7

ವಿನಾಶದ ಅಂಚಿನಲ್ಲಿ ರಾಷ್ಟ್ರಪಕ್ಷಿ

Published:
Updated:

ರಾಷ್ಟ್ರಪಕ್ಷಿ ನವಿಲಿನ ಸಂತತಿ ಇಂದು ವಿನಾಶದ ಅಂಚಿನಲ್ಲಿದೆ. ಇದಕ್ಕೆ ಕಾರಣ ಅರಣ್ಯನಾಶ, ಅಭಿವೃದ್ಧಿ ಯೋಜನೆಗಳು, ತಂತ್ರಜ್ಞಾನದ ಬಳಕೆ, ಕ್ರಿಮಿನಾಶಕಗಳ ಬಳಕೆ, ಹಾಗೂ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಈ ಪಕ್ಷಿಗಳನ್ನು ಬೇಟೆಯಾಡುವ ಪ್ರವೃತ್ತಿಯಿಂದಾಗಿ ಇವು ವಿನಾಶದ ಅಂಚಿಗೆ ಬಂದು ನಿಂತಿವೆ. ಇವುಗಳ ಜೊತೆಗೆ ಗುಬ್ಬಚ್ಚಿ, ಗೊರವಂಕ, ಗಿಳಿ, ಇನ್ನೂ ಮುಂತಾದ ಪಕ್ಷಿಗಳು ಕಾಣದಾಗಿವೆ. ಮುಂದೆ ಇದೇ ಸ್ಥಿತಿ ನವಿಲಿಗೂ ಬರಬಹುದು. ಮನುಷ್ಯನ ದುರಾಸೆಯಿಂದಾಗಿ ಪ್ರಾಣಿ, ಪಕ್ಷಿಗಳು ಸಂಕಷ್ಟದಲ್ಲಿ ಸಿಲುಕಿವೆ. ಅರಣ್ಯನಾಶದಿಂದಾಗಿ ಆನೆ, ಜಿಂಕೆ, ಕಾಡುಹಂದಿ, ಕಾಡೆಮ್ಮೆಯಂತಹ ಕಾಡುಪ್ರಾಣಿಗಳು ಅರಣ್ಯದಲ್ಲಿ ಏನೂ ಸಿಗದೇ ರೈತರ ಹೊಲಗಳಿಗೆ ನುಗ್ಗಿ ಫಸಲು ನಾಶ ಮಾಡುತ್ತಿವೆ. ಒಂದು ಕಡೆ ರೈತ ಬಿತ್ತಿದ ಬೀಜಗಳಿಗೆ ಪಕ್ಷಿಗಳು ತೊಂದರೆ ನೀಡುತ್ತಿದ್ದರೆ ಇನ್ನೊಂದು ಕಡೆ ರೈತ ಬೆಳೆದ ಬೆಳೆಗೆ ಕಾಡು ಪ್ರಾಣಿಗಳು ತೊಂದರೆ ನೀಡುತ್ತಿವೆ. ಮತ್ತೊಂದು ಕಡೆ ಕಾಡುಪ್ರಾಣಿಗಳಿಗೆ ಹಾಗೂ ಪಕ್ಷಿ ಸಂಕುಲಗಳಿಗೆ ಇತ್ತ ಸೂಕ್ತ ಅರಣ್ಯವೂ ಇಲ್ಲದೇ ಆಹಾರ ಹಾಗೂ ನೀರು ಇಲ್ಲದೇ ತ್ರಿಶಂಕೂ ಸ್ಥಿತಿಯಲ್ಲಿವೆ.

ಇದೇ ಸ್ಥಿತಿ ಮುಂದುವರಿದರೆ ಮುಂದೊಂದು ದಿನ ಪ್ರಾಣಿ, ಪಕ್ಷಿಗಳನ್ನು ಕೇವಲ ಪ್ರಾಣಿ ಸಂಗ್ರಹಾಲಯದಲ್ಲಿ ಇಲ್ಲವೇ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಧಾರವಾಡ, ಜಿಲ್ಲೆಯಲ್ಲಿ ಅತಿ ಹೆಚ್ಚು ನವಿಲುಗಳು ಕಾಣಸಿಗುವುದು ಕಲಘಟಗಿ ತಾಲ್ಲೂಕಿನಲ್ಲಿ. ಅದರಂತೆ ಧಾರವಾಡ,ಅಳ್ನಾವರ, ಮನಸೂರು, ಮುಗದ, ಸಲಕಿನಕೊಪ್ಪ, ಕ್ಯಾರಕೊಪ್ಪ, ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ, ಕನಾ೯ಟಕ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಪ್ರದೇಶಗಳ ಬಳಿ ನವಿಲುಗಳನ್ನು ಕಾಣಬಹುದಾಗಿದೆ. ಆದರೆ ಈ ಎಲ್ಲ ಪ್ರದೇಶಗಳಲ್ಲಿ ನವಿಲುಗಳಿಗೆ ಸುರಕ್ಷತೆ ಇಲ್ಲ. ಹೀಗಾಗಿ ಧಾರವಾಡ ಜಿಲ್ಲೆಯಲ್ಲಿ ನವಿಲುಧಾಮ ಸ್ಥಾಪಿಸುವ ಅಗತ್ಯವಿದೆ.

ನಾವು ಚಿಕ್ಕವರಿದ್ದಾಗ ನಮ್ಮ ಪುಸ್ತಕಗಳಲ್ಲಿ ನವಿಲುಗರಿ ಬೆಚ್ಚಗೆ ಕುಳಿತಿರುತ್ತಿತ್ತು ಎಕೆಂದರೆ ಪುಸ್ತಕಗಳಲ್ಲಿ ನವಿಲುಗರಿ ಇಟ್ಟರೆ ಅವು ಮರಿ ಹಾಕುತ್ತವೆ ಎಂದು ಹೇಳುತ್ತಿದ್ದರು. ಮಳೆ ಬರುವ ಸಂದರ್ಭದಲ್ಲಿ ನವಿಲು ಗರಿಬಿಚ್ಚಿ ಕುಣಿಯುವುದನ್ನು ನೋಡುವುದೇ ಒಂದು ಹಬ್ಬ. ಮಹಿಳೆಯರು ಯಾರು ಚೆನ್ನಾಗಿ ನೃತ್ಯವನ್ನು ಮಾಡುತ್ತಾರೋ ಅಂಥವರಿಗೆ ನಾಟ್ಯಮಯೂರಿ ಎಂದು ಬಿರುದು ಕೊಟ್ಟು ಸನ್ಮಾನಿಸುತ್ತಾರೆ. ಅಷ್ಟು ಪ್ರಸಿದ್ಧ  ನವಿಲಿನ ನೃತ್ಯ. ನವಿಲಿನ ನತ೯ನಕ್ಕೆ ಮನಸೋಲದವರೇ ಇಲ್ಲ ಎಂದು ಹೇಳಬಹುದು. ಸುಬ್ರಹ್ಮಣ್ಯ ದೇವರ ವಾಹನ ನವಿಲು. ಸರಸ್ವತಿ ದೇವಿಗಂತೂ ನವಿಲು ಬಹಳ ಪ್ರೀಯವಾದ ಪಕ್ಷಿ. ಶ್ರೀ ಕೃಷ್ಣನ ಕೊಳಲಿನ ತುದಿಯಲ್ಲಿ ಅವನ ಕಿರೀಟದಲ್ಲಿ ನವಿಲುಗರಿ ಇದ್ದೇ ಇರುತ್ತದೆ. ಹೀಗಾಗಿ ನವಿಲು ದೇವಾನುದೇವತೆಗಳಿಗೂ ಪ್ರಿಯವಾದ ಪಕ್ಷಿ. 

ಈ ಪಕ್ಷಿ ರೈತರ ಹೊಲದಲ್ಲಿರುವ ಕ್ರಿಮಿ, ಕೀಟಗಳನ್ನು ತಿಂದು ರೈತರಿಗೆ ಸಹಾಯಮಾಡುತ್ತದೆ. ಇಂತಹ ಪರೋಪಕಾರಿ ಪಕ್ಷಿಯನ್ನು ಕೆಲವರು ಮಾಂಸಕ್ಕಾಗಿ ಬೇಟೆಯಾಡಿದರೆ ಕೆಲವರು ಇದರ ಸುಂದರ ಗರಿಗಳಿಗೆ ಬೇಟೆಯಾಡುತ್ತಾರೆ. ನಮ್ಮ ಮುಂದಿನ ಪೀಳಿಗೆ ಈ ಪಕ್ಷಿಯನ್ನು ಜೀವಂತ ನೋಡಬೇಕಾದರೆ ಸರ್ಕಾರ ಸೂಕ್ತ ಯೋಜನೆಯನ್ನು ಜಾರಿಗೊಳಿಸುವ ಅಗತ್ಯವಿದೆ. ಸ್ವಾಥಿ೯ಯಾದ ಮನುಷ್ಯ ತಾನು ಜೀವಿಸುವುದಕ್ಕಾಗಿ ತನ್ನ ಸುತ್ತ ಮುತ್ತಲಿನ ಪ್ರಾಣಿ, ಪಕ್ಷಿ, ಪರಿಸರದೊಂದಿಗೆ ಸಂಘಷ೯ಕ್ಕಿಳಿದಿದ್ದು ಆದ್ದರಿಂದಾಗಿ ಆಹಾರ ಸರಪಳಿ ನಾಶವಾಗಿದೆ. ಇದರಿಂದಾಗಿ ತಿನ್ನುವ ಆಹಾರ, ಸೇವಿಸುವ ಗಾಳಿ, ಕುಡಿಯುವ ನೀರು ಎಲ್ಲವೂ ವಿಷಮಯವಾಗಿದ್ದು. ವೈದ್ಯರಿಗೆ ಸವಾಲಾಗುವಂತಹ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಹೀಗಾಗಿ ಮನುಷ್ಯ ತನ್ನ ವಿನಾಶವನ್ನು ತಾನೇ ತಂದುಕೊಳ್ಳುತ್ತಿದ್ದಾನೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !