ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವೇತಕನ್ಯೆ ಈ ಕಿತ್ತಳೆ ಅಂಚಿನ ಚಿಟ್ಟೆ

ಕೀಟ ಪ್ರಪಂಚ
Last Updated 27 ಜುಲೈ 2019, 8:58 IST
ಅಕ್ಷರ ಗಾತ್ರ

ಶ್ವೇತವರ್ಣದ ನಿರ್ಮಲ ರೆಕ್ಕೆಗಳ ತುದಿಯಂಚುಗಳಲ್ಲಿ ಮೆರುಗು ಕೊಟ್ಟ ಕಿತ್ತಳೆ ಬಣ್ಣವನ್ನು ನೋಡುತ್ತಿದ್ದರೆ ಕಣ್ಣಿನ ರೆಪ್ಪೆ ಮುಚ್ಚದೇ ಅಲ್ಲೇ ನಾವು ಪರವಶರಾಗಬಹುದು. ಅಂಥ ಸೌಂದರ್ಯ ಈ ಚಿಟ್ಟೆಯದು. ಆಂಗ್ಲ ಭಾಷೆಯಲ್ಲಿ ಈ ಚಿಟ್ಟೆಯನ್ನು ಆರೆಂಜ್ ಟಿಪ್(Orange tip buttefly) ಎಂಬ ಅರ್ಥಪೂರ್ಣ ಹೆಸರಿಟ್ಟಿದಾರೆ.

ಅಲ್ಲದೇ, ರೆಕ್ಕೆಗಳಲ್ಲಿನ ಕವಲೊಡೆದ ನಾಳಗಳೊಡನೆ ಇದು ನಳನಳಸುತ್ತಿದ್ದರೆ ಸಾಕ್ಷಾತ್ ಶ್ವೇತಕನ್ಯೆಯಂಥೆ ಕಂಡರೆ ಆಶ್ಚರ್ಯವಿಲ್ಲ. ಇದು ಗಂಡು ಚಿಟ್ಟೆಯ ಸೌಂದರ್ಯವಾದರೇ, ಹೆಣ್ಣು ಚಿಟ್ಟೆಯು ಇದರಿಂದ ಹೊರತಾಗಿ ಹಸಿರು, ಹಳದಿ ಬೂದು ಬಣ್ಣಗಳ ಚುಕ್ಕೆಗಳಿಂದ ರೂಪತಾಳಿ ಲಿಂಗ ವರ್ಣಬೇಧ ತೋರುತ್ತದೆ(Sexual dimorphism). ಈ ಚಿಟ್ಟೆಯು ತನ್ನ ಬಣ್ಣದಂತಿರುವ ಹೂವುಗಳನ್ನು ಆರಿಸಿ ಅದರ ಮೇಲೆ ಕೂತು, ಇನ್ನಿತರೆ ಕೀಟಗಳು ಪಕ್ಷಿಗಳು ಗುರುತಿಸದಂತೆ ಕಣ್ಣಿಗೆ ಮೋಸ ಮಾಡುತ್ತದೆ(Camouflage). ಪೈರಿಡೆ(Pieridae) ಕುಟುಂಬ ಲೆಪಿಡೋಪ್ಟೆರ(Lepidoptera) ಗುಂಪಿಗೆ ಇದು ಸೇರಿದ್ದಾಗಿದೆ.

ಗಂಡು ಮತ್ತು ಹೆಣ್ಣು ಚಿಟ್ಟೆಗಳ ವಾಸಸ್ಥಳವೂ ಭಿನ್ನವಾಗಿದೆ. ಗಂಡು ಚಿಟ್ಟೆಯು ಅರಣ್ಯ ಪ್ರದೇಶದ ಹೊರ ಅಂಚುಗಳಲ್ಲಿದ್ದರೇ, ಹೆಣ್ಣು ಚಿಟ್ಟೆಯು ಹುಲ್ಲುಗಾವಲಿನ ತಾಣ ಬಯಸುತ್ತದೆ. ಗಂಡು ಚಿಟ್ಟೆಯು ಹುಲ್ಲುಗಾವಲಿಗೆ ತೆರಳುವುದು ಅತೀ ವಿರಳ. ಅದರಲ್ಲೂ ಹೆಣ್ಣು ಚಿಟ್ಟೆಗಳ ಸಂಖ್ಯೆ ಕಡಿಮೆಯಾದಾಗ ತನ್ನ ಸಂಗಾತಿಯನ್ನು ಆಯ್ದುಕೊಳ್ಳುವುದಕ್ಕೆ ಕ್ಷಣಕಾಲ ಮಾತ್ರ ಬಂದು ಹೆಣ್ಣನ್ನು ಹಿಂಬಾಲಿಸಿಕೊಂಡು ಹೊರಡುತ್ತದೆ. ಕೆಲಕಾಲ ಸಮಾಗಮದ ನಂತರ ಹೆಣ್ಣು ಚಿಟ್ಟೆಯು ಸಾಸಿವೆ, ಕೋಸು, ಮೂಲಂಗಿ ಸಸ್ಯಗಳ ಕುಟುಂಬ ಕ್ರುಸಿಫೆರೆ(cruciferae)ಇನ್ನಿತರೆ ಸಸ್ಯಗಳ ಎಳೆಯ ಹೂಗೊಂಚಲುಗಳಲ್ಲಿ ಮೊಟ್ಟೆಯಿಡುತ್ತದೆ. ತದನಂತರ ಆ ಗೊಂಚಲಿನಲ್ಲಿ ಮೊಟ್ಟೆಯ ಸುತ್ತಮುತ್ತ ವಿಶೇಷ ಬಗೆಯ ರಾಸಾಯನಿಕ ದ್ರವ್ಯ ಫಿರಮೋನ್‌ (pheromone) ಬಳಿಯುತ್ತದೆ. ಮತ್ತೊಂದು ಚಿಟ್ಟೆಯು ಅಲ್ಲಿ ಬಂದು ಮೊಟ್ಟೆಯಿಡಬಾರದೆಂಬ ಸೂಚನೆಗಾಗಿ ಈ ಫಿರಮೋನ್ ಲೇಪನ ಕ್ರಿಯೆ ನಡೆಸುತ್ತದೆ.

ಈಗಾಗಲೇ ಮೊಟ್ಟೆಯಿಟ್ಟ ಹೂಗೊಂಚಲಿನಲ್ಲಿ ಬೇರೆ ಹೆಣ್ಣು ಚಿಟ್ಟೆಯು ಮೊಟ್ಟೆ ಯಾವುದೇ ಕಾರಣಕ್ಕೂ ಇಡುವುದಿಲ್ಲ. ಇದಕ್ಕೆ ಕಾರಣ ತನ್ನ ಮೊಟ್ಟೆಗಿಂತ ಮೊದಲಿಟ್ಟ ಬೇರೆ ಮೊಟ್ಟೆಯೊಡೆದು ಹೊರಬಂದ ಮರಿಯು (ಲಾರ್ವ) ಸಾಮಾನ್ಯವಾಗಿ ಅಕ್ಕಪಕ್ಕ ಮೊಟ್ಟೆಯಿದ್ದರೆ ಆ ಮೊಟ್ಟೆಯು ತಿನ್ನುತ್ತದೆ. ಇದಿಲ್ಲದ್ದಿದ್ದರೂ ತಾನು ಮೊಟ್ಟೆಯೊಡೆದು ಬಂದ ತನ್ನ ಮೊಟ್ಟೆ ಕವಚವನ್ನೇ ಮೊದಲ ತುತ್ತಾಗಿ ತಿನ್ನುವುದು ವಾಡಿಕೆ. ಹೀಗಾಗಿ ಒಂದು ಮೊಟ್ಟೆಯಿದ್ದ ಹೂಗೊಂಚಲಿನಲ್ಲಿ ಬೇರೆ ಹೆಣ್ಣು ಮೊಟ್ಟೆಯಿಡುವುದಿಲ್ಲ. ಇದಕ್ಕೋಸ್ಕರ ಮೊಟ್ಟೆ ಕಾಯುವ ಮತ್ತು ತನ್ನ ಸಂತತಿಯನ್ನು ಮುಂದುವರಿಸುವ ಕಾಳಜಿಯನ್ನು ಹೆಣ್ಣು ಚಿಟ್ಟೆಯು ವಹಿಸುತ್ತದೆ.

ಮರಿಯು ಒಟ್ಟು 5 ಹಂತಗಳನ್ನು ಪೂರೈಸುವ ವೇಳೆಯಲ್ಲಿ ಎಲೆ ಹೂವು ಮತ್ತು ಕಾಯಿಗಳನ್ನು ತಿಂದು ನೆಲಕ್ಕುರುಳಿ ಅಲ್ಲಿನ ಎಲೆಗಳಲ್ಲಿ ಕೋಶಾವಸ್ಥೆ ಪೂರೈಸುತ್ತದೆ. ನಂತರ ಪ್ರೌಢ ಚಿಟ್ಟೆಗಳು ಹೊರಹೊಮ್ಮಿ ಹೂಗಳಮಕರಂದ ಹೀರುತ್ತವೆ. ಈ ಚಿಟ್ಟೆಗಳು ಸೂರ್ಯನ ಬೆಳಕಿನಲ್ಲಿ ಮಾತ್ರ ಸಂತಸದಿಂದ ಹಾರಾಡಲು ಬಹಳ ಇಷ್ಟ ಪಡುತ್ತವೆ. ಇವು ನೆರಳಿನಾಶ್ರಯ ಬಯಸುವುದಿಲ್ಲ. ಇಂತಹ ಸುಂದರ ಚಿಟ್ಟೆಗಳನ್ನು ಕೆಲವು ಹಕ್ಕಿಗಳಿಂದ, ಪರಭಕ್ಷಕ ಕೀಟಗಳಿಂದ ನಾಶ ಹೊಂದುತ್ತಿವೆ. ಜತೆಗೆಜಿಂಕೆ ಮತ್ತು ಕೆಲವು ಪ್ರಾಣಿಗಳು ಹುಲ್ಲು ಮೇಯುವ ಸಮಯದಲ್ಲಿ ಪರೋಕ್ಷವಾಗಿಯೂ ತೊಂದರೆಗೊಳಗಾಗಿ ಸಾಯುತ್ತಿರುವುದು ವಿಪರ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT