‘ಕಾಡಿನ ಮಕ್ಕಳ’ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಮನ್ನಣೆ

7

‘ಕಾಡಿನ ಮಕ್ಕಳ’ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಮನ್ನಣೆ

Published:
Updated:
Deccan Herald

ದಟ್ಟ ಕಾನನ... ದೂರದೂರದಲ್ಲಿ ಚದುರಿರುವ ರೀತಿಯಲ್ಲಿ ಅಲ್ಲೊಂದಿಲ್ಲೊಂದು ಮನೆಗಳು. ಅವುಗಳ ಹಿಂದೆ, ಅಕ್ಕಪಕ್ಕದಲ್ಲಿರುವ ಸೊಪ್ಪಿನ ಬೆಟ್ಟಗಳಿಂದ ಕೇಳಿಬರುವ ಕಾಡುಬೆಕ್ಕು, ನವಿಲು, ಕಾಡೆಮ್ಮೆ, ಚಿರತೆ ಮುಂತಾದ ವನ್ಯಜೀವಿಗಳ ಸಂಭಾಷಣೆ...

ಈ ರೀತಿಯ ವಾತಾವರಣ ಕಾಣಸಿಗುವುದು ಅರಣ್ಯವೇ ಪ್ರಧಾನವಾಗಿರುವ ನಮ್ಮ ನೆರೆಯ ಉತ್ತರ ಕನ್ನಡ ಜಿಲ್ಲೆಯಲ್ಲಿ.

ಒಂದೆಡೆ ಅರಣ್ಯ ಸಂರಕ್ಷಣೆಯ ಅಗತ್ಯದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ, ಜಾಗೃತಿ– ಅರಿವು ಶಿಬಿರಗಳ ಸಾಲು ಸಾಲು ಆಯೋಜನೆ. ಮತ್ತೊಂದೆಡೆ ಹಸಿರಿನ ರಾಶಿ ಮತ್ತು ವನ್ಯಜೀವಿಗಳನ್ನು ಅವುಗಳಿಗೆ ತೊಂದರೆಯಾಗದಂತೆ ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಯ ಚಿಂತನೆ ಉಚ್ಛ್ರಾಯ ಮಟ್ಟಕ್ಕೆ ತಲುಪಿರುವ ದಿನಗಳು. ಈ ಎರಡೂ ರೀತಿಯ ಸನ್ನಿವೇಶಗಳು ಈ ಜಿಲ್ಲೆಯಲ್ಲಿ ಕಾಣಸಿಗುತ್ತಿವೆ.

ಜೀವವೈವಿಧ್ಯದ ಕೇಂದ್ರವಾಗಿರುವ ಪಶ್ಚಿಮಘಟ್ಟದ ಮಧ್ಯಭಾಗದಲ್ಲಿರುವ ದಾಂಡೇಲಿ, ಜೊಯಿಡಾ, ಶಿರಸಿ, ಸಿದ್ದಾಪುರ, ಕಾರವಾರ, ಕುಮಟಾ ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿ ಇಂದು ಪ್ರವಾಸೋದ್ಯಮ ಹಿಂದೆಂದಿಗಿಂತಲೂ ಅಧಿಕ ಬೆಳವಣಿಗೆ ಕಾಣುತ್ತಿದೆ. ಇದರಲ್ಲಿ ಕಾಳಿ ಹುಲಿ ಸಂರಕ್ಷಿತ ವಲಯದ ಕೊಡುಗೆ ಅತ್ಯಧಿಕವಿದೆ.

ಏನೇನಿವೆ?: ದಾಂಡೇಲಿ, ಜೊಯಿಡಾ ಮತ್ತು ಕಾರವಾರ ತಾಲ್ಲೂಕುಗಳಲ್ಲಿ ಚಾಚಿಕೊಂಡಿರುವ ಕಾಳಿ ಹುಲಿ ಸಂರಕ್ಷಿತ ವಲಯವು ಕೇವಲ ಹುಲಿಗಳ ಆವಾಸ ಸ್ಥಾನವಲ್ಲ. ಅಲ್ಲಿ ಯಾವ್ಯಾವ ಪ್ರಾಣಿ, ಪಕ್ಷಿಗಳಿವೆ ಎಂಬುದಕ್ಕಿಂತ ಯಾವುದು ಇಲ್ಲ ಎಂಬುದು ಹೆಚ್ಚು ಸೂಕ್ತ ಎಂದರೆ ತಪ್ಪಲ್ಲ!

ಕೆಟಿಆರ್ ಎಂದೇ ಪ್ರಸಿದ್ಧವಾಗಿರುವ ಈ ಅರಣ್ಯ ಪ್ರದೇಶದಲ್ಲಿ ಹುಲಿಗಳು, ಅತ್ಯಂತ ಅಪರೂಪದ ಕರಿ ಚಿರತೆಗಳು, ಚುಕ್ಕೆ ಚಿರತೆಗಳು, ಕಾಡೆಮ್ಮೆಗಳು, ಜಿಂಕೆಗಳು, ಕೆಂದಳಿಲು, ವಿವಿಧ ಪ್ರಭೇದಗಳ ಕೋತಿಗಳು, ನಾಗರಹಾವು, ಕಾಳಿಂಗ ಸರ್ಪ, ಹೆಬ್ಬಾವು, ಕಾಳಿ ನದಿಯಲ್ಲಿ ಮೊಸಳೆಗಳು, ಅಕ್ಕಪಕ್ಕದ ಮರಗಳಲ್ಲಿ ಮನೆ ಮಾಡಿರುವ ದೈತ್ಯಾಕಾರದ ಮಂಗಟ್ಟೆ ಪಕ್ಷಿಗಳು... ಹೀಗೆ ಪಟ್ಟಿ ಮಾಡುತ್ತಾ ಹೋದಂತೆ ಅವುಗಳ ಹೆಸರು ಹೆಚ್ಚುತ್ತಾ ಹೋಗುತ್ತದೆ.

ಹಾಗಿದ್ದರೆ ಅವುಗಳ ಸರಂಕ್ಷಣೆಗೆ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳೇನು? ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಿದ್ದರೂ ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಇಲ್ಲೇಕೆ ಮಾನವ– ಪ್ರಾಣಿ ಸಂಘರ್ಷ ಕಡಿಮೆಯಾಗಿದೆ? ಈ ಪ್ರಶ್ನೆಗಳಿಗೆ ಕೆಟಿಆರ್‌ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ ಉತ್ತರಿಸಿದ್ದು ಹೀಗೆ.

‘ನಮ್ಮ ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಚೆನ್ನಾಗಿದೆ. ಕಾಡಿನ ಜೀವಿಗಳ ಸಂರಕ್ಷಣೆಗೆ ನಾವು ಹಾಕಿಕೊಂಡಿರುವ ಕಾರ್ಯಕ್ರಮಗಳು ಬಹಳ ಉತ್ತಮ ಫಲಿತಾಂಶ ನೀಡುತ್ತಿವೆ. ನಮ್ಮ ಸಿಬ್ಬಂದಿ ಅವುಗಳನ್ನು ಕಾಪಾಡಲು ಸದಾ ಸನ್ನದ್ಧರಾಗಿದ್ದಾರೆ’ ಎನ್ನುತ್ತಾರೆ.

ಅಲ್ಲೊಂದು ಇಲ್ಲೊಂದು ಪ್ರಕರಣಗಳನ್ನು ಹೊರತುಪಡಿಸಿದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷದ ಸುದ್ದಿಗಳು ಕೇಳಿಬರುವುದು ತೀರಾ ಕಡಿಮೆ. ಆದರೆ, ಇದಕ್ಕೂ ಮಿಗಿಲಾದ ಕೆಲಸವಾಗಬೇಕಿದೆ ಎನ್ನುವುದು ಪರಿಸರ ಬರಹಗಾರ ಶಿವಾನಂದ ಕಳವೆ ಅವರ ಅನಿಸಿಕೆ

ವಿವಿಧ ಕಾಮಗಾರಿಗಳ ಸಲುವಾಗಿ ಕಾಡಿನೊಳಗೆ ಜೆಸಿಬಿಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಕೊಳವೆಬಾವಿ ಕೊರೆಯುವುದು, ವಿದ್ಯುತ್ ಕಂಬಗಳ ಅಳವಡಿಕೆಯಂತಹ ಕಾಮಗಾರಿಗಳು ಹೆಚ್ಚುತ್ತಿವೆ. ಹುಲ್ಲುಗಾವಲಿನಲ್ಲಿ ಮಾಡಲಾಗುತ್ತಿರುವ ಅಕೇಶಿಯಾ ನೆಡುತೋಪಿನಿಂದ ಪ್ರಯೋಜನವಿಲ್ಲ. ಈಗ ಪ್ರಾಣಿಗಳಿಗೆ ವಸತಿಯಿದೆ, ಆದರೆ ಆಹಾರವಿಲ್ಲ ಎಂಬುದು ಅವರ ಆಕ್ಷೇಪವಾಗಿದೆ.

ಈ ಹಿಂದೆ ವನ್ಯಜೀವಿಗಳ ಚಲನವಲನ ತಿಳಿಯುತ್ತಿತ್ತು. ಯಾರಾದರೂ ತಮ್ಮ ಆಕಳನ್ನು ಹುಲಿಯೋ, ಚಿರತೆಯೋ ಕೊಂದಿದೆ ಎಂದು ಮಾಹಿತಿ ನೀಡುತ್ತಿದ್ದರು. ಆದರೆ, ಈಗ ಇಂತಹ ಸೂಕ್ಷ್ಮತೆಯನ್ನು ಇಲಾಖೆ ಕಳೆದುಕೊಂಡಿದೆ. ಅಧಿಕಾರಿಗಳಿಗೆ ಜನರ ಜತೆ ಬೆರೆಯುವ ಬದಲು ತಮ್ಮ ವೃತ್ತಿಯ ಭದ್ರತೆಯ ಕಡೆಗೆ ಆಸಕ್ತಿ ಹೆಚ್ಚಿದೆ ಎಂಬುದು ಅವರ ಆರೋಪವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !