ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ರೆಕ್ಕೆಗಳ ಸುಂದರ ಕಪ್ಪುಹಕ್ಕಿ

Last Updated 1 ಅಕ್ಟೋಬರ್ 2019, 7:01 IST
ಅಕ್ಷರ ಗಾತ್ರ

ಬಣ್ಣ ಬಣ್ಣದ ಪುಕ್ಕದಿಂದಲೇ ಕೆಲವು ಹಕ್ಕಿಗಳು ಗಮನ ಸೆಳೆಯುತ್ತವೆ. ಈ ಹಕ್ಕಿ ಕೂಡ ತನ್ನ ಚಿತ್ತಾಕರ್ಷಕ ಸೊಬಗಿನಿಂದಲೇ ಆಕರ್ಷಿಸುತ್ತಿದೆ. ಇದು ಕೆಂಪು ರೆಕ್ಕೆಗಳ ಕಪ್ಪು ಪುಕ್ಕದ ಹಕ್ಕಿ ( Red-Winged Blackbird). ಇಂದಿನ ಪಕ್ಷಿ ಪ್ರಪಂಚದಲ್ಲಿ ಈ ಸುಂದರ ಹಕ್ಕಿಯ ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಅಗೆಲಾಯಿಸ್‌ ಫೊಯೆನಿಸೆಯಸ್‌ (Agelaius phoeniceus). ಇದು ಇಸ್ಟೆರಿಡೇ (Icteridae) ಹಕ್ಕಿಗಳ ಕುಟುಂಬಕ್ಕೆ ಸೇರಿದ್ದು, ಪಾಸೆರಿಫಾರ್ಮ್ಸ್‌ (Passeriformes) ಹಕ್ಕಿಗಳ ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ದೇಹವೆಲ್ಲಾ ನಯವಾದ ಕಪ್ಪು ಬಣ್ಣದ ಪುಕ್ಕದಿಂದ ಕೂಡಿದ್ದು, ಕತ್ತು ಮತ್ತು ತಲೆಯ ಭಾಗದಲ್ಲಿ ದಟ್ಟವಾಗಿ ಪುಕ್ಕ ಬೆಳೆದಿರುತ್ತದೆ. ರೆಕ್ಕೆಗಳೂ ಕಪ್ಪುಬಣ್ಣದಲ್ಲಿರುತ್ತವೆ. ಆದರೆ ರೆಕ್ಕೆಯ ಮೇಲ್ಭಾಗದ ಅಂಚುಗಳು ಮಾತ್ರ ಕೆಂಪು ಬಣ್ಣದಲ್ಲಿರುತ್ತವೆ. ಕೆಂಪುಬಣ್ಣದ ಕೆಳಗೆ ತಿಳಿಹಳದಿ ಬಣ್ಣವೂ ಇರುತ್ತದೆ. ಬಾಲ ನೀಳವಾಗಿದ್ದು, ಪುಕ್ಕ ದಟವಾಗಿ ಬೆಳೆದಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಪ್ಪುಬಣ್ಣದಲ್ಲಿರುತ್ತವೆ. ಕಪ್ಪು ಬಣ್ಣದ ಕೊಕ್ಕು ಪುಟ್ಟದಾಗಿದ್ದರೂ ದೃಢವಾಗಿರುತ್ತದೆ. ಕಾಲುಗಳು ಚಿಕ್ಕದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಕಾಲುಗಳ ಮೇಲೆ ಪೊರೆಬಿಟ್ಟಂತೆ ಬಿಳಿ ಚರ್ಮದ ಪದರ ಇರುತ್ತದೆ. ರೆಕ್ಕೆಗಳನ್ನು ಅಗಲಿಸಿದಾಗ ಕೆಂಪುಬಣ್ಣ ಆಕರ್ಷಕವಾಗಿ ಕಾಣಿಸುತ್ತದೆ.

ಎಲ್ಲಿದೆ?

ಕೆನಡಾ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆರೇಬಿಯನ್ ದ್ವೀಪ, ನಿಕರಾಗುವಾ, ಹೊಂಡುರಸ್‌, ದೇಶಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ವಾತಾವರಣಕ್ಕೆ ಅನುಗುಣವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಇದು ವಲಸೆ ಹೋಗುತ್ತಿರುತ್ತದೆ. ಸಿಹಿನೀರು ಮತ್ತು ಉಪ್ಪು ನೀರು ಇರುವಂತಹ ಕೆರೆ, ಸರೋವರ, ನದಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದು ವಾಸಿಸುತ್ತದೆ. ಪುಟ್ಟಗಿಡಗಳು, ಪೊದೆಗಿಡಗಳು, ಜೌಗು ಪ್ರದೇಶಗಳಲ್ಲಿ ಇದು ವಾಸಿಸುತ್ತದೆ. ಕೃಷಿ ಭಮಿಯಲ್ಲೂ ಕಾಣಿಸಿಕೊಳ್ಳುತ್ತದೆ.

ಜೀವನಕ್ರಮ ಮತ್ತು ವರ್ತನೆ

ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಈ ಹಕ್ಕಿ ಸದಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಗುಂಪಿನಲ್ಲೇ ವಲಸೆ ಹೋಗುತ್ತಿರುತ್ತದೆ. ಒಂದು ಗುಂಪಿನಲ್ಲಿ ಸಾವಿರಾರೂ ಹಕ್ಕಿಗಳು ಇರುತ್ತವೆ. ಹಗಲೆಲ್ಲಾ ಆಹಾರ ಅರಸುತ್ತಾ ಸುತ್ತುತ್ತಿರುತ್ತದೆ. ಕತ್ತಲಾಗುತ್ತಿದ್ದಂತೆಯೇ ಮರಗಳ ಮೇಲೆ ವಿಶ್ರಾಂತಿ ಪಡೆಯುತ್ತವೆ. ಬೇಸಿಗೆಯಲ್ಲಿ ಜೌಗು ಪ್ರದೇಶಗಳಲ್ಲಿದ್ದರೆ, ಚಳಿಗಾಲದಲ್ಲಿ ಗುಂಪು ಸೇರಿ ಶುಷ್ಕ ವಾತಾವರಣ ಇರುವಂತಹ ಪ್ರದೇಶಗಳಲ್ಲಿ ವಾಸಿಸುತ್ತದೆ.ಗಿಡಗಳ ಮೇಲೆ ವಾಲಿದಾಗ ತಮ್ಮ ಪುಕ್ಕ ಕೊಕ್ಕಿನಿಂದ ಎಲೆಗಳನ್ನು ಬಿಡಿಸುತ್ತಾ ಹುಳುಗಳನ್ನು ಹುಡುಕುತ್ತದೆ. ವಿವಿಧ ಶಬ್ದಗಳನ್ನು ಹೊರಡಿಸಿ ಸಂವಹನ ನಡೆಸುತ್ತದೆ. ಬಗೆ ಬಗೆಯ ಹಾರುತ್ತಾ ಆಕಾಶದಲ್ಲಿ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುತ್ತದೆ.

ಆಹಾರ

ಇದು ಸರ್ವಭಕ್ಷಕ ಹಕ್ಕಿ. ವಿವಿಧ ಬಗೆಯ ಕಾಳುಗಳೇ ಇದರ ಪ್ರಮುಖ ಆಹಾರ. ವಿವಿಧ ಬಗೆಯ ಕೀಟಗಳು, ಜೇಡ ಹುಳುಗಳು, ಬಸನವಹುಳು, ಪುಟ್ಟಗಾತ್ರದ ಮೀನು, ಕಪ್ಪೆ, ಹಲ್ಲಿ, ಕೆಲವು ಹಕ್ಕಿಗಳ ಪುಟ್ಟ ಮೊಟ್ಟೆಗಳು ಮತ್ತು ಆಗಾಗ್ಗೆ ವಿವಿಧ ಬಗೆಯ ಹಣ್ಣುಗಳು ಮತ್ತು ಬೆರ್‍ರಿಗಳನ್ನು ತಿನ್ನುತ್ತದೆ.

ಸಂತಾನೋತ್ಪತ್ತಿ

ಪ್ರತಿ ಅವಧಿಯಲ್ಲೂ ಗಂಡು ಮತ್ತು ಹೆಣ್ಣು ಹಕ್ಕಿಗಳು ಬೇರೆ ಬೇರೆ ಹಕ್ಕಿಗಳೊಂದಿಗೆ ಕೂಡುತ್ತವೆ. ಈ ಅವಧಿಯಲ್ಲಿ ಹೆಣ್ಣು ಹಕ್ಕಿಗಳ ಗಮನ ಸೆಳೆಯಲು ಗಂಡು ಹಕ್ಕಿಗಳು ವಿವಿಧ ಕಸರತ್ತುಗಳನ್ನು ನಡೆಸುತ್ತವೆ. ಪುಕ್ಕ ಅರಳಿಸಿ ವಿವಿಧ ಭಂಗಿಗಳಲ್ಲಿ ಹಾರುತ್ತವೆ. ವಿವಿಧ ಶಬ್ದಗಳನ್ನು ಹೊರಡಿಸುತ್ತಾ ಕಿರುಚುತ್ತವೆ. ಹೆಣ್ಣು ಹಕ್ಕಿಗೆ ಇಷ್ಟವಾದರೆ ಗಂಡು ಹಕ್ಕಿಯೊಂದಿಗೆ ಜೊತೆಯಾಗುತ್ತದೆ. ಪೊದೆಗಳು, ಕುರುಚಲು ಗಿಡಗಳು ಬೆಳೆದಿರುವ ಪ್ರದೇಶಗಳಲ್ಲಿ ಹೆಣ್ಣು ಹಕ್ಕಿ ಬಟ್ಟಲಿನಾಕಾರದ ಗೂಉಡ ಕಟ್ಟುತ್ತದೆ. ನೀಲಿ ಮತ್ತು ಹಸಿರು ಬಣ್ಣ ಮಿಶ್ರಿತ ಕಂದು ಚುಕ್ಕಿಗಳಿರುವ 3ರಿಂದ 7 ಮೊಟ್ಟೆಗಳನ್ನು ಇಡುತ್ತದೆ. 11ರಿಂದ 13 ದಿನಗಳವರೆಗೆ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಮೊಟ್ಟೆಯಿಂದ ಹೊರಬಂದ ಮರಿಗಳು 11ರಿಂದ 14 ದಿನಗಳ ನಂತರ ಗೂಡು ಬಿಟ್ಟು ಜೀವಿಸಲು ಆರಂಭಿಸುತ್ತವೆ. ಮರಿಗಳಿಗೆ ಆಹಾರ ಉಣಿಸಿ ಬೆಳೆಸುವ ಜವಾಬ್ದಾರಿ ಹೆಣ್ಣು ಹಕ್ಕಿಯ ಮೇಲೆ ಇದ್ದರೂ ಗಂಡು ಹಕ್ಕಿಯ ನೆರವು ಪಡೆಯುತ್ತದೆ. ಮೂರು ವಾರಗಳ ನಂತರ ಸ್ವತಂತ್ರವಾಗಿ ಆಹಾರ ಹುಡುಕಲು ಆರಂಭಿಸುತ್ತದೆ.

ಸ್ವಾರಸ್ಯಕರ ಸಂಗತಿಗಳು

ಬೀಜಗಳನ್ನು ಪುಡಿಮಾಡಲು, ಹಾರುವ ಕೀಟಗಳನ್ನು ಹಿಡಿಯಲು, ಇತರೆ ಜೀವಿಗಳ ಮೇಲೆ ದಾಳಿ ಮಾಡಲು ಈ ಹಕ್ಕಿ ತನ್ನ ಕೊಕ್ಕನ್ನೆ ಬಳಸಿಕೊಳ್ಳುತ್ತದೆ.ಉತ್ತರ ಅಮೆರಿಕ ಖಂಡದಲ್ಲಿ ಹೆಚ್ಚಾಗಿ ಕಾಣಸಿಗುವ ಹಕ್ಕಿಗಳಲ್ಲಿ ಇದು ಕೂಡ ಒಂದು.

ಸಂತಾನೋತ್ಪತ್ತಿ ಅವಧಿಯಲ್ಲಿ ಗಂಡು ಹಕ್ಕಿ ಹೆಚ್ಚು ಆಕ್ರಮಣಕಾರಿ ಸ್ವಭಾವ ತೋರುತ್ತದೆ. ಈ ಅವಧಿಯಲ್ಲಿ ನಿರ್ದಿಷ್ಟ ಗಡಿ ಗುರುತಿಸಿಕೊಳ್ಳುತ್ತದೆ. ಗಡಿಯೊಳಗೆ ಯಾವ ಪ್ರಾಣಿ ಬಂದರೂ ಸಹಿಸುವುದಿಲ್ಲ. ಕುದುರೆ, ಮನುಷ್ಯರ ಮೇಲೂ ದಾಳಿ ಮಾಡಿದ ಉದಾಹರಣೆಗಳಿವೆ.ಕ್ಯಾಲಿಫೋರ್ನಿಯಾದಲ್ಲಿ ಕಾಣಸಿಗುವ ಹಕ್ಕಿಗಳ ರೆಕ್ಕೆಗಳ ಅಂಚುಗಳಲ್ಲಿ ಹಳದಿ ಬಣ್ಣ ಇರುವುದಿಲ್ಲ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 32ರಿಂದ 77 ಗ್ರಾಂ, ರೆಕ್ಕೆಗಳ ಅಗಲ-31ರಿಂದ 40 ಸೆಂ.ಮೀ ,ದೇಹದ ಉದ್ದ -17ರಿಂದ 23 ಸೆಂ.ಮೀ, ಹಾರುವ ವೇಗ- 48 ಕಿ.ಮೀ/ಗಂಟೆಗೆ ,ಜೀವಿತಾವಧಿ- 2ರಿಂದ16 ವರ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT