ಗೌಡನಕೆರೆಗೆ ಮರಳಿದ ಬಾನಾಡಿಗಳು...

7

ಗೌಡನಕೆರೆಗೆ ಮರಳಿದ ಬಾನಾಡಿಗಳು...

Published:
Updated:

ಕೆರೆಯ ಅಂಗಳದಿಂದ ವಿಮಾನ ಟೇಕ್ ಆಫ್ ಆದಂತೆ ಹಾರುತ್ತಿದ್ದ ಕಪ್ಪುತಲೆಯ ಜೋಡಿ ಹಕ್ಕಿಗಳು.. ಇನ್ನೊಂದೆಡೆ ಕೊಕ್ಕು ಮೇಲೆ ಕೆಳಗೆ ಆಡಿಸುತ್ತಾ ಕೆರೆ ದಂಡೆಯಲ್ಲೇ ಕುಳಿತಿದ್ದ ಕೆಂಪು ತಲೆಯ ಹಕ್ಕಿಗಳು...ಒಂದಷ್ಟು ಹಕ್ಕಿಗಳು ನೀರಲ್ಲಿ ಮುಳುಗಿ ಮುಳುಗಿ ಏಳುತ್ತಿದ್ದರೆ, ಮತ್ತೊಂದಷ್ಟು ಕೆರೆ ಪಕ್ಕದ ಗದ್ದೆ ಬಯಲಲ್ಲಿ ಹುಳು ಹಿಡಿಯುತ್ತಿದ್ದೆವು..

ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ಗೌಡನಕೆರೆಯ ಅಂಗಳದಲ್ಲಿ ಜೂನ್ ತಿಂಗಳಲ್ಲಿ ಕಂಡು ಬಂದ ಬಾನಾಡಿಗಳ ದೃಶ್ಯವಿದು. ಎರಡು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಕೆರೆಯಲ್ಲಿ ನೀರು ಕಡಿಮೆಯಾಗಿತ್ತು. ನೀರಿನ ಕೊರತೆಯಿಂದ ಭತ್ತ ಬೆಳೆಯುವ ಪ್ರದೇಶವೂ ಕಡಿಮೆಯಾಗಿತ್ತು. ಭತ್ತದ ಗದ್ದೆಯಲ್ಲಿದ್ದ ಕೀಟಗಳನ್ನು ಹಿಡಿಯಲು ಬರುತ್ತಿದ್ದ ಹಕ್ಕಿಗಳ ಕಲರವವೂ ಕ್ಷೀಣಿಸಿತ್ತು. ಆದರೆ, ಈ ಬಾರಿ ಮಳೆಗಾಲ ಉತ್ತಮವಾಗಿ ಕೆರೆಗೆ ನೀರು ಬಂದಿದ್ದರಿಂದ, ಹಕ್ಕಿಗಳ ಹಾರಾಟ ಪುನಃ ಆರಂಭವಾಯಿತು.

ಈ ಕೆರೆ ಸುತ್ತ ವಿವಿಧ ಜಾತಿಯ ಪಕ್ಷಿಗಳು ಬಂದು ಹೋಗುತ್ತವೆ. ಗುಳುಮುಳುಕ (ಜಲಚತುರೆ ಅಥವಾ ನೀರು ಕೋಗಿಲೆ), ಸೀಳೆಬಾತು, ದೊಡ್ಡ ಬೆಳ್ಳಕ್ಕಿ, ಬೂದು ಬಕ, ನೀರು ಕಾಗೆ, ಕರಿತಲೆ ಹಕ್ಕಿ (ಕೆಂಬರಲ), ಹಾವಕ್ಕಿ, ವರಟೆ, ಇಂಡಿಯನ್ ಬ್ಲಾಕ್ ಐಬಿಸ್, ಬಾಯ್ಕಳಕ ಕೊಕ್ಕರೆ, ಬಿಳಿ ತಲೆಯ ಕಪ್ಪು ಕೋಳಿ, ನೆರಳೆ ಜಂಬುಕೋಳಿ, ನಾಮದಕೋಳಿ, ಬಿಳಿಹುಬ್ಬಿನ ದೇವನಕ್ಕಿ, ಬಾಲದ ದೇವನಕ್ಕಿ, ಹುಂಡುಕೋಳಿ (ಬಿಳಿ ಎದೆ ನೀರುಕೋಳಿ) ಇವೆಲ್ಲ ಈ ಕೆರೆ ಆವರಣದ ಅತಿಥಿಗಳು.

ಬೆಳಗಿನ ಜಾವದಲ್ಲಿ ಬಂದು ಆಹಾರ ಹೆಕ್ಕಿ ತಿನ್ನುವ ಹಕ್ಕಿಗಳು, ನಂತರ ಕೆರೆಯ ಆಸುಪಾಸಿನಲ್ಲೇ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಕೆರೆಯಲ್ಲಿ ನೀರು ಬರಿದಾಗುವಷ್ಟರಲ್ಲಿ ಮತ್ತೆ ಬೇರೆಡೆಗೆ ಹಾರಿ ಹೋಗುತ್ತವೆ. ಜೂನ್ ತಿಂಗಳಿನಿಂದ ಆರಂಭವಾಗುವ ಪಕ್ಷಿಗಳ ಸಂಚಾರ,ಸೆಪ್ಟೆಂಬರ್ ತಿಂಗಳವರೆಗೂ ಮುಂದುವರಿಯುತ್ತದೆ. ಎರಡು ವರ್ಷಗಳ ಹಿಂದೆ ಕಾಣೆಯಾಗಿದ್ದ ಪಕ್ಷಿಗಳೆಲ್ಲ ಈ ಬಾರಿ ಕೆರೆ ಅಂಗಳಕ್ಕೆ ಮರಳಿ ಬಂದಿದ್ದು, ಪಕ್ಷಿ ಪ್ರಿಯರ ಸಂತಸ ಹೆಚ್ಚಿಸಿತ್ತು.

ಕೆರೆಯ ಅಂಗಳ, ಬತ್ತದ ಗದ್ದೆಗಳಲ್ಲಿ ಹುಳು, ಕೀಟಗಳನ್ನು ಹಿಡಿದು ಬಾನಲ್ಲಿ ಜೋಡಿಯಾಗಿ ಹಾರಾಡುವ ಹಕ್ಕಿಗಳನ್ನು ಕೆರೆ ದಂಡೆಯಲ್ಲಿ ನಿಂತು ಫೋಟೊ ತೆಗೆಯವ ಮಜವೇ ಬೇರೆ!

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !