ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ‘ರಾಜ ಹುಲಿ’ ಸಾವು

Last Updated 11 ಜುಲೈ 2022, 15:36 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತದ ಅತ್ಯಂತ ಹಿರಿಯ ವಯಸ್ಸಿನ ಹುಲಿಗಳಲ್ಲಿ ಒಂದಾದ ‘ರಾಜ’, ಸೋಮವಾರ ಪಶ್ಚಿಮ ಬಂಗಾಳದ ಅಲಿಪುರ್ದಾರ್ ಜಿಲ್ಲೆಯ ಜಲ್ದಪರದಲ್ಲಿರುವ ‘ಖೈರಿಬರಿ ಹುಲಿ ಮತ್ತು ಚಿರತೆ ರಕ್ಷಣಾ ಕೇಂದ್ರ’ದಲ್ಲಿ ಮೃತಪಟ್ಟಿದೆ.

ಈ ಹುಲಿಗೆ 25 ವರ್ಷ 10 ತಿಂಗಳು ವಯಸ್ಸಾಗಿತ್ತು ಎಂದು ಜಲ್ದಪರದದ ವಿಭಾಗೀಯ ಅರಣ್ಯಾಧಿಕಾರಿ ಎಂ.ದೀಪಕ್ ತಿಳಿಸಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಮ್ಯಾಂಗ್ರೋವ್ ಅರಣ್ಯ ಮತ್ತು ಬಂಗಾಳದ ಹುಲಿಗಳ ವಾಸಸ್ಥಾನವಾದ ಸುಂದರಬನ್‌ನಲ್ಲಿ ಮೊಸಳೆ ದಾಳಿಯಿಂದ ಗಾಯಗೊಂಡಿದ್ದ ಈ ವ್ಯಾಘ್ರನನ್ನು ಆಗಸ್ಟ್ 2008ರಲ್ಲಿ ರಕ್ಷಣಾ ಕೇಂದ್ರಕ್ಕೆ ತರಲಾಗಿತ್ತು ಎಂದು ದೀಪಕ್‌ ಹೇಳಿದರು.

‘ಅಂದಿನಿಂದ, ರಾಜ ಇಲ್ಲಿಯೇ ಇತ್ತು. ರಕ್ಷಣಾ ಕೇಂದ್ರದ ಭಾಗವಾಗಿತ್ತು’ ಎಂದೂ ಅವರು ತಿಳಿಸಿದ್ದಾರೆ.

‘ರಾಜ ಕಳೆದ ಕೆಲವು ತಿಂಗಳುಗಳಿಂದ ವಯೋ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿತ್ತು. ಬಹು ಅಂಗಾಂಗ ವೈಫಲ್ಯದ ಹಿನ್ನೆಲೆಯಲ್ಲಿ ಸೋಮವಾರ ಮುಂಜಾನೆ ಮೃತಪಟ್ಟಿದೆ’ ಎಂದು ದೀಪಕ್ ಹೇಳಿದರು. ಸಾವಿನ ಸಮಯದಲ್ಲಿ ಹುಲಿಯು ಸುಮಾರು 140 ಕೆಜಿ ತೂಕವಿತ್ತು ಎಂದು ಅವರು ತಿಳಿಸಿದ್ದಾರೆ.

ಖೈರಿಬರಿ ಹುಲಿ ಮತ್ತು ಚಿರತೆ ರಕ್ಷಣಾ ಕೇಂದ್ರಕ್ಕೆ ಆಗಮಿಸಿದ ಅಲಿಪುರ್ದೂರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುರೇಂದ್ರ ಕುಮಾರ್ ಮೀನಾ ಅವರು ಹುಲಿ ‘ರಾಜ’ಗೆ ಪುಷ್ಪ ನಮನ ಸಲ್ಲಿಸಿದರು.

‘ನಾನು ಇಂದು ತುಂಬಾ ದುಃಖಿತನಾಗಿದ್ದೇನೆ. ನಿಯಮಗಳ ಪ್ರಕಾರ, ಮೊದಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ನಂತರ ಮೃತದೇಹವನ್ನು ಸುಡಲಾಯಿತು’ ಎಂದು ಮೀನಾ ಸುದ್ದಿಗಾರರಿಗೆ ತಿಳಿಸಿದರು.

‘ರಾಜ’ ಸ್ಮರಣಾರ್ಥ ಖೈರಿಬರಿ ಹುಲಿ ಮತ್ತು ಚಿರತೆ ರಕ್ಷಣಾ ಕೇಂದ್ರದಲ್ಲಿ ಸ್ಮಾರಕ ನಿರ್ಮಿಸಲು ಚಿಂತಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT