7

ಹೊಟ್ಟೆಬಾಕ ಟ್ರಿಗರ್‌ ಮೀನು

Published:
Updated:

ಆಕರ್ಷಕ ನೋಟದ, ಆಕ್ರಮಣಕಾರಿ ಸ್ವಭಾವ, ಶತ್ರುಗಳನ್ನು ಹಿಮ್ಮೆಟ್ಟಿಸುವಂತಹ ದುರ್ವಾಸನೆಯುಳ್ಳ, ಹೊಟ್ಟೆಬಾಕ ಮೀನು ಟ್ರಿಗರ್‌ ಮೀನು. ಇಲ್ಲಿಯವರೆಗೂ ಗುರುತಿಸಲಾಗಿರುವ ಅಪರೂಪದ ಮೀನುಗಳಲ್ಲಿ ಇದೂ ಸೇರಿದ್ದು, 40ಕ್ಕೂ ಹೆಚ್ಚು ಪ್ರಭೇದಗಳಿವೆ.

ಜಲಚರಗಳೊಂದಿಗೆ ಆಕ್ರಮಣಕಾರಿ ಸ್ವಭಾವ ತೋರಿದರೂ ಮಾನವನ ಬಾಯಿಚಪಲಕ್ಕೆ ಈ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗುತ್ತಿವೆ. ಆಹಾರಕ್ಕಾಗಿ ಬೇಟೆಯಾಡುವ ಕಾರಣ ಟ್ರಿಗರ್‌ ಮೀನುಗಳು ಅಳಿವಿನಂಚಿಗೆ ಸಾಗುತ್ತಿವೆ. 

ನೋಡಲು ಆಕರ್ಷಕವಾಗಿದ್ದರೂ ಇದರ ದೇಹದಿಂದ ದುರ್ವಾಸನೆ ಹೊರಹೊಮ್ಮುತ್ತದೆ. ದೇಹದ ಹೊರ ಭಾಗ ಹಳದಿ, ನೀಲಿ, ಬಿಳಿ ಮತ್ತು ಕಂದು ಸೇರಿದಂತೆ ವಿವಿಧ ಬಣ್ಣಗಳಿಂದ ಕೂಡಿರುತ್ತದೆ. ಬೆನ್ನಿನ ಭಾಗದ ರಚನೆ ವಿಶಿಷ್ಟವಾಗಿದೆ. ದವಡೆ ಸೇರಿದಂತೆ ಎಲ್ಲಾ ಹಲ್ಲುಗಳು ಚೂಪಾಗಿರುತ್ತವೆ. 

ಮೆಕ್ಸಿಕೊ, ಚಿಲಿ, ಪೆಸಿಫಿಕ್‌ ಸಮುದ್ರ, ಹವಾಯಿ, ಅರೆಬಿಯನ್‌ ಸಮುದ್ರ ಮತ್ತು ದಕ್ಷಿಣ ಜಪಾನ್‌, ಆಸ್ಟ್ರೇಲಿಯ ಸುತ್ತಮುತ್ತಲಿನ ಸಮುದ್ರಗಳಲ್ಲಿ ಇವು ಕಂಡು ಬರುತ್ತವೆ. ಹವಾಯಿ ದ್ವೀಪದ ಮೀನು ಎಂದೂ ಕರೆಯಲಾಗುತ್ತದೆ. 

ಜೀವನಕ್ರಮ ಮತ್ತು ವರ್ತನೆ 

ಇದು ಅತ್ಯುತ್ತಮವಾಗಿ ಈಜುವ ಸಾಮರ್ಥ್ಯ ಹೊಂದಿದ್ದು, ತನ್ನ ರೆಕ್ಕೆಗಳನ್ನು ಬಳಸಿಕೊಂಡು ಅಗತ್ಯಕ್ಕೆ ಅನುಗುಣವಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುವ ಸಾಮರ್ಥ್ಯ ಹೊಂದಿವೆ. ತನ್ನ ಪ್ರಭೇದದ ಮೀನುಗಳನ್ನು ಹೊರತುಪಡಿಸಿ ಉಳಿದ ಪ್ರಭೇದದ ಮೀನಿನ ಜೊತೆಗೆ ಇದು ಗುರುತಿಸಿಕೊಳ್ಳುವುದಿಲ್ಲ.

ಒಂಟಿಯಾಗಿರಲು ಹೆಚ್ಚು ಉತ್ಸಾಹ ತೋರಿಸುವ ಈ ಮೀನು ಅಡಗಿ ಕುಳಿತು ಬೇಟೆಯಾಡುವ ಜಾಣ್ಮೆ ತೋರಿಸುತ್ತದೆ. ಅಷ್ಟೇ ಅಲ್ಲದೇ, ಪರಭಕ್ಷಕಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಮುದ್ರದ ತಟದಲ್ಲಿ ರಂಧ್ರಗಳನ್ನು ಕೊರೆದುಕೊಂಡು ಅವಿತು ಕೂಳಿತುಕೊಳ್ಳುತ್ತದೆ.  

ಒಂದು ವೇಳೆ ಇತರ ಮತ್ಸ್ಯಗಳು ದಾಳಿ ಮಾಡಲು ಬಂದಾಗ ಅವುಗಳನ್ನು ರಕ್ಷಣೆಗೆ ಪ್ರತಿದಾಳಿ ಮಾಡುತ್ತದೆ. ಅಲ್ಲದೆ ತನ್ನ ಗುಂಪಿನ ಇತರ ಮೀನುಗಳಿಗೆ ಅಪಾಯದ ಮುನ್ಸೂಚನೆ ನೀಡಲು ಕರ್ಕಶ ಶಬ್ದ ಉಂಟು ಮಾಡುತ್ತದೆ.  ಈ ಮೀನುಗಳು ಮಿಶ್ರಹಾರಿಗಳು. ಏಡಿ, ಸಣ್ಣ ಮೀನು, ಪಾಚಿ, ಸಿಗಡಿ, ಗಡುಸಾದ ಚರ್ಮದ ಮೀನುಗಳನ್ನು ಸೇವಿಸುತ್ತವೆ. ದಿನದ ಸಮಯದಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುತ್ತಲೇ ಇರುವುದು ಮತ್ತೊಂದು ವಿಶೇಷ.

ಸಂತಾನೋತ್ಪತ್ತಿ

ಮೊಟ್ಟೆಗಳನ್ನು ಇಡುವಾಗ ತಾವಿರುವ ಸ್ಥಳದಿಂದ ದೂರ ಹೋಗಿ, ಸಮುದ್ರದ ಆಳದ ತಟದಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಒಮ್ಮೆಗೆ ನೂರರಿಂದ ಸಾವಿರ ಮೊಟ್ಟೆಗಳನ್ನಿಡುತ್ತದೆ. ಎಲ್ಲ ಮೊಟ್ಟೆಗಳನ್ನು ತಾಯಿ ಮೀನು ಜೋಪಾನ ಮಾಡುತ್ತದೆಯಾದರೂ ಅದರಲ್ಲಿ ಮೂರನೇ ಒಂದು ಭಾಗ ನಾಶವಾಗುತ್ತದೆ.

ಆದರೆ ಮರಿಗಳಿಗೆ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ಸಿಗುವಂತೆ ಮಾಡಲು ತಾಯಿ ಮೀನು ಸಮುದ್ರದ ದೊಡ್ಡ ಅಲೆಗಳಿಂದ ಮರಿಗಳನ್ನು ರಕ್ಷಿಸಿಕೊಂಡು ಓಡಾಡುತ್ತದೆ. ‌

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !