ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮುಚ್ಚದೆ ನಿದ್ರಿಸುವ ‘ಚಿನ್ನದ ಮೀನು’

Last Updated 3 ಜುಲೈ 2018, 20:27 IST
ಅಕ್ಷರ ಗಾತ್ರ

ಬಣ್ಣ ಮತ್ತು ಗಾತ್ರವಷ್ಟೇ ಅಲ್ಲದೇ, ಹೆಸರಿನಿಂದಲೂ ಗಮನ ಸೆಳೆಯುವುದು ಚಿನ್ನದ ಮೀನಿನ(Goldfish) ವಿಶೇಷ.

ಇವುಗಳಲ್ಲಿ ಈವರೆಗೆ 300ಕ್ಕೂ ಹೆಚ್ಚಿನ ತಳಿಗಳನ್ನು ಗುರುತಿಸಲಾಗಿದೆ. ಎರಡು ಸಾವಿರ ವರ್ಷಗಳಿಂದಲೂ ಈ ಮೀನು ಪರಿಚಿತ. ಇದರಲ್ಲಿ, ‌ಫ್ಯಾಂಟೈಲ್, ವೆಲ್ಟೈಲ್, ಟೆಲಿಸ್ಕೋಪ್, ಬ್ಲಾಕ್‌ ಮೂರ್, ಒರಾಂಡಾ, ಸೆಲೆಸ್ಟಿಯಲ್ ಮತ್ತು ಬಬಲ್ ಐ, ರ‍್ಯಾಕಿನ್ ತಳಿಗಳು ಪ್ರಮುಖವಾದವುಗಳು.

ನೋಡಲು ಅತ್ಯಂತ ಸುಂದರ ದೇಹಾಕೃತಿ ಮತ್ತು ಆಕರ್ಷಕ ಬಣ್ಣವನ್ನು ಹೊಂದಿರುವ ಇದಕ್ಕೆ ಅಷ್ಟೇ ನ್ಯೂನತೆಗಳೂ ಇವೆ. ಇತರ ಮತ್ಸ್ಯಗಳಿಗೆ ಇರುವಂತೆ ಇದಕ್ಕೆ ನಾಲಗೆ ಮತ್ತು ಕಣ್ಣಿನ ರೆಪ್ಪೆಗಳು ಇರುವುದಿಲ್ಲ!

ಆಹಾರವನ್ನು ಹಲ್ಲಿನಿಂದ ಕಚ್ಚಿದ ಕೂಡಲೇ ಅಗೆಯದೇ ನೇರವಾಗಿ ನುಂಗುತ್ತದೆ. ಆಹಾರದ ರುಚಿಯನ್ನು ತುಟಿಬಾಯಿಯ ಗ್ರಂಥಿಗಳ ಮೂಲಕವೇ ಗ್ರಹಿಸುತ್ತದೆ. ಪ್ರಮುಖವಾಗಿ ನಾಲ್ಕು ಬಣ್ಣಗಳಲ್ಲಿ ಕಾಣಸಿಗುತ್ತದೆ. ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಲ್ಲಿ ಹೆಚ್ಚು ತಳಿಗಳಿವೆ. ನೇರಳೆ ಬಣ್ಣದಲ್ಲೂ ಕೆಲವು ತಳಿಗಳಿವೆ.

ದಕ್ಷಿಣ ಆಫ್ರಿಕಾ ಮತ್ತು ಏಷ್ಯಾಖಂಡದ ಹಲವು ರಾಷ್ಟ್ರಗಳ ಸಮುದ್ರಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.ಇವು ಮಿಶ್ರಹಾರಿಯಾಗಿದ್ದು, ಚಿಕ್ಕ ಗಾತ್ರದ ಮೀನು, ಲಾರ್ವ, ಸಮುದ್ರದಲ್ಲಿರುವಸಸ್ಯಗಳನ್ನು ಸೇವಿಸುತ್ತವೆ. ಇವು ಯಾವುದೇ ಆಹಾರವನ್ನು ಸೇವಿಸದೆ ಮೂರು ವಾರಗಳಿಗಿಂತಲೂ ಹೆಚ್ಚು ಬದುಕುವ ಸಾಮರ್ಥ್ಯ ಹೊಂದಿವೆ!

ಇವು ಹೆಚ್ಚಿನ ಪ್ರಮಾಣದಲ್ಲಿ ಅಲೆಗಳು ಬೀಸದ ಮತ್ತು ಹೆಚ್ಚು ನೀರು ಇರುವಂತಹ ಪ್ರದೇಶಗಳಲ್ಲಿ ವಾಸಿಸಲು ಇಷ್ಟಪಡುತ್ತವೆ.ಇದಕ್ಕೆ ವಾಸನೆಗಳನ್ನು ಆಘ್ರಾಣಿಸಿ ಗ್ರಹಿಸುವ ಶಕ್ತಿ ಅದ್ಭುತವಾಗಿರುತ್ತದೆ.ಕಣ್ಣ ರೆಪ್ಪೆಗಳು ಇಲ್ಲದೇ ಇರುವುದರಿಂದ ಕಣ್ಣು ಬಿಟ್ಟುಕೊಂಡೇ ನಿದ್ರಿಸುತ್ತದೆ!ಆಹಾರ ಸೇವಿಸುವಾಗ ಮೂಗಿನ ಮೂಲಕ ಶಬ್ದ ಮಾಡುತ್ತದೆ.

ಇದರ ದೇಹವು ಜಿಡ್ಡು ಮತ್ತು ಕೊಬ್ಬಿನಿಂದ ಕೂಡಿದ್ದು,ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ. ಇದನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಗಳು ಬೀರುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಗಳಲ್ಲಿ ತಿಳಿದು ಬಂದಿದೆ.
ಅಕ್ವೇರಿಯಂಗಳಲ್ಲಿ ಸಾಕುವ ಈ ಮೀನುಗಳು, ಹತ್ತು ವರ್ಷಕ್ಕಿಂತ ಹೆಚ್ಚು ಕಾಲ ಬದುಕುವುದಿಲ್ಲ. ಸಮುದ್ರದಲ್ಲಿ ವಾಸಿಸುವ ಮೀನುಗಳು 20ರಿಂದ 30 ವರ್ಷ ಬದುಕುತ್ತವೆ.

ಸಂತಾನೋತ್ಪತ್ತಿ
ಒಂದು ಬಾರಿಗೆ ಸುಮಾರು 25 ಮೊಟ್ಟೆಗಳನ್ನು ಇಡುತ್ತದೆ. ನಾಲ್ಕರಿಂದ ಐದು ದಿನಗಳವರೆಗೆ ಕಾವುಕೊಟ್ಟ ನಂತರ ಕೆಲವಷ್ಟೇ ಮರಿಗಳಾಗುತ್ತವೆ. ಬಹುತೇಕ ಮೊಟ್ಟೆಗಳನ್ನು ಪರಭಕ್ಷಕ ಮೀನುಗಳು ಭಕ್ಷಿಸುತ್ತವೆ.

**

ವಿಶೇಷ

*ಚೀನಾದಲ್ಲಿ ಸಾಂಗ್ ರಾಜವಂಶಸ್ಥರ ಆಳ್ವಿಕೆಯ ಸಮಯದಲ್ಲಿ (ಕ್ರಿ.ಶ. 960 - ಕ್ರಿ.ಶ. 1279) ರಾಜಮನೆತನದ ಸದಸ್ಯರನ್ನು ಹೊರತುಪಡಿಸಿ, ಮತ್ಯಾರೂ ಇದನ್ನು ಸಾಕುವುದು ನಿಷೇಧಿಸಲಾಗಿತ್ತು.

* ಹಲವು ದೇಶಗಳಲ್ಲಿ ಇದನ್ನು ಉಡುಗೊರೆಯಾಗಿ ನೀಡುವ ಪರಿಪಾಠವಿದೆ.

* ಸಂಶೋಧನೆಯೊಂದರ ಪ್ರಕಾರ ಈ ಮೀನು ಐದು ತಿಂಗಳ ಹಿಂದೆ ನಡೆದಿರುವುದನ್ನೂ ನೆನಪಿನಲ್ಲಿಟ್ಟುಕೊಳ್ಳವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT