ಬುಧವಾರ, ಜೂನ್ 3, 2020
27 °C

ವನ್ಯಜೀವಿಗೆ ಕೊರೊನಾ?

ಕೃಪಾಕರ ಸೇನಾನಿ Updated:

ಅಕ್ಷರ ಗಾತ್ರ : | |

Prajavani

ಮನುಷ್ಯಲೋಕವನ್ನು ತುದಿಗಾಲಲ್ಲಿ ನಿಲ್ಲಿಸಿರುವ ಕೊರೊನಾ ವೈರಸ್‌ ಕಾಡಿನ ಜೀವಿಗಳ ಮೇಲೆ ಏನು ಪರಿಣಾಮ ಬೀರಬಹುದು?

ಅಮೆರಿಕದ ನ್ಯೂಯಾರ್ಕ್‌ ಮೃಗಾಲಯದಲ್ಲಿ ಹುಲಿಯೊಂದಕ್ಕೆ ಕೊರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಬಂದಿದೆ. ಅದು ಸಾಕಿದ ಹುಲಿ. ಕಾಡಿನ ಜೀವಿಗಳಿಗೆ ಸಹಜವಾಗಿ ದಕ್ಕುವ ಗುಣ ಅದಕ್ಕಿರುವುದಿಲ್ಲ. ಹಾಗೆಯೇ ಕಾಡುಪ್ರಾಣಿಗಳಲ್ಲಿ ಅಡಕವಾಗಿರುವ ಪ್ರಬಲ ರೋಗನಿರೋಧಕ ಶಕ್ತಿಯೂ ಅದಕ್ಕೆ ಇರುವುದಿಲ್ಲ. ಅದು ಮೃಗಾಲಯದಲ್ಲಿ ಬೆಳೆದಿರುವಂತಹದ್ದು.

ಅಮೆರಿಕದಲ್ಲಿ ಈಗ ಲಕ್ಷಾಂತರ ಜನರಿಗೆ ಕೋವಿಡ್‌ 19 ರೋಗ ಹರಡಿದೆ. ಅಲ್ಲಿ ಮೃಗಾಲಯದ ಪ್ರಾಣಿ ಪಾಲಕರು ನಮ್ಮಲ್ಲಿ ಇರುವಂತೆ ಅಲ್ಲ. ಅಲ್ಲಿಯ ಪಾಲಕರು ಪ್ರಾಣಿಗಳನ್ನು ಅಪ್ಪಿ ಮುದ್ದಾಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಆ ಸಿಬ್ಬಂದಿಯಲ್ಲಿ ಇದ್ದಿರಬಹುದಾದ ವೈರಾಣು ಹುಲಿಗೆ ತಗುಲಿರಬಹುದು.

ಮನುಷ್ಯ ಸಮಾಜದಿಂದ ದೂರವಿರುವ ಕಾಡುಜೀವಿಗಳನ್ನು ಕೊರೊನಾ ಮತ್ತಿತರ ಸೋಂಕುಗಳು ಬಾಧಿಸಿದಂತೆ ಮೇಲ್ನೋಟಕ್ಕೆ ಕಾಣುವುದು ಸಹಜ. ಆದರೆ, ಸುಲಭವಾಗಿ ಅಲ್ಲಗೆಳೆಯಲು ಸಾಧ್ಯವಿಲ್ಲ. ಕಾಡುಪ್ರಾಣಿಗಳಿಗೆ ಕೊರೊನಾ ಬರುವ ಸಾಧ್ಯತೆಗಳನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇವುಗಳನ್ನು zoonatic ಕಾಯಿಲೆಗಳೆಂದೇ ಕರೆಯಬಹುದು. ಇವು ವಾಸ್ತವಿಕವಾಗಿ ಮನುಷ್ಯನ ಹಲವು ಚಟುವಟಿಕೆಗಳಿಂದಲೇ ಹರಡುತ್ತವೆ. ಜೀವಿಗಳಿಂದ ಜೀವಿಗಳಿಗೆ ಹರಡುವ ಈ ಕಾಯಿಲೆಗಳ ಪರಿಣಾಮ ಬೇರೆ ಬೇರೆ ಜೀವಿಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಕೊರೊನಾದಂತೆಯೇ ಎಬೊಲ, ಸಾರಸ್ ವೈರಸ್‌ಗಳು ಕಾಡುಜೀವಿಗಳಿಂದಲೇ ಬಂದಿರುವುದು. ಅಂದರೆ ಹಾವು, ಬಾವಲಿ ಮತ್ತು ಇತರ ಪ್ರಾಣಿಗಳಿಂದ. ಗಿಡ ಮತ್ತು ಕೀಟಗಳಿಂದ ಈ ವೈರಸ್‌ಗಳು ಮನುಷ್ಯನಿಗೆ ಬರುವುದಿಲ್ಲ.

ಜೀವಜಗತ್ತಿನ ಈ ವೈರಸ್‌ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಿರಬಹುದಾದರೂ ಮನುಷ್ಯ ಸಮಾಜದಲ್ಲಿ ಆಗುವಂತಹ ತೀವ್ರತೆಯನ್ನು ಉಂಟು ಮಾಡುವುದಿಲ್ಲ. ಏಕೆಂದರೆ ಕಾಡುಪ್ರಾಣಿಗಳಲ್ಲಿ ವೈರಸ್‌ಗಳ ವಿರುದ್ಧ ಹೋರಾಡಬಲ್ಲ ನಿರೋಧಕ ಶಕ್ತಿ ಪ್ರಬಲವಾಗಿರುತ್ತದೆ. ಇದರಿಂದ ಮಾನವ ಸಮಾಜದಲ್ಲಿ ಈಗ ಕಾಣಿಸುತ್ತಿರುವಂತಹ ಸಾವು– ನೋವಿನ ಭೀಕರತೆ ಕಾಡಿನಲ್ಲಿ ಕಾಣಿಸುವ ಸಾಧ್ಯತೆ ಕಡಿಮೆ.

ಆದರೆ, ರೇಬಿಸ್‌ ಮತ್ತು ಕಾಲುಬಾಯಿ ಜ್ವರದ ಬ್ಯಾಕ್ಟೀರಿಯಾಗಳು ಕೆಲವೊಮ್ಮೆ ಕಾಡುಜೀವಿಗಳಲ್ಲೂ ಭೀಕರ ಪರಿಸ್ಥಿತಿಯನ್ನು ಉಂಟು ಮಾಡಬಹುದು. ಆಫ್ರಿಕದ ಕಾಡುನಾಯಿಗಳ, ಸಿಂಹಗಳ, ಕತ್ತೆಕಿರುಬಗಳ ಸಂತತಿಗೆ ಅವು ಮಾರಕವಾದದ್ದು ನಿಜ. ನಮ್ಮಲ್ಲಿ ಸಹ ಕಾಡೆಮ್ಮೆಗಳಿಗೆ, ತೋಳಗಳಿಗೆ ಈ ಸೋಂಕು ತಟ್ಟಿದಾಗ ಲೆಕ್ಕವಿಲ್ಲದಷ್ಟು ಕಾಡುಪ್ರಾಣಿಗಳು ನೆಲಕ್ಕುರುಳಿದ ಉದಾಹರಣೆಗಳಿವೆ.

ಮನುಷ್ಯ ಸಾಕಿದ ಸಾಕುಪ್ರಾಣಿಗಳಿಂದ ಹಲವು ಸೋಂಕುಗಳು ಮನುಷ್ಯನಿಗೆ ಹರಡುವುದು ಇದೆ; ಹಾಗೆಯೇ ಅದು ಕಾಡುಪ್ರಾಣಿಗಳಿಗೆ ಹಬ್ಬುವ ಸಾಧ್ಯತೆಗಳಿವೆ. ಮನುಷ್ಯನ ಸಾಕುಪ್ರಾಣಿಗಳನ್ನು, ಕಾಡುಪ್ರಾಣಿಗಳು ಹಿಡಿದು ತಿನ್ನುವಾಗ ಕೆಲವೊಮ್ಮೆ ಈ ಸಮಸ್ಯೆ ಉದ್ಭವಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಕಾಡಿನಲ್ಲಿ ಗುಂಪುಗುಂಪಾಗಿ ಜೀವಿಸುವ ಕಾಡೆಮ್ಮೆ, ಜಿಂಕೆಗಳಂತಹ ಪ್ರಾಣಿಗಳು ಅಪಾಯಕ್ಕೆ ಒಳಗಾಗಬಹುದು. ಆದರೆ, ಏಕಾಂಗಿಯಾಗಿ ಜೀವಿಸುವ ಹುಲಿ, ಚಿರತೆಗಳಿಗೆ ಈ ರೀತಿ ಜೀವಿಗಳಿಂದ ಜೀವಿಗಳಿಗೆ ಸೋಂಕು ಹರಡುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಅವು ಏಕಾಂತದ ಜೀವಿಗಳು. ಈಗ ಕೊರೊನಾ ಕಾಲದಲ್ಲಿ ನಾವು– ನೀವು ಮನೆಗಳಲ್ಲೇ ಒಬ್ಬಂಟಿಗಳಾಗಿ ಎಲ್ಲರಿಂದ ಅಂತರ ಕಾಯ್ದಕೊಂಡು ಜೀವಿಸುತ್ತಿದ್ದೇವಲ್ಲ... ಹಾಗೆಯೇ ಅವುಗಳು ಎಲ್ಲ ಕಾಲಕ್ಕೂ ಸಹಜವಾಗಿಯೇ ಜೀವಿಸುತ್ತವೆ.

ಜೂನಾಟಿಕ್ ಕಾಯಿಲೆಗಳು ಹೆಚ್ಚಾಗಿ ಹರಡುವುದು ಮನುಷ್ಯನ ಚಟುವಟಿಕೆಗಳಿಂದಲೇ. ಆತ ಕಡಿಯುವ ಕಾಡು, ಸೃಷ್ಟಿಸುವ ಪರಿಸರ ಮಾಲಿನ್ಯ ಮತ್ತು ಜಾಗತಿಕ ವ್ಯಾಪಾರ ವಹಿವಾಟುಗಳು ಈ ವಿಷಯದಲ್ಲಿ ದೊಡ್ಡ ಪಾತ್ರವಹಿಸುತ್ತವೆ. 

ಈಗ ಕೊರೊನಾದ ಭೀಕರತೆಯಿಂದ ಬಳಲಿರುವ ಜಗತ್ತು ಲಾಕ್‌ಡೌನ್‌ ಮೊರೆ ಹೋಗಿದೆ. ಮನುಷ್ಯಲೋಕದ ಎಲ್ಲಾ  ಚಟುವಟಿಕೆಗಳೂ ಸ್ತಬ್ಧಗೊಂಡಿವೆ. ಇದರಿಂದಾಗಿ ಭೂಮಿಯ ಕಲುಷಿತ ಪರಿಸರ ವೇಗವಾಗಿ ಶುದ್ಧವಾಗುತ್ತಿದೆ. ಈ ಬೆಳವಣಿಗೆ ಕಾಡಿನ ಪರಿಸರದ ಮೇಲೆ ಎಂತಹ ಪರಿಣಾಮ ಉಂಟು ಮಾಡುತ್ತಿದೆ ಎನ್ನುವುದು ಕುತೂಹಲಕರ. ಪರಿಸರದಲ್ಲಿ ಆಗುವ ಏರಿಳಿತಗಳನ್ನು ಅಥವಾ ಬದಲಾವಣೆಗಳನ್ನು ಕಡಿಮೆ ಅವಧಿಯಲ್ಲಿ ಅಂದಾಜಿಸುವುದು ಸಾಧ್ಯವಿಲ್ಲ.

ಆದರೆ, ಇಡೀ ಭೂಮಂಡಲವನ್ನು ನೋಡಿ– ಇಲ್ಲಿ ಒಂದು ಸಾವಿರ ಕೋಟಿ ಜನರಿದ್ದಾರೆ. ಈ ಮನುಷ್ಯ ಸಮುದಾಯ ವಾತಾವರಣಕ್ಕೆ ಅಗಾಧ ಪ್ರಮಾಣದ ವಿಷಾನಿಲವನ್ನು ಸೇರಿಸಿದೆ. ವಿಷಾನಿಲದ ವಾತಾವರಣದಲ್ಲಿ ಹೆಚ್ಚಳವಾದಾಗ ಬೀಸುವ ಗಾಳಿ, ಬೀಳುವ ಮಳೆ ಹೆಚ್ಚಳವಾಗಿಯೂ ಇದೇ ಬದಲಾವಣೆಯನ್ನು ನಿರೀಕ್ಷಿಸಬಹುದು. ಒಟ್ಟಿನಲ್ಲಿ ಈ ಕೊರೊನಾ ಭೀತಿ ಜಾಗತಿಕಮಟ್ಟದ ಬದಲಾವಣೆ, ಭರವಸೆ ಮತ್ತು ಸವಾಲುಗಳನ್ನು ನಮ್ಮ ಮುಂದೆ ತೆರೆದಿಟ್ಟಿದೆ.

ವ್ಯಾಪಾರ ವಹಿವಾಟುಗಳೇ ಬದುಕಿನ ಮೂಲ ಧ್ಯೇಯವಾದಾಗ ನಮ್ಮ ಸುತ್ತಲಿನ ವಾತಾವರಣದ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಆಗ ಭೂಮಂಡಲದ ತಾಪಮಾನದಲ್ಲಿ ವ್ಯತ್ಯಾಸವಾಗುತ್ತದೆ. ಈ ಕ್ರಿಯೆಗಳೇ ಕೊರೊನಾದಂತಹ ಮಹಾಮಾರಿಗಳನ್ನು ಮಾನವ ಸಮಾಜಕ್ಕೆ ಕಳುಹಿಸಿಕೊಡುತ್ತಿವೆ. 

ಆಕ್ರಮಣಕಾರಿ ಪ್ರವೃತ್ತಿ, ಭೂಮಿಯ ನಕ್ಷೆಯನ್ನು ಬದಲಿಸುವ ಪ್ರಯತ್ನ, ಹಾಗೆಯೇ ಸಾಕುಪ್ರಾಣಿಗಳ ಆಮದು– ರಫ್ತು ವ್ಯಾಪಾರ, ಕಾಡುಜೀವಿಗಳ ವಹಿವಾಟು ಎಲ್ಲವೂ ಈಗ ನಮ್ಮ ಆರ್ಥಿಕ ಚಟುವಟಿಕೆಗಳಾಗಿವೆ. ಈ ಚಟುವಟಿಕೆಗಳಿಗೆ ಯಾವ ಗಡಿಗಳೂ ಇಲ್ಲ. ಅಡ್ಡಿಗಳೂ ಇಲ್ಲ. ಇಲ್ಲಿ ನಾವು ಎರಡು ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಜಗತ್ತಿನ ಇಂದಿನ ಪರಿಸ್ಥಿತಿಗೆ ಕಾರಣವೇನು ಎನ್ನುವುದು ಮೊದಲ ಅಂಶವಾದರೆ, ಒಳ್ಳೆಯ ದಿಕ್ಕಿನತ್ತ ಬದಲಾವಣೆ ಬಯಸುವುದಾದರೆ ಜಾಗತಿಕ ಹವಾಮಾನ ಬದಲಾವಣೆಯ ಬಗ್ಗೆ ನಾವು ಗಂಭೀರವಾಗಿ ಚಿಂತಿಸಲು ಇದು ಸಕಾಲ. ಈಗಿನ ಕೊರೊನಾ ವಿದ್ಯಮಾನ ಜೀವ ಜಗತ್ತಿಗೆ ದೊಡ್ಡ ಪಾಠವಾಗಬಹುದು. ಜೀವಪರಿಸರವನ್ನು ನಿರ್ಲಕ್ಷಿಸಿ ಕುರುಡು ಅಭಿವೃದ್ಧಿಯ ಪಥವನ್ನು ಹಿಡಿದಾಗ ನಮ್ಮಲ್ಲಿ ಏನೆಲ್ಲ ಅನಾಹುತಗಳು ಆಗಬಹುದು ಎನ್ನುವುದಕ್ಕೆ ಕೊರೊನಾ ವೈರಸ್‌ ದಾಳಿ ಒಂದು ಉದಾಹರಣೆ.

ಎಲ್ಲಕ್ಕಿಂತ ಮುಂಚೆ ನಾವು ಮನುಷ್ಯರು ಭೂಮಿಯ ಒಂದು ಭಾಗ ಮಾತ್ರ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು. ಇಲ್ಲಿ ಇರುವುದು ಮನುಷ್ಯಜೀವಿ ಮಾತ್ರ ಅಲ್ಲ. ಆತ ಜೀವಪರಿಸರದ ಒಂದು ಅಂಗ ಮಾತ್ರ. ಆತನಂತೆಯೇ ಅಷ್ಟೇ ಮುಖ್ಯವಾದ ಲಕ್ಷಾಂತರ ಇತರ ಜೀವಿಗಳಿಗೂ ಈ ಪರಿಸರದಲ್ಲಿ ಬದುಕುವ ಹಕ್ಕಿದೆ. ಭೂಮಿಯ ಮೇಲಿರುವ ಸಾವಿರ ಕೋಟಿ ಮನುಷ್ಯರಿಗೆ ಇದರ ಗಂಭೀರತೆ ಗೊತ್ತಾಗಬೇಕು. ಜಗತ್ತನ್ನು ಆಳುತ್ತಿರುವ ನಾಯಕಮಣಿಗಳಲ್ಲಿ, ಜವಾಬ್ದಾರಿಯ ಗುಣ ಮತ್ತು ಪ್ರಜ್ಞಾವಂತಿಕೆ ಇರುವ ನಾಯಕರು ಈ ವಿಷಯದತ್ತ ಗಮನಹರಿಸಬೇಕು. ಹೀಗೇಕೆ ಆಗುತ್ತದೆ ಎನ್ನುವುದು ಅವರಿಗೆ ಮನವರಿಕೆ ಆಗಬೇಕು. ಆಗ ಮಾತ್ರ ಕೊರೊನೋತ್ತರ ಭವಿಷ್ಯದಲ್ಲಿ ಭರವಸೆಯ ಬೆಳ್ಳಿಕಿರಣ ಮೂಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು