ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಟೆ ಹಕ್ಕಿಗಳ ಮೋಹಕ ಹಾರಾಟ...

Last Updated 1 ಸೆಪ್ಟೆಂಬರ್ 2018, 9:35 IST
ಅಕ್ಷರ ಗಾತ್ರ

ಆಕಾರದಲ್ಲಿ ಬಲು ಸುಂದರವಾದ ಮೈಕಟ್ಟು ಹೊಂದಿರುವ ಗಿಡ್ಡ ಜಾತಿಯ ವರಟೆ ಹಕ್ಕಿಗಳು ನೋಡಲು ಮೋಹಕ. ಹಂಸದಂತಹ ವೈಯ್ಯಾರದ ನೋಟದೊಂದಿಗೆ ಕೋಳಿಗಳ ಬಳಗಕ್ಕೆ ಸೇರುವ ಈ ಜಲವಾಸಿಗಳು ರೆಕ್ಕೆ ಬಿಚ್ಚಿ ಹಾರುವ ಸಂದರ್ಭದಲ್ಲಿ ರೆಕ್ಕೆಯಲ್ಲಿ ಮುಚ್ಚಿಟ್ಟ ಬಣ್ಣಗಳು ಮನಸ್ಸನ್ನೇ ಸೂರೆಗೊಳಿಸುತ್ತವೆ.

ಇವುಗಳನ್ನು ನೋಡಿದ ಯಾರೇ ಆದರೂ ಇವು ಬಾತುಕೋಳಿ ಎಂದು ಹೇಳುವುದು ಸಹಜ. ಆದರೆ ಇವು ಬಾತುಕೋಳಿಯ ವಂಶದವು ಅಷ್ಟೆ. ವರಟೆ, ಚುಕ್ಕಿಬಾತು ಹಾಗೂ ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್ (Indian Spot Billed Duck) ಎಂದು ಕರೆಯಲಾಗುವ ಇವಕ್ಕೆ ಗಿಡ್ಡನೆಯ, ಕೇಸರಿ ಬಣ್ಣದ ಜಾಲಪಾದಗಳು, ನೀಳ ಚಪ್ಪಟೆ ಕೊಕ್ಕು ಇದೆ. ಕೊಕ್ಕಿನ ಮೇಲೆ ಹಳದಿ ಮತ್ತು ಕಪ್ಪು, ಮೂಗಿನ ಹೊಳ್ಳೆಗಳ ಮೇಲೆ ಕೇಸರಿ, ಕಣ್ಣಿನ ಸುತ್ತ ಕಾಡಿಗೆ ಲೇಪಿಸಿದಂತೆ ಕಾಣುವ ಕಣ್ಣುಗಳು ಆಕರ್ಷಿಸುತ್ತವೆ. ತಲೆಯಿಂದ ಎದೆಯ ಭಾಗದವರೆಗೆ ಕಂದು ಮತ್ತು ಚಾಕೊಲೇಟ್ ಬಣ್ಣದ ರೆಕ್ಕೆಗಳ ಮೇಲೆ ಚುಕ್ಕಿಗಳು ಇವೆ, ಹಾರುವಾಗ ರೆಕ್ಕೆಗಳು ಬಿಚ್ಚಿಕೊಂಡಾಗಷ್ಟೇ ನೀಲಿ, ಹಸಿರು ಮತ್ತು ನೇರಳೆ (ಬೆಳಕಿಗೆ ತಕ್ಕಂತೆ ಬಣ್ಣ) ಬಣ್ಣದ ರಕ್ಕೆಗಳು ಗೋಚರಿಸುತ್ತವೆ.

ಹಾರುವಾಗ ರೆಕ್ಕೆಗಳು ಬಿಚ್ಚಿಕೊಂಡಾಗಷ್ಟೇ ನೀಲಿ, ಹಸಿರು ಮತ್ತು ನೇರಳೆ ಬಣ್ಣದ ಗರಿಗಳು ಗೋಚರ...

ಆಹಾರ ಪದ್ಧತಿ

ವರಟೆ ಹಕ್ಕಿ ನೀರಿನಲ್ಲಿ ಆಹಾರವನ್ನು ಹುಡುಕಲು ಮುಳು ಮುಳುಗಿ ಆಹಾರವನ್ನು ಹಿಡಿದು ತಿನ್ನುತ್ತವೆ. ಈ ಹಕ್ಕಿಗಳು ಸಾಮಾನ್ಯವಾಗಿ ಸಸ್ಯಹಾರಿಗಳು. ಕೆರೆ ಅಥವಾ ಹೊಳೆಗಳಲ್ಲಿ ಹುಲ್ಲು ಬೆಳೆದ ಜೌಗಿನ ನಡುವೆ, ಸಸ್ಯ ಸೇವನೆ ಮಾಡುವ ಇವುಗಳು ಹೊಲ ಗದ್ದೆಗಳಿಗೆ ಹಾರಿಹೋಗಿ ಕಾಳು ತಿನ್ನುತ್ತವೆ.

ಹೆಚ್ಚು ಕಾಲ ನೀರು ಇರುವ ಭತ್ತದ ಗದ್ದೆಗಳಲ್ಲಿ, ಕೆರೆಗಳಲ್ಲಿ ಮತ್ತು ಹುಲ್ಲು ಬೆಳೆದ ಜೌಗಿನಲ್ಲಿ ಇವುಗಳನ್ನು ಕಾಣಬಹುದು. ನಮ್ಮ ದೇಶವೂ ಸೇರಿದಂತೆ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬರ್ಮಾದಲ್ಲಿ ಇವುಗಳು ನೋಡಲು ಸಿಗುತ್ತವೆ. ಕೆರೆಯ ಜೌಗಿನ ಮಧ್ಯ ಅಥವಾ ಕರೆಯ ಅಂಚಿನಲ್ಲಿ ಹುಲ್ಲು, ಜೋಂಡು ಸೇರಿಸಿ ಗೂಡು ಮಾಡುತ್ತವೆ. ಜುಲೈಯಿಂದ ಸೆಪ್ಟೆಂಬರ್‌ನಲ್ಲಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ.

ಚಿತ್ರ ಬರಹ: ಈರಪ್ಪ ನಾಯ್ಕರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT