ಉಪಕಾರಿ ಕೀಟ ಹುಲಿ ಜೀರುಂಡೆ

7

ಉಪಕಾರಿ ಕೀಟ ಹುಲಿ ಜೀರುಂಡೆ

Published:
Updated:

ಅಕ್ಕ ಪಕ್ಕ ಅಡಕೆ, ಕೋಕೋ ಮಿಶ್ರಬೆಳೆ ತೋಟದ ನಡುವೆ ತೇವಾಂಶದಿಂದ ಕೂಡಿದ ಮರಳುಮಿಶ್ರಿತ ಕಾಲು ದಾರಿ. ಗಿಡ ಮರಗಳ ಮೇಲಿನ ಕೀಟಗಳ ನೋಡಲು ಕಾತುರದಿಂದ ಕಾಯುತ್ತಿದ್ದೆ. ಕಾಲುದಾರಿಯೆಡೆಗೆ ಕಣ್ಣು ಹಾಯಿಸಿದಾಗ ಕಂಡದ್ದು, ಟೈಗರ್ ಬೀಟಲ್‌ಗಳು (Tiger Beetle). ಇವನ್ನು ‘ಹುಲಿ ಜೀರುಂಡೆ’ಗಳೆಂದು ಕರೆಯಲು ನಾನು ಇಷ್ಟಪಡುತ್ತೇನೆ.

ದಟ್ಟ ಹಸಿರು, ನೀಲಿ, ನೇರಳೆ, ಕಂಚಿನಂತಹ ಲೋಹ ಬಣ್ಣಗಳಿಂದ ಕಂಗೊಳಿಸುವ ಈ ಚಿಕ್ಕ ಸುಂದರ ಕೀಟವನ್ನು, ಒಮ್ಮೆ ಎದುರು ನಿಂತು ನೋಡಿದಾಗ ಭಯ ಉಂಟಾಗುವುದಂತೂ ಖಚಿತ. ಕಾರಣ ಇದರ ಎರಡು ದವಡೆಗಳು ಕುಡುಗೋಲಿನಾಕೃತಿಯಂತಿದ್ದು, ತೀರಾ ಹರಿತವಾಗಿವೆ. ಇವು ನಮಗೆ ಕಾಣ ಸಿಗುವುದು ಅಪರೂಪವಾದರೂ ಒಟ್ಟು ಈವರೆಗೆ 2,600 ವಿಭಿನ್ನ ತಳಿಗಳನ್ನು ಗುರುತಿಸಲಾಗಿದೆ. 

ಇದು ದುರಾಕ್ರಮಣ ಮತ್ತು ಭೂಮಿ ಮೇಲೆ ಅತೀ ವೇಗವಾಗಿ ಓಡುವ ಕೀಟ ಎಂಬ ಪ್ರಶಂಸೆಗೆ ಪಾತ್ರವಾಗಿವೆ. ಗಂಟೆಗೆ 9 ಕಿ. ಮೀ ವೇಗದಲ್ಲಿ ಓಡುತ್ತವೆ.

ತಲೆಯಲ್ಲಿ ಎರಡು ಉದ್ದನೆಯ ಮೀಸೆಯಿದ್ದು, ದೇಹದಿಂದ ಹೊರಹೊಮ್ಮಿರುವಂತೆ ಭಾಸವಾಗುವ ದಪ್ಪನೆಯ ಎರಡು ಸಮ್ಮಿಶ್ರ ಕಣ್ಣುಗಳಿವೆ. ಇದಕ್ಕೆ ದೃಷ್ಟಿಶಕ್ತಿ ಹೆಚ್ಚಾಗಿರುತ್ತದೆ.

ನೀಳವಾದ ಕಾಲುಗಳನ್ನು ಹೊಂದಿದ್ದು, ಸುಲಭವಾಗಿ ಆಹಾರ ಅರಸಲು ಇವು ನೆರವಾಗುತ್ತವೆ. ಜೇಡ, ನೊಣ, ಮೃದ್ವಂಗಿ, ಇರುವೆ, ಮಿಡತೆ ಇತ್ಯಾದಿಗಳನ್ನು ಬೇಟೆಯಾಡಿ ಭಕ್ಷಿಸುತ್ತದೆ. ಇದು ಬೇಟೆಯಾಡುವ ವಿಧಾನವೂ ವಿಶಿಷ್ಟವಾಗಿದ್ದು, ಮೊದಲು ಬೇಟೆಯ ಮೇಲೆ ತನ್ನ ಎಂಜಲನ್ನು ಉಗಿಯುತ್ತದೆ. ತಿಂದ ಆಹಾರ ಬೇಗ ಜೀರ್ಣವಾಗುವುದಕ್ಕೆ ಈ ಎಂಜಲು ನೆರವಾಗುತ್ತದೆ. ಇದು ಬಲಿಷ್ಠ ಪರಭಕ್ಷಕ ಕೀಟವಾದರೂ, ಕೆಲವೊಮ್ಮೆ ತಾನೂ ಬೇರೆ ಕೀಟಗಳಾದ ಏರೋಪ್ಲೇನ್ ಚಿಟ್ಟೆ(Dragonfly), ಕೊಳ್ಳೆನೊಣ(Robberfly) ಇನ್ನಿತರೆ ಪಕ್ಷಿಗಳಿಗೆ, ಓತಿಕ್ಯಾತಗಳಂತಹ ಪರಭಕ್ಷಕಗಳಿಗೆ ಆಹಾರವಾಗುತ್ತದೆ.

ಸಮಾಗಮದ ಸಮಯದಲ್ಲಿ ಗಂಡು ಕೀಟವು ತನ್ನ ಹರಿತವಾದ ದವಡೆಗಳಿಂದ ಹೆಣ್ಣನ್ನು ಗಟ್ಟಿಯಾಗಿ ಕಚ್ಚಿಕೊಂಡಿರುತ್ತದೆ. ಕಾರಣ ಇತರೇ ಗಂಡುಕೀಟಗಳು ಪುನಃ ಇದರರೊಡನೆ ಸಮಾಗಮವಾಗಬಾರದೆಂಬ ಸ್ವಾಧೀನ ಸ್ವಾಮಿತ್ವ ಭಾವ. ಈ ಪ್ರಕ್ರಿಯೆಗೆ ಕೀಟವಿಜ್ಞಾನದಲ್ಲಿ ಮೇಟ್ ಗಾರ್ಡಿಂಗ್ (Mate guarding) ಎಂದು ಕರೆಯಲಾಗುತ್ತದೆ. ನಂತರ ಹೆಣ್ಣು ಕೀಟವು ಭೂಮಿಯಲ್ಲಿ ಗುಂಡಿತೋಡಿ ಮೊಟ್ಟಯಿಟ್ಟು ಮಣ್ಣೆಳೆಯುತ್ತದೆ.

ಮೊಟ್ಟೆಯೊಡೆದು ಬಂದ ಮರಿಗಳು(ಲಾರ್ವ/ಗ್ರಬ್) ಮತ್ತಷ್ಟು ಆಳಕ್ಕೆ ನೀಳವಾದ ಗುಂಡಿ ತೋಡಿಕೊಳ್ಳುತ್ತವೆ. ಸಮುದ್ರ ತೀರದ ಮರಳಿನಲ್ಲಿ ಇವು ಗೂಡನ್ನು ನಿರ್ಮಿಸಿಕೊಂಡಿರುತ್ತವೆ.

ಬೇಟೆಯಾಡುವ ಸಮಯ ನೆಲದಿಂದ ಸ್ವಲ್ಪ ಮೇಲೆ,  ತಲೆಯನ್ನು ಹಿಂದಕ್ಕೆ ಚಾಚಿ ಗಬಕ್ಕನೆ ಹರಿತವಾದ ದವಡೆಗಳಿಂದ ತನ್ನ ಬೇಟೆಗಳಾದ ಕೀಟ ಮತ್ತಿತರೆ ಜೀವಿಗಳನ್ನು ಹಿಡಿದು ಕತ್ತರಿಸಿ ತಿನ್ನುತ್ತವೆ. 2 ರಿಂದ 3 ವರ್ಷಗಳ ದೀರ್ಘಕಾಲದ ಲಾರ್ವಾವಸ್ಥೆ ಮುಗಿಸಿ, ಕೋಶಾವಸ್ಥೆಗೆ ಬರುತ್ತವೆ. 3 ರಿಂದ 4 ವಾರಗಳ ನಂತರ ಪುನಃ ಪ್ರೌಢ ಹುಲಿ ಜೀರುಂಡೆಗಳು ಹೊರಹೊಮ್ಮಿ ಎಂದಿನಂತೆ ಒಂಟಿ ಜೀವನ ನಡೆಸುತ್ತವೆ. ಕೊಲಿಯಾಪ್ಟೆರ ವರ್ಗ, ಸಿಸಿಂಡೆಲಿಡೆ (Cicindelidae) ಕುಟುಂಬಕ್ಕೆ ಇವನ್ನು ವರ್ಗೀಕರಿಸಿದ್ದಾರೆ. ಪರಭಕ್ಷಕ ಕೀಟಗಳಾದ್ದರಿಂದ, ರೈತರ ಬೆಳೆ ಹಾನಿ ಮಾಡುವ ಕೀಟಗಳನ್ನೂ ಸ್ವಲ್ಪ ಮಟ್ಟಿಗೆ ನಿಯಂತ್ರಿಸಿ ಉಪಕಾರಿ ಕೀಟಗಳೆನಿಸಿಕೊಂಡಿವೆ ಈ ಟೈಗರ್ ಬೀಟಲ್‍ಗಳು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !