ಸೋಮವಾರ, ನವೆಂಬರ್ 18, 2019
25 °C

ಅಮೆರಿಕ ಪಾರಿವಾಳ ‘ಮೌರ್ನಿಂಗ್‌ ಡವ್‌’

Published:
Updated:

ಬಹುತೇಕರ ನೆಚ್ಚಿನ ಹಕ್ಕಿಗಳಲ್ಲಿ ಪಾರಿವಾಳವೂ ಒಂದು. ವಿಶ್ವದಾದ್ಯಂತ ಬಗೆ ಬಗೆಯ ಪಾರಿವಾಳಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಅಪರೂಪದ ಕಾಡು ಪಾರಿವಾಳ ಮೌರ್ನಿಂಗ್ ಡವ್‌ (Mourning Dove) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಜೆನೈದಾ ಮ್ಯಾಕ್ರೌರಾ (Zenaida macroura). ಇದು ಕೊಲಂಬಿಡೇ (Columbidae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಕೊಲಂಬಿಫಾರ್ಮ್ಸ್‌ (Columbiformes) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ಕಂದು, ಬೂದು ತಿಳಿಗೆಂಪು, ಕಪ್ಪು ಮತ್ತು ಬಿಳಿ ಬಣ್ಣದ ಪುಕ್ಕ ದೇಹವನ್ನು ಆವರಿಸಿರುತ್ತದೆ. ತಲೆ, ಕುತ್ತಿಗೆ, ಉದರ ಬೂದು–ಕಂದು ಮಿಶ್ರಿತಿ ಬಣ್ಣದಲ್ಲಿದ್ದರೆ, ರೆಕ್ಕೆಗಳು ಬೂದು, ಕಪ್ಪು, ಕೆಂಪು ಬಣ್ಣದಲ್ಲಿರುತ್ತವೆ. ಬಾಲ ನೀಳವಾಗಿದ್ದು, ಕಪ್ಪು ಬಣ್ಣದ ಗರಿಗಳಿಂದ ಕೂಡಿರುತ್ತದೆ. ತಲೆ ಪುಟ್ಟದಾಗಿದ್ದು, ನಯವಾದ ಕೆಂಪು–ಬೂದು ಮಿಶ್ರಿತ ಪುಕ್ಕ ಆವರಿಸಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಕಣ್ಣಿನ ಸುತ್ತಲೂ ಬಿಳಿ ಬಣ್ಣದ ವಲಯ ಇರುತ್ತದೆ. ಕಪ್ಪುಬಣ್ಣದ ಕೊಕ್ಕು ಮಧ್ಯಮಗಾತ್ರದಲ್ಲಿದ್ದು, ತುದಿಯಲ್ಲಿ ಚೂಪಾಗಿರುತ್ತದೆ. ಕಾಲುಗಳು ಕೆಂಪು ಬಣ್ಣದಲ್ಲಿದ್ದು, ಪೊರೆಯಂತಹ ಚರ್ಮ ಆವರಿಸಿರುತ್ತದೆ. ಉಗುರುಗಳು ಕಪ್ಪು ಬಣ್ಣದಲ್ಲಿರುತ್ತವೆ.

ಎಲ್ಲಿದೆ?

ದಕ್ಷಿಣ ಕೆನಡಾ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಪನಾಮ, ಮೆಕ್ಸಿಕೊ, ಜಮೈಕಾ, ಹೊಂಡುರಾಸ್, ಕೊಲಂಬಿಯಾ, ಹೊಂಡುರಾಸ್‌, ನಿಕರಾಗುವಾ, ಡೊಮೊನಿಕ್ ಗಣರಾಜ್ಯ, ಎಲ್‌ ಸಾಲ್ವಡಾರ್, ಬಹಮಾಸ್‌ ರಾಷ್ಟ್ರಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಕೃಷಿಭೂಮಿ ಪ್ರದೇಶಗಳು, ಪುಟ್ಟ ನಗರಗಳು, ಉದ್ಯಾನಗಳು, ಬಯಲು ಕಾಡುಗಳು, ಪೊದೆಗಿಡಗಳು ಬೆಳೆದಿರುವ ಪ್ರದೇಶ, ಹುಲ್ಲುಗಾವಲು ಪ್ರದೇಶಗಳಲ್ಲಿ ಇದು ವಾಸಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ವಲಸೆ ಹೋಗುವ ಪ್ರವೃತ್ತಿಯ ಹಕ್ಕಿ. ವಾತಾವರಣಕ್ಕೆ ತಕ್ಕಂತೆ ಆಹಾರ ಅರಸಿ ಸಾವಿರಾರು ಕಿ.ಮೀ ದೂರದಲ್ಲಿರುವ ಪ್ರದೇಶಗಳಿಗೆ ವಲಸೆ ಹೋಗುತ್ತಿರುತ್ತದೆ. ಪುಟ್ಟ ಗುಂಪುಗಳನ್ನು ರಚಿಸಿಕೊಂಡು ಜೀವಿಸುತ್ತದೆ. ಸದಾ ಸಂಗಾತಿ ಜೊತೆಯಲ್ಲಿರಲು ಇಷ್ಟಪಡುತ್ತದೆ. ಹಗಲಿನಲ್ಲಿ ಮಾತ್ರ ಆಹಾರ ಅರಸಿ ಸುತ್ತುತ್ತದೆ. ಅಪಾಯ ಎದುರಾದಾಗ ವಿವಿಧ ರೂಪದಲ್ಲಿ ಪುಕ್ಕ ಅರಳಿಸಿ ಇತರೆ ಹಕ್ಕಿಗಳನ್ನು ಹೆದರಿಸುತ್ತದೆ. ಸಂಗಾತಿಯ ಗಮನ ಸೆಳೆಯುವುದಕ್ಕೂ ಇದೇ ತಂತ್ರಗಳನ್ನು ಅನುಸರಿಸುತ್ತದೆ. ವಿವಿಧ ಬಗೆಯ ಶಬ್ದಗಳನ್ನು ಹೊರಡಿಸುವ ಮೂಲಕವೂ ಸಂವಹನ ನಡೆಸುತ್ತದೆ.

ಆಹಾರ

ಇದು ಮಿಶ್ರಾಹಾರಿ ಹಕ್ಕಿ. ವಿವಿಧ ಬಗೆಯ ಕಾಳುಗಳೇ ಇದರ ಪ್ರಮುಖ ಆಹಾರ. ಕೆಲವು ಬಗೆಯ ಹಣ್ಣುಗಳು ಮತ್ತು ಬೆರ‍್ರಿಗಳನ್ನೂ ಸೇವಿಸುತ್ತದೆ. ಆಗಾಗ್ಗೆ ಕೆಲವು ಬಗೆಯ ಕೀಟಗಳನ್ನೂ ಭಕ್ಷಿಸುತ್ತದೆ. ಅಪರೂಪಕ್ಕೆ ಪೊದೆಗಿಡಗಳ ಎಲೆಗಳನ್ನೂ ಸೇವಿಸುತ್ತದೆ. ಹುಲ್ಲುಗಾವಲು ಪ್ರದೇಶಗಳಲ್ಲಿದ್ದಾಗ, ವಿವಿಧ ಬಗೆಯ ಕೀಟಗಳನ್ನು ಬೇಟೆಯಾಡುತ್ತದೆ.

ಸಂತಾನೋತ್ಪತ್ತಿ

ಫೆಬ್ರುವರಿಯಿಂದ ಅಕ್ಟೋಬರ್‌ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಒಂದು ಅವಧಿಯಲ್ಲಿ ಒಂದು ಸಂಗಾತಿಯೊಂದಿಗೆ ಮಾತ್ರ ಜೊತೆಯಾಗುತ್ತದೆ. ವಿವಿಧ ಕಸರತ್ತುಗಳನ್ನು ಪ್ರದರ್ಶಿಸಿ, ವಿಶಿಷ್ಟ ಶಬ್ದಗಳನ್ನು ಹೊರಡಿಸಿ ಗಂಡು ಪಾರಿವಾಳ ಹೆಣ್ಣಿನ ಗಮನ ಸೆಳೆಯುತ್ತದೆ. ಹೆಣ್ಣು ಪಾರಿವಾಳಕ್ಕೆ ಇಷ್ಟವಾದರೆ ಗಂಡಿನ ಗಡಿಯಲ್ಲಿ ಕೂಡಿ ಬಾಳುವುದಕ್ಕೆ ಪ್ರಯತ್ನಿಸುತ್ತದೆ. ನಂತರ ಸುರಕ್ಷಿತ ಪ್ರದೇಶಗಳಲ್ಲಿ ಹೆಣ್ಣು ಗೂಡು ನಿರ್ಮಿಸಲು ಆರಂಭಿಸಿದರೆ, ಗಂಡು ಪಾರಿವಾಳ ವಸ್ತುಗಳನ್ನು ಪೂರೈಸಿ ನೆರವಾಗುತ್ತದೆ.

ಹೆಣ್ಣು ಹಕ್ಕಿ ಬಿಳಿ ಬಣ್ಣದ ಎರಡು ಮೊಟ್ಟೆಗಳನ್ನು ಇಡುತ್ತದೆ. 14ರಿಂದ 15 ದಿನಗಳ ವರೆಗೆ ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಕಾವು ಕೊಡುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗೆ ಪೋಷಕ ಹಕ್ಕಿಗಳು 15 ದಿನಗಳ ವರೆಗೆ ಆಹಾರ ಉಣಿಸಿ ಪೋಷಿಸುತ್ತವೆ. 15 ದಿನಗಳ ನಂತರ ಗೂಡು ಬಿಟ್ಟು ಹಾರುವುದನ್ನು ಕಲಿಯುತ್ತದೆ. 30 ದಿನಗಳ ವರೆಗೆ ಪೋಷಕ ಹಕ್ಕಿಗಳ ಆರೈಕೆಯಲ್ಲೇ ಬೆಳೆಯುತ್ತದೆ. 85 ದಿನಗಳ ನಂತರ ವಯಸ್ಕ ಹಂತ ತಲುಪಿ ಸ್ವತಂತ್ರ ಜೀವನ ಆರಂಭಿಸುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಮರುಭೂಮಿಯಂತಹ ಪ್ರದೇಶಗಳಲ್ಲೂ ವಾಸಿಸುವ ಸಾಮರ್ತ್ಯ ಇದಕ್ಕಿದೆ.

* ಹಗಲು ಮತ್ತು ರಾತ್ರಿ ಎರಡೂ ಅವಧಿಯಲ್ಲೂ ಹಾರುತ್ತಾ ಸಂಚರಿಸುತ್ತದೆ.

* ಕೆಲವು ಪುರಾಣಗಳಲ್ಲಿ ಮತ್ತು ಕಥೆಗಳಲ್ಲಿ ಈ ಹಕ್ಕಿಯ ಬಗ್ಗೆ ಉಲ್ಲೇಖವಿದೆ.

* ಮೊದಲು ಆಹಾರವನ್ನು ದೇಹದಲ್ಲಿ ಸಂಗ್ರಹಿಸಿಟ್ಟುಕೊಂಡು ಅವಶ್ಯಕತೆ ಬಿದ್ದಾಗ ಸೇವಿಸುವುದು ಇದರ ವಿಶೇಷ.

ಗಾತ್ರ ಮತ್ತು ಜೀವಿತಾವಧಿ

* ದೇಹದ ತೂಕ-96 ರಿಂದ 170 ಗ್ರಾಂ

* ದೇಹದ ಉದ್ದ- 22ರಿಂದ 36 ಸೆಂ.ಮೀ

* ರೆಕ್ಕೆಗಳ ಅಗಲ-14 ರಿಂದ15 ಸೆಂ.ಮೀ

* ಹಾರುವ ವೇಗ- 88 ಕಿ.ಮಿ/ಗಂಟೆಗೆ

* ಜೀವಿತಾವಧಿ -1.5 ರಿಂದ 19 ವರ್ಷ

ಪ್ರತಿಕ್ರಿಯಿಸಿ (+)