ಸೋಮವಾರ, ನವೆಂಬರ್ 18, 2019
28 °C
ಕೀಟ ಪ್ರಪಂಚ

ಕೇವಲ 24 ಗಂಟೆ ಬದುಕುವ ಈ ‘ನೊಣ’ ಡೈನೋಸಾರ್ ಯುಗಕ್ಕೂ ಹಿಂದಿನಿಂದ ಭೂಮಿ ಮೇಲಿದೆ!

Published:
Updated:

ವಿಭಿನ್ನ ದೇಹಾಕೃತಿಯ ಸುಮಾರು ಒಂದು ಸೆಂಟಿ ಮೀಟರ್ ಉದ್ದವಿರುವ ಅತೀ ಪುಟ್ಟ ಕೀಟ ಮೇ ನೊಣ(Mayfly) ಕೊಠಡಿಯ ಹೊರಗೆ ಗೋಡೆಯ ಮೇಲೆ ವಿರಮಿಸುತ್ತಿತ್ತು. ಕೂಡಲೇ ಅದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದೆ. ಅದೇ ಜಾತಿಯ ಬೇರೆ ಪ್ರಬೇಧದ ಮೇ ನೋಣ, ಅದೇ ರಾತ್ರಿ ಇನ್ನೇನು ಮಲಗುವ ಮುನ್ನ ಕಾಣಿಸಿಕೊಂಡಿದ್ದು ಅದೃಷ್ಟ.

ಈ ಕೀಟ ನೋಡಲು ಸಿಗುವುದೇ ಅಪರೂಪ. ಮೇ ನೊಣ ಎಂದಾಕ್ಷಣ ಕೇವಲ ಮೇ ತಿಂಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂಬ ಭಾವನೆ ಹಲವರಲ್ಲಿ ಇದೆ. ಕಾರಣ ಇದು ಮೇ ತಿಂಗಳಿನಲ್ಲಿ ಹೆಚ್ಚು ಕಾಣ ಸಿಗುತ್ತದೆ. ಆದರೆ ಎಲ್ಲ ತಿಂಗಳಲ್ಲೂ ಕಾಣಿಸಿಕೊಳ್ಳುತ್ತದೆ. ಇದು ಅತಿ ಪುರಾತನ ಹಾರುವ ಕೀಟಗಳ ಪೇಲಿಯಾಪ್ಟೆರ (Palaeoptera) ವರ್ಗಕ್ಕೆ ಸೇರಿದ ಅಪರೂಪದ ಕೀಟ. ಇದರ ಉದ್ದನೆಯ ಎರಡು ಹಿಂತುದಿಯ ನೂಲಿನಂತಹ ಬಾಲಗಳು ಮತ್ತು ನಾಲ್ಕೂ ರೆಕ್ಕೆಗಳು ಬೆನ್ನಿನ ಮೇಲೆ ಮಡಚಲಾಗದೇ ಗೋಡೆಯಾಗಿ ಸದಾ ನಿಂತಿರುವುದರಿಂದ, ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿರುವ ಕೀಟಗಳಲ್ಲಿ ಒಂದಾಗಿ ಗುರುತಿಸಲಾಗಿದೆ.

ಸುಮಾರು 350 ಲಕ್ಷ ವರ್ಷಗಳ ಹಿಂದೆ ಅಂದರೇ, ಡೈನೋಸಾರ್ ಯುಗಕ್ಕೂ ಮುನ್ನ ಈ ಕೀಟಗಳು ಭೂಮಿಯ ಮೇಲೆ ವಾಸಿಸುತ್ತಿದ್ದವು ಎಂದು ಕೆಲವು ಪುರಾವೆಗಳು ತಿಳಿಸಿವೆ. ಇವುಗಳ ದೇಹರಚನೆ ಮೃದುವಾಗಿದ್ದರೂ, ಹಲವು ಭೌಗೋಳಿಕ ಮತ್ತು ನೈಸರ್ಗಿಕ ವಿಕೋಪಗಳಿಗೆ ತಡೆದುಕೊಂಡು ಬದುಕುಳಿದಿರುವುದು ಸ್ವಾರಸ್ಯ. ಇವು ಏರೊಪ್ಲೇನ್ ಮತ್ತು ಹೆಲಿಕಾಪ್ಟರ್ (Dragonfly & Damselfly) ಚಿಟ್ಟೆಗಳ ಹತ್ತಿರದ ಸಂಬಂಧಿಗಳಾಗಿದ್ದು, ಜೀವನಕ್ರಮ ಮತ್ತು ವರ್ತನೆ ಅವುಗಳಂತೆಯೇ ಇದೆ. ಮೇ ನೊಣಗಳು ಎಫಿಮೆರಾಪ್ಟೆರ (Ephemeraptera) ಗುಂಪಿಗೆ ಸೇರಿವೆ. ಗ್ರೀಕ್ ಬಾಷೆಯಲ್ಲಿ ಎಫಿಮೆರಾನ್ (Ephemeron) ಎಂದರೆ ‘ಕ್ಷಣಕಾಲ’ ಎಂದು ಅರ್ಥ. ಹಾಗಾಗಿ ಈ ಪ್ರೌಢ ಕೀಟಗಳು ಕೆಲವು ನಿಮಿಷ ಮಾತ್ರ ಬದುಕುತ್ತವೆ. ಗರಿಷ್ಠ 24 ಗಂಟೆವರೆಗೆ ಮಾತ್ರ ಜೀವಿಸಬಲ್ಲವು.

ಹೆಣ್ಣು ಕೀಟಗಳು ನಿಂತಿರುವ ನೀರಿನಲ್ಲಿ ಮಾತ್ರ 500 ರಿಂದ 3000 ಮೊಟ್ಟೆಗಳನ್ನು ಇಡುತ್ತವೆ. ಸುಮಾರು 30 ದಿನಗಳ

ನಂತರ ಮೊಟ್ಟೆಯೊಡೆದು ಹೊರ ಬಂದ ಮರಿಗಳು (Naiads) ಹಸಿರು ಪಾಚಿ ಮತ್ತು ನಶಿಸಿದ ಇತರೆ ಅತೀ ಚಿಕ್ಕ ಜೀವಿ, ಸಸ್ಯಗಳನ್ನು ತಿಂದು ನೀರಿನಲ್ಲೇ ಒಂದು ವರ್ಷದವರೆಗೂ ಬದುಕುತ್ತವೆ. ಈ ಕೀಟಗಳಲ್ಲಿ ವಿಶೇಷ ಬಗೆಯ ಹಂತ ಪೂರ್ವ ಪ್ರೌಢಾವಸ್ಥೆ(Subimago) ಇದ್ದು, ಕೇವಲ ಬೂದು ರೆಕ್ಕೆಗಳು ಮಾತ್ರ ಬೆಳೆದಿರುತ್ತವೆ. ಈ ಸಮಯ ಇವು ನೀರಿನಿಂದ ಹೊರಬಂದು ಕೆಲವು ಗಂಟೆಗಳ ಕಾಲ ಬಂಡೆಗಳ ಮೇಲೆ, ರಸ್ತೆಗಳ ಮೇಲೆ ತಟಸ್ಥವಾಗಿ ಕೂರುತ್ತವೆ. ನಂತರ ಸಮ್ಮಿಶ್ರ ಕಣ್ಣುಗಳು, ನೀಳವಾದ ಬಾಲಗಳು, ಜನನೇಂದ್ರಿಯಗಳ ಬೆಳವಣಿಗೆ, ರೆಕ್ಕೆಗಳು ಪಾರದರ್ಶಕದಂತೆ ಬದಲಾಯಿಸುವ ಕಾರ್ಯ ಪೂರೈಸಿ ಸಂಪೂರ್ಣ ಪ್ರೌಢ ಕೀಟವಾಗಿ (Imago) ರೂಪುಗೊಳ್ಳುತ್ತವೆ.

ಗಂಡು ಮತ್ತು ಹೆಣ್ಣು ಕೀಟಗಳಿಗೆ ಎರಡೆರೆಡು ಜನನಾಂಗಳಿರುವುದು ಅತ್ಯಂತ ಸ್ವಾರಸ್ಯ. ಪ್ರೌಢಕೀಟಗಳಿಗೆ ತಿನ್ನಲು ಉಣ್ಣಲು ಬಾಯಿ ರಚನೆಯಾಗಿರುವುದಿಲ್ಲ. ಹೀಗಾಗಿ ಇವು ಏನನ್ನೂ ತಿನ್ನವುದಿಲ್ಲ. ಗಂಡು ಹೆಣ್ಣು ಸಮಾಗಮವಾಗಿ ಮೊಟ್ಟೆಗಳನ್ನಿಟ್ಟು ತಕ್ಷಣ ಸಾಯುತ್ತವೆ. ಇವು ವಾಸಿಸುವ ನೀರಿನ ಪ್ರದೇಶ ಹೆಚ್ಚು ಶುದ್ಧವಾಗಿರುತ್ತವೆ. ಮೀನುಗಾರರು ಈ ಕೀಟಗಳನ್ನು ಮೀನು ಹಿಡಿಯಲು ಗಾಳಕ್ಕೆ ಸಿಕ್ಕಿಸುತ್ತಾರೆ.

ಕೆಲವು ವರ್ಷಗಳ ಹಿಂದೆ ಒಂದು ನಿಯತಕಾಲಿಕೆಯಲ್ಲಿ ಓದಿದ ನೆನಪು, ಮೊಟ್ಟೆಯೊಡೆದು ಹೊರಬರುವ ಲಕ್ಷಗಟ್ಟಲೆ ಮರಿಗಳು ರಸ್ತೆಯ ಮೇಲೆಲ್ಲ ಕೂತಿದ್ದು ಕೆಲವು ದ್ವಿಚಕ್ರ ವಾಹನಗಳು ಜಾರಿ ಅಪಘಾತಗಳಿವೆ.

ಪ್ರತಿಕ್ರಿಯಿಸಿ (+)