ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ, ಬೆಲೆಗಳ ಸಂಕಷ್ಟದಲ್ಲಿ ರೈತರು

ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿ.ವಿ ಕುಲಪತಿ ಡಾ.ಎಂ.ಕೆ.ನಾಯ್ಕ ಅಭಿಮತ
Last Updated 13 ಜೂನ್ 2018, 11:14 IST
ಅಕ್ಷರ ಗಾತ್ರ

ರಾಯಚೂರು: ರೈತರು ಬೆಳೆ ಹಾಗೂ ಬೆಲೆ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವ ಕೆಲಸವನ್ನು ಕೃಷಿ ವಿಜ್ಞಾನಿಗಳು ಮಾಡಬೇಕು ಎಂದು ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯ್ಕ ಹೇಳಿದರು.

ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಸ್ನಾತಕೋತ್ತರ ಅಧ್ಯಯನ ನಿರ್ದೇಶನಾಲಯ ಆಯೋಜಿಸಿದ್ದ ಎರಡು ದಿನಗಳ ಸ್ನಾತಕೋತ್ತರ ಪ್ರಥಮ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಕೃಷಿ ಉತ್ಪನ್ನ ಮಾರಾಟದಲ್ಲಿ ಮಧ್ಯವರ್ತಿಗಳು ಮಾತ್ರ ಲಾಭ ಪಡೆಯುತ್ತಿದ್ದಾರೆ. ಬೆಲೆ ಇಳಿಕೆಯಿಂದ ರೈತರು ಮಾತ್ರ ನಷ್ಟ ಅನುಭವಿಸುವ ಪರಿಸ್ಥಿತಿ ಈಗಲೂ ಇದೆ. ರೈತರ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಯುವ ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡಬೇಕಿದೆ. ಸದ್ಯಕ್ಕೆ ರಾಜ್ಯದ ರೈತರ ಸರಾಸರಿ ವಾರ್ಷಿಕ ಆದಾಯ ವಾರ್ಷಿಕ ₹33 ಸಾವಿರ ಮಾತ್ರ ಇದೆ. ಇದನ್ನು ದ್ವಿಗುಣಗೊಳಿಸುವುದಕ್ಕೆ ಸರ್ಕಾರ ಕ್ರಮಕೈಗೊಳ್ಳುತ್ತಿದೆ ಎಂದು ಹೇಳಿದರು.

ಕೃಷಿ ವಿಜ್ಞಾನವು ಎಲ್ಲ ವಿಜ್ಞಾನಗಳ ತಾಯಿ ಇದ್ದಂತೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಎಲ್ಲರಿಗೂ ಆಹಾರ ಒದಗಿಸುವುದು ಸವಾಲಾಗಿತ್ತು. ದೇಶದ ಜನರು ವಾರದಲ್ಲಿ ಒಂದು ದನ ಉಪವಾಸ ಆಚರಿಸುವಂತೆ ಪ್ರಧಾನಿಯಾಗಿದ್ದ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಕರೆ ನೀಡಿದ್ದರು. ಆದರೆ, ಇಂದು ಪರಿಸ್ಥಿತಿ ತದ್ವಿರುದ್ಧವಾಗಿದೆ. ಒಂದು ಹೊತ್ತು ಊಟ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೂ ಆಹಾರದ ಕೊರತೆ ಎನ್ನುವ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ದೇಶದ 130 ಕೋಟಿ ಜನರಿಗೆ ಪ್ರತಿನಿತ್ಯ ಆಹಾರ ದೊರಕುವುದಕ್ಕೆ ಕೃಷಿ ವಿಜ್ಞಾನಿಗಳ ಕೊಡುಗೆ ಬಹಳಷ್ಟಿದೆ. ಜನಸಂಖ್ಯೆ ಹೆಚ್ಚಾದಂತೆ ಭೂಮಿಯ ಗಾತ್ರ ಹೆಚ್ಚಿಸುವುದಕ್ಕೆ ಸಾಧ್ಯವಿಲ್ಲ. ಆದರೆ, ಕೃಷಿ ಉತ್ಪಾದಕತೆ ಹೆಚ್ಚಿಸಬಹುದು ಎಂದು ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಬಿ.ವಿ.ಪಾಟೀಲ ಮಾತನಾಡಿ, ದೇಶದಲ್ಲಿ ಪ್ರತಿವರ್ಷ 52 ಸಾವಿರ ಕೃಷಿ ಪದವೀಧರರು ಹೊರ ಬರುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಎನ್ನುವ ಪ್ರಶಂಸೆ ಎಲ್ಲ ಕಡೆಗಳಿಂದ ಕೇಳಿ ಬರುತ್ತದೆ. ಆದರೆ ಕಮ್ಯೂನಿಕೇಷನ್‌ ಮಾಡುವ ವಿಷಯದಲ್ಲಿ ವಿಫಲರಾಗುತ್ತಿದ್ದಾರೆ ಎಂದರು.

ಕೃಷಿಯಲ್ಲಿ ಸಮಸ್ಯೆಗಳಿಗೆ ಕೊನೆಯಿಲ್ಲ. ಈ ಸಮಸ್ಯೆಗಳು ಸಂಶೋಧನೆಗೆ ಅವಕಾಶ ಒದಗಿಸಿವೆ. ರೈತರು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರಳ ರೀತಿಯ ಸಂಶೋಧನೆ ಮಾಡಬೇಕು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಲಿಂಕ್‌ ಮಾಡುವ ವಿಧಾನದ ಬಗ್ಗೆ ಸಂಶೋಧನೆ ಮಾಡಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಡಾ.ಎಂ.ಶೇಖರಗೌಡ ಮಾತನಾಡಿ, ಕೃಷಿಯಲ್ಲಿ ಕೀಟಗಳ ನಿರ್ವಹಣೆ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕು. ಆಹಾರ ಸಂಸ್ಕರಣೆ ಹಾಗೂ ಗುಣಮಟ್ಟದ ಬಗ್ಗೆಯೂ ಸಂಶೋಧನೆಯಾಗಬೇಕು. ಕೃಷಿ ಪದವಿ ಓದುವುದಕ್ಕೆ ಬರುವ ವಿದ್ಯಾರ್ಥಿಗಳನ್ನು ವಿನಾಕಾರಣ ಸತಾಯಿಸುವ ಕೆಲಸವನ್ನು ಪ್ರಾಧ್ಯಾಪಕರು ಮಾಡಬಾರದು. ಸಲಹೆ, ಸೂಚನೆ ಹಾಗೂ ಅನುಮೋದನೆಗಳನ್ನು ಬೇಗನೆ ಕೊಟ್ಟು ಇನ್ನಷ್ಟು ಮುಂದುವರಿಯುವುದಕ್ಕೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಗುತ್ತಿ ಜಂಬುನಾಥ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ.ಎಂ.ಜಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಸಮ್ಮೇಳನದ ಮುಖ್ಯ ಸಂಶೋಜಕ ಡಾ.ಬಿ.ಎಂ. ಚಿತ್ತಾಪುರ, ಆಡಳಿತ ಮಂಡಳಿ ಸದಸ್ಯರಾದ ಹೇಮಾವತಿ ಲಂಕೇಶ, ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ ಹಾಗೂ ವೀರಣ್ಣ ಪರಸರೆಡ್ಡಿ, ಪ್ರೊ.ಜನಗೌಡ ಇದ್ದರು. ಪ್ರಮೋದ ಕಟ್ಟಿ ಸ್ವಾಗತಿಸಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೀರ್ತಿ ಹೆಚ್ಚಿವುದಕ್ಕೆ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿಗಳ ಕೊಡುಗೆ ತುಂಬಾ ಇದೆ
ಡಾ.ಎಂ.ಜಿ.ಪಾಟೀಲ,‌ ಸಮ್ಮೇಳನ ಸಂಘಟನಾ ಕಾರ್ಯದರ್ಶಿ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT