ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ತೆಯಾಯ್ತು ಹೊಸ ಕಿರಿ ಮೂತಿ ಕಪ್ಪೆ

Last Updated 18 ಫೆಬ್ರುವರಿ 2019, 12:18 IST
ಅಕ್ಷರ ಗಾತ್ರ

ಇತ್ತೀಚಿನ ಸಂಶೋಧನೆಯೊಂದರ ಫಲವಾಗಿ ಕೇರಳದ ಪಶ್ಚಿಮ ಘಟ್ಟಗಳಲ್ಲಿ ಹೊಸ ಪ್ರಭೇದದ ಕಪ್ಪೆಯೊಂದು ಪತ್ತೆಯಾಗಿದೆ. ‘ಮೈಕ್ರೊಹೈಲಾ ಡಾರ‍್ರೆಲಿ’ ಎಂಬ ಹೆಸರಿನ ಈ ಕಪ್ಪೆ, ‘ಮೈಕ್ರೊಹೈಲಾ’ ಕುಟುಂಬದ ಸದಸ್ಯ. ಈ ಕುಟುಂಬದ ಕಪ್ಪೆಗಳನ್ನು ‘ಕಿರಿ ಮೂತಿಯ ಕಪ್ಪೆ’ (ನ್ಯಾರೋ ಮೌತ್ಡ್‌ ಫ್ರಾಗ್) ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಅವುಗಳ ತ್ರಿಕೋನಾಕಾರದ ಪುಟ್ಟ ದೇಹ ಮತ್ತು ಕಿರಿದಾದ ಮೂತಿ. ಈ ಕುಲದ ಕಪ್ಪೆಗಳು ಜಪಾನ್, ಚೀನಾ, ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ವಿಸ್ತರಿಸಿವೆ.

ಸಂಶೋಧಕರು ತಮ್ಮ ಅಧ್ಯಯನದ ಭಾಗವಾಗಿ, ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಮೈಕ್ರೊಹೈಲಾ ಕಪ್ಪೆಗಳ ಸಮಗ್ರ ವರ್ಗೀಕರಣದ ಪರಿಷ್ಕರಣೆ ಮಾಡುತ್ತಿರುವಾಗ, ಈ ಹೊಸ ಜಾತಿಯ ಕಪ್ಪೆಗಳನ್ನು ಪತ್ತೆಹಚ್ಚಿದರು. ಈ ತಂಡದಲ್ಲಿ ಭಾರತ, ಶ್ರೀಲಂಕಾ, ಚೀನಾ, ಇಂಡೊನೇಷ್ಯಾ ಮತ್ತು ಅಮೆರಿಕ ಸಂಶೋಧಕರಿದ್ದರು. ಭಾರತೀಯ ಸಂಸ್ಥೆಗಳಾದ ದೆಹಲಿ ವಿಶ್ವವಿದ್ಯಾಲಯ, ಭಾರತೀಯ ವನ್ಯಜೀವಿ ಸಂಸ್ಥೆ, ಮಂಗಳೂರು ವಿಶ್ವವಿದ್ಯಾಲಯ ಹಾಗೂ ಪರಿಸರ ಮತ್ತು ಪರಿಸರವಿಜ್ಞಾನದ ಸಂಶೋಧನೆಗಾಗಿ ಕಾರ್ಯನಿರ್ವಹಿಸುವ ಅಶೋಕ ಟ್ರಸ್ಟ್ ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು.

ಈ ಹೊಸ ಜಾತಿಯ ಕಪ್ಪೆಯನ್ನು ಇದೇ ಮೊದಲ ಬಾರಿಗೆ ಪತ್ತೆಮಾಡಲಾಗಿದೆ ಎಂಬುದನ್ನು, ‘ಮೈಕ್ರೋಹೈಲಾ’ ಕುಲದ ಇತರ ಕಪ್ಪೆಗಳ ಡಿಎನ್ಎ, ಭೌತಿಕ ಗುಣಲಕ್ಷಣಗಳನ್ನು ಸಂಯೋಜಿತ ಜೀವ ವರ್ಗೀಕರಣ ವಿಧಾನದ ಮೂಲಕ ಹೋಲಿಸಿ, ದೃಢಪಡಿಸಲಾಯಿತು.

ವಿಶ್ವದ ಉಭಯಚರ ಪ್ರಭೇದಗಳ ಬಗ್ಗೆ ‘ಆಂಫೀಬಿಯನ್ ಸ್ಪೀಷಿಸ್ ಆಫ್ ದ ವರ್ಲ್ಡ್, ಆನ್ ಆನ್‌ಲೈನ್‌ ರೆಫರೆನ್ಸ್’ ಎಂಬ ಆನ್‌ಲೈನ್‌ ಡೇಟಾ ಬೇಸ್‌ ತಯಾರಿಸಿದ ಅಮೆರಿಕದ ಉಭಯ ಜೀವಿ ತಜ್ಞ ಡಾ. ಡಾರೆಲ್ ಆರ್. ಫ್ರಾಸ್ಟ್ ಅವರ ಗೌರವಾರ್ಥವಾಗಿ, ಈ ಕಪ್ಪೆಗೆ ‘ಮೈಕ್ರೊಹೈಲಾ ಡಾರ‍್ರೆಲಿ’ ಅಥವಾ ಡಾರೆಲ್‌ನ ಕೋರಸ್ ಕಪ್ಪೆ’ ಎಂದು ಹೆಸರಿಡಲಾಗಿದೆ. ಈ ದತ್ತಾಂಶವು, ವಿಶ್ವದಾದ್ಯಂತ ಇಲ್ಲಿಯವರೆಗೂ ಪತ್ತೆಯಾಗಿರುವ ಎಲ್ಲಾ ಉಭಯಚರಗಳ ವರ್ಗೀಕರಣದ ಕ್ಯಾಟಲಾಗ್ ಎನ್ನಬಹುದು.

ಮೈಕ್ರೊಹೈಲಾ ಡಾರ್‍ರೆಲಿ ಕಪ್ಪೆಯ ಕೆಲವು ಗುಣಲಕ್ಷಣಗಳು ‘ಮೈಕ್ರೊಹೈಲಾ’ ಕುಲದ ಅನೇಕ ಇತರ ಪ್ರಭೇದಗಳನ್ನು ಹೋಲುತ್ತದೆ. ಈ ಕಪ್ಪೆಯ ಧ್ವನಿಯು ‘ಮೈಕ್ರೊಹೈಲಾ ಝೆಲಾನಿಕ’ ಎಂಬ ಶ್ರೀಲಂಕಾದಲ್ಲಿ ಕಂಡುಬರುವ ಮತ್ತೊಂದು ಕಿರಿ ಮೂತಿ ಕಪ್ಪೆಯ ಧ್ವನಿಯನ್ನು ಹೋಲುತ್ತದೆ. ಮೈಕ್ರೊಹೈಲಾ ಡಾರ್‍ರೆಲಿ ಕಪ್ಪೆಯು ಪ್ರಸ್ತುತ ಕೇರಳದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಪತ್ತೆಯಾಗಿದ್ದು, ಇದರ ವಾಸಸ್ಥಾನದ ವ್ಯಾಪ್ತಿಯಲ್ಲೇ, ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ‘ಮೈಕ್ರೊಹೈಲಾ ಆರ್ನೇಟಾ’ ಅಥವಾ ಆರ್ನೇಟ್ ನ್ಯಾರೋ ಮೌತ್ಡ್‌ ಕಪ್ಪೆಗಳೂ ಇರುವುದನ್ನು ಸಂಶೋಧಕರು ಗಮನಿಸಿದ್ದಾರೆ.

ಈ ಹೊಸ ತಳಿಯ ಕಪ್ಪೆಯನ್ನು ಪತ್ತೆ ಮಾಡಿದ ನಂತರ, ಈ ವರೆಗೆ ಪತ್ತೆಯಾಗಿರುವ ‘ಕಿರಿ ಮೂತಿಯ ಕಪ್ಪೆ’ಗಳ ಒಟ್ಟು ಸಂಖ್ಯೆಯು 45ಕ್ಕೆ ಏರಿದೆ. ವಿಜ್ಞಾನಿಗಳ ಸಹಾಯಕ್ಕಿರುವ ಸುಧಾರಿತ ವರ್ಗೀಕರಣದ ವಿಧಾನಗಳು ಮತ್ತು ಉಭಯಚರಗಳ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯ ಕಾರಣದಿಂದ, ಮುಂಬರುವ ವರ್ಷಗಳಲ್ಲಿ ಇಂತಹ ವಿನೂತನ ಆವಿಷ್ಕಾರಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಬಹುದು ಎಂದು ನಮ್ಮಲ್ಲಿ ಭರವಸೆ ಮೂಡುವುದಂತೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT