ಶನಿವಾರ, ಡಿಸೆಂಬರ್ 7, 2019
25 °C

ತುಂಡು ಬಾಲದ ಬೆಕ್ಕು ‘ಕೆನಡಿಯನ್ ಲಿಂಕ್ಸ್‌’

Published:
Updated:

ಉಗ್ರ ಸ್ವಭಾವದ ಪ್ರಾಣಿಗಳು ಎಂದ ಕೂಡಲೇ ಹುಲಿ, ಸಿಂಹ, ಚಿರತೆ, ಪ್ಯಾಂಥರ್‌ಗಳು ನೆನಪಾಗುತ್ತವೆ. ಇವಷ್ಟೇ ಅಲ್ಲದೇ ಉಗ್ರಸ್ವಭಾವದ ಬೆಕ್ಕುಗಳೂ ಕೆಲವು ಇವೆ. ಅಂತಹ ಬೆಕ್ಕುಗಳಲ್ಲಿ ಲಿಂಕ್ಸ್‌ಗಳು ಪ್ರಮುಖ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಕೆನಡಿಯನ್ ಲಿಂಕ್ಸ್‌ (Canadian Lynx) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಲಿಂಕ್ಸ್‌ ಕ್ಯಾನೆಡೆನ್ಸಿಸ್‌ (Lynx canadensis). ಇದು ಕೂಡ ಮಾರ್ಜಾಲ (ಫೆಲಿಡೇ– Felidae) ಕುಟುಂಬಕ್ಕೆ ಸೇರಿದ್ದು, ಮಾಂಸಾಹಾರಿ ಪ್ರಾಣಿಗಳ ಕಾರ್ನಿವೊರಾ (Carnivora) ಗುಂಪಿನಲ್ಲಿ ಮತ್ತು ಫೆಲಿಫಾರ್ಮಿಯಾ (Feliformia) ಉಪಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?: ಬೇಸಿಗೆಯಲ್ಲಿ ಕಂದು ಮತ್ತು ಬಿಳಿ ಮಿಶ್ರಿತ ಕೂದಲು ಬೆಳೆದಿರುವ ತುಪ್ಪಳ ದೇಹವನ್ನು ಆವರಿಸಿದ್ದರೆ, ಚಳಿಗಾಲದಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಕೂದಲಿರುವ ತುಪ್ಪಳ ಬೆಳೆಯುತ್ತದೆ. ಸಾಕು ಬೆಕ್ಕಿಗೆ ಹೋಲಿಸಿದರೆ ನೀಳವಾದ ಕಾಲುಗಳಿದ್ದು, ದೃಢವಾಗಿರುತ್ತವೆ. ಸಿಂಹಗಳಿಗಿರುವಂತೆ ದೊಡ್ಡದಾಗಿರುತ್ತವೆ. ದೇಹವೆಲ್ಲಾ ಚುಕ್ಕಿಗಳಿಂದ ಕೂಡಿರುವಂತೆ ಕಾಣುತ್ತದೆ. ಬೆರಳುಗಳು ಹುಲಿ, ಮುಖ ಸಿಂಹದ ಮುಖದಂತೆಯೇ ಕಾಣುತ್ತದೆ. ಮೂಗು ಪುಟ್ಟದಾಗಿದ್ದು, ಮುದ್ದಾಗಿ ಕಾಣುತ್ತದೆ. ಕಣ್ಣುಗಳು ಕಂದು ಬಣ್ಣದಲ್ಲಿದ್ದು, ಕೇಂದ್ರಭಾಗ ಕಪ್ಪು ಬಣ್ಣದಲ್ಲಿರುತ್ತದೆ. ಕಿವಿಗಳು ಪುಟ್ಟದಾಗಿದ್ದು, ಸದಾ ಸೆಟೆದುಕೊಂಡಿರುತ್ತವೆ. ಕತ್ತರಿಸಿರುವಂತೆ ಕಾಣುವ ತುಂಡುಬಾಲ ಲಿಂಕ್ಸ್‌ಗಳ ವಿಶೇಷ.

ಎಲ್ಲಿದೆ?

ಹೆಸರೇ ಹೇಳುವಂತೆ ಉತ್ತರ ಅಮೆರಿಕ ಖಂಡದ ಕೆನಡಾ ದೇಶದಾದ್ಯಂತ ಇದರ ಸಂತತಿ ವಿಸ್ತರಿಸಿದೆ. ಅಲಾಸ್ಕಾ ಮತ್ತು ಕೆಲವು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ ಇದೆ. ಹಿಮಾವೃತ ಮತ್ತು ದಟ್ಟವಾಗಿ ಮರಗಳು ಬೆಳೆದಿರುವ ಪ್ರದೇಶಗಳು ಇದರ ನೆಚ್ಚಿನ ವಾಸಸ್ಥಾನ. ಪರ್ವತ ಪ್ರದೇಶಗಳು ಮತ್ತು ಬಯಲು ಪ್ರದೇಶಗಳಲ್ಲೂ ಇದು ಕಾಣಸಿಗುತ್ತದೆ.

ಜೀವನಕ್ರಮ ಮತ್ತು ವರ್ತನೆ

ಬಹುತೇಕ ಮಾರ್ಜಾಲ ಪ್ರಭೇದಗಳಂತೆ ಇದು ಕೂಡ ಒಂಟಿಯಾಗಿ ಜೀವಿಸಲು ಇಷ್ಟಪಡುತ್ತದೆ. ಪ್ರತಿ ಲಿಂಕ್ಸ್‌ ನಿರ್ದಿಷ್ಟ ಗಡಿ ಗುರುತಿಸಿಕೊಂಡಿರುತ್ತದೆ. ಆದರೆ ಗಂಡು ಇರುವ ಪ್ರದೇಶದಲ್ಲಿ ಹೆಣ್ಣು ಲಿಂಕ್ಸ್‌ಗಳೂ ಇರುತ್ತವೆ. ಗಂಡು ಲಿಂಕ್ಸ್‌ಗಳು ಒಂದರ ಗಡಿಯೊಳಗೆ ಒಂದು ಪ್ರವೇಶಿಸುವುದಿಲ್ಲ. ದೃಷ್ಟಿ ಶಕ್ತಿ ತೀಕ್ಷ್ಣವಾಗಿರುವುದರಿಂದ ಹಗಲಿಗಿಂತ ರಾತ್ರಿಯಲ್ಲಿ ಹೆಚ್ಚು ಚುರುಕಾಗಿರುತ್ತದೆ. ಶ್ರವಣ ಶಕ್ತಿಯೂ ಚುರುಕಾಗಿದ್ದು, ದೂರದ ಪ್ರದೇಶಗಳಲ್ಲಿರುವ ಪ್ರಾಣಿಗಳ ಸದ್ದನ್ನೂ ಗ್ರಹಿಸುತ್ತದೆ.

ಹೆಣ್ಣು ಲಿಂಕ್ಸ್ ಮತ್ತು ಮರಿಗಳು ಸದಾ ಜೊತೆಯಾಗಿರುತ್ತವೆ. ಕೂಡಿಕೊಂಡೇ ಬೇಟೆಯಾಡುತ್ತವೆ. ತಾಯಿ ಲಿಂಕ್ಸ್‌ ಮರಿಗಳಿಗೆ ಬೇಟೆಯಾಡುವುದನ್ನು ಕಲಿಸಿಕೊಡುತ್ತದೆ. ಸಾಧ್ಯವಾದಷ್ಟು ಸಹನೆಯಿಂದ ಇದ್ದು, ಒಮ್ಮೆಲೆ ಎರಗಿ ಪ್ರಾಣಿಗಳನ್ನು ಬೇಟೆಯಾಡುವುದು ಇದರ ವಿಶಿಷ್ಟಗಳಲ್ಲಿ ಒಂದು. ರಾತ್ರಿಯಲ್ಲಿ ಸಾಕಷ್ಟು ಆಹಾರ ದೊರೆಯದೇ ಇದ್ದರೆ, ಹಗಲಿನಲ್ಲೂ ಹುಡುಕುತ್ತದೆ. ಸಾಕು ಬೆಕ್ಕುಗಳಂತೆಯೇ ಮಿಯಾಂವ್...ಮಿಯಾಂವ್... ಎನ್ನುತ್ತಾ ಸಂವಹನ ನಡೆಸುತ್ತದೆ. ಇದಷ್ಟೇ ಅಲ್ಲದೇ, ಇನ್ನೂ ಕೆಲವು ಬಗೆಯ ಸದ್ದುಗಳನ್ನೂ ಹೊರಡಿಸುತ್ತದೆ.

ಆಹಾರ

ಇದು ಸಂಪೂರ್ಣ ಮಾಂಸಾಹಾರಿ ಪ್ರಾಣಿ. ದಂಶಕಗಳೇ ಇದರ ನೆಚ್ಚಿನ ಆಹಾರ. ಹಕ್ಕಿಗಳನ್ನೂ ಬೇಟೆಯಾಡುವುದು ಇದಕ್ಕೆ ಗೊತ್ತಿದೆ. ಕೆಲವೊಮ್ಮೆ ಜಿಂಕೆಗಳನ್ನೂ ಬೇಟೆಯಾಡುತ್ತದೆ.

ಸಂತಾನೋತ್ಪತ್ತಿ:ಮಾರ್ಚ್‌ನಿಂದ ಮೇ ವರೆಗಿನ ಅವಧಿ ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹೆಣ್ಣು ಲಿಂಕ್ಸ್‌ ಒಂದು ಅವಧಿಯಲ್ಲಿ ಒಂದು ಗಂಡು ಲಿಂಕ್ಸ್‌ನೊಂದಿಗೆ ಮಾತ್ರ ಜೊತೆಯಾಗುತ್ತದೆ. ಆದರೆ ಗಂಡು ಲಿಂಕ್ಸ್‌ಗಳು ತನ್ನ ಗಡಿ ವ್ಯಾಪ್ತಿಯಲ್ಲಿರುವ ಎಲ್ಲ ಹೆಣ್ಣು ಲಿಂಕ್ಸ್‌ಗಳೊಂದಿಗೂ ಜೊತೆಯಾಗುತ್ತವೆ.

8ರಿಂದ 10 ವಾರಗಳ ವರೆಗೆ ಗರ್ಭಧರಿಸಿ ಸಾಮಾನ್ಯವಾಗಿ 2ರಿಂದ 3 ಮರಿಗಳಿಗೆ ಜನ್ಮ ನೀಡುತ್ತದೆ. ಇದರ ಮರಿಗಳನ್ನೂ ಕಿಟೆನ್ಸ್‌ (Kittens) ಎನ್ನುತ್ತಾರೆ. ಮರಿಗಳನ್ನು ಸುಮಾರು ಐದು ವಾರಗಳ ವರೆಗೆ ಹೆಣ್ಣು ಬೆಕ್ಕು ಸುರಕ್ಷಿತ ಪ್ರದೇಶಗಳಲ್ಲಿ ಬಚ್ಚಿಟ್ಟು ಬೆಳೆಸುತ್ತದೆ. 7ರಿಂದ 9 ತಿಂಗಳ ಅವಧಿಯಲ್ಲಿ ಮರಿಗಳು ಸ್ವತಂತ್ರವಾಗಿ ಆಹಾರ ಹುಡುಕಲು ಕಲಿಯುತ್ತವೆ. 10 ತಿಂಗಳ ನಂತರ ಮರಿಗಳು ತಾಯಿಯಿಂದ ಬೇರ್ಪಟ್ಟು ಸ್ವತಂತ್ರವಾಗಿ ಜೀವಿಸಲು ಆರಂಭಿಸುತ್ತವೆ. ತಾಯಿಯಿಂದ ಬೇರ್ಪಟ್ಟ ನಂತರವೂ ಕೆಲ ದಿನಗಳ ವರೆಗೆ ಮರಿಗಳು ಒಟ್ಟಿಗೆ ಬಾಳುತ್ತವೆ. ಹೆಣ್ಣು ಲಿಂಕ್ಸ್‌ 21 ತಿಂಗಳ ನಂತರ ವಯಸ್ಕ ಹಂತ ತಲುಪಿದರೆ ಗಂಡು ಲಿಂಕ್ಸ್‌ 33 ತಿಂಗಳ ನಂತರ ವಯಸ್ಕ ಹಂತಕ್ಕೆ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಹೊಳೆಯುವ ಇದರ ಕಣ್ಣುಗಳಿಂದಾಗಿಯೇ ಇವನ್ನು ಲಿಂಕ್ಸ್‌ ಎಂದು ಕರೆಯುತ್ತಾರೆ. ಗ್ರೀಕ್‌ ಭಾಷೆಯಲ್ಲಿ ಲಿಂಕ್ಸ್ ಎಂದರೆ ‘ಹೊಳೆಯುವಂತಹ’ ಎಂದು ಅರ್ಥ.

* 250 ಅಡಿಗಳಷ್ಟು ದೂರದಲ್ಲಿರುವ ಪ್ರಾಣಿಗಳನ್ನೂ ಇದು ಸ್ಪಷ್ಟವಾಗಿ ಗುರುತಿಸುತ್ತದೆ.

* ಗಿರಿಸಿಂಹಗಳಿಗಿಂತ ಇದರ ಪಾದಗಳೇ ಬಲಿಷ್ಠವಾಗಿದ್ದು, ತೂಕವೂ ಹೆಚ್ಚಾಗಿರುತ್ತದೆ.

* ಬಲಿಷ್ಠ ಕಾಲುಗಳಿದ್ದರೂ ಇದಕ್ಕೆ ವೇಗವಾಗಿ ಓಡುವ ಸಾಮರ್ಥ್ಯ ಇಲ್ಲ. ಹೀಗಾಗಿ ಅಡಗಿ ಕುಳಿತಿದ್ದು, ದಾಳಿ ಮಾಡುವ ಕಲೆ ಕರಗತ ಮಾಡಿಕೊಂಡಿದೆ.

* ಸಾವಿರಾರು ವರ್ಷಗಳ ಹಿಂದೆ ಈ ಬೆಕ್ಕುಗಳು ಏಷ್ಯಾದಿಂದ ಕೆನಡಾಗೆ ವಲಸೆ ಬಂದಿವೆ ಎಂದು ಹಲವು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)