ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಕಿ ಪುಕ್ಕದ ಚಿಲಿ ಫ್ಲೆಮಿಂಗೊ

Last Updated 17 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಜಲವಾಸಿ ಹಕ್ಕಿಗಳ ಪೈಕಿ ಕೊಕ್ಕರೆಗಳ ದೇಹ ರಚನೆ, ಜೀವನಕ್ರಮ ಭಿನ್ನವಾಗಿರುತ್ತದೆ. ಅದರಲ್ಲೂ ಫ್ಲೆಮಿಂಗೊಗಳ ಸೊಬಗು ಆಕರ್ಷಣೀಯ. ಇಂದಿನ ಪಕ್ಷಿ ಪ್ರಪಂಚದಲ್ಲಿ ಸುಂದರ ಹಕ್ಕಿಗಳಲ್ಲಿ ಒಂದೆನಿಸಿಕೊಂಡಿರುವ ಚಿಲಿ ಫ್ಲೆಮಿಂಗೊ (Chilean Flamingo) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಫಿಯೊನಿಕೊಪ್ಟೆರಸ್‌ ಚಿಲೆನ್‌ಸಿಸ್‌ (Phoenicopterus chilensis). ಇದು ಫ್ಲೆಮಿಂಗೊಗಳ ಫಿಯೊನಿಕೊಪ್ಟೆರಿಡೇ (Phoenicopteridae) ಕುಟುಂಬಕ್ಕೆ ಸೇರಿದ್ದು, ಫಿಯೊನಿಕೊಪ್ಟೆರಿಫಾರ್ಮ್ಸ್‌ (Phoenicopteriformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.ಹೇಗಿರುತ್ತದೆ?

ಗುಲಾಬಿ ಅಥವಾ ತಿಳಿಗೆಂಪು ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ರೆಕ್ಕೆಗಳು ಮತ್ತು ಕತ್ತಿನ ಕೆಳಭಾಗ ತುಸು ಗಾಢ ಬಣ್ಣದಲ್ಲಿದ್ದರೆ, ರೆಕ್ಕೆಗಳ ಅಂಚುಗಳು ಕಪ್ಪು ಬಣ್ಣದಲ್ಲಿರುತ್ತವೆ. ಕೋಲಿನಂತಹ ಕಾಲುಗಳು ನೀಳವಾಗಿದ್ದು, ಮೊಣಕಾಲುಗಳು ಮತ್ತು ಪಾದಗಳು ಕೆಂಪು ಬಣ್ಣದಲ್ಲಿರುತ್ತವೆ. ಕತ್ತು ನೀಳವಾಗಿದ್ದು, ತಲೆ ಪುಟ್ಟದಾಗಿರುತ್ತದೆ. ಕಣ್ಣುಗಳೂ ಪುಟ್ಟದಾಗಿದ್ದು, ಕೆಂಪು, ಕಂದು ಬಣ್ಣದಲ್ಲಿರುತ್ತವೆ. ಮೂತಿಯ ಬಣ್ಣ ತುಸು ತಿಳಿಯಾಗಿದ್ದು, ಕೊಕ್ಕು ಮಾತ್ರ ಗಾಢ ಕಪ್ಪು ಬಣ್ಣದಲ್ಲಿರುತ್ತದೆ. ಇತರೆ ಹಕ್ಕಿಗಳ ಕೊಕ್ಕುಗಳಿಗೆ ಹೋಲಿಸಿದರೆ, ಇದರ ಕೊಕ್ಕು ತುಸು ಬಾಗಿರುವುದು ವಿಶೇಷ.

ಎಲ್ಲಿದೆ?

ಹೆಸರೇ ಹೇಳುವಂತೆ ಇದು, ದಕ್ಷಿಣ ಅಮೆರಿಕ ಖಂಡದ ಚಿಲಿ ದೇಶದ ಹಕ್ಕಿ. ಚಿಲಿಯಷ್ಟೇ ಅಲ್ಲದೇ, ಈಕ್ವೆಡಾರ್, ಪೆರು, ಅರ್ಜೆಂಟೀನಾ, ಬ್ರೆಜಿಲ್‌ ರಾಷ್ಟ್ರಗಳಲ್ಲೂ ಕಾಣಸಿಗುತ್ತವೆ. ಜರ್ಮನಿ, ನೆದರ್ಲೆಂಡ್ಸ್, ಯೂಠ ಮತ್ತು ಕ್ಯಾಲಿಫೋರ್ನಿಯಾ ಪ್ರದೇಶಗಳಿಗೆ ಪರಿಚಯಿಸಲಾಗಿದೆ.

ಕೆಸರಿನಿಂದ ಕೂಡಿರುವ ಪ್ರದೇಶಗಳು, ನದಿ, ಕೆರೆ, ಸರೋವರಗಳ ಪಾತ್ರಗಳು, ಸಮುದ್ರ ಮಟ್ಟದಿಂದ ಸುಮಾರು 4,500 ಮೀಟರ್ ಎತ್ತರದಲ್ಲಿರುವ ತೀರ ಪ್ರದೇಶಗಳು ಇದರ ನೆಚ್ಚಿನ ವಾಸಸ್ಥಾನಗಳು.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಹಕ್ಕಿ. ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ಗುಂಪು ರಚಿಸಿಕೊಂಡಿರುತ್ತವೆ. ಕೆಲವೊಮ್ಮೆ ಸುಮಾರು 10 ಸಾವಿರಕ್ಕೂ ಹೆಚ್ಚು ಫ್ಲೆಮಿಂಗೊಗಳುಸ ಸೇರಿ ಗುಂಪು ರಚಿಸಿಕೊಂಡಿರುತ್ತವೆ.

ಹಗಲಿನಲ್ಲಿ ಮಾತ್ರ ಹೆಚ್ಚು ಚುರುಕಾಗಿರುತ್ತದೆ. ಬೆಳಕಿರುವ ಶೇ 15ರಿಂದ 30ರಷ್ಟು ಅವಧಿಯನ್ನು ಪುಕ್ಕ ಒಣಗಿಸಿಕೊಳ್ಳುವುದಕ್ಕೆ ಮೀಸಲಿಡುತ್ತವೆ. ಇದರಿಂದ ವೇಗವಾಗಿ ಹಾರುವುದಕ್ಕೆ ಮತ್ತು ಸರಾಗವಾಗಿ ಈಜುವುದಕ್ಕೆ ನೆರವಾಗುತ್ತದೆ. ಹಗಲೆಲ್ಲಾ ನದಿ ಮತ್ತು ಸರೋವರಗಳ ಪ್ರದೇಶಗಳಲ್ಲಿದ್ದರೆ, ರಾತ್ರಿಯಲ್ಲಿ ನೀಳವಾಗಿ ಹುಲ್ಲು ಬೆಳೆದಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಇವು ಹಾರುವಾಗ ‘V’ ಆಕಾರದಲ್ಲಿ ಸುತ್ತುತ್ತಾ ಸಾಗುತ್ತವೆ. ಕತ್ತನ್ನು ಸದಾ ನೇರವಾಗಿ ಚಾಚಿಕೊಂಡೇ ಹಾರುತ್ತವೆ.

ಹಾರುವಾಗ ಜೋರಾಗಿ ಕಿರುಚುತ್ತಾ, ಶಬ್ದ ಮಾಡುತ್ತಾ ಸಂವಹನ ನಡೆಸುತ್ತವೆ. ಯಾವ ಹಕ್ಕಿಯೂ ಗುಂಪು ಬಿಟ್ಟು ಹೋಗಬಾರದೆಂದು ಈ ರೀತಿ ಶಬ್ದ ಮಾಡುತ್ತಾ ನಿರಂತರವಾಗಿ ಸಂಪರ್ಕದಲ್ಲಿರುತ್ತವೆ. ಒಂದು ಕಾಲನ್ನು ಮಾತ್ರ ನೀರಿನಲ್ಲಿಟ್ಟು, ಮತ್ತೊಂದು ಕಾಲನ್ನು ದೇಹಕ್ಕೆ ಅಂಟುಕೊಂಡಿರುವಂತೆ ಇಟ್ಟು, ಕತ್ತನ್ನು ಭುಜದ ಮೇಲಿಟ್ಟು, ಕೆಲ ಹೊತ್ತು ನಿಲ್ಲುತ್ತವೆ. ಇದು ದೇಹದ ಉಷ್ಣಾಂಶ ನಿಯಂತ್ರಣಕ್ಕೆ ನೆರವಾಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಆಹಾರ

ಇದು ಮಾಂಸಾಹಾರಿ ಹಕ್ಕಿ. ಜಲವಾಸಿ ಹಕ್ಕಿಯಾಗಿರುವುದರಿಂದ ನೀರಿನಲ್ಲಿ ವಾಸಿಸುವ ಅಕಶೇರುಕಗಳನ್ನೇ ಹೆಚ್ಚು ಬೇಟೆಯಾಡಿ ಭಕ್ಷಿಸುತ್ತದೆ. ಇದರ ಜತೆಗೆ ಕೆಲವು ಬಗೆಯ ಪಾಚಿ ಮತ್ತು ಶಿಲೀಂಧ್ರಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ

ಏಪ್ರಿಲ್‌ನಿಂದ ಮೇ ತಿಂಗಳು ಈ ಫ್ಲೆಮಿಂಗೊಗಳ ಸಂತಾನೋತ್ಪತ್ತಿಗೆ ಹೆಚ್ಚು ಪ್ರಶಸ್ತವಾಗಿರುತ್ತದೆ. ಗಂಡು ಮತ್ತು ಹೆಣ್ಣು ಫ್ಲೆಮಿಂಗೊಗಳು ಪ್ರತಿ ಅವಧಿಯಲ್ಲೂ ಬೇರೆ ಬೇರೆ ಫ್ಲೆಮಿಂಗೊಗಳೊಂದಿಗೆ ಜೋಡಿಯಾಗುತ್ತವೆ. ಆದರೆ ಆಯಾ ಅವಧಿಯಲ್ಲಿ ಒಂದೇ ಸಂಗಾತಿಯೊಂದಿಗೆ ಕೂಡಿ ಬಾಳುತ್ತವೆ.

ಗುಂಪಿನಲ್ಲಿರುವ ಹೆಣ್ಣು ಫ್ಲೆಮಿಂಗೊಗಳನ್ನು ಆಕರ್ಷಿಸಲು ಗಂಡು ಫ್ಲೆಮಿಂಗೊಗಳು ಹಲವು ಕಸರತ್ತುಗಳನ್ನು ಮಾಡುತ್ತವೆ. ರೆಕ್ಕೆಗಳನ್ನು ಅಗಲಿಸಿ, ನರ್ತಿಸಿ ಗಮನ ಸೆಳೆಯಲು ಪ್ರಯತ್ನಿಸುತ್ತವೆ. ಹೆಣ್ಣು ಫ್ಲೆಮಿಂಗೊಗೆ ಇಷ್ಟವಾದರೆ, ಎರಡೂ ಕೂಡಿ ನಿರ್ದಿಷ್ಟ ಗಡಿ ಗುರುತಿಸಿಕೊಂಡು ವಾಸಿಸಲು ಆರಂಭಿಸುತ್ತವೆ. ಜೋಡಿ ಫ್ಲೆಮಿಂಗೊಗಳು ಕಷ್ಟಪಟ್ಟು, ಕಲ್ಲು ಮತ್ತು ಮಣ್ಣು ಬಳಸಿ, ಶಂಖಾಕೃತಿಯ ದಿಬ್ಬದಂತಹ ಗೂಡು ನಿರ್ಮಿಸುತ್ತವೆ. ಒಂದು ಬಿಳಿಬಣ್ಣದ ಮೊಟ್ಟೆಯನ್ನು ಹೆಣ್ಣು ಹಕ್ಕಿ ಇಟ್ಟರೆ, ಎರಡೂ ಹಕ್ಕಿಗಳು ಕೂಡಿ 26ರಿಂದ 31 ದಿನಗಳ ವರೆಗೆ ಮೊಟ್ಟೆಗೆ ಕಾವು ಕೊಡುತ್ತವೆ.

ಮೊಟ್ಟೆಯಿಂದ ಹೊರಬಂದ ಮರಿ ಕೆಲವು ದಿನಗಳ ವರೆಗೆ ಪೋಷಕ ಹಕ್ಕಿಗಳ ಆರೈಕೆಯಲ್ಲೇ ಬೆಳೆಯುತ್ತದೆ. 5ರಿಂದ 8 ದಿನಗಳ ನಂತರ ಗುಂಪಿನಲ್ಲಿ ಕೂಡಿ ಬಾಳಲು ಆರಂಭಿಸುತ್ತದೆ. 7ರಿಂದ 10 ದಿನಗಳ ನಂತರ ಸ್ವತಂತ್ರವಾಗಿ ಆಹಾರ ಹುಡುಕುವುದನ್ನು ಕಲಿಯುತ್ತದೆ. ಆದರೆ ಮರಿ ಪೂರ್ಣ ಪ್ರಮಾಣದಲ್ಲಿ ಸ್ವತಂತ್ರವಾಗಿ ಆಹಾರ ಹುಡುಕಿಕೊಂಡು ಸೇವಿಸುವ ವರೆಗೂ ಪೋಷಕ ಹಕ್ಕಿಗಳು ಆಹಾರ ಉಣಿಸಿ 65ರಿಂದ 70 ದಿನಗಳ ವರೆಗೆ ಆರೈಕೆ ಮಾಡುತ್ತವೆ. 3ರಿಂದ 5 ದಿನಗಳ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

ಸುಮಾರು 1 ಕೋಟಿ ವರ್ಷಗಳಷ್ಟು ಹಳೆಯಾದ ಚಿಲಿ ಫ್ಲೆಮಿಂಗೊ ಪಳೆಯುಳಿಕೆಗಳನ್ನು ಸಂಶೋಧಕರು ಪತ್ತೆ ಮಾಡಿದ್ದು, ವಿಶ್ವದ ಅತಿ ಪುರಾತನ ಹಕ್ಕಿಗಳಲ್ಲಿ ಇದು ಕೂಡ ಒಂದು ಎಂದು ತಿಳಿಸಿದ್ದಾರೆ.

ಮೊಣಕಾಲುಗಳ ಮೇಲೆ ಬೆಳೆದಿರುವ ವಿಶೇಷ ಅಂಗ ನೀರಿನಲ್ಲಿ ಮಂಡಿಯೂರಿ ಆಹಾರ ಹುಡುಕಲು ನೆರವಾಗುವಂತೆ ರಚನೆಯಾಗಿದೆ.

ನೀರು ಮತ್ತು ಆಹಾರ ಪದಾರ್ಥಗಳನ್ನು ಸೇವಿಸುವಾಗ ಕಲ್ಮಶಗಳು ದೇಹದೊಳಗೆ ಹೋಗದಂತೆ, ಸೋಸುವಂತಹ ನಾಲಗೆ ರಚನೆಯಾಗಿರುವುದು ವಿಶೇಷ. ಇವು ಉಪ್ಪು ನೀರು ಕುಡಿಯುವುದಿಲ್ಲ. ಕೆಸರಿನಲ್ಲಿರುವ ಮತ್ತು ನೀರಿನ ಬುಗ್ಗೆಗಳಲ್ಲಿನ ನೀರು ಕುಡಿದು ಬದುಕುತ್ತದೆ. ಮಳೆ ಬಂದಾಗ ಪುಕ್ಕದ ಮೇಲೆ ಬೀಳುವ ನೀರನ್ನೂ ಹೀರಿಕೊಳ್ಳುವಂತೆ ಇದರ ದೇಹ ರಚನೆಯಾಗಿದೆ.ಲ್ಯಾಟಿನ್ ಮತ್ತು ಸ್ಪ್ಯಾನಿಷ್‌ ಭಾಷೆಯ ಫ್ಲೇಮೆನ್ಕೊ ಎಂಬ ಪದದಿಂದ ಫ್ಲೆಮಿಂಗೊ ಪದ ಬಂದಿದ್ದು, ಬೆಂಕಿ (Fire) ಎಂಬುದು ಇದರ ಅರ್ಥ. ಇದರ ಆಕರ್ಷಕ ಕೆಂಪು ಬಣ್ಣದ ಪುಕ್ಕದಿಂದಾಗಿ ಆ ಹೆಸರು ಇಡಲಾಗಿದೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 2.5 ರಿಂದ 3.5 ಕೆ.ಜಿ., ದೇಹದ ಎತ್ತರ-110ರಿಂದ 130 ಸೆಂ.ಮೀ,ರೆಕ್ಕೆಗಳ ಅಗಲ-4 ರಿಂದ 5 ಅಡಿ,ಹಾರುವ ವೇಗ -59 ಕಿ.ಮೀ/ಗಂಟೆಗೆ,ಜೀವಿತಾವಧಿ-40 ರಿಂದ 50 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT