ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದ್ದಾರೆ ಪಕ್ಷಿಗಳ ‘ನೀರ್‌ ಸಾಬ್‌’!

Last Updated 12 ಜೂನ್ 2018, 12:40 IST
ಅಕ್ಷರ ಗಾತ್ರ

ಕೊಪ್ಪಳ ಜಿಲ್ಲೆಯಲ್ಲೀಗ ಬಿಸಿಲಿನ ಪ್ರಖರತೆ ಕನಿಷ್ಠ 38 ಡಿಗ್ರಿಗೆ ಬಂದು ನಿಂತಿದೆ. ಇಂತಹ ರಣಬಿಸಿಲಿಗೆ ಜನ-ಜಾನುವಾರು ಮತ್ತು ಪಕ್ಷಿಗಳೂ ತತ್ತರಿಸುತ್ತಿವೆ. ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿರುವ ಮಹಮ್ಮದ್ ಬಿನ್ ಸುಲ್ತಾನ್ ಸಾಬ್ ಪಕ್ಷಿಗಳ ದಾಹ ತಣಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಜಿಲ್ಲಾಡಳಿತ ಭವನದ ಸುತ್ತ 100ಕ್ಕೂ ಹೆಚ್ಚು ವಿಧದ ಗಿಡಮರಗಳಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಬಿಸಿಲೇರಿ ಬಂದವರಿಗೆ ಮರಗಳು ನೆರಳು ಕೊಡುತ್ತವೆ. ದಣಿವಾರಿಸಿಕೊಳ್ಳಲು ಮರದ ನೆರಳಿಗೆ ಕುಳಿತರೆ ಹಕ್ಕಿಗಳ ಚಿಲಿಪಿಲಿ ನಾದ ಕಿವಿಗೆ ಇಂಪನ್ನುಂಟು ಮಾಡುತ್ತವೆ.

ಜನರಿಗೆ ಖುಷಿ ನೀಡುವಂತಹ ಸಂಗೀತ ಗೋಷ್ಠಿಯಲ್ಲಿ ತಲ್ಲೀನವಾದ ಹಕ್ಕಿಗಳ ಬಾಯಾರಿಕೆ ನೀಗಿಸಲು ಸುಲ್ತಾನ್ ಸಾಬ್ ಪ್ರತಿ ಮರದಲ್ಲಿ 3-4 ಮಣ್ಣಿನ ಪಾತ್ರೆಗಳನ್ನು ತೂಗು ಹಾಕಿದ್ದಾರೆ. ಜಿಲ್ಲಾಡಳಿತ ಭವನದ ಸುತ್ತ ಸುಮಾರು 500 ನೀರಿನ ಪಾತ್ರೆಗಳನ್ನು ಕಟ್ಟಿದ್ದಾರೆ. ಇವುಗಳಿಗೆ ದಿನಕ್ಕೆ ಮೂರು ಹೊತ್ತು ನೀರು ಹಾಕುವ ಕಾಯಕವನ್ನು ತಪ್ಪದೆ ಮಾಡುತ್ತಿದ್ದಾರೆ. ಇದರಿಂದ ಮೈನಾ, ಮಿಂಚುಳ್ಳಿ, ಪಾರಿವಾಳ, ರತ್ನಪಕ್ಷಿ, ಕಾಗೆ, ಗಿಳಿ, ಬೆಳವ, ಮರಕುಟಿಗ, ಗುಬ್ಬಚ್ಚಿ, ಗೊರವಂಕ... ಹೀಗೆ ನೂರಾರು ಪ್ರಭೇದಗಳ ಪಕ್ಷಿಗಳು ಅಲ್ಲಿ ಬೀಡುಬಿಟ್ಟಿವೆ.

ನೀರಿನ ಪಾತ್ರೆಯ ಜೊತೆಗೆ ಕಾಳಿನ ಟ್ರೇಗಳನ್ನು ತೂಗು ಹಾಕಿದ್ದಾರೆ. ಇವುಗಳಿಗೆ ಮೂರು ದಿನಕ್ಕೊಮ್ಮೆ ಆರು ಕೆ.ಜಿ ನವಣೆಯನ್ನು ತಂದು ಹಾಕುತ್ತಿದ್ದಾರೆ. ಕೆ.ಜಿಗೆ ₹ 60ರಷ್ಟು ದರವಿದ್ದರೂ ಸುಲ್ತಾನ್ ಸಾಬ್ ಅವರ ಪಕ್ಷಿ ಸೇವೆಯನ್ನು ನೋಡಿ ಎಪಿಎಂಸಿಯಲ್ಲಿ ₹100ಕ್ಕೆ ಆರು ಕೆ.ಜಿ ಕೊಡುತ್ತಿದ್ದಾರಂತೆ. ವರ್ಷಕ್ಕೆ ಏನಿಲ್ಲ ಎಂದರೂ 10-15 ಸಾವಿರ ರೂಪಾಯಿಯನ್ನು ಪಕ್ಷಿಗಳಿಗಾಗಿಯೇ ಮೀಸಲಿಟ್ಟಿದ್ದಾರೆ.

ಇನ್ನು ನೀರಿನ ಪಾತ್ರೆ ವಿಷಯಕ್ಕೆ ಬಂದರೆ ₹ 20ಕ್ಕೆ ಒಂದರಂತೆ ಮಣ್ಣಿನ ಪಾತ್ರೆಯನ್ನು ಆರ್ಡರ್ ಕೊಟ್ಟು, ನೇತು ಹಾಕಲು ಪಾತ್ರೆಯ ಅಂಚಿನ ಸುತ್ತ ಮೂರು ತೂತು ಹಾಕುವಂತೆ ಕುಂಬಾರನಿಗೆ ಹೇಳಿ ಮಾಡಿಸಿದ್ದಾರೆ. 500 ಪಾತ್ರೆಗಳಿಗೆ ಸುಮಾರು 10 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಕೆಲವೊಂದಿಷ್ಟು ಪಾತ್ರೆಗಳು ಒಡೆದಿರುವುದರಿಂದ ಮತ್ತು ಈ ವರ್ಷ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಇನ್ನೂ 200-300 ಪಾತ್ರೆಗಳನ್ನು ಆರ್ಡರ್ ಕೊಟ್ಟು ಮಾಡಿಸಿಕೊಂಡು ಬರುವ ತಯಾರಿಯಲ್ಲಿದ್ದಾರೆ. ಜೊತೆಗೆ ಪಕ್ಷಿಗಳು ಮೊಟ್ಟೆಯನ್ನಿಟ್ಟು ಮರಿ ಮಾಡಲು ಗೂಡಿನ ಬಾಕ್ಸ್‌ಗಳನ್ನು ತರುವ ಯೋಜನೆ ಹಾಕಿಕೊಂಡಿದ್ದಾರೆ. ಇದೆಲ್ಲವನ್ನು ಸುಲ್ತಾನ್ ಸಾಬ್ ತಮಗೆ ಬರುವ ಸಂಬಳದಲ್ಲೇ ಖರ್ಚು ಮಾಡುತ್ತಿದ್ದಾರೆ.\

ನೀರು, ಕಾಳು ಹಾಕುವ ಕೆಲಸವನ್ನು ಬೇಸಿಗೆಯಲ್ಲಷ್ಟೆ ಅಲ್ಲದೆ ವರ್ಷದ 12 ತಿಂಗಳೂ ನಿರಂತರವಾಗಿ ಮಾಡುತ್ತಾರೆ. ರಜಾದಿನಗಳಲ್ಲಿ ಬೈಕಿನಲ್ಲಿ ಬಂದು ಕಾಳು, ನೀರು ತುಂಬಿಸುತ್ತಾರೆ. ಬೇರೆ ಊರಿಗೇನಾದರೂ ಹೋಗುವಂತಹ ಪ್ರಸಂಗ ಬಂದರೆ ತಮ್ಮ ಸಹೋದ್ಯೋಗಿ ದೇವೆಂದ್ರಪ್ಪನಿಗೆ ನೀರು ಹಾಕಲು ಹೇಳಿ ಹೋಗುತ್ತಾರೆ. ಏನೇ ಕೆಲಸವಿದ್ದರೂ ಯಾವುದೇ ಒತ್ತಡ ಬಂದರೂ ಪಕ್ಷಿಗಳಿಗೆ ನೀರುಣಿಸುವ ಕಾಯಕವನ್ನು ಮಾತ್ರ ಬಿಡುವುದಿಲ್ಲ. ಇವರ ಈ ಕಾರ್ಯಕ್ಕೆ ಸ್ನೇಹಿತರೂ ಆಗಾಗ ಕೈ ಜೋಡಿಸುವುದುಂಟು.

ಜಿಲ್ಲಾಡಳಿತ ಭವನದಲ್ಲಿ ಅಷ್ಟೇ ಅಲ್ಲದೆ, ಕೊಪ್ಪಳದ ಗಣೇಶ ನಗರದಲ್ಲಿರುವ ತಮ್ಮ ಮನೆಯ ಮುಂದಿನ ಗಿಡ ಮರಗಳಲ್ಲೂ ನೀರು, ಕಾಳಿನ ಪಾತ್ರೆಗಳನ್ನು ನೇತು ಹಾಕಿದ್ದಾರೆ. ಅಲ್ಲಿಯೂ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ. ಈ ಕೆಲಸಕ್ಕೆ ಕುಟುಂಬದವರೂ ಸಾಥ್ ನೀಡುತ್ತಿದ್ದಾರೆ.

‘ಸುಮಾರು ಎಂಟು ವರ್ಷಗಳ ಹಿಂದೆ ಬಿರು ಬೇಸಿಗೆಯಲ್ಲಿ ಜಿಲ್ಲಾಡಳಿತ ಭವನದ ಉದ್ಯಾನದಲ್ಲಿ ಸುಮ್ಮನೆ ಸುತ್ತಾಡುತ್ತಿರುವಾಗ, ಉದ್ಯಾನದಲ್ಲಿರುವ ನಳದ ಬಳಿ ದಾಹ ತೀರಿಸಿಕೊಳ್ಳಲು ಪಕ್ಷಿಗಳ ಹಿಂಡು ಬಂದಿತ್ತು. ನಳದಲ್ಲಿ ನೀರು ಇರದೇ ಇರುವುದರಿಂದ ನಳದ ಬಾಯಿಗೆ ಕೊಕ್ಕೆಯನ್ನಿಟ್ಟು ಹನಿ ನೀರಿಗಾಗಿ ಹಪಹಪಿಸುತ್ತಿರುವುದನ್ನು ನೋಡಿದೆ. ಮರುದಿನವೇ ನೀರಿನ ಪಾತ್ರೆಗಳನ್ನು ತಂದು ಗಿಡಮರಗಳಿಗೆ ಕಟ್ಟಿ, ನೀರು ಹಾಕಲು ಪ್ರಾರಂಭಿಸಿದೆ’ ಎಂದು ಸುಲ್ತಾನ್ ಸಾಬ್ ಹೇಳುತ್ತಾರೆ.

‘ಪಕ್ಷಿಗಳು ನೀರು ಕುಡಿಯಲು ಬರತೊಡಗಿದವು. ಅವುಗಳ ಚಿಲಿಪಿಲಿ ಕೇಳಿದಾಗ, ಜಲಕ್ರೀಡೆ ಆಡುವುದನ್ನು ನೋಡಿದಾಗ ಮನಸ್ಸಿಗೆ ಉಲ್ಲಾಸವಾಗುತ್ತಿತ್ತು. ಬರುಬರುತ್ತಾ ಪಾತ್ರೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಜೊತೆಗೆ ಕಾಳಿನ ಟ್ರೇಗಳನ್ನು ಕಟ್ಟಿರುವೆ. ಪಕ್ಷಿಗಳು ಕಾಳುಗಳನ್ನು ತಿಂದು, ನೀರು ಕುಡಿದು ಹಾಯಾಗಿ ಹಾರಾಡುತ್ತಿವೆ. ಇದರಿಂದ ಮನಸ್ಸಿಗೆ ಹಿಡಿಸಲಾರದಷ್ಟು ಸಂತೋಷವಾಗಿದೆ’ ಎನ್ನುತ್ತಾರೆ ಅವರು.

ಹಕ್ಕಿಗಳಿಗೆ ಸ್ವಚ್ಛವಾದ ನೀರೇ ಬೇಕು. ಗಲೀಜಾದ ನೀರನ್ನು ಅವು ಕುಡಿಯುವುದಿಲ್ಲ. ಬೇವಿನ ಮರದಲ್ಲಿ ಕಟ್ಟಿರುವ ಪಾತ್ರೆಗಳಿಗೆ ಬೇವಿನ ಎಲೆಗಳು ಬೀಳುವುದರಿಂದ ನೀರು ಕಹಿಯಾಗುತ್ತದೆ. ಒಮ್ಮೊಮ್ಮೆ ಪಕ್ಷಿಗಳು ನೀರಿನ ಪಾತ್ರೆಯಲ್ಲಿ ಆಟ ಆಡುವುದರಿಂದ ಆಗ ನೀರು ಗಲೀಜು ಆಗುತ್ತದೆ. ಹೀಗಾಗಿ ಆ ನೀರನ್ನು ಪದೇ ಪದೆ ಬದಲಾಯಿಸಬೇಕಾಗುತ್ತದೆ. ಅದಕ್ಕೆ ಈ ಪಕ್ಷಿಪ್ರಿಯ ಒಂದಿನಿತೂ ಬೇಸರ ಮಾಡಿಕೊಳ್ಳುವುದಿಲ್ಲ. ಜಾನುವಾರುಗಳಿಗಾಗಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಒಂದು ನೀರಿನ ದೋಣಿಯನ್ನು ಇರಿಸಿದ್ದರು. ಜಿಲ್ಲಾಡಳಿತ ಭವನಕ್ಕೆ ಆಸ್ಪತ್ರೆ ಹತ್ತಿರ ಆಗುವುದರಿಂದ ದಿನಾಲೂ ಹೋಗಿ ದೋಣಿಯನ್ನು ತುಂಬಿಸಿ ಬರುತ್ತಿದ್ದರು. ಇದರಿಂದ ಬೀದಿ ದನಗಳಿಗೆ ದಾಹ ತೀರಿಸಿಕೊಳ್ಳಲು ಅನುಕೂಲವಾಗಿತ್ತು. ಆದರೆ, ಈಗ ಜಿಲ್ಲಾಸ್ಪತ್ರೆಗೆ ಸುತ್ತಲೂ ಕಾಂಪೌಂಡ್ ಹಾಕಿರುವುದರಿಂದ ದನಗಳು ಆಸ್ಪತ್ರೆ ಆವರಣದೊಳಗೆ ಹೋಗದಂತಾಗಿದೆ. ಆದ್ದರಿಂದ ಆ ದೋಣಿಯನ್ನು ಬೇರೆ ಎಲ್ಲಿಯಾದರೂ ಸ್ಥಳಾಂತರ ಮಾಡಬೇಕೆನ್ನುವ ಯೋಚನೆಯಲ್ಲಿದ್ದಾರೆ.

ಅವರ ಸಂಪರ್ಕಕ್ಕೆ 9880730809.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT