ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲ್ಲು ತಿನ್ನುವ ‘ಹವಾಯಿ ಹೆಬ್ಬಾತು’

Last Updated 10 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ನೆಲವಾಸಿ ಹಕ್ಕಿಗಳಿಗೆ ಹೋಲಿಸಿದರೆ, ಜಲವಾಸಿ ಹಕ್ಕಿಗಳ ಜೀವನಶೈಲಿ ಮತ್ತು ದೇಹರಚನೆ ಭಿನ್ನವಾಗಿರುತ್ತದೆ. ಜಲವಾಸಿ ಹಕ್ಕಿಗಳಲ್ಲಿ ಕೊಕ್ಕರೆಗಳು ಮತ್ತು ಬಾತುಕೋಳಿಗಳು ಪ್ರಮುಖ ಹಕ್ಕಿಗಳು. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಪರೂಪದ ಹೆಬ್ಬಾತುಗಳಲ್ಲಿ ಒಂದಾದ ಹವಾಯಿ ಹೆಬ್ಬಾತು (Hawaiian Goose) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಬ್ರಂಟಾ ಸ್ಯಾಂಡಿವಿಸೆನ್ಸಿಸ್‌ (Branta sandvicensis). ಇದು ಬಾತುಕೋಳಿಗಳ ಅನಾಟಿಡೇ (Anatidae) ಕುಟುಂಬಕ್ಕೆ ಸೇರಿದ್ದು, ಅನ್ಸೆರಿಫಾರ್ಮ್ಸ್‌ (Anseriformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ಇತರೆ ಹೆಬ್ಬಾತುಗಳಿಗೆ ಹೋಲಿಸಿದರೆ ಇದರ ದೇಹ ರಚನೆ, ಜೀವನಕ್ರಮ ಸಂಪೂರ್ಣ ಭಿನ್ನ. ಕಂದು, ತಿಳಿಕಂದು ಮತ್ತು ಕಪ್ಪು ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ಕೆನ್ನೆ ಮತ್ತು ಕುತ್ತಿಗೆ ಕಪ್ಪು ಬಣ್ಣದ ಪುಕ್ಕದಿಂದ ಕೂಡಿದ್ದು, ಕುತ್ತಿನ ಭಾಗದಲ್ಲಿ ವಿಶಿಷ್ಟವಾಗಿ ಪುಕ್ಕ ಬೆಳೆದಿರುತ್ತದೆ. ಎದೆಭಾಗ ಮತ್ತು ಉದರ ಭಾಗ ತಿಳಿಕಂದು ಬಣ್ಣದಲ್ಲಿದ್ದರೆ, ಬೆನ್ನು, ರೆಕ್ಕೆಗಳು ಕಂದು, ಕಪ್ಪು ಮಿಶ್ರಿತ ಬಣ್ಣದ ಪುಕ್ಕದಿಂದ ಕೂಡಿರುತ್ತವೆ. ಬಾಲ ಸಂಪೂರ್ಣ ಕಪ್ಪು ಬಣ್ಣದ ಪುಕ್ಕದಿಂದ ಕೂಡಿರುತ್ತದೆ. ಕಾಲುಗಳು ನೀಳವಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ತಲೆಯ ಭಾಗವೂ ಸಂಪೂರ್ಣ ಕಪ್ಪು ಬಣ್ಣದಲ್ಲಿದೆ. ಕಣ್ಣುಗಳು ದೊಡ್ಡದಾಗಿದ್ದು, ಸಂಪೂರ್ಣ ಕಪ್ಪು ಬಣ್ಣದಲ್ಲಿರುತ್ತವೆ. ಕೊಕ್ಕು ದೊಡ್ಡದಾಗಿದ್ದು, ಸಂಪೂರ್ಣ ಕಪ್ಪು ಬಣ್ಣದಲ್ಲಿರುತ್ತದೆ.ಕೆನಡಾ ಹೆಬ್ಬಾತಿನ ಹಲವು ಲಕ್ಷಣಗಳು ಈ ಹೆಬ್ಬಾತಿನಲ್ಲೂ ಇವೆ. ಆದರೆ ರೆಕ್ಕೆಗಳು ಅದಕ್ಕಿಂತ ಶೇ 16ರಷ್ಟು ಚಿಕ್ಕದಾಗಿರುತ್ತವೆ.

ವಾಸಸ್ಥಾನ

ಇದು ಹವಾಯಿ ದ್ವೀಪ ದೇಶದಲ್ಲಿ ಮಾತ್ರ ಕಾಣಸಿಗುವ ಹಕ್ಕಿ. ಹೀಗಾಗಿಯೇ ಇದಕ್ಕೆ ಆ ಹೆಸರು ಇಡಲಾಗಿದೆ. ಹವಾಯಿ ವಾಲ್ಕೊನೊ ನ್ಯಾಷನಲ್ ಪಾರ್ಕ್, ಕವಾಯ್ ದ್ವೀಪ, ಮತ್ತು ಹಲಿಯಕಲ ನ್ಯಾಷನಲ್‌ ಪಾರ್ಕ್‌ನಲ್ಲಿ ಇದರ ಸಂತತಿ ಹೆಚ್ಚಾಗಿದೆ. ಈಚೆಗಷ್ಟೇ ಮೊಲೊಕೊಯ್‌ ದ್ವೀಪಕ್ಕೂ ಪರಿಚಯಿಸಲಾಗಿದೆ. ಕುರುಚಲು ಗಿಡಗಳು ಬೆಳೆದಿರುವ ಕಾಡು ಪ್ರದೇಶ, ಹುಲ್ಲುಗಾವಲು ಪ್ರದೇಶ ಇದರ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಇದು ಬಾತುಕೋಳಿ ಪ್ರಭೇದವಾಗಿದ್ದರೂ ನೆಲದ ಮೇಲೆ ಹೆಚ್ಚು ಓಡಾಡುತ್ತದೆ. ಹಗಲೆಲ್ಲಾ ಆಹಾರ ಅರಸುತ್ತಾ ಸುತ್ತುತ್ತಿರುತ್ತದೆ. ನಿದ್ರಿಸುವುದು ಕೂಡ ನೆಲದ ಮೇಲೆಯೇ. ಈ ಹಕ್ಕಿ ಕೂಡಿ ಬಾಳುವುದಕ್ಕೆ ಇಷ್ಟಪಡುತ್ತದೆ. ಸಂಗಾತಿ ಮತ್ತು ಮರಿಗಳಲ್ಲೇ ಜೊತೆಯಲ್ಲೇ ಸದಾ ಇರುತ್ತದೆ. ಒಂದು ಗುಂಪಿನಲ್ಲಿ ಗರಿಷ್ಠ 30 ಗೂಸ್‌ಗಳು ಇರುತ್ತವೆ. ಪ್ರತಿ ಹೆಬ್ಬಾತು 45 ಮೀಟರ್ ವ್ಯಾಪ್ತಿಯಲ್ಲಿ ಗೂಡು ನಿರ್ಮಿಸಿಕೊಂಡು ಜೀವಿಸುತ್ತದೆ. ಬಲಿಷ್ಠವಾದ ಮತ್ತು ದೊಡ್ಡಗಾತ್ರದ ಹೆಬ್ಬಾತುಗಳು ಗುಂಪಿನಲ್ಲಿ ಪ್ರಾಬಲ್ಯ ಮೆರೆಯುತ್ತವೆ. ಗಂಡು ಹೆಬ್ಬಾತುಗಳು, ತನ್ನ ಸಂಗಾತಿ ಮತ್ತು ಮರಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ.

ವೇಗವಾಗಿ ಹಾರುವ ಕಲೆಯೂ ಗೊತ್ತಿದ್ದು, ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಆಹಾರ ಹುಡುಕುತ್ತಾ ಹೋಗುತ್ತದೆ. ಆದರೆ ಹವಾಯ್‌ ಬಿಟ್ಟು, ಇತರೆ ದೇಶಗಳಿಗೆ ವಲಸೆ ಹೋಗುವುದಿಲ್ಲ. ಪುಟ್ಟ ಕೊಳಗಳು ಮತ್ತು ಸರೋವರಗಳಲ್ಲಿ ಈಜುತ್ತಾ ಆಹಾರ ಹುಡುಕುತ್ತದೆ. ತನ್ನ ಕೊಕ್ಕಿನಿಂದ ವಿಶೇಷ ರಾಸಾಯನಿಕಗಳನ್ನು ಸ್ರವಿಸಿ, ಪುಕ್ಕಕ್ಕೆ ಮೆತ್ತುತ್ತದೆ. ಇದರಿಂದ ಪುಕ್ಕ ಜಲನಿರೋಧಕವಾಗುತ್ತದೆ. ಹೀಗಾಗಿ ಹೆಚ್ಚು ಹೊತ್ತು ನೀರಿನಲ್ಲಿ ಇದ್ದರೂ ಹಾನಿ ಆಗುವುದಿಲ್ಲ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಹಕ್ಕಿಯಾಗಿರುವುದು ವಿಶೇಷ. ನೆಲದ ಮೇಲಿದ್ದಾಗಷ್ಟೇ ಆಹಾರ ಸೇವಿಸುತ್ತದೆ. ವಿವಿಧ ಬಗೆಯ ಗಿಡಗಳ ಎಲೆಗಳು, ಹುಲ್ಲು, ಬೆರ್‍ರಿಗಳು, ಹೂಗಳು ಮತ್ತು ಬೀಜಗಳನ್ನು ಸೇವಿಸುತ್ತದೆ.

ಸಂತಾನೋತ್ಪತ್ತಿ

ಇದು ಜೀವಿತಾವಧಿಯಲ್ಲಿ ಒಂದೇ ಸಂಗಾತಿಯೊಂದಿಗೆ ಜೊತೆಯಾಗುತ್ತದೆ. ಆಗಸ್ಟ್‌ನಿಂದ ಏಪ್ರಿಲ್‌ವರೆಗೆ ಇದರಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಅಕ್ಟೋಬರ್ ಮಾರ್ಚ್‌ ವರೆಗಿನ ಅವಧಿಯಲ್ಲಿ ಹೆಚ್ಚು ಸೂಕ್ತವಾಗಿರುತ್ತದೆ.ವಯಸ್ಕ ಹೆಣ್ಣು ಹಕ್ಕಿ ಈ ಅವಧಿಯಲ್ಲಿ ನೆಲದ ಮೇಲೆ ಪುಟ್ಟ ಗೂಡು ಕಟ್ಟುತ್ತದೆ. ಗೂಡಿನ ತಳಭಾಗದಲ್ಲಿ ಎಲೆಗಳು ಮತ್ತು ಹುಲ್ಲು ತುಂಬಿಸುತ್ತದೆ. ಪ್ರತಿ ವರ್ಷ ಇದೇ ಗೂಡನ್ನು ನವೀಕರಿಸಿಕೊಳ್ಳುತ್ತಾ ಬಳಸಿಕೊಳ್ಳುತ್ತದೆ. 2ರಿಂದ 5 ಮೊಟ್ಟೆಗಳನ್ನು ಹೆಣ್ಣು ಹಕ್ಕಿ ಇಡುತ್ತದೆ. ಹೆಣ್ಣು ಹಕ್ಕಿ ಮಾತ್ರ ತಿಂಗಳವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳು ಕೆಲ ದಿನಗಳಲ್ಲೇ ಆಹಾರ ಹುಡುಕುವುದನ್ನು ಕಲಿಯುತ್ತವೆ. ಆದರೂ ಒಂದು ವರ್ಷದ ವರೆಗೆ ಪೋಷಕ ಹಕ್ಕಿಗಳ ಜೊತೆಯಲ್ಲೇ ಬೆಳೆಯುತ್ತವೆ. 10ರಿಂದ 12 ವಾರಗಳ ನಂತರ ಸಂಪೂರ್ಣವಾಗಿ ಪುಕ್ಕ ಬೆಳೆಯುತ್ತದೆ. 2ರಿಂದ 3 ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* 1957ರಲ್ಲಿ ಇದನ್ನು ಹವಾಯ್‌ ರಾಷ್ಟ್ರಪಕ್ಷಿ ಎಂದು ಘೋಷಿಸಲಾಯಿತು.

*ಸ್ಥಳೀಯರು ಇದನ್ನು ‘ನೆ ನೆ’ ಹಕ್ಕಿ ಎಂದು ಕರೆಯುತ್ತಾರೆ.

*ನೀರು ಮತ್ತು ನೆಲದ ಮೇಲೆ ಇದ್ದಾಗ ಇದರ ಗುಂಪನ್ನು ಗಾಗಲ್ ಎಂದೂ, ಹಾರುತ್ತಿದ್ದಾಗ ಸ್ಕೀನ್‌ ಎಂದು ಕರೆಯುತ್ತಾರೆ. ಫ್ಲಾಕ್‌, ವೆಡ್ಜ್‌ ಹೆಸರಿನಿಂದಲೂ ಕರೆಯುತ್ತಾರೆ.

*ಈ ಹೆಬ್ಬಾತುಗೆ ಕೆನಡಾ ಹೆಬ್ಬಾತುಗಳೇ ಮೂಲ. ಸುಮಾರು 5 ಲಕ್ಷ ವರ್ಷಗಳ ಹೀಂದೆ ಇದು ಹವಾಯ್‌ಗೆ ಬಂದು ನೆಲೆಸಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

*ಎಲೆ ಮತ್ತು ಹುಲ್ಲು ತಿನ್ನುವುದಕ್ಕೆ ನೆರವಾಗುವಂತೆ ಇದರ ಕೊಕ್ಕಿನ ಕೆಳಭಾಗದಲ್ಲಿ ಚೂಪಾದ ಹಲ್ಲುಗಳು ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT