ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಜಿಂಕೆ ‘ಸ್ಪೇಕ್ಸ್ ಗೆಝೆಲ್’

Last Updated 9 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಜಿಂಕೆಯೆಂದ ಕೂಡಲೇ ನೆನಪಾಗುವುದು, ಚುಕ್ಕಿಗಳಿಂದ ಕೂಡಿದ ಅವುಗಳ ಸುಂದರ ದೇಹ. ಆದರೆ ವಿವಿಧ ದೇಹಾಕೃತಿಯ ಹಲವು ಜಿಂಕೆಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಅಪರೂಪದ ಜಿಂಕೆಗಳಲ್ಲಿ ಒಂದಾದ ಸ್ಪೇಕ್ಸ್‌ ಗೆಝೆಲ್ (Speke's Gazelle) ಬಗ್ಗೆ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಗೆಝೆಲ್ಲಾ ಸ್ಪೇಕಿ (Gazella spekei). ಇದನ್ನು ಸಸ್ಯಾಹಾರಿ ಪ್ರಾಣಿಗಳ ಬೊವಿಡೇ (Bovidae) ಕುಟುಂಬಕ್ಕೆ ಮತ್ತು ಆ್ಯಂಟಿಲೊಪಿನೇ (Antilopinae) ಉಪ ಕುಟುಂಬಕ್ಕೆ ಸೇರಿಸಲಾಗಿದೆ.

ಹೇಗಿರುತ್ತದೆ?

ಕಂದು, ಕಪ್ಪು ಮತ್ತು ಬಿಳಿ ಬಣ್ಣದ ಕೂದಲಿನಿಂದ ಕೂಡಿದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಬೆನ್ನು, ಕತ್ತು, ಕುತ್ತಿಗೆ, ನೀಳವಾದ ಕಾಲುಗಳು ಕಂದು ಬಣ್ಣದಲ್ಲಿದ್ದರೆ, ಉದರಭಾಗ, ಕಾಲಿನ ಒಳಭಾಗಗಳು, ಎದೆಯ ಭಾಗ ಬಿಳಿ ಬಣ್ಣದಲ್ಲಿರುತ್ತವೆ. ಸೊಂಟದ ಭಾಗಗಳಲ್ಲಿ ಮಾತ್ರ ಕಪ್ಪು ಬಣ್ಣದ ಕೂದಲು ಬೆಳೆದಿರುತ್ತವೆ. ಇತರೆ ಜಿಂಕೆಗಳಿಗಿಂತ ಭಿನ್ನವಾಗಿ ತಲೆ ಮತ್ತು ಮೂತಿ ರಚನೆಯಾಗಿದ್ದು, ಮೂತಿಯ ಮುಂಭಾಗ ಊದಿಕೊಂಡಿರುವುದು ಇದರ ವಿಶೇಷ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು, ಕಂದು ಮಿಶ್ರಿತ ಬಣ್ಣದಲ್ಲಿರುತ್ತವೆ. ಕೋಡುಗಳು ಚಿಕ್ಕದಾಗಿದ್ದು, ಚೂಪಾಗಿರುತ್ತವೆ. ಕಿವಿಗಳು ದೊಡ್ಡದಾಗಿದ್ದು, ಎಲೆಯಾಕಾರದಲ್ಲಿರುತ್ತವೆ. ಬಾಲ ಪುಟ್ಟದಾಗಿರುತ್ತದೆ.

ಆಫ್ರಿಕಾ ಖಂಡದಲ್ಲಿ ಮಾತ್ರ ಕಾಣಸಿಗುವ ಜಿಂಕೆಗಳಲ್ಲಿ ಇದು ಕೂಡ ಒಂದು. ಇಥಿಯೊಪಿಯಾ ಮತ್ತು ಸೊಮಾಲಿಯಾ ರಾಷ್ಟ್ರದ ಕೆಲವು ಭೂಭಾಗಳಲ್ಲಿ ಇದರ ಸಂತತಿ ವಿಸ್ತರಿಸಿದೆ. ಕುರುಚಲು ಗಿಡಗಳು ಬೆಳೆಯುವ ಪ್ರದೇಶ, ಹುಲ್ಲು ಬೆಳೆಯುವ ಪ್ರದೇಶ, ಅರೆ ಮರುಭುಮಿ ಪ್ರದೇಶಗಳು ಇದರ ವಾಸಸ್ಥಾನ.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಜಿಂಕೆ. ಒಂದು ಗುಂಪಿನಲ್ಲಿ ಹೆಚ್ಚೆಂದರೆ 12 ಗಸೆಲ್‌ಗಳು ಇರುತ್ತವೆ. ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ವ್ಯತ್ಯಾಸಗಳು ಇರುತ್ತವೆ. ಪ್ರಬಲವಾದ ಯಾವುದಾದರೂ ಒಂದು ಗಂಡು ಜಿಂಕೆ ಗುಂಪಿನಲ್ಲಿ ಪಾರಮ್ಯ ಮೆರೆಯುತ್ತದೆ. ಒಂದು ವಯಸ್ಕ ಗಂಡು ಜಿಂಕೆ ಮಾತ್ರ ಗುಂಪಿನಲ್ಲಿದ್ದರೆ, ಉಳಿದವು ಹೆಣ್ಣು ಗಸೆಲ್‌ಗಳು ಮತ್ತು ಮರಿಗಳು.

ಮುಂಜಾನೆ ಮತ್ತು ಸಂಜೆ ಮಾತ್ರ ಇವು ಹೆಚ್ಚು ಚುರುಕಾಗಿರುತ್ತವೆ. ತಾಪಮಾನ ಹೆಚ್ಚಾಗಿರುವ ಅವಧಿಯಲ್ಲಿ ನೆರಳು ಇರುವಂತಹ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತವೆ. ಇದರ ಮೂಗಿನ ಮೇಲೆ ಚೀಲದಂತಹ ವಿಶೇಷ ಕೋಶ ಬೆಳೆದಿದ್ದು, ಅಪಾಯ ಎದುರಾದಾಗ ಉಬ್ಬುತ್ತದೆ. ದೇಹದಲ್ಲಿ ಆಗುವ ಈ ಬದಲಾವಣೆಯಿಂದಾಗಿಯೇ ಇದು ಸಂವಹನ ನಡೆಸುತ್ತದೆ. ಪರಿಸ್ಥಿತಿ ವಿಷಮವಾಗಿದ್ದರೆ ಜೋರಾಗಿ ಕಿರುಚುತ್ತದೆ. ಆಹಾರ ಅರಸುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವ ಪ್ರವೃತ್ತಿಯ ಜಿಂಕೆ ಇದು. ಪ್ರಸ್ತುತ ವಾಸಸ್ಥಾನಗಳ ನಾಶದಿಂದಾಗಿ ಇದರ ಸಂತತಿ ಅಳಿವಿನಂಚಿನಲ್ಲಿದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು, ಪೊದೆಗಿಡಗಳ ಎಲೆಗಳು, ಗಿಡಗಳ ಚಿಗುರೆಲೆಗಳು ಇದರ ಪ್ರಮುಖ ಆಹಾರ. ಮರುಭೂಮಿಯಂತಹ ಪ್ರದೇಶಗಳಲ್ಲಿ ವಾಸಿಸುವುದರಿಂದ ನೀರು ಕುಡಿಯದೇ ಹೆಚ್ಚು ಸಮಯ ಇರುವ ಸಾಮರ್ಥ್ಯ ಇದಕ್ಕಿದೆ.

ಸಂತಾನೋತ್ಪತ್ತಿ

ಇದರ ಸಂತಾನೋತ್ಪತ್ತಿ ನಿರ್ದಿಷ್ಟ ಅವಧಿ ಇಲ್ಲ. ಹೆಣ್ಣು ಜಿಂಕೆ 6ರಿಂದ 7 ತಿಂಗಳ ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾಫ್‌ (Calf) ಎನ್ನುತ್ತಾರೆ. ಮರಿ ಜನಸಿದ ಕೆಲವೇ ಗಂಟೆಗಳಲ್ಲೇ ಎದ್ದು ಓಡಾಡಲು ಆರಂಭಿಸುತ್ತದೆ. ಆದರೆ 2ರಿಂದ 3 ತಿಂಗಳ ವರೆಗೆ ತಾಯಿ ಹಾಲು ಮಾತ್ರ ಕುಡಿಯುತ್ತಾ ಬೆಳೆಯುತ್ತದೆ. ನಂತರ ಘನ ಆಹಾರ ಸೇವಿಸಲು ಆರಂಭಿಸುತ್ತದೆ. 9 ತಿಂಗಳ ನಂತರ ಹೆಣ್ಣು ಮರಿ ವಯಸ್ಕ ಹಂತ ತಲುಪಿದರೆ ಗಂಡು ಮರಿ 18 ತಿಂಗಳ ನಂತರ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಗಂಡು ಗೆಝೆಲ್ ಅನ್ನು ‘ಬುಲ್’ ಎಂತಲೂ, ಹೆಣ್ಣು ಗೆಝೆಲ್ ಅನ್ನು‘ಕೌ’ ಎಂತಲೂ ಕರೆಯುತ್ತಾರೆ.

*ಪುಟ್ಟ ಗಾತ್ರದ ಗೆಝೆಲ್‌ಗಳಲ್ಲಿ ಇದು ಕೂಡ ಒಂದು.

*ಗಂಡು ಮತ್ತು ಹೆಣ್ಣು ಎರಡೂ ಗೆಝೆಲ್‌ಗಳಿಗೆ ‘ಎಸ್‌’ ಆಕಾರದಕೋಡುಗಳು ಬೆಳೆಯುತ್ತವೆ.

*ಮಧ್ಯ ಆಫ್ರಿಕಾದ ಬ್ರಿಟಿಷ್ ಸಂಶೋಧಕ ಜಾನ್ ಹ್ಯಾನಿಂಗ್ ಸ್ಪೇಕ್ ಅವರ ಸ್ಮರಣಾರ್ಥ ಈ ಜಿಂಕೆಗೆ ಅವರ ಹೆಸರನ್ನು ಇಡಲಾಗಿದೆ

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 15–20 ಕೆ.ಜಿ,ದೇಹದ ಎತ್ತರ 50 ರಿಂದ 60 ಸೆಂ.ಮೀ, ದೇಹದ ಉದ್ದ-95 ರಿಂದ105 ಸೆಂ.ಮೀ,ಸರಾಸರಿ ಜೀವಿತಾವಧಿ 12 ವರ್ಷಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT