ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

VIDEO | ಮನುಷ್ಯ ನಕ್ಕಂತೆ ಕೂಗುವ ಕೂಕಬುರ‍್ರ

Last Updated 12 ಸೆಪ್ಟೆಂಬರ್ 2019, 7:22 IST
ಅಕ್ಷರ ಗಾತ್ರ

ಕೂಕಬುರ‍್ರ ಸದೃಢ ಪಕ್ಷಿಯಾಗಿದ್ದು, ಮಿಂಚುಳ್ಳಿ (ಕಿಂಗ್‌ಫಿಶರ್‌) ಬಳಗಕ್ಕೆ ಸೇರಿದೆ. ಈ ಪಕ್ಷಿಯು ದೈಹಿಕವಾಗಿ ಬಹಳ ಬಲಿಷ್ಠವಾಗಿರುತ್ತದೆ. ಇದರ ವೈಜ್ಞಾನಿಕ ಹೆಸರು ಡಸೆಲೊ ನೋವಿಗೀನೆಯಾ (Dacelo novaeguineae). ಇದರ ಬಗ್ಗೆ ಇಂದಿನ ಪಕ್ಷಿ ಪ್ರಂಪಚದಲ್ಲಿ ತಿಳಿದುಕೊಳ್ಳೋಣ.

ಹೇಗಿರುತ್ತೆ?
ದೊಡ್ಡ ತಲೆ ಹಾಗೂ ಚೂಪಾದ ಕೊಕ್ಕು ಹೊಂದಿರುವ ಈ ಹಕ್ಕಿಯ ಹೊಟ್ಟೆಯ ಭಾಗ ಕಂದುಬಣ್ಣದಲ್ಲಿರುತ್ತದೆ. ರಕ್ಕೆಗಳು ಗಾಢ ಕಂದುಬಣ್ಣದಲ್ಲಿದ್ದು, ಮಧ್ಯೆ ತಿಳಿ ನೀಲಿ ಬಣ್ಣವನ್ನು ಹೊಂದಿರುತ್ತದೆ. ಆಯಾ ಪ್ರಭೇದಗಳಿಗನುಸಾರ ಕೊಕ್ಕು ಗಾಢ ಕಂದು ಅಥವಾ ನೀಲಿ ಬಣ್ಣದಲ್ಲಿರುತ್ತದೆ. ತಿಳಿ ಕಂದು ಬಣ್ಣದ ತೀಕ್ಷ್ಣವಾದ ಕಣ್ಣು ಹಾಗೂ ಉದ್ದವಾದ ಪುಕ್ಕ ಇರುವುದರಿಂದ ನೋಡಲು ಆಕರ್ಷಕವಾಗಿ ಕಾಣುತ್ತದೆ.

ಎತ್ತರ:39 ರಿಂದ 42 ಇಂಚು
ಗಾತ್ರ:300 ಗ್ರಾಂ.
ಜೀವಿತಾವಧಿ:15ರಿಂದ 20 ವರ್ಷ

ಎಲ್ಲಿರುತ್ತೆ?
ಕೂಕಬುರ‍್ರವು ಆಸ್ಟೇಲಿಯಾ, ನ್ಯೂಜೀನಿವಾ, ತಸ್ಮೇನಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಾಡುಮೇಡುಗಳಲ್ಲಿ, ಅರೆನಗರ ಪ್ರದೇಶಗಳಲ್ಲಿಯೂ ಇದನ್ನು ಕಾಣಬಹದು.

ಆಹಾರ ಪದ್ಧತಿ
ಇದು ವಿರಳವಾಗಿ ಮೀನು ತಿನ್ನುತ್ತದೆ. ಸಾಮಾನ್ಯವಾಗಿ ಹುಳುಹುಪ್ಪಟೆಗಳು, ಕಪ್ಪೆಗಳು, ಹಲ್ಲಿಗಳು, ಜೀರುಂಡೆ, ಎರೆಹುಳುಗಳನ್ನು ತಿಂದು ಜೀರ್ಣಿಸಿಕೊಳ್ಳುತ್ತದೆ. ಇದಕ್ಕೆ ಹಾವಿನ ತಲೆಯ ಭಾಗ ಇಷ್ಟದ ಆಹಾರ. ಹಾವುಗಳನ್ನು ಬೇಟೆಯಾಡುತ್ತದೆ.

ವರ್ತನೆ
ಇದು ಗುಂಪಿನಲ್ಲಿ ವಾಸಿಸುವ ಪಕ್ಷಿ. ಒಂಟಿಯಾಗಿ ಕಾಣಿಸಿಕೊಳ್ಳುವುದು ತೀರ ವಿರಳ. ದಿನವಿಡೀ ಕ್ರಿಯಾಶೀಲವಾಗಿರುತ್ತದೆ. ನೋಡಲು ಮಂಕಾಗಿರುವಂತೆ ಕಂಡರೂ ಕೊಕ್ಕು ತೆರೆದರೆ ವಿಶಿಷ್ಟವಾಗಿಯೇ ಕಾಣುತ್ತದೆ. ಬುಡಕಟ್ಟು ಜನಾಂಗದ ಅಲಾರಂ ಗಡಿಯಾರವೆಂದೇ ಇದು ಪ್ರಸಿದ್ಧಿ ಪಡೆದಿದೆ. ಇದು ಮಿಂಚುಳ್ಳಿ ಜಾತಿಗೆ ಸೇರಿದ್ದರೂ ಬಣ್ಣ ಮಬ್ಬಾಗಿಯೇ ಇರುತ್ತದೆ.

ಸಾಮಾನ್ಯವಾಗಿ ಇದು ಗುಂಪಿನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಂದರ್ಭದಲ್ಲಿ ನಗುವಿನ ಸ್ವರದಲ್ಲಿ ಜೋರಾಗಿ ಕೂಗುತ್ತದೆ. ಕೇಕೆ ಹಾಕಿ ನಕ್ಕಂತೆ ಗದ್ದಲ ಎಬ್ಬಿಸುತ್ತದೆ. ಹಾಗಾಗಿಯೇ ಇದಕ್ಕೆ ನಕ್ಕಂತೆ ಕೂಗುವ ಕೂಕಬುರ‍್ರ ಎಂಬ ಹೆಸರಿದೆ. ತಾನು ವಾಸಿಸುವ ಪ್ರದೇಶವನ್ನು ಜತನದಿಂದ ಕಾಪಾಡಿಕೊಳ್ಳುತ್ತದೆ. ಇತರ ಪಕ್ಷಿಗಳು ಒಳಬಾರದಂತೆ ಎಚ್ಚರಿಕೆ ನೀಡುತ್ತದೆ.

ಸಂತಾನೋತ್ಪತ್ತಿ
ವರ್ಷಕ್ಕೆ ಮೂರು ಬಾರಿ ಸಂತಾನೋತ್ಪತ್ತಿ ನಡೆಸುತ್ತದೆ. ಜೀವನದಲ್ಲಿ ಒಂದೇ ಸಂಗಾತಿಯನ್ನು ಹೊಂದಿರುವ ಈ ಪಕ್ಷಿಯು ಮರಿಗಳನ್ನು ಬೆಳೆಸಲು ಇಡೀ ಬಳಗವೇ ಒಟ್ಟಾಗುವುದು ವಿಶೇಷ. 25ರಿಂದ 26 ದಿನಗಳ ಕಾಲ ಗರ್ಭಾವಸ್ಥೆಯಲ್ಲಿರುತ್ತದೆ. ಎರಡದಿಂದ ಐದು ಮೊಟ್ಟೆಗಳನ್ನು ಇಡುತ್ತದೆ. ಮರಿಗಳು ಹುಟ್ಟುವಾಗ ಸಂಪೂರ್ಣ ಕುರುಡಾಗಿದ್ದು, ರಕ್ಕೆಗಳು ಇರುವುದಿಲ್ಲ.

ಸ್ವಾರಸ್ಯಕರ ಸಂಗತಿಗಳು
ಕಿಂಗ್‌ಫಿಶರ್‌ ಬಳಗಕ್ಕೆ ಸೇರಿದ್ದರೂ ಇದು ಮೀನನ್ನು ಅಷ್ಟಾಗಿ ಇಷ್ಟಪಟ್ಟು ತಿನ್ನುವುದಿಲ್ಲ. ಇದರ ಕೊಕ್ಕು 10.ಸೆಂ.ಮೀ ಉದ್ದ ಬೆಳೆಯಬಲ್ಲದು.

ಈ ಹಕ್ಕಿಗಳು ತಾನು ವಾಸಿಸುವ ಭೂಭಾಗವನ್ನು ಗುರುತಿಸುವ ಸಲುವಾಗಿ, ಕುಚೋದ್ಯಕ್ಕಾಗಿ ಜೋರಾಗಿ ನಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT