ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಕ ಕೋಡುಗಳ ಅಪರೂಪದ ಜಿಂಕೆ

Last Updated 23 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಕೆಲವು ಜಿಂಕೆಗಳ ದೇಹದ ಮೇಲೆ ಬಿಳಿ ಚುಕ್ಕಿಗಳಿದ್ದರೆ, ಕೆಲವು ಜಿಂಕೆಗಳ ದೇಹದ ಮೇಲೆ ಬಿಳಿ ಪಟ್ಟಿಗಳಿರುತ್ತವೆ. ಪಟ್ಟಿಗಳಿರುವ ಜಿಂಕೆ ಎಂದ ಕೂಡಲೇ ಬೊಂಗೊ ಜಿಂಕೆ ನೆನಪಾಗುತ್ತದೆ. ಹೀಗೆ ಪಟ್ಟಿಗಳಿರುವ ಸುಂದರ ಮತ್ತು ಅಪರೂಪದ ಜಿಂಕೆ ಲೆಸ್ಸರ್ ಕುಡು (Lesser Kudu). ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಟ್ರಗೆಲಫಸ್ ಇಂಬರ್ಬಿಸ್‌ (Tragelaphus imberbis). ಇದು ಸಸ್ಯಾಹಾರಿ ಪ್ರಾಣಿಗಳ ಬೊವಿಡೇ (Bovidae) ಮತ್ತು ಜಿಂಕೆಗಳ ಕರ್ವಿಡೇ (Cervidae) ಕುಟುಂಬ, ಬೊವಿನೇ (Bovinae) ಉಪಕುಟುಂಬಕ್ಕೆ ಸೇರಿದೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ-56–108 ಕೆ.ಜಿ, ದೇಹದ ಉದ್ದ-110–140 ಸೆಂ.ಮೀ,ದೇಹದ ಎತ್ತರ- 90 ರಿಂದ105 ಸೆಂ.ಮೀ, ಜೀವಿತಾವಧಿ-10–15 ವರ್ಷಗಳು.

ಹೇಗಿರುತ್ತದೆ?

ಕಂದು, ಕಪ್ಪು ಮತ್ತು ಬೂದು ಬಣ್ಣದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ದೇಹದ ಮೇಲೆ ಬಿಳಿ ಪಟ್ಟಿಗಳಿದ್ದು, ಅಲ್ಲಲ್ಲಿ ಚುಕ್ಕಿಗಳು ಮೂಡಿರುತ್ತವೆ. ಕತ್ತು ಹಾಗೂ ಬೆನ್ನಿನ ಮೇಲೆ ಬಿಳಿ ಕೂದಲು ಬೆಳದಿರುತ್ತವೆ. ಉದರ ಭಾಗ ಕಪ್ಪು ಬಣ್ಣದಲ್ಲಿರುತ್ತದೆ. ಉದರ ಕತ್ತು ಬೂದು ಬಣ್ಣದಲ್ಲಿದ್ದು, ಕುತ್ತಿಗೆಯ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಬಿಳಿ ಬಣ್ಣವಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪುಬಣ್ಣದಲ್ಲಿರುತ್ತವೆ. ಎಲೆಯಾಕಾರಾದ ಕಿವಿಗಳು ದೊಡ್ಡದಾಗಿದ್ದು, ಒಳಭಾಗ ಗುಲಾಬಿ ಬಣ್ಣದಲ್ಲಿರುತ್ತದೆ. ಮೂಗು ಕಪ್ಪು ಬಣ್ಣದಲ್ಲಿರುತ್ತದೆ, ತಲೆ ದೊಡ್ಡದಾಗಿದ್ದು, ಸುರುಳಿಯಾಕಾರಾದ ಆಕರ್ಷಕ ಕೋಡುಗಳು ನೀಳವಾಗಿ ಬೆಳೆದಿರುತ್ತವೆ. ಕಾಲುಗಳು ನೀಳವಾಗಿದ್ದು, ಕಂದು, ಕಪ್ಪು ಮತ್ತು ಬಿಳಿ ಬಣ್ಣದಲ್ಲಿರುತ್ತವೆ. ಬಾಲ ಪುಟ್ಟದಾಗಿದ್ದು, ಕಂದು ಮತ್ತು ಬಿಳಿ ಬಣ್ಣದಲ್ಲಿರುತ್ತದೆ.

ಎಲ್ಲಿದೆ?

ದಕ್ಷಿಣ ಆಫ್ರಿಕಾದ ಇಥಿಯೋಪಿಯಾ, ಕೀನ್ಯಾ, ಸೊಮಾಲಿ, ದಕ್ಷಿಣ ಸುಡಾನ್, ತಾಂಜಾನಿಯಾ, ಮತ್ತು ಉಗಾಂಡ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಒಣಭೂಮಿ, ಸಮತಟ್ಟಾದ ಭೂಮಿ, ದಟ್ಟ ಅರಣ್ಯ, ಬೆಟ್ಟಗಳಿಂದ ಕೂಡಿದ ಪರ್ವತ ಪ್ರದೇಶ, ಹುಲ್ಲು ಬೆಳೆದಿರುವ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಸಂಜೆ ಮತ್ತು ರಾತ್ರಿಯಲ್ಲಿ ಇದು ಹೆಚ್ಚು ಚುರುಕಾಗಿರುತ್ತದೆ. ಸೂರ್ಯೋದಯದ ನಂತರ ನೆರಳು ಹೆಚ್ಚಾಗಿರುವ ಸುರಕ್ಷಿತ್ರ ಪ್ರದೇಶಗಳನ್ನು ಹುಡುಕಿಕೊಂಡು ವಾಸಿಸುತ್ತದೆ. ಇತರೆ ಜಿಂಕೆಗಳಂತೆ ಯಾವುದೇ ಗಡಿ ಗುರುತಿಸಿಕೊಳ್ಳದೇ, ವಾಸಸ್ಥಾನಕ್ಕಾಗಿ ಯಾವ ಜಿಂಕೆಯೊಂದಿಗೂ ಜಗಳವಾಡದೇ ಜೀವನ ನಡೆಸುವುದು ಭಿನ್ನ. ಸಂತಾನೋತ್ಪತ್ತಿ ಸಮಯದಲ್ಲಿ ಮಾತ್ರ ಸುರುಳಿ ಸುತ್ತಿದ ಕೋಡುಗಳನ್ನು ಪರಸ್ಪರ ಕೂಡಿಸಿಕೊಂಡು ಬಲವಾಗಿ ತಳ್ಳುವ ಪ್ರಯತ್ನ ಮಾಡುತ್ತವೆ. ಹೆಚ್ಚೆಂದರೆ ಮೂರು ಹೆಣ್ಣು ಜಿಂಕೆಗಳು, ಮರಿಗಳು ಮತ್ತು ಒಂದು ಕುಡು ಸೇರಿ ಪುಟ್ಟ ಗುಂಪು ರಚಿಸಿಕೊಂಡಿರುತ್ತವೆ.

ಗಂಡು ಜಿಂಕೆ ಗುಂಪಿನ ನೇತೃತ್ವ ವಹಿಸಿಕೊಂಡಿದ್ದರೂ ಒಂಟಿಯಾಗಿ ಸುತ್ತಲು ಇಷ್ಟಪಡುತ್ತದೆ. ಒಂದೇ ಗಡಿಯಲ್ಲಿ 4–5 ಗಂಡು ಜಿಂಕೆಗಳು ಇರುತ್ತವೆ. ಕಾಡಿನಲ್ಲಿ ವಾಸಿಸಿದರೂ ಇತರೆ ಪ್ರಾಣಿಗಳ ಕಣ್ಣಿಗೆ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಅಪಾಯದ ಸೂಚನೆ ದೊರೆತ ಕೂಡಲೇ ಸ್ತಬ್ದವಾಗುತ್ತವೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ. ಪರಭಕ್ಷಕ ಪ್ರಾಣಿಗಳನ್ನು ಎದಿರಿಸುವ ಪ್ರಯತ್ನವನ್ನೂ ಮಾಡುತ್ತವೆ. ಶಬ್ದಕ್ಕಿಂತ ಹೆಚ್ಚಾಗಿ ದೇಹದ ಭಂಗಿ ಮತ್ತು ಬಾಲದ ಚಲನೆ ಮೂಲಕವೇ ಸಂವಹನ ನಡೆಸುತ್ತವೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ವಿವಿಧ ಬಗೆಯ ಎಲೆಗಳು, ಗಿಡದ ಕಾಂಡ, ಹೂಗಳನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತದೆ. ಕೆಲವು ಬಗೆಯ ಹಣ್ಣುಗಳನ್ನೂ ಸೇವಿಸುತ್ತದೆ. ಬರಗಾಲದಲ್ಲಿ ಆಹಾರ ಅಭಾವ ಎದುರಾದರೆ ಹುಲ್ಲು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.

ಸಂತಾನೋತ್ಪತ್ತಿ

ಇದರ ಸಂತಾನೋತ್ಪತ್ತಿಗೆ ನಿರ್ದಿಷ್ಟ ಅವಧಿ ಇಲ್ಲ. ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ವರ್ಷದ ಯಾವುದೇ ಕಾಲದಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಹೆಣ್ಣು ಕುಡು, 7ರಿಂದ 8 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾಫ್ ಎನ್ನುತ್ತಾರೆ. ಮರಿಗೆ ಜನ್ಮ ನೀಡಿದ ನಂತರ ತಾಯಿ ಜಿಂಕೆ ಗುಂಪು ತೊರೆದು ಮರಿಯ ಆರೈಕೆಯಲ್ಲಿ ಒಂಟಿಯಾಗಿರಲು ಇಷ್ಟಪಡುತ್ತದೆ. ಶೇ50ರಷ್ಟು ಮರಿಗಳು ವಿವಿಧ ರೋಗಗಳಿಗೆ ತುತ್ತಾಗಿ ಮತ್ತು ಪರಭಕ್ಷಕ ಪ್ರಾಣಿಗಳ ದಾಳಿಗೆ ಬಲಿಯಾಗಿ ಕೇವಲ ಆರು ತಿಂಗಳಲ್ಲೇ ಸಾಯುತ್ತವೆ.

ಮರಿಯನ್ನು ರಕ್ಷಿಸಲು ತಾಯಿ ಜಿಂಕೆ ಹೆಚ್ಚು ಜೋಪಾನ ಮಾಡುತ್ತದೆ. ದಟ್ಟವಾಗಿ ಬೆಳೆದಿರುವ ಪೊದೆಗಳಲ್ಲಿ ಮರಿಯನ್ನು ಇಟ್ಟು, ಆಹಾರ ಹುಡುಕಲು ಹೋಗುತ್ತದೆ. ಆಗಾಗ್ಗೆ ಬಂದು ಹಾಲುಣಿಸುತ್ತದೆ. ಸುಮಾರು 18 ತಿಂಗಳ ನಂತರ ಮರಿ ವಯಸ್ಕ ಹಂತ ತಲುಪುತ್ತದೆ. ಗಂಡು ಮರಿ ಸುಮಾರು 5 ವರ್ಷದ ನಂತರ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

ಗಂಡು ಕುಡುವನ್ನು ಬಕ್ ಎಂದು, ಹೆಣ್ಣನ್ನು ಡೊ ಎಂದು ಕರೆಯುತ್ತಾರೆ.ಈ ಜಿಂಕೆಯ ಮೂಲ ನೆಲೆ ಸೌದಿ ಅರೇಬಿಯಾ ಎಂದು ಭಾವಿಸಲಾಗಿತ್ತು. ಆದರೆ ಸಂಶೋಧಕರು ಅಧ್ಯಯನ ಮಾಡಿ ಇದು ದಕ್ಷಿಣ ಆಫ್ರಿಕಾಗೆ ಸೇರಿದ ಜಿಂಕೆ ಎಂದು 1960ರಲ್ಲಿ ತಿಳಿಸಿದರು.
ನೈಲಾ, ಗ್ರೇಟರ್‌ ಕುಡು, ಲೆಸ್ಸರ್ ಕುಡು, ಮೌಂಟೇನ್ ನೈಲಾ, ಸ್ಟಿಟಟುಂಗ, ಬೊಂಗೊ, ಇಂಪಾಲ ಮತ್ತು ಕೆವೆಲ್ ಜಿಂಕೆಗಳ ದೇಹರಚನೆಯಲ್ಲಿ ಹಲವು ಸಾಮ್ಯತೆಗಳು ಇರುತ್ತವೆ.ಅಪಾಯ ಎದುರಾದರೆ ಇದು ಜೋರಾಗಿ ಕಿರುಚುತ್ತಾ ಇತರೆ ಕುಡುಗಳನ್ನು ಎಚ್ಚರಿಸುತ್ತದೆ.ಗಂಡು ಕುಡುಗೆ ಮಾತ್ರ ಕೋಡುಗಳು ಬೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT