ಅಳಿವಿನಂಚಿನಲ್ಲಿದೆ ಗ್ರೇಟ್ ಇಂಡಿಯನ್ ಬಸ್ಟರ್ಡ್

7

ಅಳಿವಿನಂಚಿನಲ್ಲಿದೆ ಗ್ರೇಟ್ ಇಂಡಿಯನ್ ಬಸ್ಟರ್ಡ್

Published:
Updated:
Prajavani

ದೈತ್ಯ ಪಕ್ಷಿಗಳು ಎಂದ ಕೂಡಲೇ, ಉಷ್ಟ್ರಪಕ್ಷಿ, ಎಮು, ರಣಹದ್ದುಗಳೇ ನೆನಪಾಗುತ್ತವೆ. ಇಂತಹ ದೈತ್ಯ ಪಕ್ಷಿಗಳಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್‌ ಕೂಡಾ ಒಂದು. ಇದರ ವೈಜ್ಞಾನಿಕ ಹೆಸರು ಅರ್ಡೋಟಿಸ್ ನೈಗ್ರಿಸೆಪ್ಸ್‌ (Ardeotis nigriceps). ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಈ ಪಕ್ಷಿಯನ್ನು ವಿವಿಧ ಭಾಗಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ‘ಹೆಬ್ಬಕ’ ಎಂದು ಕರೆಯುತ್ತಾರೆ. ಬಳ್ಳಾರಿಯಲ್ಲಿ ‘ಎರೆಬೂತ’, ಹಾವೇರಿ ಮತ್ತು ರಾಣೆಬೆನ್ನೂರಿನಲ್ಲಿ ‘ಎರಲಾಡ’ ಎಂದು ಕರೆಯುತ್ತಾರೆ. ಮೇಲ್ನೊಟಕ್ಕೆ ಉಷ್ಟ್ರಪಕ್ಷಿಯಂತೆ ಕಾಣುವ ಇದರ ದೇಹವು ಕಂದು, ಬೂದು ಮತ್ತು ಕಪ್ಪು ಬಣ್ಣದ ಗರಿಗಳಿಂದ ಆವೃತವಾಗಿರುತ್ತದೆ. ತಲೆಯ ಮೇಲೆ ಇರುವ ಕಪ್ಪು ಬಣ್ಣದ ಗರಿಗಳು ಕಿರೀಟದಂತೆ ಕಾಣುತ್ತವೆ. ಮೊನಚಾದ ಕೊಕ್ಕು ಹೊಂದಿದ್ದು, ಕತ್ತಿನ ಭಾಗ, ದೇಹದ ಕೆಳಭಾಗ ಬಿಳಿ ಬಣ್ಣದ ಗರಿಗಳಿಂದ ಆವೃತವಾಗಿರುತ್ತದೆ. ಗಂಡು ಪಕ್ಷಿಯ ತೂಕ ಹೆಣ್ಣಿಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ.

ಎಲ್ಲೆಲ್ಲಿವೆ?

ಇದು ಭಾರತ ಮತ್ತು ಪಾಕಿಸ್ತಾನದ  ಹುಲ್ಲುಗಾವಲು ಪ್ರದೇಶ, ಮರುಭೂಮಿ ಪ್ರದೇಶ‌ ಮತ್ತು ಅರೆ ಶುಷ್ಕ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಭಾರತದಲ್ಲಿ ರಾಜಾಸ್ಥಾನ, ಗುಜರಾತ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಇದನ್ನು ನೋಡಬಹುದು. 

ಆಹಾರ

ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ವಿವಿಧ ಬಗೆಯ ಕಾಳುಗಳು, ಕೀಟಗಳು, ಹುಳುಗಳನ್ನು ತಿನ್ನುತ್ತದೆ. 

ವರ್ತನೆ ಮತ್ತು ಜೀವನ ಕ್ರಮ

ಇದಕ್ಕೆ ದೃಷ್ಠಿ ಸಾಮರ್ಥ್ಯ ಕಡಿಮೆ. ಹೀಗಾಗಿಯೇ ಸದಾ ಕೆಳಹಂತದಲ್ಲಿ ಹಾರುತ್ತದೆ. ಅಕ್ರಮ ಬೇಟೆ ಮತ್ತು ವಾಸಸ್ಥಾನಗಳ ನಾಶದಿಂದ ಇವುಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದ್ದು, ಅಳಿವಿನಂಚಿಗೆ ತಲುಪಿವೆ. ಪ್ರಸ್ತುತ ಭಾರತದಲ್ಲಿ ಸುಮಾರು 150 ಹೆಬ್ಬಕಗಳು ಮಾತ್ರ ಇವೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ವನ್ಯ ಜೀವಿ ಸಂರಕ್ಷಣಾ ಕಾಯ್ದೆ–1972ರ ಪ್ರಕಾರ ಈ ಪಕ್ಷಿಯನ್ನು ಕೊಂದವರಿಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಈ ಪಕ್ಷಿಗಳ ಸಂರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಭಾರತದಲ್ಲಿ ರಾಜಸ್ಥಾನದ ಡೆಸರ್ಟ್ ನ್ಯಾಷನಲ್ ಪಾರ್ಕ್, ಗುಜಾರಾತ್‌ನ ಕಚ್ ಅಭಯಾರಣ್ಯ ಸೇರಿದಂತೆ ಕೆಲವು ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳಲ್ಲಿ ಈ ಪಕ್ಷಿಗಳು ಸಂರಕ್ಷಿತ ತಾಣಗಳಾಗಿವೆ.

ಸಂತಾನೋತ್ಪತ್ತಿ

ಬಯಲು ಪ್ರದೇಶದಲ್ಲಿ ಒಣ ಎಲೆಗಳು, ಹುಲ್ಲುಕಡ್ಡಿಗಳನ್ನು ಬಳಸಿಕೊಂಡು ಗೂಡನ್ನು ನಿರ್ಮಿಸುತ್ತದೆ. ಗೂಡಿನಲ್ಲಿ ಮೊಟ್ಟೆಗಳನ್ನಿಟ್ಟು, ಸುಮಾರು 25 ದಿನಗಳವರೆಗೆ ಕಾವು ಕೊಡುತ್ತದೆ. ಇದು ವರ್ಷಕ್ಕೊಮ್ಮೆ ಮಾತ್ರ ಮೊಟ್ಟೆಗಳನ್ನು ಇಡುತ್ತದೆ. ಮರಿಹಕ್ಕಿಗಳು ವಯಸ್ಕ ಹಂತಕ್ಕೆ ಬರುವವರೆಗೆ ತಾಯಿಯ ಪೋಷಣೆಯಲ್ಲಿ ಬೆಳೆಯುತ್ತವೆ. ಇವು ವಯಸ್ಕ ಹಂತಕ್ಕೆ ತಲುಪಲು 3 ವರ್ಷಗಳು ಬೇಕಾಗುತ್ತದೆ.

**

ರಾಷ್ಟ್ರ ಪಕ್ಷಿ ಆಯ್ಕೆಗೆ ಪ್ರಸ್ತಾವನೆ ಇತ್ತು!

ಸ್ವಾತಂತ್ರ್ಯ ನಂತರ ಭಾರತದ ರಾಷ್ಟ್ರಪಕ್ಷಿಯ ಆಯ್ಕೆಯ ಸಂದರ್ಭದಲ್ಲಿ, ಗ್ರೇಟ್‌ ಇಂಡಿಯನ್ ಬಸ್ಟರ್ಡ್‌ ಹೆಸರೂ  ಪ್ರಸ್ತಾಪದಲ್ಲಿತ್ತು. ಇದನ್ನು ರಾಷ್ಟ್ರಪಕ್ಷಿಯಾಗಿ ಆಯ್ಕೆ ಮಾಡಲು ಖ್ಯಾತ ಪಕ್ಷಿ ತಜ್ಞರಾದ ಸಲೀಂ ಅಲಿ ಅವರು ಬಯಸಿದ್ದರು. ಆದರೆ, ನಂತರ ಸುಂದರವಾದ ನವಿಲನ್ನು ರಾಷ್ಟ್ರಪಕ್ಷಿಯಾಗಿ ಆಯ್ಕೆಮಾಡಲಾಯಿತು. ಇದು ಪ್ರಸ್ತುತ ರಾಜಸ್ಥಾನದ ರಾಜ್ಯ ಪಕ್ಷಿಯಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !