ಆಮೆ ಕವಚದ ಬೀಟಲ್‌ ಪುಟ್ಟಹೆಜ್ಜೆ

7

ಆಮೆ ಕವಚದ ಬೀಟಲ್‌ ಪುಟ್ಟಹೆಜ್ಜೆ

Published:
Updated:

ಆಮೆಯಂತೆ ಹೊರ ರಕ್ಷಾಕವಚಧಾರಿಯಾದ ಈ ಪುಟ್ಟ ಅರ್ಧ ಇಂಚಿನ ಆಕರ್ಷಕ ಕೀಟದ ಹೆಸರು ಟೊರ್ಟೋಯಿಸ್ ಶೆಲ್ ಬೀಟಲ್. ಸಸ್ಯಗಳ ಮೆದು ಭಾಗ ತಿಂದು ನಿಧಾನಗತಿಯಲ್ಲಿ ಸಾಗುವುದು ಇದರ ವಿಶೇಷ. ಆಫ್ರಿಕಾ, ಏಷ್ಯಾದ ದಕ್ಷಿಣ-ಪೂರ್ವ ಪ್ರದೇಶ, ದಕ್ಷಿಣ ಚೀನಾ, ಭಾರತದಲ್ಲಿ ಈ ಕೀಟ ಕಾಣಸಿಗುತ್ತದೆ. ಇದರ ರೆಕ್ಕೆ-ಕೀಟ ಚಿಕ್ಕದಾಗಿದ್ದರೂ ಹೊರ ನೋಟ ಸುಂದರ.

ಬಾದಾಮಿ ಆಕಾರದ ಪಾರದರ್ಶಕ ಹೊರಕವಚದ ಮೂಲಕವೇ ಕೆಂಪು- ಹಳದಿ ಮೈಬಣ್ಣ, ಅಲ್ಲಲ್ಲಿ ಕಪ್ಪು ಮಚ್ಚೆ ಕಂಗೊಳಿಸುವುದೂ ವಿಶೇಷವೇ. ತಲೆಯ ಮುಂಭಾಗದಿಂದ ದೊಡ್ಡ ಬೆನ್ನಿನ ಮಾಟಕ್ಕೆ ಸರಿಹೊಂದಿಸಿ ಹಿಂಬದಿಯವರೆಗೆ ಸಣ್ಣ ಅಂತರ ಕಾಯ್ದು ಸಾಗುವ ಅದರ ರಕ್ಷಾ ಕವಚವು, ಇಂದಿನ ‘ಏರೋ ಡೈನಾಮಿಕ್’ ವಿನ್ಯಾಸಕ್ಕೆ ಸವಾಲೆಸೆಯುವ ಪ್ರಕೃತಿಯ ಸೃಷ್ಟಿಯೇ ಸರಿ. ಬೆಂಗಳೂರಿನ ಉದ್ಯಾನಗಳಲ್ಲಿ, ಅಲ್ಲಲ್ಲಿ ಇನ್ನೂ ಪೂರ್ತಿ ಅಳಿಯದೇ ಉಳಿದಿರುವ ಕಾಡುಮೇಡುಗಳಲ್ಲಿ ಈ ಕೀಟ ಜೀವಿಸುತ್ತಿವೆ.

ಕೀಟನಾಶಕಕ್ಕೆ ತುತ್ತಾಗಿ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ವಿದ್ಯಾರಣ್ಯಪುರದ ಸಂಭ್ರಮ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಬಳಿ ಅಭಿವೃದ್ಧಿಯ ಪಾಶಕ್ಕೆ ಇನ್ನೂ ಬಲಿಯಾಗದ ಹಸಿರು ಪ್ರದೇಶದ ಪೊದೆಗಳ ಮಧ್ಯೆ, ಮೆದು ಎಲೆಗಳನ್ನು ಸವಿಯಲು ರೆಂಬೆಯ ಮೇಲೆ ಬಂದು ಕುಳಿತಿರುವ ಈ ಪುಟ್ಟ ಬೀಟಲ್ ಕೀಟವನ್ನು ಗುರುತಿಸಿ, ಅಂತೆಯೇ ಕ್ಯಾಮೆರಾವನ್ನು ಸಜ್ಜುಗೊಳಿಸಿ ಆ ಕೀಟದ ಆ್ಯಕ್ಷನ್ ಭಂಗಿಯನ್ನು ಸೆರೆಹಿಡಿದವರು, ಅಮೆಜಾನ್ ಸಂಸ್ಠೆಯಲ್ಲಿ ಇಂಜಿನಿಯರ್ ಆಗಿರುವ ಸುಹಾಸ್ ಮುತ್ಮುರ್ಡು ಮ್ಯಾಕ್ರೋ, ಪ್ರವಾಸಿ, ಲ್ಯಾಂಡ್ ಸ್ಕೇಪ್ ಮತ್ತು ಕಲಾತ್ಮಕ ಛಾಯಾಗ್ರಹಣ ಹವ್ಯಾಸದಲ್ಲಿ ಆರು ವರ್ಷಗಳಿಂದ ತೊಡಗಿಸಿಕೊಂಡಿರುವ ಅವರು  ಛಾಯಾಗ್ರಹಣ ಲೋಕದಲ್ಲಿ ಉತ್ತಮ ಭವಿಷ್ಯದೆಡೆಗೆ ದಾಪುಗಾಲು ಹಾಕುತ್ತಿದ್ದಾರೆ.

ಸುಹಾಸ್ ಈ ಚಿತ್ರವನ್ನು ಸೆರೆ ಹಿಡಿಯಲು ಬಳಸಿದ್ದು ‘ಸೋನಿ ಎಚ್. ಎಕ್ಸ್ 400 ವಿ-ಸೀ ಎಂಡ್ ಶೂಟ್ ಕ್ಯಾಮೆರಾ’. ಅದರ ಎಕ್ಸ್‌ಪೋಷರ್‌ನ ವಿವರ ಇಂತಿವೆ: ವಸ್ತುವಿಗೆ  ಅತಿ ಸಮೀಪದ 12 ಎಂ,ಎಂ ಫೋಕಲ್ ಲೆನ್ತ್‌ನಲ್ಲಿ, ಅಪರ್ಚರ್ ಎಫ್ 5, ಶಟರ್ ವೇಗ1/ 160 ಸೆಕೆಂಡ್, ಐ.ಎಸ್.ಒ 600. ಟ್ರೈಪಾಡ್  ಮತ್ತು ಫ್ಲಾಶ್ ಬಳಸಿಲ್ಲ.

ಈ ಚಿತ್ರದೊಂದಿಗಿನ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಇಂತಿವೆ:

* ಕ್ಯಾಮೆರಾದ ಹಿಡಿತಗಳ ಮೇಲೆ ಉತ್ತಮವಾದ ಜ್ಞಾನ ಹೊಂದಿರುವ ಸಮರ್ಪಕವಾದ ಎಕ್ಸ್‌ಪೋಷರ್ ಅಂಶಗಳನ್ನು ಅಳವಡಿಸಿ ವಸ್ತುವನ್ನು ಸರಿಯಾದ ಕೋನದಿಂದ ಉತ್ತಮವಾದ ಬೆಳಕಿನಲ್ಲಿ ಸೆರೆಹಿಡಿದರೆ ಚಿತ್ರ ಹೇಗೆ ಗೆಲ್ಲಬಹುದೆಂಬುದಕ್ಕೆ ಇದು ಒಂದು ಮಾದರಿ ಪ್ರಯತ್ನ. ದುಬಾರಿ ಮ್ಯಾಕ್ರೋ ಲೆನ್ಸ್‌ ಅನ್ನು ಡಿಎಸ್ಎಲ್ಆರ್ ಕ್ಯಾಮೆರಾದಲ್ಲಿ ಅಳವಡಿಸಿಕೊಂಡರೆ ಮಾತ್ರ ಈ ಬಗೆಯ ಸೂಕ್ಷ್ಮಜೀವಿಗಳ ಯಥಾವತ್ತು ಚಿತ್ರಣ ಸಾಧ್ಯವೆಂದು ತಿಳಿದಿರುತ್ತೇವೆಯಷ್ಟೇ? ಇಲ್ಲಿ ನೋಡಿ, ‘ಸೀ ಎಂಡ್ ಶೂಟ್’ ಕ್ಯಾಮೆರಾಗಳಲ್ಲೂ ಕೆಲವೊಮ್ಮೆ ಸಿದ್ಧಿ ಪಡೆಯಬಹುದು ಎಂಬುದಕ್ಕೆ ಇದು ಸಾಕ್ಷಿ.

* ಹಲ ಬಗೆಯ ಕೀಟ, ದುಂಬಿ- ಪತಂಗ, ಬೀಟಲ್‌ಗಳು ಅತ್ಯಂತ ಚಲನಶೀಲವಾಗಿರುತ್ತವೆ. ಅತಿ ಹತ್ತಿರ ಕ್ಯಾಮೆರಾವನ್ನು ಒಯ್ದರೆ, ಅವು ಹಾರಿ ಹೋಗುತ್ತವೆ. ಆಗ ಉತ್ತಮವಾದ ಮ್ಯಾಕ್ರೋ ಇರುವ ಟೆಲಿ- ಜೂಮ್ ಲೆನ್ಸ್‌ನ ಅಳವಡಿಕೆ ಅಗತ್ಯ. ಈ ಕೀಟ ಹಾಗಲ್ಲ, ಬಲು ನಿಧಾನಿ ಮತ್ತು ಪುಕ್ಕಲೂ ಅಲ್ಲ. ನಿಮಿಷಕ್ಕೊಂದು ಹೆಜ್ಜೆ ಹಾಕುವುದೂ ಇದೆ. ಅಂತಹ ವಸ್ತು-ವಿಷಯ ಜ್ಞಾನ ಹೊಂದಿದ ಛಾಯಾಗ್ರಾಹಕ ಅಲ್ಲೂ ತಾಂತ್ರಿಕ ಹೆಚ್ಚಳವನ್ನು ಸಾಧಿಸುವುದು ಸಾಧ್ಯವೆಂಬುದನ್ನು ಈ ಚಿತ್ರ ಸಾರುತ್ತದೆ. ಮೂಲತಃ ಸಹ್ಯಾದ್ರಿಯ ತಪ್ಪಲಿನ ಮುತ್ಮುರ್ಡು ಅರಣ್ಯಪ್ರದೇಶದಲ್ಲಿ ಹುಟ್ಟಿ ಬೆಳೆದ ಸುಹಾಸ್, ಈ ಬಗೆಯ ಕಾಡಿನ ಜಂತುಗಳ ಬಗ್ಗೆ ಉತ್ತಮ ಮಾಹಿತಿಯನ್ನು ಸಹಜವಾಗಿಯೇ ಪಡೆದಿದ್ದರಿಂದ, ಬೆಂಗಳೂರಿನ ಸಂದರ್ಭದಲ್ಲೂ ಅದು ಉಪಯೋಗಕ್ಕೆ ಬಂದಿದೆ.

* ನೋಡುಗರ ಬರಿಗಣ್ಣಿಗೆ ಕೂಡಲೆ ಕಾಣಿಸದಷ್ಟು ಚಿಕ್ಕದಾದ ಈ ಕೀಟದ ಮೀಸೆ, ಕಣ್ಣು, ಬಾಯಿ, ಹೊಟ್ಟೆ, ಕವಚ, ಎಲ್ಲದರ ವಿರಾಟ ಸ್ವರೂಪವನ್ನು ಕೇವಲ ದಾಖಲೆಗಷ್ಟೇ ಮೀಸಲಿಡದೆ, ಅವೆಲ್ಲವನ್ನೂ ಒಂದು ಬೃಹತ್ ಕ್ಯಾನ್ವಾಸ್ ಮೇಲೆ ವರ್ಣರಂಜಿತವಾಗಿ ಚಿತ್ರಿಸಿರುವಂತಿದೆ ಈ ಚೌಕಟ್ಟು. ಇದಕ್ಕೇ ಕಲಾತ್ಮಕತೆ ಎನ್ನುವುದು. ಅಂದರೆ ಇದೊಂದು ಕೇವಲ ಛಾಯಾಚಿತ್ರವಾಗಿಯಷ್ಟೇ ಆಲ್ಲದೇ ನೋಡುಗನ ಕಣ್ಣನ್ನು, ಒಮ್ಮೆಲೇ ತನ್ನೆಡೆಗೆ ಸೆಳೆಯುವ ಗುಣ ಹೊಂದಿದೆ. ಹೀಗಾಗಿ, ಈ ಚಿತ್ರ ಕಲಾಕೃತಿ ಎನಿಸುತ್ತದೆ. ಆ ಸಾಧ್ಯತೆ ಈ ಚಿತ್ರಕ್ಕಿದೆಯೆಂದು ವಿಶ್ಲೇಷಿಸಬಹುದು.

* ಈ ಚೌಕಟ್ಟಿನಲ್ಲಿನ ಓರೆಯಾದ ರೇಖಾವಿನ್ಯಾಸ ಮತ್ತು ಹಿತವಾದ ಬಣ್ಣಗಳು ನಿಜಕ್ಕೂ ವಿಶೇಷ. ಕೀಟ ಬರಿದೇ ಕುಳಿತಿರುವಂತಿದ್ದರೂ, ಅದರ ಮೇಲ್ಕವಚದ ರೇಖಾಗತಿಯು ಕೆಳಭಾಗದ ಬಲ ಬದಿಯಿಂದ ಮುಂದೆ ಚೌಕಟ್ಟಿನ ಎಡಭಾಗದ ಮೇಲ್ ಬದಿಯೆಡೆಗೆ ಸಾಗುವಂತಿದ್ದು, ಹಾಗೂ ಅದರ ಮುಖಭಾಗದೆದುರು ಸಾಕಷ್ಟು ‘ರಿಲೀಫ್’ ಇರುವುದು, ಅದಕ್ಕೆ ‘ಡಯಾಗೊನಾಲ್ ಕಾಂಪೊಶಿಷನ್’ನ ಮೆರುಗು ತಂದಿದೆ. ಅಂದರೆ ವಸ್ತುವಿಗೆ ತನ್ನ ಆಹಾರದೆಡೆ ತ್ವರಿತವಾಗಿ ನೆಗೆಯುವ ತವಕವಿರುವ ‘ಚಲನೆ’ಯನ್ನು ಸೂಚಿಸುತ್ತಿದೆ. ಕೆಂಪು-ಹಳದಿ ಮೈ ಬಣ್ಣದ ಕೀಟಕ್ಕೆ ಹಳದಿ- ಕಂದು ಬಣ್ಣದ ಪೊದೆಯೊಂದರ ಕಾಂಡ, ಸುತ್ತಲ ಹಿನ್ನೆಲೆಯ ಕಡು ಹಸಿರು ಪರಿಸರ ಎಲ್ಲವೂ ಉತ್ತಮವಾದ ವರ್ಣ ಸಾಮರಸ್ಯವನ್ನು ನೀಡು ತ್ತಿರುವುದು ಚಿತ್ರದ ಸೌಂದರ್ಯವನ್ನು ಹೆಚ್ಚಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !