ಮಂಗಳವಾರ, ನವೆಂಬರ್ 24, 2020
26 °C

PV Web Exclusive | ಜೇನಿನ ಹೊಟ್ಟೆ ಕುಣಿತದ ನರ್ತನದ ರಹಸ್ಯವೇನು?

ಎಸ್‌.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಜೇನುಗಳು ನರ್ತನ ಮಾಡುವುದು ಏಕೆ? ಝೇಂಕಾರ ಮಾಡುವುದೇಕೆ? ಚಿಟ್ಟೆಗಳ ನರ್ತನದ ವೈಶಿಷ್ಟ್ಯವೇನು? ಜೀರುಂಡೆಗಳ ಸದ್ದಿನ ಕಂಪನದ ಅರ್ಥವೇನು?

ಈ ಕುತೂಹಲ ಚಿಕ್ಕಂದಿನಲ್ಲಿ ಬಹುತೇಕ ಎಲ್ಲರಲ್ಲೂ ಕಾಡಿರುತ್ತದೆ. ಬೆರಗೂ ಹುಟ್ಟಿಸಿರುತ್ತದೆ. ನಾವು ಬೆಳೆಯುತ್ತಾ ಹೋದಂತೆ ಅವುಗಳ ಬಗ್ಗೆ ಕುತೂಹಲ ಕಳೆದುಕೊಳ್ಳುತ್ತೇವೆ. ಅವುಗಳ ವಿಶಿಷ್ಟ ಜಗತ್ತಿನಿಂದ ನಾವು ದೂರ ಹೋಗುತ್ತವೆ. ನಮ್ಮ ಪ್ರಜ್ಞೆಯ ಮೇಲೆ ಭೌತಿಕವಾದದ ಮುಸುಕು ಆವರಿಸುತ್ತದೆ.

ಹೌದು, ನಿಸರ್ಗದಲ್ಲಿನ ನಮ್ಮ ಸಹಜೀವಿಗಳು, ಅವುಗಳ ವರ್ತನೆ, ಸಂವೇದನೆಯನ್ನು ಎಷ್ಟರ ಮಟ್ಟಿಗೆ ಅರಿತುಕೊಂಡಿದ್ದೇವೆ? ದುರದೃಷ್ಟವೆಂದರೆ ಇತರ ಎಲ್ಲ ಜೀವಿಗಳೂ ನಮ್ಮ ಉಪಭೋಗಕ್ಕೆ ಇರುವಂತಹವು, ಭಕ್ಷಣಗೆ ಮೀಸಲಾಗಿದ್ದು ಎಂಬ ಮನೋಭಾವದ ಪರಿಣಾಮ ನಿಸರ್ಗದ ಅತಿ ಅಪರೂಪದ ಪರೋಪಕಾರಿ ಜೀವಿಗಳಲ್ಲಿ ಬಹಳಷ್ಟು ನಾಶವಾಗಿ ಹೋಗಿವೆ. ಇನ್ನು ಕೆಲವು ಅಳಿವಿನಂಚಿಗೆ ತೆರಳಿವೆ. ಇನ್ನೊಂದಷ್ಟನ್ನು ಅತ್ಯಂತ ವೇಗವಾಗಿ ನಾಶ ಮಾಡುತ್ತಿದ್ದೇವೆ!

ಅಂತಹ ಅಪಾಯದ ಅಂಚಿಗೆ ಸಾಗುತ್ತಿರುವ ಕೀಟಗಳ ಪೈಕಿ ಜೇನು ಪ್ರಮುಖವಾದುದು. ಪರಾಗಸ್ಪರ್ಶದ ಮೂಲಕ ಭೂಮಿಯ ಸಸ್ಯ ವೈವಿಧ್ಯತೆಯನ್ನು ಕಾಪಾಡುವಲ್ಲಿ ಜೇನು ಹುಳುಗಳ ಪಾತ್ರ ಮಹತ್ವದ್ದು. ಅದರಲ್ಲೂ ಕೃಷಿಗೆ ಅತ್ಯಗತ್ಯ. ಕೃಷಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯ ಅಡ್ಡ ಪರಿಣಾಮದಿಂದ ಜಗತ್ತಿನೆಲ್ಲೆಡೆ ಜೇನುಹುಳು ಸಂತತಿ ನಾಶವಾಗತೊಡಗಿದ್ದು, ಅವುಗಳನ್ನು ಉಳಿಸಿಕೊಳ್ಳಬೇಕು ಎಂಬ ಕೂಗು ಪ್ರಬಲವಾಗಿ ಕೇಳಿ ಬಂದಿದೆ.

ಇರುವೆಗಳಂತೆ ಜೇನುಗಳ ಜೀವನವೂ ಅತ್ಯಂತ ಸಂಕೀರ್ಣ ಮತ್ತು ಕೌತುಕವಾದುದು. ಅದರಲ್ಲೂ ಅವುಗಳ ನೃತ್ಯವಂತೂ ಕೆಲವರಿಗಾದರೂ ಎಡೆ ಬಿಡದೇ ಕಾಡಿದ್ದುಂಟು. ಉಳಿದ ಬಹುತೇಕರು ಜೇನು ತುಪ್ಪದ ಸವಿಯನ್ನು ಸವಿಯುವುದಕ್ಕೆ ಗಮನ ಕೊಟ್ಟಿದ್ದನ್ನು ಬಿಟ್ಟರೆ, ಜೇನು ಹುಳುವಿನ ಅಂತರಾತ್ಮಕ್ಕೆ ಕಿವಿಗೊಟ್ಟಿದ್ದೇವೆಯೇ?

ಇದೀಗ ಬೆಂಗಳೂರಿನ ಜೀವ ವಿಜ್ಞಾನಿಗಳು ಜೇನುಗಳ ನರ್ತನದ ವಿಶಿಷ್ಟ ರಹಸ್ಯವನ್ನು ಅನಾವರಣಗೊಳಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಏಷಿಯಾದ ಜೇನು ಹುಳುಗಳು ನೃತ್ಯದ ಮೂಲಕ ತಮ್ಮ ಸಂಗಾತಿಗಳಿಗೆ ಏನನ್ನು ಹೇಳುತ್ತವೆ ಎಂಬುದರ ರಹಸ್ಯವನ್ನು ಅರ್ಥೈಸುವಲ್ಲಿ  ವಿಜ್ಞಾನಿಗಳು ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಅಂದ ಹಾಗೆ, ಈ ಜೇನುಗಳು ತಲೆಯನ್ನು ಆಡಿಸುತ್ತಾ ಹೊಟ್ಟೆಯನ್ನು ಕುಣಿಸುತ್ತಾ ಮಾಡುವ ನರ್ತನ, ಬೇರೆ ಜೇನು ನೋಣವನ್ನು ಆಕರ್ಷಿಸುವುದಕ್ಕಾಗಲಿ ಮತ್ಯಾವುದೋ ಕಾರಣಕ್ಕೆ ಅಲ್ಲ. ತಮ್ಮ ಆಹಾರದ ಮೂಲ ಇರುವುದನ್ನು ತಮ್ಮ ಗೂಡಿನ ಮಿತ್ರರಿಗೆ ತಿಳಿಸುವ ಕಾರಣಕ್ಕಾಗಿ ನರ್ತನ ಮಾಡುತ್ತವೆ. ಈ ಮೂಲಕ ಉಳಿದ ಜೇನುಗಳು ನಿರ್ದಿಷ್ಟ ದಿಕ್ಕಿನಲ್ಲಿರುವ ಆಹಾರವನ್ನು ಸಂಗ್ರಹಿಸಲು ಧಾವಿಸುತ್ತವೆ. ಈ ಜೇನುಗಳು ಗೊತ್ತು ಗುರಿ ಇಲ್ಲದೆ ಸುಮ್ಮನೆ ಗಿರಕಿ ಹೊಡೆಯುತ್ತಾ ನರ್ತನ ಮಾಡುತ್ತವೆ ಎಂದೇ ಇಷ್ಟು ವರ್ಷಗಳ ಕಾಲ ಭಾವಿಸಲಾಗಿತ್ತು. ಅದರ ಉದ್ದೇಶವನ್ನು ಬೇಧಿಸುವ ಜ್ಞಾನದ ಕೊರತೆಯೂ ಇತ್ತು. ಹೀಗಾಗಿ ಆ ವರ್ತನೆ ಅರ್ಥೈಸಲು ಸಾಧ್ಯವಾಗಿರಲಿಲ್ಲ. ಆದರೆ, ಜೇನುಗೂಡುಗಳಲ್ಲಿರುವ ಸಂಗಾತಿ ಜೇನುಗಳಿಗೆ ಅತ್ಯಂತ ನಿಖರವಾಗಿ ಸಮೃದ್ಧ ಆಹಾರ ಮೂಲದ ಸ್ಥಳೀಯ, ಪ್ರಾದೇಶಿಕ ಮಾಹಿತಿಯನ್ನು ರವಾನಿಸುವ ಕಾರಣಕ್ಕಾಗಿ ಈ ರೀತಿ ವರ್ತಿಸುತ್ತವೆ ಎಂಬ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದಾರೆ.

ಈ ಸಂವಹನ ಹೇಗೆ ನಡೆಯುತ್ತದೆ ಎಂಬ ಸಂಕೀರ್ಣತೆ ಅರ್ಥೈಸಿಕೊಳ್ಳಲು ಸಂಶೋಧಕರಿಗೆ ಇನ್ನೂ ಸಾಧ್ಯವಾಗಿಲ್ಲ. ಜೇನುಗಳಲ್ಲಿನ ವಿವಿಧ ಪ್ರಬೇಧಗಳಿರುವುದೇ ಇದಕ್ಕೆ ಮುಖ್ಯ ಕಾರಣ. ಅದರಲ್ಲೂ ವಿಶೇಷವಾಗಿ ಏಷ್ಯಾ ಪ್ರಬೇಧದ ಜೇನುಗಳು ನರ್ತನದ ಮೂಲಕ ಹೊರಡಿಸುವ ಸಂಜ್ಞೆಗಳು ಸಂಪೂರ್ಣ ಭಿನ್ನ. ಕೆಲವು ಪ್ರಬೇಧಗಳಲ್ಲಿ ನರ್ತನ ಮಾಡುವ ಜೇನುಗಳು ರಾಗವನ್ನೂ ಹೊರಡಿಸುತ್ತವೆ. ಇನ್ನು ಕೆಲವು ಬಗೆಯ ಜೇನುಗಳು ರಾಗ ಹೊರಡಿಸುವುದಕ್ಕೆ ಬದಲು ಶಾಂತವಾಗಿದ್ದು, ಉದರವನ್ನು ಮೇಲಕ್ಕೂ ಕೆಳಕ್ಕೂ ಆಡಿಸುತ್ತಾ, ತಲೆಯನ್ನು ಅಕ್ಕಪಕ್ಕ ಬಾಗಿಸುತ್ತಾ ಅದರ ಮೂಲಕ ಅಲೆಗಳನ್ನು ಹೊಮ್ಮಿಸಿ ಸಂದೇಶವನ್ನು ರವಾನಿಸುತ್ತವೆ ಎಂಬುದು ಬೆಂಗಳೂರಿನ ಎನ್‌ಸಿಬಿಎಸ್‌(ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರ) ವಿಜ್ಞಾನಿಗಳು ಪತ್ತೆ ಮಾಡಿರುವ ಪ್ರಮುಖ ಅಂಶ.

ಎನ್‌ಸಿಬಿಎಸ್‌ನಲ್ಲಿರುವ ಆಕ್ಸೆಲ್ ಬ್ರೋಕ್‌ಮನ್ನ್ ಪ್ರಯೋಗಾಲಯವು ಜೇನಿನ ವರ್ತನೆ ಕುರಿತು ಹೊಸ ಸಂಶೋಧನೆ ನಡೆಸಿದೆ. ಅದರ ಪ್ರಕಾರ, ವಿಭಿನ್ನ ಪ್ರಬೇಧದ ಜೇನುಗಳ ನರ್ತನದ ವರ್ತನೆಯಲ್ಲಿ ವೈವಿಧ್ಯತೆ ಕಂಡು ಬಂದರೂ, ಮಾಹಿತಿಯನ್ನು ಸಂವಹನ ಮಾಡುವ ನೃತ್ಯಗಾರ ಜೇನಿಗೆ ಸ್ಪಂದಿಸಲು, ಅಂದರೆ ರವಾನೆಯಾದ ಮಾಹಿತಿಗೆ ಉತ್ತರ ನೀಡಲು ಉಳಿದ ಜೇನುಗಳು ಮಾಡುವ ನರ್ತನದಲ್ಲಿಯೂ ಏಕರೂಪದ ವರ್ತನೆ ಕಂಡುಬರುತ್ತದೆ.

ಒಮ್ಮೆ ಒಂದು ಜೇನುಹುಳು ಆಹಾರದ ಮೂಲವಿರುವ ಪ್ರದೇಶದ ಮಾಹಿತಿಯನ್ನು ನರ್ತನದ ಮೂಲಕ ರವಾನಿಸಿದಾಗ, ಸಂವಹನ ಸ್ವೀಕರಿಸಿದ ಜೇನುಗಳೂ ಅದಕ್ಕೆ ತಕ್ಕಂತೆ ವರ್ತಿಸುತ್ತವೆ. ಈ ಮಾಹಿತಿಯನ್ನು ಅತ್ಯಂತ ಸುರಕ್ಷಿತ ವೈಖರಿಯಲ್ಲಿ ಸಂವಹನ ಮಾಡಿರುತ್ತದೆ. ವಿಭಿನ್ನ ಪ್ರಬೇಧಗಳ  ‘ನರ್ತನಗಾರ’ ಜೇನುಗಳ ನೃತ್ಯವನ್ನು ಅನುಕರಿಸಲು ಸಿದ್ಧವಿರುವ ಜೇನುಗಳ ಗಮನವನ್ನು ಸೆಳೆಯಲೆಂದೇ ಪ್ರಾಯಶಃ ನೃತ್ಯದ ಮೂಲಕ ವಿಭಿನ್ನ ಸಂದೇಶವನ್ನು ರವಾನಿಸುತ್ತಿರುತ್ತವೆ. ಹೇಗೆ ಮನುಷ್ಯ ಒಂದು ಭಾಷೆಯಲ್ಲಿ ಸಂವಹನ ನಡೆಸುತ್ತಲೇ, ಆಂಗಿಕ ಅಭಿನಯದ ಮೂಲಕವೂ ತನಗೇ ಗೊತ್ತಿಲ್ಲದಂತೆ ಮಾಹಿತಿ ರವಾನಿಸುತ್ತಾನೆಯೋ ಅದೇ ರೀತಿಯಲ್ಲಿ ಜೇನುಗಳೂ ಸಂಜ್ಞೆಯ ಮೂಲಕ ಸಂವಹನ ನಡೆಸುತ್ತವೆ ಎನ್ನುವುದು ಆಕ್ಸೆಲ್‌ ಬ್ರೋಕಮನ್ನ್ ಪ್ರಯೋಗಾಲಯದ ತರ್ಕ.

ಏಷ್ಯಾದ ಜೇನುಗಳ ನರ್ತನದ ವರ್ತನೆ ಕುರಿತಾದ ಅಧ್ಯಯನ ಮತ್ತು ವಿಶ್ಲೇಷಣೆ ಇದೇ ಮೊದಲ ಬಾರಿಗೆ ನಡೆದಿದೆ. ಈ ವಿಷಯದ ಮೇಲಿನ ಅಧ್ಯಯನ ಅತ್ಯಂತ ಅಪರೂಪ. ಈ ಸಂಶೋಧನೆಯಿಂದ ಜೇನುನೊಣಗಳ ವರ್ತನೆ ಕುರಿತ ಜ್ಞಾನದ ಪರಿಧಿ ಇನ್ನಷ್ಟು ವಿಸ್ತಾರವಾಗಲಿದೆ. ಇದರಿಂದ ಜೇನುಗಳ ರಕ್ಷಣೆ ಕುರಿತಂತೆ ಕಾರ್ಯತಂತ್ರ ರೂಪಿಸಲು ಅನುಕೂಲವಾಗುತ್ತದೆ. ಭಾರತದಲ್ಲಿ ಪರಾಗಸ್ಪರ್ಶ ಮಾಡುವ ಜೇನುಗಳು ಅಳಿವಿನಂಚಿಗೆ ಬಂದಿರುವುದು ಆಘಾತಕಾರಿ.

‘ಅನಿಮಲ್‌ ಬಿಹೇವಿಯರ್‌’ ಜರ್ನಲ್‌ನಲ್ಲಿ ಈ ಅಧ್ಯಯನದ ವಿಸ್ತೃತ ಲೇಖನ ಪ್ರಕಟವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು