ಶನಿವಾರ, ಡಿಸೆಂಬರ್ 14, 2019
24 °C

10 ಕೋಟಿ ವರ್ಷಗಳ ಹಿಂದೆ ಹಾವಿಗೆ ಕಾಲುಗಳಿದ್ದವು: ವರದಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಟೊರೆಂಟೊ: 10 ಕೋಟಿ ವರ್ಷಗಳ ಹಿಂದೆ ಬದುಕಿದ್ದ ಹಾವುಗಳಲ್ಲಿ ಕಾಲು ಹಾಗೂ ಕವಟೆ ಮೂಳೆಗಳು ಇದ್ದವು ಎಂದು ಅಧ್ಯಯನ ವರದಿಯೊಂದು ಉಲ್ಲೇಖಿಸಿದೆ.

ವರದಿಯು ಸೈನ್ಸ್‌ ಅಡ್ವಾನ್ಸಸ್‌ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ನಜಷ್ ರಿಯೊನಿಗ್ರಿನಾ ಹೆಸರಿನ ಪ್ರಾಚೀನ ಹಾವಿನ ಪಳಯುಳಿಕೆಯ ಮೇಲೆ ನಡೆಸಲಾದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದ್ದು, ಆ ಹಾವಿನ ವಿಕಾಸದ ಮೊದಲ 7 ಕೋಟಿ ವರ್ಷಗಳ ಅವಧಿಯಲ್ಲಿ ಹಿಂಬದಿ ಕಾಲು ಹಾಗೂ ಕವಟೆ ಮೂಳೆಗಳು ಇದ್ದವು ಎನ್ನಲಾಗಿದೆ.

ಸಂಶೋದಕರ ತಂಡದಲ್ಲಿದ್ದ ಕೆನಡಾದ ಅಲ್ಬೆರ್ಟಾ ವಿಶ್ವವಿದ್ಯಾಲಯದ ಸಂಶೋದಕರು, ಹಲ್ಲಿ ಜಾತಿಗೆ ಸೇರಿದ ಪ್ರಾಚೀನ ಹಾವಿನ ತಲೆಬುರುಡೆಯಲ್ಲಿನ ಮೂಳೆಗಳು ಬಳುಕುವ ರೀತಿಯಲ್ಲಿ ರೂಪಾಂತರ ಗೊಂಡದ್ದು ಹೇಗೆ ಎಂಬುದನ್ನೂ ವಿವರಿಸಿದ್ದಾರೆ.

ಪಳಯುಳಿಕೆಗಳ ಅಲಭ್ಯತೆಯಿಂದಾಗಿ ಹಾವುಗಳ ಮೇಲಿನ ಅಧ್ಯಯನಗಳು ಇಲ್ಲಿಯವರೆಗೆ ವಿಸ್ತಾರವಾಗಿ ನಡೆದಿರಲಿಲ್ಲ ಎಂದೂ ಹೇಳಿದ್ದಾರೆ.

10 ಕೋಟಿ ವರ್ಷ ಹಳೆಯದು ಎನ್ನಲಾದ ಪಳಯುಳಿಕೆಗಳು, ದಕ್ಷಿಣ ಅಮೆರಿಕದದ ಚಿಲಿ ಹಾಗೂ ಅರ್ಜೆಂಟಿನಾ ದೇಶಗಳ ನಡುವೆ ಹಂಚಿಕೆಯಾಗಿರುವ ಉತ್ತರ ಪಟಗೋನಿಯಾ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿದ್ದವು.

‘ನಜಷ್ ಹಾವಿನ ಪ್ರಾಚೀನ ಪಳಯುಳಿಕೆಯಿಂದಾಗಿ, ಹಾವಿನ ತಲೆ ಬುರುಡೆಯಲ್ಲಿನ ಮೂಳೆಗಳು ವಿಕಾಸ ಹೊಂದಿದ್ದನ್ನು ವಿವರಿಸುವ ಅತ್ಯಮೂಲ್ಯ ಮಾಹಿತಿಗಳನ್ನು ತಿಳಿಯಲಾಗಿದೆ. ಆದರೆ, ಈಗಿನ ಹಾವುಗಳ ತಲೆಬುರುಡೆ ಮೂಳೆಗಳಲ್ಲಿರುವ ಬಳುಕುವ ಕೀಲುಗಳಷ್ಟು ಪೂರ್ಣ ಪ್ರಮಾಣದಲ್ಲಿ ಸಿಕ್ಕಿಲ್ಲ’ ಎಂದು ಆಸ್ಟ್ರಿಯಾದ ಫ್ಲಿಂಡೆರ್ಸ್‌ ವಿವಿಯ ಹಿರಿಯ ಸಂಶೋದಕ ಅಲೆಸ್ಸಾಂಡ್ರೋ ಪಾಲ್ಸಿ ಹೇಳಿದ್ದಾರೆ.

ಅಧ್ಯಯನದ ಪ್ರಕಾರ, ನಜಷ್ ಹಾವುಗಳು ಭೂಮಿಯ ಮೇಲಿನ ಅತ್ಯಂತ ಪ್ರಾಚೀನ ಖಂಡ ಗೊಂಡ್ವಾನದ ದಕ್ಷಿಣ ಗೋಳಾರ್ಧದಲ್ಲಿ ಬದುಕಿದ್ದ ಹಾವುಗಳೊಂದಿಗೆ ಸಾಮ್ಯತೆ ಹೊಂದಿವೆ. ಸದ್ಯ ಬದುಕಿರುವ ಕೆಲವೇ ಕೆಲವು ಪ್ರಭೇದದ ಹಾವುಗಳೊಂದಿಗೂ ಇವು ಹೋಲಿಕೆ ಹೊಂದಿರಬಹುದು ಎನ್ನಲಾಗಿದೆ.

‘ಪ್ರಾಚೀನ ಹಾವುಗಳು ಈಗಿನ ಹಾವುಗಳಿಗಿಂತ ದೊಡ್ಡಗಾತ್ರದಲ್ಲಿದ್ದವು ಎಂಬುದು ಸದ್ಯದ ಅಧ್ಯಯನದಿಂದ ತಿಳಿದುಬಂದಿದೆ’ ಎಂದು ಅರ್ಜೆಂಟಿನಾದ ಮೈಮೊನಿಡೆಸ್‌ ವಿವಿಯ ಫರ್ನಾಂಡೊ ಗಾರ್ಬೆರೊಗ್ಲಿಯೊ ತಿಳಿಸಿದ್ದಾರೆ.

ದೊಡ್ಡ ಗಾತ್ರದ ಬೇಟೆಯನ್ನು ನುಂಗಲು ಅನುಕೂಲವಾಗುವಂತೆ ಬಾಯಿಯನ್ನು ಹಿಗ್ಗಿಸಬಹುದಾದ ತಲೆಬುರುಡೆ ವಿನ್ಯಾಸ ಹೊಂದಿದ್ದ ಕಾರಣ ಅವುಗಳನ್ನು ಹಲ್ಲಿ ಜಾತಿಯ ಸರೀಸೃಪಗಳಿಗಿಂತ ಭಿನ್ನವಾಗಿಯೇ ಕಾಣಬೇಕಾಗುತ್ತದೆ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)