ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Environment Day| ಮಳೆಯ ಮುನ್ಸೂಚಕ ಈ ಚಾತಕ

ನರೇಗಲ್‌ ಹೋಬಳಿ ಭೂಪ್ರದೇಶಕ್ಕೆ ಬಂದಿಳಿಯುವ ವಲಸೆ ಹಕ್ಕಿ
ಅಕ್ಷರ ಗಾತ್ರ

ನರೇಗಲ್: ಮುಂಗಾರಿಗೂ ಚಾತಕ ಪಕ್ಷಿಗೂ ಅವಿನಾಭಾವ ಸಂಭಂದವಿದೆ. ಮುಂಗಾರು ಮಳೆ ಆರಂಭಗೊಳ್ಳುವ ಸುಮಾರು ಒಂದು ವಾರ ಮುಂಚೆ ಹಠಾತ್ತನೆ ಹೆಚ್ಚಿನ ಸಂಖ್ಯೆಯಲ್ಲಿ ನರೇಗಲ್ ಹೋಬಳಿಯ ವಿಶಾಲವಾದ ಭೂಪ್ರದೇಶದಲ್ಲಿ ಚಾತಕ ಪಕ್ಷಿಗಳು ಕಾಣಿಸಿಕೊಳ್ಳುತ್ತವೆ.

ಈ ಹಕ್ಕಿಗಳು ಮುಂಚಿತವಾಗಿ ಮಳೆ ಆಗಮನವನ್ನು ಸೂಚಿಸುತ್ತವೆ. ಅದರಲ್ಲೂ ದೊಡ್ಡದಾದ ಧ್ವನಿಯಲ್ಲಿ ಇಂಪಾಗಿ ಹಾಡಲು ಆರಂಭಿಸಿದರೆ ಮಳೆ ಸುರಿದು ರೈತನ ದಾಹ ನೀಗಿಸುವ ಭರವಸೆಯನ್ನು ನೀಡುತ್ತವೆ ಎನ್ನುವ ನಂಬಿಕೆ ಕೃಷಿಕರಲ್ಲಿದೆ.

ಮರಗಳಿರುವ ಕಡೆ ಕೂಗಿ ಗದ್ದಲ ಎಬ್ಬಿಸುವುದರಿಂದ ಇವುಗಳಿಗೆ ‘ಚೊಟ್ಟಿ ಕೋಗಿಲೆ’ ಅಥವಾ ‘ಗಲಾಟೆ ಕೋಗಿಲೆ’ ಎಂತಲೂ ಕರೆಯುತ್ತಾರೆ. ಹೊಲದಲ್ಲಿನ ಕೀಟಗಳನ್ನು ಹಿಡಿದು ತಿನ್ನುವ ಚಾತಕ ಪಕ್ಷಿಗಳು ಕ್ರಿಮಿನಾಶಕಗಳ ಬಳಕೆಯಿಂದ, ರಸ್ತೆ ಅಪಘಾತದಿಂದ ಸಾಯುತ್ತಿವೆ. ಆದ್ದರಿಂದ ಪಕ್ಷಿಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಗ್ರೀನ್ ಆರ್ಮಿ ತಂಡದ ಸದಸ್ಯ ಸಂಗಮೇಶ ಬಾಗೂರು ತಿಳಿಸಿದರು.

ಈ ಪಕ್ಷಿಗಳು ಜೂನ್ ಆರಂಭದಲ್ಲಿ ಕಾಣಿಸಿಕೊಂಡರೆ ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಅಷ್ಟು ನಿಖರವಾಗಿ ಇವು ಮಾನ್ಸೂನನ್ನು ಅಳೆಯಲು ಸಹಕರಿಸುವುದರಿಂದ ಇವುಗಳನ್ನು ‘ಮಾರುತಗಳ ಮುಂಗಾಮಿ’ ಎಂದಲೂ ಕರೆಯುತ್ತಾರೆ ಎಂದು ಸಾವಯವ ಕೃಷಿಕ ವೀರೇಶ ನೇಗಲಿ ಹೇಳಿದರು.

ನರೇಗಲ್‌ ಹೋಬಳಿಯುವ ವಿಶಾಲವಾದ ಭೂಪ್ರದೇಶವನ್ನು ಹೊಂದಿರುವ ಕಾರಣ ಚಾತಕ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಇಲ್ಲಿಗೆ ವಲಸೆ ಬರುತ್ತವೆ. ಕೋಗಿಲೆಗಳಂತೆ ಪರತಂತ್ರ ಜೀವಿಯಾಗಿದ್ದು ಸಾಮಾನ್ಯವಾಗಿ ಹರಟೆ ಮಲ್ಲ, ಪಿಕಳಾರ ಹಕ್ಕಿಗಳ ಮೊಟ್ಟೆಗಳು, ಜಾತಕ ಹಕ್ಕಿಗಳ ಮೊಟ್ಟೆಗಳನ್ನು ಹೋಲುವುದರಿಂದ, ಅವುಗಳ ಗೂಡಿನಲ್ಲಿ ಸುಮಾರು ಇಪ್ಪತ್ತೈದು ಮೊಟ್ಟೆಯಿಡುತ್ತವೆ. ಜುಲೈ, ಆಗಸ್ಟ್‌ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟೆಂಬರ್- ಅಕ್ಟೋಬರ್ ವೇಳೆಗೆ ಭಾರತವನ್ನು ಬಿಡುತ್ತವೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ತಿಳಿಸಿದರು.

ಮಳೆ ನೀರೇ ಚಾತಕ ಪಕ್ಷಿಗೆ ಆಧಾರ

ಚಾತಕ ಪಕ್ಷಿಗೆ ಇಂಗ್ಲಿಷ್‌ನಲ್ಲಿ ಜಾಕೊಬಿನ್ ಕುಕ್ಕೂ ಎಂದು ಕರೆಯುತ್ತಾರೆ. ಇವು ಗಾತ್ರದಲ್ಲಿ ಪಾರಿವಾಳಕ್ಕಿಂತಲೂ ಚಿಕ್ಕವು. ಉದ್ದವಾದ ಪುಕ್ಕವಿದೆ. ಮೈ ಬಣ್ಣ ಕೋಗಿಲೆಯಂತೆಯೇ ಕಪ್ಪು. ಕತ್ತಿನ ಕೆಳಭಾಗದಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಮಿಶ್ರಣವಿದೆ. ತಲೆಯ ಮೇಲೆ ಬಿಲ್ಲಿನಾಕಾರದ ಪುಕ್ಕವಿದೆ. ಈ ಪುಕ್ಕದಲ್ಲಿಯೇ ಮಳೆಯ ನೀರನ್ನು ಹಿಡಿದಿಟ್ಟುಕೊಂಡು ತನ್ನ ದಾಹವನ್ನು ಇಂಗಿಸಿಕೊಳ್ಳುತ್ತದೆ. ಹೀಗಾಗಿ ಮೇಲಿಂದ ಬೀಳುವ ಮಳೆಯ ನೀರೇ ಚಾತಕ ಪಕ್ಷಿಗೆ ಆಧಾರವಾಗಿದೆ. ಆದ್ದರಿಂದ ಚಾತಕ ಭೂಮಿಯನ್ನು ತಾಕದ ನೀರಿಗಾಗಿ ಕಾತರಿಸುವ ಪಕ್ಷಿಯಾಗಿದೆ. ಇದಕ್ಕೆ ನೀರಿಲ್ಲದೆ ಎಷ್ಟೋ ದಿನಗಳ ತನಕ ಬದುಕುವ ಶಕ್ತಿಯೂ ಇದೆ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಪ್ರಕಾಶ ಪವಾಡಿಗೌಡ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT