ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನ್ಮ ರಹಸ್ಯ’ ಬಿಡಿಸಿದ ಹುಲಿ ಕೇಶ!

ಕೂದಲಿನಿಂದ ಡಿಎನ್‌ಎ ಅನುಕ್ರಮಣಿಕೆಯಿಂದ ವಂಶ ವೃಕ್ಷ ಪತ್ತೆಮಾಡಿದ ಎನ್‌ಸಿಬಿಎಸ್‌ ವಿಜ್ಞಾನಿಗಳು
Last Updated 18 ಮೇ 2020, 22:15 IST
ಅಕ್ಷರ ಗಾತ್ರ

ಬೆಂಗಳೂರು:ಹುಲಿ ಅತ್ಯಂತ ಸುಂದರ ಮತ್ತು ಅಪರೂಪದ ಜೀವಿ. ಆದರೆ, ಅವುಗಳ ಕೌಟುಂಬಿಕ ಸಂಬಂಧಗಳ ಕವಲನ್ನು, ವಂಶವೃಕ್ಷವನ್ನು ಅರಿಯುವುದಂತೂ ಬಹಳ ಕಷ್ಟವೇ ಸರಿ. ಆಧುನಿಕ ತಂತ್ರಜ್ಞಾನ ಈಗ ಅದನ್ನು ಸರಳವಾಗಿಸಿದೆ. ಇದಕ್ಕೆ ಹುಲಿಯ ಒಂದೇ ಒಂದು ಕೂದಲು ಇದ್ದರೆ ಸಾಕು!

ಹಾಗೆಂದು ಹುಲಿಗಳಿರುವ ಜಾಗಕ್ಕೇ ಹೋಗಿ ಕೂದಲು ಅಥವಾ ರೋಮವನ್ನು ಕಿತ್ತುಕೊಂಡು ಬರುವ ಸಾಹಸಕ್ಕೆ ಕೈ ಹಾಕಬೇಕಿಲ್ಲ. ಎಲ್ಲೋ ಬಿದ್ದಿರುವ ಹುಲಿ ಕೇಶವನ್ನು ಎತ್ತಿಕೊಂಡು ಬಂದು ಡಿಎನ್‌ಎ ಅನುಕ್ರಮಣಿಕೆಗೆ ಒಳಪಡಿಸಿದರೆ ಸಾಕು ಅದರ ಜನ್ಮ ಜಾತಕವನ್ನೇ ಬಿಡಿಸಿಡಲು ವಿಜ್ಞಾನಿಗಳಿಗೆ ಸಾಧ್ಯವಿದೆ.

ಬೆಂಗಳೂರಿನ ಎನ್‌ಸಿಬಿಎಸ್‌ ಸಂಸ್ಥೆಯು ರಾಜಸ್ತಾನದ ಅರಣ್ಯ ಇಲಾಖೆ ಮತ್ತು ಮೆಡ್‌ಜಿನೋಮ್‌ ಲ್ಯಾಬ್‌ ಸೇರಿ ರಣಥಂಭೊರ್‌‌ ಅರಣ್ಯದಲ್ಲಿ ಹುಲಿಯಿಂದ ಉದುರಿದ ಕೂದಲನ್ನು ತಂದು ಡಿಎನ್‌ಎ ಅನುಕ್ರಮಣಿಕೆ ಬಿಡಿಸಿಡಲು ಮುಂದಾಯಿತು. ಅಚ್ಚರಿ ಸಂಗತಿ ಎಂದರೆ, ಒಂದೇ ಒಂದು ಕೂದಲಿನಿಂದ ನಿರ್ದಿಷ್ಟ ಹುಲಿಗೆ(ಟಿ4) ಸಂಬಂಧಿಸಿದಂತೆ ಲಕ್ಷಗಟ್ಟಲೆ ಆನುವಂಶಿಕ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಎನ್‌ಸಿಬಿಎಸ್‌ ವಿಜ್ಞಾನಿಗಳು ತಿಳಿಸಿದ್ದಾರೆ.

ರಣಥಂಬೋರ್‌ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾಗ, ಒಂದು ಹುಲಿ ಕಣ್ಣಿಗೆ ಬಿದ್ದಿತು. ಅದು ಸಾಕಷ್ಟು ದೂರದಲ್ಲಿದ್ದ ಪೊದೆಯ ಪಕ್ಕದಲ್ಲೇ ಕುಳಿತು ವಿಶ್ರಮಿಸುತ್ತಿತ್ತು. ಹುಲಿ ಅಲ್ಲಿಂದ ಹೋದ ಬಳಿಕ ಆ ಜಾಗದಲ್ಲಿ ಅದರ ಕೂದಲು ಬಿದ್ದಿತ್ತು ಕಂಡು ಬಂದಿತು. ಅದನ್ನು ಆಯ್ದುಕೊಂಡು ಪ್ರಯೋಗಾಲಯಕ್ಕೆ ಕಳಿಸಲಾಯಿತು.

ಕೂದಲನ್ನು ಡಿಎನ್‌ಎ ಅನುಕ್ರಮಣಿಕೆಗೆ ಒಳಪಡಿಸಲಾಯಿತು. ಅಚ್ಚರಿಯೆಂದರೆ, ಹುಲಿಯ ಮಲದ ಸ್ಯಾಂಪಲ್‌ ಬಳಸಿ ಡಿಎಎನ್‌ ಪರೀಕ್ಷೆಗಿಂತಲೂ ಸರಳ ಮತ್ತು ಪರಿಣಾಮಕಾರಿ ಎನಿಸಿತು. ಅಲ್ಲದೆ, ರಕ್ತದ ಮಾದರಿಯಿಂದ ನಡೆಸಿದ ಪರೀಕ್ಷೆಯಿಂದ ಲಭಿಸಿದ ಮಾಹಿತಿಗೂ ಕೂದಲಿನ ಡಿಎನ್‌ಎ ಅನುಕ್ರಮಣಿಕೆ ಮಾಹಿತಿಗೂ ಯಥಾವತ್‌ ತಾಳೆ ಆಗಿತ್ತು. ಮುಖ್ಯವಾಗಿ ಹುಲಿಗಳ ವಂಶವೃಕ್ಷದ ಸಂಬಂಧದ ಮಹತ್ವದ ಮಾಹಿತಿ ಸಿಕ್ಕಿತು.

ಇದರಿಂದ ರಣಥಂಬೋರ್‌ನಲ್ಲಿ ಎರಡು ಹೊಸ ಮಾತೃ ವಂಶಗಳ ಕವಲುಗಳು ಪತ್ತೆ ಆದವು. ಇದರಿಂದ ಹುಲಿ ಟಿ47ಯು ಈ ಹುಲಿಧಾಮದಲ್ಲಿ ಖ್ಯಾತಿ ಪಡೆದಿರುವ ಹೆಣ್ಣು ಹುಲಿ ಮಚಾಲಿ ವಂಶಕ್ಕೆ ಸೇರಿದ್ದು ಎಂಬುದು ಪತ್ತೆಯಾಯಿತು. ಮೊದಲು ಟಿ47 ಹುಲಿಯ ವಂಶಾವಳಿ ಗೊತ್ತಿರಲಿಲ್ಲ. ಕೂದಲಿನ ಪರೀಕ್ಷೆಯಿಂದ ಅದರ ವಂಶದ ಮೂಲ ಯಾವುದು ಎಂಬುದು ಪತ್ತೆ ಮಾಡಲು ಸಾಧ್ಯವಾಯಿತು ಎಂದು ಎನ್‌ಸಿಬಿಎಸ್‌ ವಿಜ್ಞಾನಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಎನ್‌ಸಿಬಿಎಸ್‌ ಸಂಶೋಧಕರ ಬಳಿ ಭಾರತೀಯ ಹುಲಿಗಳಿಗೆ ಸಂಬಂಧಿಸಿದಂತೆ ಅತಿ ಹೆಚ್ಚು ವಂಶವಾಹಿ ದತ್ತಾಂಶವನ್ನು ಸಂಗ್ರಹಿಸಿಟ್ಟುಕೊಂಡಿದೆ. ಮಚಾಲಿಗೆ ಸಂಬಂಧಿಸಿದ ಪೂರ್ಣ ವಂಶವಾಹಿ ಮಾಹಿತಿಯೂ ಅಲ್ಲಿದೆ. ರಣಥಂಬೋರ್‌ನಲ್ಲಿ ಹುಲಿ ವಂಶವನ್ನು ವೃದ್ಧಿ ಮಾಡಲು ಮಚಾಲಿಯನ್ನು ಬಳಸಿಕೊಳ್ಳಲಾಗಿತ್ತು. ಆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅದರ ಪೂರ್ವಜರ ಮಾಹಿತಿಯನ್ನು ಕಲೆ ಹಾಕುವಲ್ಲಿ ಮಚಾಲಿಯ ವಂಶವಾಹಿಯ ಮಾಹಿತಿ ಮಹತ್ವದ ಪಾತ್ರವಹಿಸಿದೆ.

ಯಾವುದೇ ಒಂದು ಹುಲಿಯ ಆನುವಂಶಿಕ ಸಂಕೇತಾಕ್ಷರಗಳನ್ನು‌ ಬಿಡಿಸಿ ಅಧ್ಯಯನ ಮಾಡುವುದು ಸುಲಭದ ಕೆಲಸವಲ್ಲ.ಕಳೆದ ಕೆಲವು ದಶಕಗಳಿಂದೀಚೆಗೆ ರಕ್ತದ ಮಾದರಿ ಮತ್ತು ಅಂಗಾಶಗಳಿಂದ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿತ್ತು. ಕಾಡಿನಲ್ಲಿರುವ ಹುಲಿಯಿಂದ ಅದನ್ನು ಪಡೆಯುವುದು ಸುಲಭದ ಕೆಲಸವೂ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಬೆಂಗಳೂರಿನ ಸಂಶೋಧಕರು ಹುಲಿಯ ಕೂದಲಿನಿಂದ ಅದರ ವಂಶಾವಳಿಯ ರಹಸ್ಯ ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT