರಣ ನಾವು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಮಂಜನ ಮಾತಿಗೆ ಹೂಂಗುಟ್ಟಿದೆವು ಅಷ್ಟೆ. ಮಂಜನ ಮಾತನ್ನು ಕಡೆಗಣಿಸಿದ್ದನ್ನು ಗಮನಿಸಿದ ಅವನು, ‘ನಿಜಕ್ಕೂ ಜಸ್ತಿ ಆಗಿದೆ ಸಾರ್. ಊರೊಳಗೆ ಬಂದು ನಮ್ಮ ಪಕ್ಕದ ಮನೆಯವರ ಬಾಗಿಲಲ್ಲೇ ಕೂತಿತ್ತು’ ಎಂದ. ಇದೂ ಸಹ ಆಗ್ಗಾಗ್ಗೆ ಕೇಳುತ್ತಿದ್ದ ಮಾತೇ ಆಗಿದ್ದರಿಂದ ಮತ್ತೆ ಕಡೆಗಣಿಸಿದೆವು. ರಾತ್ರಿ ಊಟ ಮುಗಿಸಿ, ಮತ್ತೆ ಚಾರಣ ಹೊರಟೆವು. ಜಡಿ ಮಳೆ ಮತ್ತೆ ಜೋರಾದ ಕಾರಣ ಚಾರಣವನ್ನು ಮೊಟಕುಗೊಳಿಸಿ ವಾಪಸ್ ಆದೆವು. 

ವಾಪಸ್ ಬರುವಾಗ ಕಾಲುಹಾದಿಯಲ್ಲಿ ಕೆಸರು ಮಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಹತ್ತಿರದಿಂದ ಗಮನಿಸಿದಾಗ ಚಿರತೆಯ ಹೆಜ್ಜೆ ಎಂದು ಗೊತ್ತಾಯಿತು. ಗಾಬರಿಯಾಗುವ ಅವಶ್ಯಕತೆ ಇರಲಿಲ್ಲ. ಆ ದಾರಿ ಊರಿನ ಕಡೆ ಹೋಗುತ್ತಿತ್ತು. ನಮ್ಮ ಟೆಂಟುಗಳು ಇದ್ದ ಜಾಗ ಊರಿಂದ ವಿರುದ್ಧ ದಿಕ್ಕಿನಲ್ಲಿತ್ತು. ಎರಡು ವರ್ಷಗಳಿಂದ ಈ ಕಾಡಿನಲ್ಲಿ ಚಾರಣ ನಡೆಸಿದ್ದೆವು. ನಾವು ಕಂಡಿದ್ದ ಬೇಟೆ ಪ್ರಾಣಿಗಳೆಲ್ಲವೂ ಕಾಲುದಾರಿಯಲ್ಲೇ ಓಡಾಡುತ್ತಿದ್ದವು. ದನ–ಕುರಿ–ಮೇಕೆಗಳೆಲ್ಲವೂ ಇದೇ ದಾರಿಯಲ್ಲಿ ಓಡಾಡುತ್ತಿದ್ದ ಕಾರಣ ಅವುಗಳ ವಾಸನೆ ಹಿಡಿದು, ಬೇಟೆ ಪ್ರಾಣಿಗಳೂ ಇದೇ ದಾರಿ ಹಿಡಿಯುತ್ತಿದ್ದವೇನೋ? ಕರಡಿ ಮಾತ್ರ ತನಗೆ ಇಚ್ಛೆಬಂದ ಜಾಗದಲ್ಲಿ ದಾರಿ ಮಾಡಿಕೊಂಡು ಓಡಾಡುತ್ತಿತ್ತು. ಚಿರತೆ ಟೆಂಟಿನತ್ತ ಬರುವುದಿಲ್ಲ ಎಂಬ ಧೈರ್ಯದ ಮೇಲೆ ಹೊರಟೆವು. ಟೆಂಟು ತಲುಪಿ ಎಲ್ಲರೂ ಮಲಗುವಷ್ಟರಲ್ಲಿ 2 ಗಂಟೆ ದಾಟಿತ್ತು.

ಆದರೂ ಟೆಂಟಿನಲ್ಲಿ ಮಲಗುವಾಗ ಎಂತಹದೋ ಅಳುಕು. ತಡರಾತ್ರಿಯಲ್ಲಿ ಕರಡಿ, ಚಿರತೆಗಳೆಲ್ಲಾ ಬೆಟ್ಟದಿಂದ ಕೆಳಗಿಳಿದಿರುತ್ತವೆ. ಊರಿನ ಕಡೆ ಹೋಗಿರುತ್ತವೆ. ಬೆಳಗಿನ ಜಾವದ ಹೊತ್ತಿಗೆ ಮತ್ತೆ ಹಿಂತಿರುಗುವುದು ಶತಸಿದ್ಧ. ಒಂದೆಡೆ ಸೋನೆ, ನಾಲ್ಕಡಿ ಮುಂದಿನ ವಸ್ತುವೂ ಕಾಣದಂತೆ ಆವರಿಸಿದ್ದ ಮಬ್ಬು. ಬಸವ ಎದ್ದು ಮತ್ತೆ ಬೆಂಕಿ ಹೊತ್ತಿಸಿದ್ದ. ಅಲ್ಲಿದ್ದ ಸೌದೆ ಗರಿಷ್ಠ ಹತ್ತು ನಿಮಿಷ ಉರಿಯಬಹುದು ಅಷ್ಟೆ. ನಿಜವಾಗಿಯೂ ಬೆಂಕಿ ಬೇಕಿದ್ದದ್ದು ಬೆಳಗಿನ ಜಾವಕ್ಕೆ.

ಮತ್ತೊಮ್ಮೆ ಸುತ್ತೆಲ್ಲಾ ಹುಡುಕಿ ಒಣ ಕಡ್ಡಿ ಪುಳ್ಳೆಗಳನ್ನೆಲ್ಲಾ ಒಟ್ಟುಗೂಡಿಸಿದೆವು. ಕಬಾಬು ಕರಿದ ಎಣ್ಣೆ ಅರ್ಧ ಲೀಟರಿನಷ್ಟು ಉಳಿದಿತ್ತು. ಹಾಕಿದ್ದ ಟೀ-ಶರ್ಟ್ ಅನ್ನು ಎಣ್ಣೆಯಲ್ಲಿ ನೆನೆಸಿ ಬೆಂಕಿ ಹಚ್ಚಿದೆ. ನಮ್ಮ ಟೆಂಟಿನಲ್ಲಿ ಮೂವರು ಮಲಗಬಹುದಿತ್ತು. ಟೆಂಟಿನೊಳಗೆ ಮಲಗಿದ್ದ ಬಾಲು ಆಗಲೇ ಗೊರಕೆ ಹೊಡೆಯುತ್ತಿದ್ದ. ಇನ್ನು ನಾನು ಮತ್ತು ಶಿವರಾಜ ಮಲಗಬೇಕಿತ್ತು. ಉಳಿದ ಟೆಂಟುಗಳಲ್ಲಿ ಇನ್ನೂ ನಾಲ್ಕು ಜನ ಇದ್ದರು. ನಸುಕಿನ 3.30ರವರೆಗೂ ಬೆಂಕಿ ಉರಿಯಿತು. ಹಾಗೂ ಹೀಗೂ ಎಚ್ಚರವಾಗೇ ಇದ್ದ ನನಗೆ 4ರ ನಂತರ ಕಣ್ಣು ಬಿಡಲಾಗಲಿಲ್ಲ.

ಬೆಳಿಗ್ಗೆ 6ಕ್ಕೆ ಎಚ್ಚರವಾಯಿತು. ಟೆಂಟಿನ ಬಾಗಿಲ ಬಳಿ ಮಲಗಿದ್ದ ಶಿವರಾಜ, 'ಜೈ ರಾತ್ರಿ ಎಲ್ಲಾ ಏನೋ ಟೆಂಟಿಗೆ ಉಜ್ಜುತ್ತಿತ್ತು' ಎಂದ.

'ಲೋ ಗಾಳಿಗೆ ಟೆಂಟು ಹಾಗೇ ಸದ್ದು ಮಾಡೋದು' ಎಂದೆ.

ಮೂವರೂ ಎದ್ದು ಟೆಂಟಿನ ಬಾಗಿಲು ತೆರೆದೆವು. ಟೆಂಟಿನ ಬಾಗಿಲಲ್ಲಿ ಯಾವುದೋ ಅಜ್ಞಾತ ಪ್ರಾಣಿ ಸಗಣಿ ಹಾಕಿತ್ತು. ಜಡಿ ಮಳೆಯ ಕಾರಣ ಸಗಣಿ ಕದಡಿಹೋಗಿತ್ತು. ಯಾವ ಪ್ರಾಣಿಯದ್ದು ಎಂದು ಗುರುತಿಸಲು ಆಗಲಿಲ್ಲ. ಮಂಜ ಎಷ್ಟೇ ತಲೆಕೆಡಿಸಿಕೊಂಡರೂ ಅದು ಯಾವ ಪ್ರಾಣಿಯದ್ದು ಎಂದು ಪತ್ತೆ ಮಾಡಲು ಸಾಧ್ಯವಾಗಲಿಲ್ಲ.  ಟೆಂಟಿನ ಹೊರಭಾಗದಲ್ಲಿ ಮಣ್ಣು ಬಳಿದಂತೆ ಗಾರು-ಗಾರು ಗೀರು ಆಗಿತ್ತು. ಯಾವುದೋ ಪ್ರಾಣಿ ಮುಂಗೈನಲ್ಲಿ ಗೀಚಿದಂತೆ ಕಾಣುತ್ತಿತ್ತು. ಮಳೆಗೆ ಮಣ್ಣು ಒದ್ದೆಯಾಗಿ, ಅದೂ ಸಾರಿ ಟೆಂಟಿನ ಮೇಲೆ ಸೋರುತ್ತಿತ್ತು. ಅದರಿಂದಲೂ ಅದು ಯಾವ ಪ್ರಾಣಿಯದ್ದು ಎಂದು ಪತ್ತೆ ಮಾಡುವುದು ಕಷ್ಟವಾಗಿತ್ತು.

ರಾತ್ರಿ ತಿನ್ನಲಾಗದೆ ಉಳಿದಿದ್ದ ಕಬಾಬನ್ನು ಕವರು ಕಟ್ಟಿ ಟೆಂಟಿನ ಹೊರಗೆ ಇಟ್ಟಿದ್ದೆವು. ಅದು ಅಲ್ಲೇ ಇತ್ತು. ಟೆಂಟಿನ ಬಳಿ ಬಂದಿದ್ದ ಪ್ರಾಣಿ ಅದನ್ನು ಮುಟ್ಟುವ ಗೋಜಿಗೆ ಹೋಗಿರಲಿಲ್ಲ. 

ಹಾಗಿದ್ದಲ್ಲಿ ಅಲ್ಲಿಗೆ ಬಂದಿದ್ದ ಪ್ರಾಣಿ ಯಾವುದು? ಅದೀಗ ಅಲ್ಲೆಲ್ಲೋ ಅವಿತುಕೊಂಡು ನಮ್ಮನ್ನೇ ನೋಡುತ್ತಿರಬಹುದೇ? ಯೋಚಿಸಿದಷ್ಟೂ ದಿಗಿಲು ಹೆಚ್ಚಾಯಿತು. ಪೂರ್ಣ ಬೆಳಕು ಮೂಡಿದ ಮೇಲೆ ಹೊರಡುವುದೆಂದು ತೀರ್ಮಾನಿಸಿ, ಚಾರಣ ಆರಂಭಿಸಿದ್ದ ತೋಟ ಮುಟ್ಟುವಷ್ಟರಲ್ಲಿ 9 ಗಂಟೆ ಕಳೆದಿತ್ತು.

ದಾರಿಯಲ್ಲಿದ್ದ ಮಧು ಅವರ ತೋಟದಲ್ಲಿದ್ದ ಕಡಲೆಕಾಯಿ ಗಿಡಗಳನ್ನು ಯಾರೊ ಕಿತ್ತು ಬಿಸಾಡಿದ್ದರು. ಅಲ್ಲೆಲ್ಲಾ ಕರಡಿಯ ಹೆಜ್ಜೆಗುರುತುಗಳಿದ್ದವು. ಅಲ್ಲಿಂದ ಹೊರಡುವಷ್ಟರಲ್ಲೇ, ಕೃಷ್ಣಪ್ಪ ಎಂಬುವವರು ಬಂದಿದ್ದರು.

‘3–4 ಗಂಟೇಲಿ ಕಾಲೋನಿಗೆ ಚಿರತೆ ಬಂದಿತ್ತು. ಆ ತಿಮ್ಮಕ್ಕನ ನಾಯಿಯ ಎತ್ಕೊಂಡು ಹೋಗದೆ ನೋಡು’ ಎಂದು ಮಂಜನಿಗೆ ಹೇಳಿದ. ಮಂಜ ನಮ್ಮತ್ತ ನೋಡಿ, ‘ಚಿರತೆ ಕಾಟ ಜಾಸ್ತಿ ಆಗದೆ ಅಂತ ಹೇಳಲಿಲ್ವಾ ನಾನು’ ಅಂದ. ಅವನ ಆತಿಗೆ ತಲೆಯಾಡಿಸಿದೆವು. ಅರಣ್ಯ ಇಲಾಖೆಗೆ ದೂರು ನೀಡಬೇಕು ಎಂದು ಮಾತನಾಡಿಕೊಂಡೆವು.

ಆದರೆ, ನಾವು ಗಾಡಿಗಳನ್ನು ಹತ್ತಿ ಹೊರಡುವಾಗಲೂ ಒಂದು ಪ್ರಶ್ನೆ ಕಾಡುತ್ತಲೇ ಇತ್ತು. ‘ಟೆಂಟಿಗೆ ಗಾರು ಮಾಡಿದ್ದು, ಬಾಗಿಲಲ್ಲಿ ಹೇಸಿಗೆ ಮಾಡಿದ್ದು ಚಿರತೆಯೇ ಆಗಿದ್ದಲ್ಲಿ, ಅದಕ್ಕೆ ನಮ್ಮ ಕಬಾಬಿನ ರುಚಿ ನೋಡಬೇಕು ಎನಿಸಲಿಲ್ಲವೇ?’.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು