ಕಂಚುಗಾರ ಕುಟಿಗದ ಕುತೂಹಲಕರ ಸಂಸಾರ...

7

ಕಂಚುಗಾರ ಕುಟಿಗದ ಕುತೂಹಲಕರ ಸಂಸಾರ...

Published:
Updated:

ಮಳೆಯ ಅಬ್ಬರಕ್ಕೆ ಎಲ್ಲಿ ಮಕ್ಕಳು ತೋಯ್ದು ಹೋಗುತ್ತಾವೋ, ಗುಡಿಸಲು ಎಲ್ಲಿ ನೆಲಸಮವಾಗುತ್ತದೊ, ಗುಡುಗು ಸಿಡಿಲಿನ ಅಬ್ಬರಕ್ಕೆ ಮಕ್ಕಳು ಎಲ್ಲಿ ಭಯಭೀತರಾಗುತ್ತಾರೋ ಎಂಬ ಆತಂಕ ಅಮ್ಮನ ಕಾಡುತ್ತಲೇ ಲಗುಬಗೆಯಿಂದ ತನ್ನ ಮನೆಯತ್ತ ಧಾವಿಸಿ ಬಂದು , ಮನೆಯೊಳಗೆ ಮುದುರಿ ಕುಳಿತಿದ್ದ ಕಂದಮ್ಮಗಳನ್ನು ಬಾಚಿ ತಬ್ಬಿಕೊಂಡಿತು. ಬಾಗಿಲಿಗೆ ಅಡ್ಡವಾಗಿ ನಿಂತು ಮಳೆಯ ಅಬ್ಬರವನ್ನು ಗಮನಿಸುತ್ತ ನಿಟ್ಟುಸಿರು ಬಿಡುತ್ತ ಪುಟ್ಟಕಂದಮ್ಮಗಳಿಗೆ ಸಮಾಧಾನ ಪಡಿಸಿತು... ತಾಯಿಯ ಮಮತೆಯ ಈ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಈ ಎಲ್ಲ ದೃಶ್ಯಗಳೂ ಹಂತಹಂತವಾಗಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಲೇ ಸಾಗಿದ್ದವು...

ಈ ಪುಟ್ಟ ಕಂದಮ್ಮಗಳು ಯಾರೆಂಬ ಕುತೂಹಲವೇ? ಹುಬ್ಬಳ್ಳಿಯ ದೇಶಪಾಂಡೆ ಲೇಜೌಟ್ ಉದ್ಯಾನವನದಲ್ಲಿ ಕಂಡ ಚೆಂಬು ಕುಟಿಗ ಅಥವಾ ಕಂಚುಗಾರ ಕುಟಿಗ ಹಕ್ಕಿಯ ಪುಟ್ಟ ಸಂಸಾರದ ಕಥೆಯಿದು! ಈ ಹಕ್ಕಿಯ ಸಂಸಾರ ಹೆಚ್ಚಾಗಿ ನಿತ್ಯಹರಿದ್ವರ್ಣ ಕಾಡು, ಕುರುಚಲು ಕಾಡು, ತೋಟ, ಜನವಸತಿ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಮರದ ಪೊಟರೆಯೇ ಇವುಗಳ ವಾಸದ ಗೂಡು.

ಇವುಗಳ ಬದುಕಿನ ಸಂಸಾರದ ಒಡನಾಟಗಳ ನೈಪುಣ್ಯತೆ, ಕುಶಲತೆ, ಜಾಣತನ ಅದ್ಭುತ. ಇವುಗಳು ಗೂಡು ನಿರ್ಮಿಸಬೇಕಾದರೆ ಗಂಡು ಹೆಣ್ಣು ಮರಗಳ ಹುಡುಕಾಟದಲ್ಲಿ ತೊಡಗುತ್ತವೆ. ಈ ಹಕ್ಕಿಗಳು ಮೆದುವಾದ ಮರಗಳನ್ನು ಕೊರೆದು ಪೊಟರೆ ಮಾಡಿಕೊಳ್ಳುತ್ತದೆ. ಮಳೆ, ಗಾಳಿ, ಶತ್ರುಗಳ ಹಾವಳಿಯಿಂದ ಮರಿಗಳಿಗೆ ರಕ್ಷಣೆ ಸಿಗುವಂತಿರಬೇಕು, ಮರದ ಪೊಟರೆ ನಿರ್ಮಿಸುವಾಗ ಮರದ ರೆಂಬೆ ಭಾಗಿರುವ ಜಾಗವನ್ನು ಗುರುತಿಸಿಕೊಂಡು ಗೂಡಿನ ರೂಪರೇಷೆಗಳಿಂದ ಅಚ್ಚುಕಟ್ಟಾದ ಗೂಡು ನಿರ್ಮಿಸುತ್ತವೆ. ಇವುಗಳ ತಂತ್ರಗಾರಿಕೆಯನ್ನು ಮೆಚ್ಚಬೇಕಾದದ್ದೆ. ಇವುಗಳ ಗೂಡನ್ನು ಗಮನಿಸಿದರೆ ಎಂಜಿನಿಯರ್‌ ಕೂಡ ನಿಬ್ಬೆರಗಾಗಬೇಕು!

ಮರಿಗಳ ಬೆಳವಣಿಗೆ ಹೆಚ್ಚಾದಂತೆ ಮರಿಗಳಿಗೆ ತೊಂದರೆಯಾಗದಂತೆ ಒಳಭಾಗ ಹಾಗೂ ಹೊರಭಾಗವನ್ನು ಕೊರೆದು ಹಿಗ್ಗಿಸುತ್ತ ಬರುತ್ತದೆ ತಾಯಿ ಹಕ್ಕಿ. ಮರಿಗಳಿಗೆ ಆಹಾರ ಕೊಡಲು ಗೂಡಿನೊಳಗೆ ಒಳಪ್ರವೇಶಿಸಿ ಹೊರಬರಲು ಅನುಕೂಲವಾಗುವಂತೆ ಪೊಟರೆಯ ಮುಂಭಾಗ ಹಾಗೂ ಒಳಭಾಗವನ್ನು ದೊಡ್ಡದಾಗಿ ಕೊರೆಯುತ್ತದೆ. ಮರಿಗಳು ದೊಡ್ಡದಾಗುತ್ತ ಬಂದಂತೆ ಆಹಾರಕ್ಕಾಗಿ ಗೂಡಿನ ಹೊರಗೆ ತಲೆ ಹಾಕಿ ಆಹಾರ ಪಡೆಯಲು ಅನುಕೂಲವಾಗುವಂತೆ ಮರದ ಪೊಟರೆಯನ್ನು ಪ್ರತಿನಿತ್ಯ ಕೊರೆಯುತ್ತದೆ. ಇದರಿಂದ ಮರಿಗಳಿಗೆ ಆಹಾರ ನೀಡಲು ತಾಯಿ ಹಕ್ಕಿಗೆ ಅಡಚಣೆಯಾಗದು. ಗಳಿಗೊಮ್ಮೆ ಮರಿಗಳಿಗೆ ಗುಟುಕು ಕೊಡುವ ದೃಶ್ಯ ನೋಡುವುದೇ ಅವಿಸ್ಮರಣೀಯ ಕ್ಷಣ. ಇವುಗಳ ಸಂಸಾರದ ಕೆಲವು ದೃಶ್ಯಗಳ ತುಣುಕು ಇಲ್ಲಿವೆ...

ಕಂಚುಗಾರ ಹಕ್ಕಿಯ ಬಗ್ಗೆ...

ಈ ಹಕ್ಕಿಗಳು ಗುಬ್ಬಚ್ಚಿ ಗಾತ್ರದ ಹಸಿರು ಪಕ್ಷಿ. ಇದರ ತಲೆ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಕಣ್ಣಿನ ಸುತ್ತ ಹಳದಿ ಬಣ್ಣದ ಉಂಗುರದಂತೆ ಕಂಡು ಬರುತ್ತದೆ. ಕೊಕ್ಕು ಕಪ್ಪು ಬಣ್ಣದ್ದು. ಹಣೆಯ ಮೇಲೆ ಕುಂಕುಮವನ್ನು ಧರಿಸಿದಂತೆ ಅಗಲದ ಬೊಟ್ಟು. ಒಟ್ಟಿನಲ್ಲಿ ಪಾಚಿ ಹಸಿರು, ಬಿಳಿ, ಹಳದಿ ಮಿಶ್ರಿತ ಕೋಟಿಗೆ ಕೆಂಪು ಬಣ್ಣದ ಬೊಟ್ಟು ಹಾಕಿಕೊಂಡಂತೆ ಕಂಡುಬರುತ್ತದೆ. ಕಾಲುಗಳು ಕೆಂಪು ಬಣ್ಣದಿಂದ ಕೂಡಿದೆ. ಕೊಕ್ಕಿನ ತಳದ ಸುತ್ತ ಹುರಿ ಮೀಸೆಯಿರುತ್ತದೆ. ಇದರ ವಿಶೇಷವೇನೆಂದರೆ ಕೊಕ್ಕಿನ ತಳದಲ್ಲಿರುವ ಮೀಸೆಯು ಪರಾಗಸ್ಪರ್ಶಕ್ಕೆ ಸಹಾಯವಾಗುತ್ತದೆ. ಇವುಗಳ ಸಂತಾನೋತ್ಪತ್ತಿ ಸಮಯ ಜನವರಿಯಿಂದ ಜೂನ್‌ ತಿಂಗಳು. ಮೂರು ಬಿಳಿ ಮೊಟ್ಟೆಗಳಿಗೆ ಸುಮಾರು 14 ರಿಂದ 15 ದಿನಗಳವರಗೆ ಕಾವು ಕೊಟ್ಟು ಮರಿ ಮಾಡುತ್ತದೆ.

ಸಾಮಾನ್ಯವಾಗಿ ಈ ಬಾರ್ಬೆಟ್‌ಗಳನ್ನು ಕುಟಿಗ ಮತ್ತು ಕುಟ್ರಹಕ್ಕಿ ಎಂದು ಕನ್ನಡದಲ್ಲಿ ವಿಭಾಗಿಸಿದ್ದಾರೆ. ಇವುಗಳು ಬೀಜ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಣ್ಣುಗಳನ್ನು ತಿಂದು ಬೀಜಗಳನ್ನು ಹಿಕ್ಕೆ ಹಾಕುವುದರಿಂದ ಕಾಡಿನ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಈ ಚೆಂಬು ಕುಟಿಗ ಮತ್ತು ಕಂಚುಗಾರ ಕುಟಿಗ ನಮ್ಮಲ್ಲಿ ಕಂಡು ಬರುವ ಹಕ್ಕಿ. ಈ ಹಕ್ಕಿಗೆ ಇಂಗ್ಲಿಷ್‌ನಲ್ಲಿ ಕ್ರಿಂಸನ್ ಬಾರ್ಬೆಟ್, ಕಾಪರ್ ಸ್ಮಿತ್, ಎಂದು ಹೆಸರು ಕನ್ನಡದಲ್ಲಿ ಚೆಂಬು ಕುಟುಗ ಕಂಚುಗಾರ ಕುಟಿಗ ಎನ್ನುತ್ತಾರೆ. ಅರಳಿ ಮರದ ಹಣ್ಣು ಹಾಗೂ ಬಸರಿಮರದ ಹಣ್ಣು ಬಿಟ್ಟಾಗ ಮರಗಳಲ್ಲಿ ಹೆಚ್ಚಾಗಿ ಗುಂಪು ಗುಂಪಾಗಿ ಕಾಣಬಹುದು. ನೀವು ಕೂಡ ಮುಂಜಾನೆ ವಾಕಿಂಗ್ ಸಮಯದಲ್ಲಿ ನಿಮ್ಮ ಕಣ್ಣುಗಳು ಚುರುಕಾಗಿದ್ದರೆ ಸಾಕು; ಇಂತಹ ದೃಶ್ಯಗಳನ್ನು ನೋಡಿ ಆನಂದಿಸಬಹುದು. ಕ್ಯಾಮೆರಾ ಮಿತ್ರ ಜೊತೆಗಿದ್ದರೆ ಇನ್ನೂ ಅದ್ಭುತ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !