ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಳ ಬಾಲದ ನೀಲಿ ಕೊಕ್ಕರೆ

Last Updated 24 ಜುಲೈ 2019, 15:11 IST
ಅಕ್ಷರ ಗಾತ್ರ

ಕೊಕ್ಕರೆಗಳು ಎಂದ ಕೂಡಲೇ ಶ್ವೇತವರ್ಣದ ಆಕರ್ಷಕ ದೇಹ, ನೀಳ ಕಾಲುಗಳೇ ನೆನಪಾಗುತ್ತವೆ. ಗಾತ್ರ, ದೇಹ ರಚನೆಗೆ ಅನುಗುಣವಾಗಿ ವಿಶ್ವದಾದ್ಯಂತ ಹಲವು ಕೊಕ್ಕರೆ ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪಕ್ಷಿ ಪ್ರಪಂಚದಲ್ಲಿ ಕೊಕ್ಕರೆಗಳಲ್ಲೇ ಭಿನ್ನ ಎನಿಸುವಂತಹ ಅಪರೂಪದ ನೀಲಿ ಕೊಕ್ಕರೆ (Blue crane) ಬಗ್ಗೆ ತಿಳಿಯೋಣ. ಇದರ ವೈಜ್ಞಾನಿಕ ಹೆಸರು ಗ್ರಸ್‌ ಪ್ಯಾರಡೈಸಿಯಾ (Grus paradisea). ಇದು ಗ್ರುಯಿಡೇ (Gruidae) ಕುಟುಂಬಕ್ಕೆ ಸೇರಿದ ಹಕ್ಕಿ.

ಹೇಗಿರುತ್ತದೆ?

ನೀಲಿ ಮತ್ತು ಬೂದು ಮಿಶ್ರಿತ ಪುಕ್ಕದಿಂದ ದೇಹ ಆವರಿಸಿರುತ್ತದೆ. ಬಾಲ ನೀಳವಾಗಿದ್ದು ಕಪ್ಪು ಬಣ್ಣದ ದಟ್ಟವಾದ ಗರಿಗಳಿಂದ ಆವೃತವಾಗಿರುತ್ತದೆ. ಕಾಲುಗಳು ನೀಳವಾಗಿದ್ದು, ಬೂದು ಬಣ್ಣದಲ್ಲಿರುತ್ತವೆ. ಕತ್ತು ನೀಳವಾಗಿದ್ದು, ತಲೆ ದುಂಡಾಗಿ ಮತ್ತು ದೊಡ್ಡದಾಗಿರುತ್ತದೆ. ಕಣ್ಣುಗಳು ಪುಟ್ಟದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಕೊಕ್ಕು ಕೂಡ ಪುಟ್ಟದಾಗಿದ್ದು, ತಿಳಿಗೆಂಪು ಬಣ್ಣದಲ್ಲಿರುತ್ತದೆ. ಎದೆ ಭಾಗದಲ್ಲಿ ಅಲಂಕರಿಸಿದಂತೆ ನೀಳವಾದ ಪುಕ್ಕ ಬೆಳೆದಿದ್ದು, ಇದನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಹೆಣ್ಣು ಮತ್ತು ಗಂಡು ಹಕ್ಕಿಗಳಲ್ಲಿ ಹೆಚ್ಚಿನ ವ್ಯತ್ಯಾಸಗಳು ಇಲ್ಲದಿದ್ದರೂ ಗಂಡು ಹಕ್ಕಿ ಗಾತ್ರದಲ್ಲಿ ತುಸು ದೊಡ್ಡದಾಗಿರುತ್ತದೆ. ಇದರ ಪಾದಗಳು ಕಪ್ಪು ಬಣ್ಣದಲ್ಲಿರುತ್ತವೆ.

ಎಲ್ಲಿದೆ?

ದಕ್ಷಿಣ ಆಫ್ರಿಕಾ ರಾಷ್ಟ್ರ, ಈ ಹಕ್ಕಿಗಳ ಮೂಲ ನೆಲೆ.‌ಶೇ 99ರಷ್ಟು ನೀಲಿ ಕೊಕ್ಕರೆಗಳು ಈ ದೇಶದಲ್ಲೇ ಇವೆ. ಉತ್ತರ ನಮೀಬಿಯಾದಲ್ಲೂ ಕಾಣಸಿಗುತ್ತವೆ. ದಟ್ಟವಾಗಿ ಹುಲ್ಲು ಬೆಳೆದಿರುವ ಪ್ರದೇಶಗಳು, ಕೆಸರಿನಿಂದ ಕೂಡಿರುವ ಕೆರೆ, ಸರೋವರ, ನದಿ ತೀರ ಪ್ರದೇಶಗಳು ಇದರ ನೆಚ್ಚಿನ ವಾಸಸ್ಥಾನ. ವಸಂತ ಕಾಲ ಮತ್ತು ಚಳಿಗಾಲದಲ್ಲಿ ತಗ್ಗು ಪ್ರದೇಶಗಳಿಗೆ ವಲಸೆ ಹೋಗುತ್ತದೆ.

ಜೀವನಕ್ರಮ ಮತ್ತು ವರ್ತನೆ

ದೊಡ್ಡ ಗಾತ್ರದ ಇತರೆ ಕೊಕ್ಕರೆಗಳಿಗೆ ಹೋಲಿಸಿದರೆ, ಇದರ ಜೀವನಕ್ರಮ ಭಿನ್ನವಾಗಿರುತ್ತದೆ. ಪುಟ್ಟ ಗುಂಪು ಕಟ್ಟಿಕೊಂಡು ಜೀವಿಸುತ್ತದೆ. ಹಗಲೆಲ್ಲಾ ಆಹಾರ ಅರಸುತ್ತಾ ಸುತ್ತಾಡುತ್ತದೆ. ಇದು ಸದಾ ಖುಷಿಯಿಂದ ಇರಲು ಪ್ರಯತ್ನಿಸುತ್ತದೆ. ಸದಾ ಜಿಗುಯುತ್ತಾ, ಕುಣಿಯುತ್ತಾ ಓಡಾಡುತ್ತಿರುತ್ತದೆ. ಆಹಾರ ಅರಸಿ ವಲಸೆ ಹೋಗುವ ಪ್ರವೃತ್ತಿ ಹೊಂದಿದ್ದರೂ ಸೀಮಿತ ಪ್ರದೇಶಗಳಲ್ಲಿ ಮಾತ್ರ ಸುತ್ತುತ್ತದೆ. ಚಳಿಗಾಲದಲ್ಲಿ ದೊಡ್ಡ ಗುಂಪು ಕಟ್ಟಿಕೊಂಡು ವಾಸಿಸುತ್ತವೆ. ಒಂದು ಗುಂಪಿನಲ್ಲಿ ಸುಮಾರು ನೂರು ಕೊಕ್ಕರೆಗಳು ಇರುತ್ತವೆ.

ಆಹಾರ

ಇದು ಸಸ್ಯಾಹಾರವನ್ನು ಹೆಚ್ಚು ಇಷ್ಟಪಡುವ ಪ್ರಾಣಿ. ಪೊದೆ ಗಿಡಗಳ ಎಲೆಗಳು ಮತ್ತು ಹುಲ್ಲು ಹೆಚ್ಚಾಗಿ ತಿನ್ನುತ್ತದೆ. ಗಿಡದ ಬೇರುಗಳು, ಗೆಡ್ಡೆಗಳು, ಕಾಳುಗಳನ್ನು ಸೇವಿಸುತ್ತದೆ. ಹುಲ್ಲಿನಲ್ಲಿ ವಾಸಿಸುವ ಮಿಡತೆಗಳು, ಎರೆಹುಳುಗಳು, ಮೀನು, ಕಪ್ಪೆ, ಏಡಿ, ಪುಟ್ಟ ದಂಶಕಗಳು, ಸರೀಸೃಪಗಳನ್ನೂ ಭಕ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT