ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗೋಲಿಯಾ ಕಾಡುಕತ್ತೆ ‘ಅನೆಗರ್‌’

Last Updated 21 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಸಾವಿರಾರು ವರ್ಷಗಳಿಂದ ಮನುಷ್ಯನೊಂದಿಗೆ ನಿಕಟ ಸಂಪರ್ಕದಲ್ಲಿರುವ ಪ್ರಾಣಿಗಳು ಕೆಲವು ಮಾತ್ರ. ಇವುಗಳಲ್ಲಿ ಕೆಲವು ಮನುಷ್ಯನ ಆರ್ಥಿಕಾಭಿವೃದ್ಧಿಗೂ ನೆರವಾಗುತ್ತಿವೆ. ಅಂತಹ ಸಾಕು ಪ್ರಾಣಿಗಳಲ್ಲಿ ಕತ್ತೆ ಕೂಡ ಒಂದು. ಭಾರತದಲ್ಲಷ್ಟೇ ಅಲ್ಲದೇ, ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಕತ್ತೆ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಅನೇಗರ್‌ (Onager) ಕತ್ತೆ ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಈಕ್ವಸ್‌ ಹೆಮಿಯೊನಸ್‌ (Equus hemionus). ಇದು ಇಕ್ವಿಡೇ (Equidae) ಕುಟುಂಬಕ್ಕೆ ಸೇರಿದ್ದು, ಪೆರಿಸೊಡ್ಯಾಕ್ಟಿಲಾ (Perissodactyla) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ಕಂದು, ಕಪ್ಪು ಮತ್ತು ಬಿಳಿಬಣ್ಣದ ನಯವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಸೊಂಟ, ಭುಜಗಳು, ಹಿಂಗಾಲುಗಳು ಮೇಲ್ಭಾಗದ ತೊಡೆಗಳು, ಹಣೆ ಮತ್ತು ತಲೆಯ ಮೇಲ್ಭಾಗ ಭಾಗ, ಕಾಲುಗಳ ಕೆಳಭಾಗಗಳು ಕಂದು ಬಣ್ಣದಲ್ಲಿದ್ದರೆ, ಉದರ, ಕಾಲುಗಳ ಒಳಭಾಗಗಳು, ಮೂತಿಯ ಭಾಗ, ಎದೆಭಾಗ ಬಿಳಿಬಣ್ಣದಲ್ಲಿರುತ್ತದೆ. ಕಪ್ಪುಬಣ್ಣದ ಎರಡು ಗೊರಸುಗಳು ಇರುತ್ತವೆ. ಬಾಲ ಮಧ್ಯಮಗಾತ್ರದಲ್ಲಿದ್ದು, ಮಧ್ಯಭಾಗದಿಂದ ತುದಿಯವರೆಗೆ ದಟ್ಟವಾಗಿ ಕೂದಲು ಬೆಳೆದಿರುತ್ತವೆ. ಎಲೆಯಾಕಾರಾದ ಕಿವಿಗಳು ದೊಡ್ಡದಾಗಿದ್ದು, ಸೆಟೆದುಕೊಂಡಿರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ದೇಹರಚನೆ ಬಹುತೇಕ ಕುದುರೆಯನ್ನೇ ಹೋಲುವುದು ಈ ಕತ್ತೆಯ ವಿಶೇಷ.

ವಾಸಸ್ಥಾನ

ಯುರೋಪ್ ಮತ್ತು ಏಷ್ಯಾ ಖಂಡದ ನಡುವೆ ಇರುವ ಕಪ್ಪುಸಮುದ್ರದಿಂದ ಚೀನಾದಲ್ಲಿರುವ ಹಳದಿ ನದಿಯ ವರೆಗೆ ಇದರ ಸಂತತಿ ವಿಸ್ತರಿಸಿದೆ. ಮಂಗೋಲಿಯಾದಲ್ಲಿ ಇದರ ಸಂಖ್ಯೆ ಹೆಚ್ಚಾಗಿರುವುದರಿಂದ ಇದನ್ನು ಮಂಗೋಲಿಯಾ ಕಾಡುಕತ್ತೆ ಎಂದು ಕರೆಯುತ್ತಾರೆ. ಹೆಚ್ಚು ಉಷ್ಣ ವಾತಾವರಣ ಇರುವ ಮರುಭೂಮಿ ಪ್ರದೇಶ, ಅರೆ ಮರುಭೂಮಿ ಪ್ರದೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಇದಕ್ಕಿದ್ದು, ಎತ್ತರದ ಪರ್ವತ ಪ್ರದೇಶಗಳಲ್ಲೂ ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಲು ಇಷ್ಟಪಡುವ ಪ್ರಾಣಿ. ಒಂದು ಗುಂಪಿನಲ್ಲಿ 10–12 ಕತ್ತೆಗಳು ಇರುತ್ತವೆ. ಗುಂಪಿಲ್ಲಿ ಒಂದು ಗಂಡು ಕತ್ತೆ ಇದ್ದರೆ, ಉಳಿದವು ಹೆಣ್ಣು ಮತ್ತು ಮರಿಗಳಾಗಿರುತ್ತವೆ. ಹೆಚ್ಚು ವಯಸ್ಸಾದ ಗಂಡು ಕತ್ತೆಗಳು ಒಂಟಿಯಾಗಿ ಜೀವಿಸಲು ಇಷ್ಟಪಡುತ್ತವೆ. ವಸಂತಕಾಲ ಮತ್ತು ಚಳಿಗಾಲದಲ್ಲಿ ಆಹಾರ ದೊರೆಯುವ ಪ್ರಮಾಣ ಹೆಚ್ಚಾಗುವುದರಿಂದ ಸುಮಾರು 300 ಕತ್ತೆಗಳು ಒಂದೆಡೆ ಸೇರಿ ದೊಡ್ಡ ಗುಂಪು ರಚಿಸಿಕೊಳ್ಳುತ್ತವೆ.

ಮುಂಜಾನೆ ಮತ್ತು ಸಂಜೆ ಹೊತ್ತು ತಾಪಮಾನ ಕಡಿಮೆಯಾಗುವುದರಿಂದ ಈ ಅವಧಿಯಲ್ಲಿ ಹೆಚ್ಚು ಚುರುಕಾಗಿದ್ದು, ಆಹಾರ ಹುಡುಕುತ್ತವೆ. ತಾಪಮಾನ ಹೆಚ್ಚಾಗಿರುವ ಅವಧಿಯಲ್ಲಿ ನೆರಳು ಇರುವಂತಹ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತವೆ.

ಹೆಣ್ಣುಕತ್ತೆಗಳು ಹೆಚ್ಚು ನೀರು ಕುಡಿಯಲು ಬಯಸುವುದರಿಂದ, ನೀರು ದೊರೆಯುವಂತಹ ಪ್ರದೇಶಗಳ ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲೇ ಆಹಾರ ಹುಡುಕುತ್ತಾ ಅಲೆಯುತ್ತವೆ. ಆಹಾರದ ಮೂಲಕವೂ ದೇಹಕ್ಕೆ ಬೇಕಾಗುವಷ್ಟು ನೀರು ಸೇರಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಹಾರಿ ಪ್ರಾಣಿ. ಹುಲ್ಲು ಇದರ ಪ್ರಮುಖ ಆಹಾರ. ಕುರುಚಲು ಗಿಡಗಳ ಎಲೆಗಳು, ಮರದ ತೊಗಟೆ, ಗಿಡ ಮೂಲಿಕೆಗಳನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ

ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಹೆಚ್ಚು. ಗುಂಪಿನಲ್ಲಿರುವ ಪ್ರಬಲ ಗಂಡುಕತ್ತೆಗಳು ನೀರು ಹೆಚ್ಚಾಗಿ ದೊರೆಯುವಂತಹ ಪ್ರದೇಶಗಳಲ್ಲಿ ಗಡಿ ಗುರುತಿಸಿಕೊಳ್ಳಲು ಪೈಪೋಟಿ ನಡೆಸುತ್ತವೆ. ಈ ಮೂಲಕ ಗುರುತಿಸಿಕೊಂಡ ಗಡಿಯ ವ್ಯಾಪ್ತಿಯಲ್ಲಿರುವ ಎಲ್ಲ ಹೆಣ್ಣುಕತ್ತೆಗಳ ಮೇಲೆ ಹಕ್ಕು ಸಾಧಿಸುತ್ತವೆ.

ಹೆಣ್ಣುಕತ್ತೆ ಸುಮಾರು 11 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಫೋಲ್ (Foal) ಎನ್ನುತ್ತಾರೆ. ಮರಿ ಜನಿಸಿದ ನಂತರ ಸುಮಾರು ಎರಡು ವರ್ಷಗಳ ವರೆಗೆ ಸಂಪೂರ್ಣ ತಾಯಿಯ ಆರೈಕೆಯಲ್ಲೇ ಬೆಳೆಯುತ್ತದೆ. 3ರಿಂದ 4 ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತವೆ.

ಸ್ವಾರಸ್ಯಕರ ಸಂಗತಿಗಳು

* ಕತ್ತೆಗಳ ಪೈಕಿ ಮಂಗೋಲಿಯಾ ಕಾಡುಕತ್ತೆಯೇ ಹೆಚ್ಚು ಚುರುಕಾಗಿರುತ್ತದೆ. ಇದೇ ಗಾತ್ರದ ಕುದುರೆಗಿಂತ ಹೆಚ್ಚು ಶಕ್ತಿ ಹೊಂದಿರುತ್ತದೆ.

* ಇದರ ನೆನಪಿನ ಶಕ್ತಿಯೂ ಚುರುಕಾಗಿದ್ದು, 25 ವರ್ಷಗಳ ಹಿಂದೆ ನೋಡಿದ ಪ್ರದೇಶವನ್ನೂ ಗುರುತು ಹಿಡಿಯುತ್ತದೆ.

* ಕುದುರೆಗಳನ್ನು ಹೆದರಿದಷ್ಟು ಸುಲಭವಾಗಿ ಇವು ಹೆದರುವುದಿಲ್ಲ.

* ಇದರ ತುಪ್ಪಳ ಜಲನಿರೋಧಕವಾಗಿದ್ದರೂ ಮಳೆಯಲ್ಲಿ ನೆನೆಯುವುದಕ್ಕೆ ಮತ್ತು ನೀರಿನಲ್ಲಿ ಈಜುವುದಕ್ಕೆ ಇಷ್ಟಪಡುವುದಿಲ್ಲ.

* ಹಲವು ವರ್ಷಗಳ ಹಿಂದೆ ಈ ಕತ್ತೆಗಳನ್ನು ಕೂಡ ವಸ್ತುಗಳನ್ನು, ಆಹಾರ ಪದಾರ್ಥಗಳನ್ನು ಸಾಗಿಸಲು ಬಳಸಿಕೊಂಡ ಉದಾಹರಣೆಗಳು ಇವೆ.

* ಚಿಂಪಾಂಜಿಗಳು ಮತ್ತು ಕೋತಿಗಳಂತೆ ಈ ಕತ್ತೆಗಳು ಕೂಡ ದೇಹವನ್ನು ಸ್ವಚ್ಚವಾಗಿ ಮತ್ತು ಸುಂದರವಾಗಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತವೆ.

ಗಾತ್ರ ಮತ್ತು ಜೀವಿತಾವಧಿ-ದೇಹದ ತೂಕ-200–290 ಕೆ.ಜಿ., ದೇಹದ ಎತ್ತರ-100 ರಿಂದ 142 ಸೆಂ.ಮೀ,ದೇಹದ ಉದ್ದ-6 ರಿಂದ 8 ಅಡಿ, ಓಡುವ ವೇಗ-64ರಿಂದ70 ಕಿ.ಮೀ/ಗಂಟೆಗೆ, ಜೀವಿತಾವಧಿ- 14–26 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT