ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಕ್ಕ-ಗರಿಗಳ ಇತಿಹಾಸ-ವಿಕಾಸ

Last Updated 3 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಪುಕ್ಕ (ಡೌನ್) ಮತ್ತು ಗರಿ ( ಫೆದರ್ )- ಇವು ಪ್ರಕೃತಿಯ ಅತ್ಯಂತ ಸಂಕೀರ್ಣ, ಅತ್ಯಂತ ಉತ್ಕೃಷ್ಟ, ಅಷ್ಟೇ ವಿಶಿಷ್ಟ ಸೃಷ್ಟಿ. ಪರಮ ಸೋಜಿಗದ, ಬಹು ಉಪಯೋಗಗಳ ಈ ಪ್ರಾಣಿ ಸಂಬಂಧೀ ನಿರ್ಮಿತಿಗಳು ಪ್ರಸ್ತುತ ಹಕ್ಕಿಗಳಿಗಷ್ಟೇ ಸೀಮಿತ. ಎಷ್ಟೆಂದರೆ, ಜೀವಿಯೊಂದನ್ನು ಹಕ್ಕಿ ಎಂದು ನಿರ್ಧರಿಸಲು ಪುಕ್ಕ-ಗರಿಗಳ ಅಸ್ತಿತ್ವವೇ ಆಧಾರ.

ಪುಕ್ಕ-ಗರಿಗಳ ವೈವಿಧ್ಯವೂ ಅಪಾರ. ಹಕ್ಕಿಗಳ ವಿವಿಧ ರೂಪಗಳಿಗೆ, ವಿಭಿನ್ನ ಅಲಂಕರಣಗಳಿಗೆ ಪುಕ್ಕ-ಗರಿಗಳೇ ಮೂಲ ಆಕರ (ಚಿತ್ರಗಳಲ್ಲಿ ಗಮನಿಸಿ). ಸಮೀಪ ಹತ್ತು ಸಾವಿರ ಪ್ರಭೇದಗಳಿರುವ ಖಗ ವರ್ಗಕ್ಕೆ ಪುಕ್ಕ-ಗರಿಗಳಿಂದ ಒದಗುತ್ತಿರುವ ಉಪಯೋಗಗಳೂ ಹೇರಳ: ಶರೀರವನ್ನು ಬೆಚ್ಚಗಿಡಲು, ತಮ್ಮದೇ ಪ್ರಭೇದದ ಇತರ ಹಕ್ಕಿಗಳನ್ನು ಗುರುತಿಸಿಕೊಳ್ಳಲು, ಗಂಡು-ಹೆಣ್ಣು ಹಕ್ಕಿಗಳು ವಿಭಿನ್ನವಾಗಿ ಕಾಣಲು, ಮೊಟ್ಟೆಗಳಿಗೆ ಕಾವು ಕೊಡಲು, ಹೆಣ್ಣುಗಳನ್ನು ಆಕರ್ಷಿಸುವ ಪ್ರಣಯದುಡುಗೆಗಳನ್ನು ಧರಿಸಲು, ಶತ್ರುಗಳಿಗೆ ಕಾಣದಂತೆ ಮಾಡುವ ಮಾರುವೇಷಗಳನ್ನು ತೊಡಲು... ಅದೊಂದು ಸುದೀರ್ಘ ಪಟ್ಟಿ.

ವಿಸ್ಮಯ ಏನೆಂದರೆ ಹೀಗೆಲ್ಲ ಪ್ರಸ್ತುತ ಹಕ್ಕಿಗಳ ಬದುಕಿಗೆ ಮೂಲ ಬಲವಾಗಿರುವ ಪುಕ್ಕ-ಗರಿಗಳು ಮೂಲತಃ ಸೃಷ್ಟಿಗೊಂಡದ್ದು ಹಕ್ಕಿಗಳಲ್ಲಿ ಅಲ್ಲವೇ ಅಲ್ಲ! ಪುಕ್ಕ-ಗರಿ ಸಹಿತ ಹಕ್ಕಿಗಳು ಏಕಾಏಕಿ ಸೃಷ್ಟಿಗೊಂಡದ್ದೂ ಅಲ್ಲ. ವಾಸ್ತವವಾಗಿ ಪುಕ್ಕ-ಗರಿಗಳದು ಹಕ್ಕಿ ಸಂಕುಲದ ಉಗಮಕ್ಕಿಂತ ಬಹಳ ಹೆಚ್ಚು ಪ್ರಾಚೀನ. ಆಧುನಿಕ ಹಕ್ಕಿಗಳು (ಏವ್ಸ್) ಅವತರಿಸಿದ್ದು ಈಗ್ಗೆ 65 ದಶಲಕ್ಷ ವರ್ಷ ಹಿಂದೆ; ಆದರೆ ಪುಕ್ಕ-ಗರಿಗಳು ಮೂಲತಃ ಮೈದಳೆದದ್ದು ಸುಮಾರು 195 ದಶಲಕ್ಷ ವರ್ಷ ಹಿಂದೆ!

ಹಾಗೆಂದರೆ, ಪುಕ್ಕಗಳೂ ಗರಿಗಳೂ ಖಗ ಸಂಕುಲಕ್ಕೆ ಬಹಳ ಪೂರ್ವದಲ್ಲಿ, ಬೇರಾವುದೋ ಪ್ರಾಣಿವರ್ಗದಲ್ಲಿ ಸೃಷ್ಟಿಗೊಂಡವು ಎಂಬುದು ಸ್ಪಷ್ಟ ತಾನೇ? ವಾಸ್ತವ ಏನೆಂದರೆ, ಸರೀಸೃಪ ವರ್ಗಕ್ಕೆ ಸೇರಿದ, ಪುರಾತನ ಕಾಲದಲ್ಲಿ ಧರೆಯಲ್ಲಿ ನೆರೆದಿದ್ದ ಕೆಲವು ಡೈನೋಸಾರ್‌ಗಳಲ್ಲಿ ಮೊದಲು ಪುಕ್ಕಗಳನ್ನು, ನಂತರ ಗರಿಗಳನ್ನು, ಆಮೇಲೆ ರೆಕ್ಕೆಗಳನ್ನು ಅಳವಡಿಸುವ ಪ್ರಯೋಗವನ್ನು ಪ್ರಕೃತಿ ಪ್ರಯತ್ನಿಸಿತು. ಆ ಪ್ರಯೋಗದ ಯಶಸ್ಸು ಮುಂದೆ ಸುಮಾರು ಹದಿಮೂರು ಕೋಟಿ ವರ್ಷಗಳ ಅವಧಿಯಲ್ಲಿ ಆಧುನಿಕ ಖಗ ಸಂಕುಲದ ಅವತರಣಕ್ಕೆ ದಾರಿಮಾಡಿತು.

ಹಾಗೆ ಧರೆಯ ಜೀವಲೋಕದಲ್ಲಿ ಭಾರೀ ವೈವಿಧ್ಯ ಗಳಿಸಿ ಜಗತ್ತನ್ನೇ ಅಲಂಕರಿಸಿರುವ ಹಕ್ಕಿ ವರ್ಗದ ಯಶಸ್ಸಿಗೆ ಮೂಲ ಕಾರಣವಾಗಿರುವ ಪುಕ್ಕ-ಗರಿ-ರೆಕ್ಕೆಗಳ ವಿಕಾಸ ಜೀವೇತಿಹಾಸದ ಒಂದು ಅದ್ಭುತ ವೃತ್ತಾಂತ. ಪುಕ್ಕ-ಗರಿಗಳ ಮೂಲದ ಶೋಧವನ್ನು ಕೈಗೊಂಡ ಜೀವವಿಜ್ಞಾನಿಗಳಿಗೆ ಅದಕ್ಕೆ ಸಂಬಂಧಿಸಿದ ಹೆಚ್ಚು ಹೆಚ್ಚು ಪ್ರಾಚೀನ ಪಳೆಯುಳಿಕೆಗಳು ಹೇರಳವಾಗಿ ಲಭಿಸುತ್ತ ಬಂದಿವೆ. ಅವನ್ನೆಲ್ಲ ಆಧರಿಸಿ ಸಿದ್ಧಗೊಂಡಿರುವ, ಮಾರ್ಪಡುತ್ತಲೂ ಬಂದಿರುವ, ಈವರೆಗೆ ಸ್ಪಷ್ಟವಾಗಿರುವ ಪುಕ್ಕ-ಗರಿಗಳ ಇತಿಹಾಸ ಮತ್ತು ವಿಕಾಸದ ಪರಮ ಸೋಜಿಗದ ಸಂಕ್ಷಿಪ್ತ ವಿವರ ಹೀಗಿದೆ:

ಧರೆಯ ಜೀವೇತಿಹಾಸದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಪ್ರಾಣಿಗಳಾದ ಡೈನೋಸಾರ್‌ಗಳು ನಿಮಗೂ ಗೊತ್ತಲ್ಲ? ಭೂ ಇತಿಹಾಸದಲ್ಲಿ ಈಗ್ಗೆ 252 ದಶಲಕ್ಷ ವರ್ಷದಿಂದ 66 ದಶಲಕ್ಷ ವರ್ಷ ಹಿಂದಿನ ಅವಧಿಯ ಮಧ್ಯ ಜೀವಿ ಕಲ್ಪ (ಮೀಸೊಜ಼ೋಯಿಕ್ ಈರಾ)ದಲ್ಲಿ ಟ್ರಯಾಸಿಕ್ ಯುಗದಲ್ಲಿ ಅವತರಿಸಿ, ಜ್ಯೂರಾಸಿಕ್ ಯುಗದಲ್ಲಿ ಗರಿಷ್ಠ ವೈವಿಧ್ಯ ಗಳಿಸಿ, ಕ್ರಿಟೇಷಿಯಸ್ ಯುಗದ ಮಹಾ ಪ್ರಳಯದಲ್ಲಿ ಈಗ್ಗೆ 66 ದಶಲಕ್ಷ ವರ್ಷ ಹಿಂದೆ ಸಾರಾಸಗಟಾಗಿ ನಿರ್ನಾಮಗೊಂಡ ವಿಸ್ಮಯದ ಸರೀಸೃಪಗಳು ಅವು (ಚಿತ್ರ-11). ಟ್ರಯಾಸಿಕ್ ಯುಗದ ಮಧ್ಯ ಕಾಲದಲ್ಲಿ- ಈಗ್ಗೆ ಸುಮಾರು 240 ದಶಲಕ್ಷ ವರ್ಷ ಹಿಂದೆ - ಡೈನೋಸಾರ್‌ಗಳ ಒಂದು ಉಪವರ್ಗ ಕವಲೊಡೆಯಿತು.

ಥೆರೋಪಾಡ್‌ಗಳೆಂಬ ಆ ಗುಂಪಿನ ಡೈನೋಸಾರ್‌ಗಳದು ಕೋಳಿಗಳಷ್ಟು ಗಾತ್ರದಿಂದ ಐದಾರು ಟನ್ ತೂಕದ ವರೆಗಿನ ಭಾರೀ ವೈವಿಧ್ಯ (ಚಿತ್ರ-12). ವಿಶೇಷ ಏನೆಂದರೆ ಎಲ್ಲ ಥೆರೋಪಾಡ್‌ಗಳದೂ ಟೊಳ್ಳು ಮೂಳೆಗಳ ಅಸ್ಥಿ ಪಂಜರ, ಬಾಯ್ತುಂಬ ಹಲ್ಲುಗಳು. ಎರಡು ಪುಟ್ಟ ಮುಂಗಾಲುಗಳು; ಎರಡು ಹಿಂಗಾಲುಗಳ ಮೇಲೆ ನಡೆದಾಟ. ಪಾದಗಳಲ್ಲಿ ಮೂರು ಬೆರಳುಗಳು; ಬೆರಳುಗಳ ತುದಿಗಳಲ್ಲಿ ಹರಿತ ಉಗುರುಗಳು. ಬೇಟೆಗಾರರಾಗಿ, ಮಾಂಸಾಹಾರಿಗಳಾಗಿದ್ದ ಪ್ರಾಣಿಗಳು ಅವು. ಪುಕ್ಕ-ಗರಿಗಳನ್ನು ಪ್ರಕೃತಿ ಹುಟ್ಟು ಹಾಕಿದ್ದು ಈ ಥೆರೋಪಾಡ್‌ಗಳಲ್ಲೇ!

ಈವರೆಗೆ ಲಭಿಸಿರುವ ಪಳೆಯುಳಿಕೆಗಳಲ್ಲಿ ಸ್ಪಷ್ಟವಾಗಿರುವಂತೆ ಈಗ್ಗೆ ಸುಮಾರು 190 ದಶಲಕ್ಷ ವರ್ಷಗಳ ಹಿಂದೆ, ಕೋಳಿ ಗಾತ್ರದ ಥೆರೋಪಾಡ್ ಪ್ರಭೇದ ಸೈನೊಸಾರೆಪ್ಟೆರಿಕ್ಸ್‌ನಲ್ಲಿ ಮೊತ್ತಮೊದಲ ಪುಕ್ಕಗಳು ಒಡಮೂಡಿದುವು. ಆ ಪುಕ್ಕಗಳು ಟೊಳ್ಳಾದ, ಕವಲೊಡೆದ ತೆಳ್ಳನ್ನ ಕಡ್ಡಿ ಚೂರುಗಳಂತಿದ್ದುವು. ಅಲ್ಲಿಂದ ಮುಂದೆ ಪುಕ್ಕ-ಗರಿಗಳು ನಿಧಾನವಾಗಿ ಮಾರ್ಪಡುತ್ತ, ಭಿನ್ನ ಭಿನ್ನ ಸ್ವರೂಪಗಳನ್ನು ಪಡೆಯುತ್ತ, ವರ್ಣ ವೈವಿಧ್ಯವನ್ನೂ ಪಡೆಯುತ್ತ ‌ಉತ್ತಮಗೊಳ್ಳುತ್ತ ಈಗ್ಗೆ 165 ದಶಲಕ್ಷ ವರ್ಷ ಹಿಂದಿನ ಸುಮಾರಿಗೆ ವರ್ಣಮಯವಾಗಿ ಅಲಂಕಾರಿಕ ರೂಪವನ್ನೂ ತಳೆದುವು.

ಅದಕ್ಕೆ ಆಧಾರವಾಗಿ ಆ ಕಾಲದಲ್ಲಿದ್ದ ಪಾರಿವಾಳದ ಗಾತ್ರದ ಎಪಿಡೆಪ್ಟೆರಿಕ್ಸ್ ಹ್ವುಯಿಯಲ್ಲಿ ಪುಕ್ಕ-ಗರಿಗಳ ಉದ್ದವಾದ ಬಾಲ, ಟರ್ಕಿಕೋಳಿಯ ಗಾತ್ರದ ಕೌಡಿಪ್ಟೆರಿಕ್ಸ್‌ನಲ್ಲಿ ಮುಂಗಾಲುಗಳ ತುದಿ ಮತ್ತು ಬಾಲದ ಅಂಚಿನಲ್ಲಿ ಬೀಸಣಿಕೆ ರೂಪದ ಗರಿಗಳು ಇದ್ದ ಪಳೆಯುಳಿಕೆಗಳು ಪತ್ತೆಯಾಗಿವೆ. ಪಳೆಯುಳಿಕೆಗಳ ಸಾಕ್ಷ್ಯದ ಪ್ರಕಾರ ಡೈನೋಸಾರ್‌ಗಳಲ್ಲಿ ಪುಕ್ಕ-ಗರಿಗಳ ಸೃಷ್ಟಿಯ ಉದ್ದೇಶ ಹಾರಾಟ ಆಗಿರಲಿಲ್ಲ. ದೇಹೋಷ್ಣವನ್ನು ಸಂರಕ್ಷಿಸಲು, ಸುಲಭವಾಗಿ ಸ್ವಪ್ರಭೇದಗಳನ್ನು ಗುರುತಿಸಿಕೊಳ್ಳಲು, ಸಂಗಾತಿಗಳನ್ನು ಆಕರ್ಷಿಸಲು, ಮಾರು ವೇಷ ಧರಿಸಲು ಇಂಥವಷ್ಟೇ ಪುಕ್ಕ-ಗರಿ ಸೃಷ್ಟಿಯ ಮೂಲ ಗುರಿಯಾಗಿತ್ತು.

ಅದೇ ರೀತಿಯ ವಿಕಾಸ ಮುಂದುವರೆದು ಆಧುನಿಕ ಪುಕ್ಕ-ಗರಿಗಳು ಈಗ್ಗೆ 135 ದಶಲಕ್ಷ ವರ್ಷ ಹಿಂದಿನ ಸುಮಾರಿಗೆ ರೂಪುಗೊಂಡಿದ್ದುವು. ಧರೆಯ ಪ್ರಥಮ ಹಕ್ಕಿ ಪೂರ್ವಜ ಆರ್ಖಿಯಾಪ್ಟೆರಿಕ್ಸ್‌ನಲ್ಲಿ ಇಂಥ ಗರಿಗಳು ಒಡಮೂಡಿದ್ದುವು. ಹಾಗೆಯೇ ಗರಿಗಳಿಂದ ಕೂಡಿದ ರೆಕ್ಕೆಗಳೂ ನಿಧಾನವಾಗಿ ಬಹು ಹಂತಗಳಲ್ಲಿ ನಿರ್ಮಾಣಗೊಂಡು (ಚಿತ್ರ 13 ಮತ್ತು14ರಲ್ಲಿ ಗಮನಿಸಿ) ಕಡೆಗೆ ಈಗ್ಗೆ 65 ದಶಲಕ್ಷ ವರ್ಷ ಹಿಂದಿನ ಸುಮಾರಿಗೆ ಅತ್ಯುತ್ತಮ ಹಾರಾಟ ಸಾಮರ್ಥ್ಯವೂ ಮೈಗೂಡಿದ್ದ ಆಧುನಿಕ ಖಗ ವರ್ಗ ಅಸ್ತಿತ್ವಕ್ಕೆ ಬಂತು.

ನಿಸರ್ಗದ ಪರಮ ವಿಸ್ಮಯದ ಸೃಷ್ಟಿಗಳಾದ ಪುಕ್ಕ-ಗರಿ-ರೆಕ್ಕೆಗಳದು ಹೀಗೆ ಸುಮಾರು ಹದಿಮೂರು ಕೋಟಿ ವರ್ಷಗಳ ಇತಿಹಾಸ; ಬಹು ವಿಧ ಅದ್ಭುತ ಪ್ರಯೋಜನಗಳ, ಬಹು ಹಂತಗಳ ವಿಕಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT