ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಹೊಯ್ ಜ್ಹೊಯ್ ಎನ್ನುವ ಸಿಕಾಡ

Last Updated 16 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಮದುವೆಗೆಂದು ಹಿರಿಯೂರಿಗೆ ಹೊರಟಿದ್ದೆವು. ಮಾರ್ಗ ದಲ್ಲಿಯ ಮರಗಳಲ್ಲಿ ನಗಾರಿ ಹೊಡೆಯುವಂತಹ ಶಬ್ದ ಕೇಳಿ ಬಂತು. ಪಕ್ಕದಲ್ಲಿ ಕುಳಿತುಕೊಂಡ ನನ್ನ ಹೆಂಡತಿ ಶಕೀಲ ‘ಏನ್ರಿ... ಮದುವೆ ಮನೇಲಿ ಹೊಡೆದ ಹಾಗೆ ನಗಾರಿ ಶಬ್ದ ಇಲ್ಲೇ ಕೇಳಿ ಬರುತ್ತಿದೆ’ ಅಂದಾಕ್ಷಣ ಕಾರು ನಿಲ್ಲಿಸಿದೆ. ಆ ಶಬ್ಧ ಬಂದ ಕಡೆ ನೋಡಿದೆ. ಆ ಶಬ್ಧ ಹೊರಡಿಸುತ್ತಿದ್ದದು ಒಂದು ಕೀಟ ಎಂದು ಗೊತ್ತಾಯಿತು. ಕ್ಯಾಮೆರಾ ತೆಗೆದು, ಒಂದೆರೆಡು ಚಿತ್ರಗಳು ಕ್ಲಿಕ್ಕಿಸಿದೆ. ತದನಂತರ ನಗಾರಿ ಕೀಟ ಕೈಲಿ ಹಿಡಿದು ತೋರಿಸಿದೆ.

ಈ ಕೀಟಕ್ಕೆ ಸಿಕಾಡ(CICADA) ಎಂದು ಹೆಸರಿಸಿದ್ದಾರೆ ಕೀಟಶಾಸ್ತ್ರಜ್ಞರು. ಈ ಸಿಕಾಡಗಳಲ್ಲಿ ರಸ ಹೀರುವಂತಹ ಸೂಜಿಯಾಕಾರದ ನೀಳವಾದ ಬಾಯಿಯ ಕೊಳವೆ ಇದೆ. ಇವು ಇರುವೆ ಅಥವ ಜಿರಲೆ ತರಹ ಕಚ್ಚುವುದಿಲ್ಲ ಜೇನ್ನೊಣ ಅಥವ ಕಡಜದ ತರಹ ಚುಚ್ಚುವುದೂ ಇಲ್ಲ. ಹಾಗಂತ ಇವು ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದರೆ ರಸ ಹೀರಲು ಸ್ವಲ್ಪ ಚುಚ್ಚಬಹುದು ಹುಷಾರು! ಇವು ಸಾಮಾನ್ಯವಾಗಿ ಮಧ್ಯ ಬೇಸಿಗೆಯ ಕಾಲದಲ್ಲಿ ಮರದ ರೆಂಬೆ, ಕೊಂಬೆ ಮತ್ತು ಕಾಂಡಗಳ ಮೇಲೆ ತನ್ನ ದೇಹದ ಬಣ್ಣ ಹೊಂದಿಸಿಕೊಂಡು ಕಣ್ಣಿಗೆ ಕಾಣದ ರೀತಿಯಲ್ಲಿ ಕೂರುತ್ತವೆ. ಹೀಗೆ ಕೂತು ಒಂದೆ ಸಮನೆ ನಿರಂತರವಾಗಿ ‘ಜೂಂಯ್ ......ಎನ್ನುವ ಕರ್ಕಶ ಶಬ್ಧವನ್ನುಂಟು ಮಾಡುತ್ತವೆ. ಈ ಶಬ್ದ ಬಹು ದೂರದೂರಿಗೂ ಕೇಳಿಸುವುದುಂಟು. ಈ ಶಬ್ದವು ತನ್ನ ತಳಭಾಗದ ಉದರಲ್ಲಿ ಡಂಗುರಗಳಂತೆ ಎರಡು ಗುಂಡಿಗಳಲ್ಲಿರುವ ಸ್ನಾಯುಗಳ ಮತ್ತು ಅಲ್ಲಿ ಆವರಿಸಿರುವ ತಟ್ಟೆಗಳ(Tymphanum) ಕಂಪನಗಳಿಂದ ಉತ್ಪತ್ತಿಯಾಗುತ್ತದೆ. ಇದು ಗಂಡು ಸಿಕಾಡ ಸಮಾಗಮಕ್ಕೆ ಹೆಣ್ಣನ್ನು ಆಕರ್ಷಿಸಲು ಬಳಸಿದರೆ, ಹೆಣ್ಣು ಸಿಕಾಡ ತನ್ನ ಒಪ್ಪಿಗೆಯನ್ನು ರೆಕ್ಕೆಗಳ ಕಂಪನದ ಶಬ್ಧದಿಂದ ಸೂಚಿಸುತ್ತದೆ. ಪ್ರೌಢ ಸಿಕಾಡಗಳು ಗಿಡ ಮರದ ರೆಂಬೆಗಳಿಗೆ ತನ್ನ ಮೊಟ್ಟೆಯಿಡುವ ಅಂಗಾಂಗದಿಂದ ಚಿಕ್ಕದಾಗಿ ಸೀಳಿ ಮೊಟ್ಟೆ ಇಡುತ್ತವೆ. ಮೊಟ್ಟೆಗಳು ನೋಡಲು ಥೇಟ್ ಬಿಳಿಯಬಣ್ಣದ ಅಕ್ಕಿಕಾಳುಗಳಂತಿದ್ದು ಮೊಟ್ಟೆಯೊಡೆದು ಹೊರಹೊಮ್ಮಿದ ಪ್ರಥಮ ಹಂತದ ಮರಿಗಳು ಬಿಳಿಯ ಇರುವೆ ಅಥವ ಗೆದ್ದಲು ಹುಳುಗಳಂತೆ ಗೋಚರಿಸುತ್ತವೆ. ಮೊಟ್ಟೆಗಾಗಿ ಸೀಳಿದ ರೆಂಬೆಕೊಂಬೆಗಳಿಂದ ಸೋರುವ ರಸ ಹೀರುತ್ತವೆ. ತದನಂತರ ಅಲ್ಲಿಂದ ನೆಲಕ್ಕುರುಳಿ ಭೂಮಿಯ ಕೆಳಪದರ ಪ್ರವೇಶಿಸಿ ಗಿಡಗಳ ಎಳೆಯ ಬೇರುಗಳಿಂದ ರಸ ಹೀರಲು ಪ್ರಾರಂಭಿಸುತ್ತವೆ. ಹೀಗೆ ಬೆಳವಣಿಗೆಯ ಹಂತ ಗಳನ್ನು ದಾಟಿ 4ನೇ ಹಂತ ತಲುಪಿ ಪ್ರೌಢ ಸಿಕಾಡವಾಗಿ ಹೊರಬರುತ್ತವೆ.

ಈ ಮರಿಗಳು13 ವರ್ಷ ಮತ್ತು 17 ವರ್ಷಗಳ ಕಾಲ ಭೂಮಿಯಲ್ಲೆ ವಾಸಿಸುವುದು ಇದರ ವಿಶೇಷತೆ. ಪಿರಿಯಾಡಿಕಲ್ ಸಿಕಾಡ, ಮಜಿಕಿ ಸಿಕಾಡ(Periodical cicada, Magicicada septendecim) ಎಂಬ ಪ್ರಭೇಧ ಗಳಲ್ಲಿ ಇದನ್ನು ಕಾಣಬಹುದು. ಇದನ್ನು ಹೊರತುಪಡಿಸಿ ವರ್ಷಕ್ಕೊಮ್ಮೆ ಜೀವನಚಕ್ರ ಪೂರೈಸುವ ಸಿಕಾಡಗಳೂ ಕೂಡ ನಮ್ಮಲ್ಲಿ ಕಾಣ ಸಿಗುತ್ತವೆ. ಸಿಕ್ಯಾಡಿಡೆ(Cicadidae) ಕುಟುಂಬ ಹಾಗೂ ಹೋಮೋಪ್ಟೆರ(Homoptera) ಎಂಬ ಗುಂಪಿಗೆ ಈ ನಗಾರಿ ಕೀಟವನ್ನು ವರ್ಗೀಕರಿಸಿದ್ದಾರೆ. ಪಾಶ್ಚಾತ್ಯರು ಸಿಕಾಡಗಳನ್ನು ವಿಶೇಷ ವೈವಿಧ್ಯಮಯ ರುಚಿಕರ ತಿನಿಸು-ಖಾದ್ಯಗಳಲ್ಲಿ ಬಳಸುತ್ತಾರೆ. ಇಂತಹ ಔತಣಕೂಟ ಅವರು ಎಂದೆಂದೂ ತಪ್ಪಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT