ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಿಸಿದನು ಜಗತ್ತಿನ ಪ್ರಥಮ ಮಂಗಳ

Last Updated 10 ಏಪ್ರಿಲ್ 2019, 10:42 IST
ಅಕ್ಷರ ಗಾತ್ರ

ಸೃಷ್ಟಿ ಎಂದರೆ ಸಮಗ್ರತೆ ಎನ್ನುವ ಮಾತು ಈ ಮೊದಲು ಬಂದಿದೆಯಷ್ಟೆ. ಅಲ್ಲಿ ಸೃಷ್ಟಿ ಎಂದಿರುವುದು ಮೊದಲ ‘ಸೃಷ್ಟಿ’ಯನ್ನಲ್ಲ; ‘ಅವತಾರವ’ವನ್ನೇ ಸೃಷ್ಟಿ ಎಂದು ಒಕ್ಕಣಿಸಲಾಗಿದೆ. ಅವತಾರದ ಉದ್ದೇಶ ಪೂರ್ಣವಾಗಿ ನೆರವೇರಬೇಕಾದರೆ ಅದಕ್ಕೆ ಬೇಕಾದ ಎಲ್ಲ ಪೂರಕ ವಿವರಗಳೂ ಅವತರಿಸಲೇಬೇಕಾಗುತ್ತದೆ. ವಿಷ್ಣು ಒಬ್ಬನೇ ಅವತರಿಸಿದರೆ ಆಗದು; ಜೊತೆಯಲ್ಲಿ ಅವನ ಶಂಖ, ಚಕ್ರಗಳೂ ಪರಿವಾರವೂ ಅವತಾರದಲ್ಲಿ ಮೂಡಬೇಕು. ಹೀಗಾಗಿ ಅವತಾರ ಎಂಬ ‘ಸೃಷ್ಟಿ’ ಸಮಗ್ರವಾದ ವಿದ್ಯಮಾನವೇ ಆಗಬೇಕಷ್ಟೆ!

ಸೃಷ್ಟಿಯ ಬಗ್ಗೆ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲೂ ಸಾಕಷ್ಟು ಪರಿಕಲ್ಪನೆಗಳಿವೆ. ಭಾರತೀಯ ಸಂಸ್ಕೃತಿಯಲ್ಲೂ ಹಲವು ವಿವರಣೆಗಳಿವೆ. ರಾಮಾಯಣಕಥೆಯ ಉದ್ದಕ್ಕೂ ಅಲ್ಲಲ್ಲಿ ಈ ವಿವರಗಳನ್ನು ವಿಶ್ಲೇಷಿಸಬೇಕಾಗುತ್ತದೆಯೆನ್ನಿ!

ಸದ್ಯಕ್ಕೆ ಬಾಣನ ‘ಕಾದಂಬರಿ’ಯ ಮಂಗಳಪದ್ಯದ ಪ್ರಥಮ ಗೀತವನ್ನು ಇಲ್ಲಿ ನೋಡಬಹುದು:

ರಜೋಜುಷೇ ಜನ್ಮನಿ ಸತ್ತ್ವವೃತ್ತಯೇ ಸ್ಥಿತೌ ಪ್ರಜಾನಾಂ

ಪ್ರಲಯೇ ತಮಃಸ್ಮೃಶೇ /

ಅಜಾಯ ಸರ್ಗಸ್ಥಿತಿನಾಶಹೇತವೇ ತ್ರಯೀಮಯಾಯ

ತ್ರಿಗುಣಾತ್ಮನೇ ನಮಃ //

ಇದರ ಭಾವಾನುವಾದವನ್ನು ಸರಳವಾಗಿ ಬನ್ನಂಜೆ ಗೋವಿಂದಾಚಾರ್ಯ ಹೀಗೆ ಕಂಡರಿಸಿದ್ದಾರೆ:

‘ರಜಸ್ಸಿನಿಂದ ಹುಟ್ಟು, ಸತ್ತ್ವದಿಂದ ಪಾಲನೆ, ತಮಸ್ಸಿನಿಂದ ಸಂಹಾರ – ಹೀಗೆ ಮೂರು ಗುಣಗಳಿಂದ ಜಗದ ಹುಟ್ಟು–ಸಾವುಗಳಿಗೆ ಕಾರಣನಾದ, ಸ್ವಯಂ ಹುಟ್ಟು–ಸಾವುಗಳಿರದ ಭಗವಂತನಿಗೆ ವಂದನೆಗಳು.’

ಸತ್ತ್ವ, ರಜಸ್ಸು ಮತ್ತು ತಮಸ್ಸು – ಈ ಮೂರು ಭಾರತೀಯ ತತ್ತ್ವಜ್ಞಾನದಲ್ಲಿ ಪ್ರಮುಖ ಪರಿಕಲ್ಪನೆಗಳಲ್ಲಿ ಸೇರುತ್ತವೆ. (ಈ ವಿವರಗಳನ್ನು ಮುಂದೆ ನೋಡೋಣ.) ಸಾಮಾನ್ಯವಾಗಿ ಸತ್ತ್ವ ಎಂದರೆ ಉತ್ತಮವಾದುದೆಂದೂ, ರಜಸ್ಸು ಮಧ್ಯಮವಾದುದೆಂದೂ, ತಮಸ್ಸು ಅಧಮವಾದುದೆಂದೂ ಗ್ರಹಿಸಲಾಗುತ್ತದೆ. ಬಿಳಿಯನ್ನು ಸತ್ತ್ವ ಎಂದೂ, ಕೆಂಪನ್ನು ರಜಸ್ಸು ಎಂದೂ, ಕಪ್ಪನ್ನು ತಮಸ್ಸು ಎಂದೂ ತಿಳಿಯಲಾಗುತ್ತದೆ.

ಆದರೆ ಇದು ತುಂಬ ಪ್ರಾಥಮಿಕಸ್ತರದ ಗ್ರಹಿಕೆ; ಮಾತ್ರವಲ್ಲ, ಇಂಥ ಸರಳಸೂತ್ರಗಳು ಹಲವು ಸಲ ಗೊಂದಲಗಳಿಗೂ ಕಾರಣವಾಗುತ್ತವೆ. ಹೇಗೆ ಸೃಷ್ಟಿ, ಸ್ಥಿತಿ ಮತ್ತು ಲಯಗಳು ಒಂದು ಇನ್ನೊಂದರಲ್ಲಿ ಬೆರೆತುಕೊಂಡು ಅಥವಾ ಹೆಣೆದುಕೊಂಡಿರುತ್ತವೆಯೋ ಹಾಗೆಯೇ ಸತ್ತ್ವ, ರಜಸ್ಸು ಮತ್ತು ತಮಸ್ಸುಗಳು ಕೂಡ ಪ್ರತ್ಯೇಕವಾಗಿರದೆ ಅಖಂಡವಾಗಿಯೇ ಇರುತ್ತವೆ.

ಸೃಷ್ಟಿಯನ್ನು ರಜಸ್ಸು ಎಂದು ಕರೆದಿರುವುದರಿಂದ ಅದೊಂದು ಹೇಯಕೃತ್ಯವೆಂದೋ, ಅಥವಾ ಪ್ರಳಯವನ್ನು ತಮಸ್ಸಿಗೆ ಹೋಲಿಸಿರುವುದರಿಂದ ಅದೊಂದು ನೀಚಕೃತ್ಯವೆಂದೋ ಹೇಳುವುದು ತಾತ್ತ್ವಿಕವಾಗಿ ತಪ್ಪಾಗುತ್ತದೆ. ‘God [the Eternal] is creating the world now, as much as he ever was' (ದೇವರು ವಿಶ್ವವನ್ನು ಎಂದಿನಂತೆಯೇ ಈ ಕ್ಷಣವೂ ಸೃಜಿಸುತ್ತಿದ್ದಾನೆ)

– ಆನಂದ ಕುಮಾರಸ್ವಾಮಿಯವರ ಈ ಮಾತು ಇಲ್ಲಿ ವಿಚಾರಣೀಯವಾದುದು. ಸೃಷ್ಟಿ ಎನ್ನುವುದು ಎಂದೋ ಒಮ್ಮೆ ಮಾಡಿಟ್ಟ ಅಡುಗೆಯಂತಲ್ಲ; ಅದು ಪೂರ್ವಾಪೂರ್ವಗಳ ಭಿತ್ತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ತ್ರಿಗುಣಗಳ ನಿತ್ಯನೂತನ ನರ್ತನ. ಹೀಗಾಗಿ ಸೃಷ್ಟಿಯನ್ನು ‘ರಜಸ್ಸು’ ಎಂದು ಕರೆದಿರುವುದು ಅದರ ಸ್ವ–ಭಾವವನ್ನು ಪರಿಚಯಿಸಲಷ್ಟೆ!

ಹೀಗಿದ್ದರೂ ನಾವಿಲ್ಲಿ ಗಮನಿಸಬೇಕಾದ್ದು ಭಗವಂತನ ಸ್ವ–ರೂಪವಾದ ‘ಅಜಾಯ’ತತ್ತ್ವ. ಈ ಪರಿಕಲ್ಪನೆ ಕೂಡ ಭಾರತೀಯ ದರ್ಶನಶಾಸ್ತ್ರದಲ್ಲಿ ತುಂಬ ಪ್ರಮುಖವಾದ ಪರಿಕಲ್ಪನೆ. ‘ಅಜಾಯ’ ಎಂದರೆ ದೇವರಿಗೆ ಹುಟ್ಟು–ಸಾವುಗಳು ಇಲ್ಲ; ಹುಟ್ಟು–ಸಾವುಗಳೇ ಇಲ್ಲವೆಂದಮೇಲೆ ಅವನಿಗೆ ನಾಮ–ರೂಪಗಳ ಹಂಗೂ ಇರದು; ಇರಬಾರದು ಕೂಡ. ಹೀಗಿದ್ದರೂ ನಾವು ದೇವರಿಗೆ ನಾಮ–ರೂಪಗಳನ್ನು ಕೊಡುತ್ತೇವೆ.

ಆದರೆ ಹೀಗೆ ಕೊಡುವುದು ಮಹಾಪಾಪವೆಂದೋ, ಹಾಗೆ ಕೊಟ್ಟವರು ಪಾಪಾತ್ಮರೆಂದೋ ತಿಳಿಯಬೇಕಿಲ್ಲ ಎಂಬ ವಿವೇಕವನ್ನೂ ಈ ಪರಂಪರೆಯೇ ಒದಗಿಸಿದೆ ಎನ್ನುವುದು ಕೂಡ ಗಮನಾರ್ಹ. ಪ್ರತ್ಯಕ್ಷ ಕಣ್ಣಿಗೆ ಕಾಣದುದನ್ನು ಕಣ್ಣಿಗೆ ಕಾಣಿಸಿಕೊಳ್ಳುವ ರಸಪ್ರಜ್ಞೆಯ ಕುಶಲತೆಯೇ ಈ ಕಲಾಪ. ಗಣಿತದ ಸಮಸ್ಯೆಗಳಲ್ಲಿ ಅವ್ಯಕ್ತವಾದುದನ್ನು ಕಂಡುಹಿಡಿಯಬೇಕಾಗುತ್ತದೆ. ಆಗ ಆ ಅವ್ಯಕ್ತವಾದುದಕ್ಕೇ ನಾವು ಒಂದು ಗೊತ್ತಾದ ಚಿಹ್ನೆಯನ್ನು ಆರೋಪಿಸಿ ಪರಿಹಾರವನ್ನು ಕಂಡುಕೊಳ್ಳುತ್ತೇವೆಯಷ್ಟೆ!

ಆ ಚಿಹ್ನೆಯೇ ಅದರ ಬೆಲೆಯಾಗಿರುವುದಿಲ್ಲ; ಆದರೆ ಅದಿಲ್ಲದೆ ಅವ್ಯಕ್ತದ ಬೆಲೆಯನ್ನು ಕಂಡುಹಿಡಿಯುವುದು ಸುಲಭವಾಗದು. ಇಂಥ ದಾರ್ಶನಿಕ ವಿವೇಕವ್ಯವಹಾರವನ್ನು ಈ ಶ್ಲೋಕ ಸೊಗಸಾಗಿ ನಿರೂಪಿಸುತ್ತದೆ:

ರೂಪಂ ರೂಪವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ

ಸ್ತುತ್ಯಾsನಿರ್ವಚನೀಯತಾsಖಿಲಗುರೋ

ದೂರೀಕೃತಾ ಯನ್ಮಯಾ /

ವ್ಯಾಪಿತ್ವಂ ಚ ನಿರಾಕೃತಂ ಭಗವತೋ

ಯತ್ತೀರ್ಥಯಾತ್ರಾದಿನಾ

ಕ್ಷಂತವ್ಯಂ ಜಗದೀಶ! ಯದ್ವಿಕಲತಾದೋ–

ಷತ್ರಯಂ ಮತ್ಕೃತಮ್‌ //

(ಜಗದೊಡೆಯ! ನೀನು ಎಲ್ಲ ರೂಪಗಳಿಗೂ ಮೀರಿದವನು; ಆದರೂ ನಾನು ನಿನಗೊಂದು ರೂಪವನ್ನು ಕಲ್ಪಿಸಿದೆ. ನೀನು ಯಾವ ಮಾತುಗಳಿಗೂ ನಿಲುಕದವನು; ಆದರೂ ನಾನು ನಿನ್ನನ್ನು ಮಾತುಗಳಿಗೆ ಸಿಲುಕಿಸಿದೆ. ನೀನು ಎಲ್ಲೆಲ್ಲೂ ಇರುವವನು; ಆದರೂ ನಾನು ನಿನ್ನನ್ನು ತೀರ್ಥಕ್ಷೇತ್ರಗಳಿಗೆ ಸಂಕೋಚಿಸಿದೆ. ಹೀಗೆ ಮನಸ್ಸು, ಮಾತು ಮತ್ತು ದೇಹ – ಈ ಮೂರು ನೆಲೆಗಳಿಂದ ಆಗಿರುವ ನನ್ನ ತಪ್ಪುಗಳನ್ನು ಮನ್ನಿಸು.)

ಇಲ್ಲಿ ಇನ್ನೂ ಒಂದು ವಿವರವನ್ನು ನೋಡಬಹುದು.

‘ಅಭಿಜ್ಞಾನಶಾಕುಂತಲ’ದ ಆರಂಭದಲ್ಲಿ ಕಾಳಿದಾಸನು, ಸೃಷ್ಟಿಯಲ್ಲಿ ಕಾಣುವ ಪ್ರತ್ಯಕ್ಷ ವಿವರಗಳನ್ನೇ ಶಿವನ ಶರೀರವಾಗಿ ಕಂಡರಿಸಿ ಮಣಿದಿದ್ದಾನೆ:

‘ಬ್ರಹ್ಮನ ಮೊದಲ ಸೃಷ್ಟಿಯಾದ ನೀರು; ಶಾಸ್ತ್ರೋಕ್ತರೀತಿಯಲ್ಲಿ ಹೋಮ ಮಾಡಿದ ಹವಿಸ್ಸನ್ನು ದೇವತೆಗಳಿಗೆ ತಲುಪಿಸುವ ಅಗ್ನಿ; ಯಾಗಕರ್ತೃ; ಕಾಲವ್ಯವಸ್ಥೆಗೆ ಕಾರಣರಾದ ಸೂರ್ಯ ಮತ್ತು ಚಂದ್ರ; ಕರ್ಣಗೋಚರವಾದ ಶಬ್ದವನ್ನೇ ತನ್ನ ಗುಣವಾಗಿ ಹೊಂದಿ ಎಲ್ಲವನ್ನೂ ವ್ಯಾಪಿಸಿರುವ ಆಕಾಶ; ಎಲ್ಲ ಸಚೇತನ–ಅಚೇತನ ಭೂತಗಳಿಗೂ ಉತ್ಪತ್ತಿಸ್ಥಾನವಾದ ಭೂಮಿ; ಮತ್ತು ಎಲ್ಲ ಜೀವಿಗಳ ಜೀವದುಸಿರಾದ ವಾಯು. ಈ ಎಂಟು ಪ್ರತ್ಯಕ್ಷರೂಪಗಳಿಂದ ಕೂಡಿದ ಶಿವನು ನಿಮ್ಮನ್ನು ಕಾಪಾಡಲಿ.’

ಆದರೆ ಕಾಳಿದಾಸನು ನಾಟಕದ ಕೊನೆಯಲ್ಲಿ ‘ಶಿವನು ನನ್ನ ಪುನರ್ಜನ್ಮವನ್ನು ಕೊನೆಗಾಣಿಸಲಿ’ ಎಂದು ಪ್ರಾರ್ಥಿಸಿದ್ದಾನೆ. ಆ ಮೂಲಕ ‘ಸೃಷ್ಟಿ’ಯಿಂದ ಪಾರಾಗಬೇಕೆನ್ನುವುದೇ ಈ ಸೃಷ್ಟಿಯ ಸಂದೇಶ ಎನ್ನುವುದನ್ನು ಅವನು ಸಾರಿದ್ದಾನೆ.

***

ದಶರಥನ ಅಶ್ವಮೇಧಯಾಗ, ಪುತ್ರಕಾಮೇಷ್ಟಿಯಾಗದೊಡನೆ, ಪೂರ್ಣವಾಯಿತು. ಅವನು ದೀಕ್ಷಾನಿಯಮವನ್ನು ಸಮಾಪ್ತಿಗೊಳಿಸಿ, ಪತ್ನಿಯರ ಸಂಗಡ ಸಮಸ್ತ ಪರಿವಾರದೊಂದಿಗೆ ಅಯೋಧ್ಯಾನಗರವನ್ನು ಪ್ರವೇಶಿಸಿದ.

ಯಜ್ಞ ಕಳೆದು ಒಂದು ವರ್ಷವಾಯಿತು. ಹನ್ನೆರಡನೆಯ ತಿಂಗಳು; ಚೈತ್ರಮಾಸದ ಶುಕ್ಲಪಕ್ಷ; ನವಮೀ; ಪುನರ್ವಸು ನಕ್ಷತ್ರ; ರವಿ, ಕುಜ, ಶನಿ, ಗುರು, ಶುಕ್ರ – ಈ ಐದು ಗ್ರಹಗಳು ತಮ್ಮ ಉಚ್ಚರಾಶಿಗಳಲ್ಲಿದ್ದಾರೆ. ಕರ್ಕಾಟಕ ಲಗ್ನವು ಚಂದ್ರ ಮತ್ತು ಗುರುಗಳೊಡನೆ ಉದಯವನ್ನು ಹೊಂದುತ್ತಿವೆ. ಈ ಸುಮುಹೂರ್ತದಲ್ಲಿ ಕೌಸಲ್ಯೆಯು ಸರ್ವಲಕ್ಷಣಸಂಪನ್ನದಿಂದ ಕೂಡಿರುವಂಥ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಅವನು ಸಾಕ್ಷಾತ್‌ ನಾರಾಯಣನ ಅರ್ಧಾಂಶ. ಅವನೇ ಶ್ರೀರಾಮಚಂದ್ರ.

ಅನಂತರ ಭರತನು ಕೈಕೇಯಿಯಲ್ಲಿಯೂ, ಲಕ್ಷ್ಮಣ–ಶತ್ರುಘ್ನರು ಸುಮಿತ್ರೆಯಲ್ಲಿಯೂ ಜನಿಸಿದರು. (ನಾಲ್ವರೂ ಏಕಕಾಲದಲ್ಲಿ ಜನಿಸಿದವರಲ್ಲ; ಸ್ವಲ್ಪ ಅಂತರದಲ್ಲಾದ ಈ ಜನ್ಮವಿಚಾರವನ್ನು ಮುಂದೆ ನೋಡೋಣ.)

ಕೌಸಲ್ಯೆಯಲ್ಲಿ ಜನಿಸಿದ ಮಗುವು ನೋಡಲು ಮನೋಹರವಾಗಿದ್ದನು (= ಅಭಿರಾಮ); ಹೀಗಾಗಿ ಅವನಿಗೆ ದಶರಥನು ‘ರಾಮ’ ಎಂದು ನಾಮಕರಣ ಮಾಡಿದ; ‘ರಾಮ’ ಜಗತ್ತಿನ ಮೊದಲ ಮಂಗಳ – ಎಂದು ಕಾಳಿದಾಸನು ‘ರಘುವಂಶ’ದಲ್ಲಿ ಸೊಗಸಾಗಿ ವರ್ಣಿಸಿದ್ದಾನೆ:

ರಾಮ ಇತ್ಯಭಿರಾಮೇಣ

ವಪುಷಾ ತಸ್ಯ ಚೋದಿತಾ /

ನಾಮಧೇಯಂ ಗುರುಶ್ಚಕ್ರೇ

ಜಗತ್ಪ್ರಥಮಮಂಗಲಮ್‌ //

(ದಶರಥನು ಅಭಿರಾಮತನುಕಾಂತಿಚೋದಿತನು ಹೆಸರಿಟ್ಟನಂದು ರಾಮನೆಂದಾ ಜಗತ್‌ಪ್ರಥಮ ಮಂಗಲನಾಮಧೇಯವನು ನೆನೆದು)

ಅನುವಾದ: ಎಸ್‌. ವಿ. ಪರಮೇಶ್ವರ ಭಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT