ಶನಿವಾರ, ಏಪ್ರಿಲ್ 1, 2023
23 °C

ಮಳೆಕಾಡಿನಲ್ಲಿ ರಾತ್ರಿ ಕಂಡದ್ದು!

ಕೇಶವಮೂರ್ತಿ ಸಿ.ಜಿ. Updated:

ಅಕ್ಷರ ಗಾತ್ರ : | |

Prajavani

ಆಗುಂಬೆಯ ಮಳೆಕಾಡಿನಲ್ಲಿ ರಾತ್ರಿ ವೇಳೆ ತೆರೆದುಕೊಳ್ಳುವ ವನ್ಯಜೀವಿಗಳ ಲೋಕವೇ ವಿಶಿಷ್ಟವಾಗಿದೆ. ಐದು ದಿನಗಳ ರಾತ್ರಿ ನಡಿಗೆಯಲ್ಲಿ ಕಂಡ ವನ್ಯಲೋಕದ ಬಗ್ಗೆ ಲೇಖಕರು ಇಲ್ಲಿ ವಿವರಿಸಿದ್ದಾರೆ.

‘ಸ‌ರ್ ಊಟ ಆಯ್ತಾ?’ ಎಂದು ಕೇಳಿದರು ಹರ್ಷ. ನಾನು ‘ಆಯ್ತು’ ಎಂದಿದ್ದೇ ತಡ, ‘ಹಾಗಾದರೆ, ಬನ್ನಿ ಸರ್, ಒಂದು ವಾಕ್‌ ಹೋಗಿ ಬರೋಣ’ ಎಂದು ಆಹ್ವಾನವಿತ್ತರು. ‘ಎತ್ತ’ ಎಂಬ ನನ್ನ ಪ್ರಶ್ನೆಗೆ ಪ್ರತಿಯಾಗಿ ಅವರು ಕೈ ತೋರಿಸಿದ ಜಾಗದತ್ತ ನೋಡಿ ಒಮ್ಮೆ ಗಾಬರಿಗೊಂಡೆ. ಏಕೆಂದರೆ, ಅದೊಂದು ದಟ್ಟಕಾಡು!

ನಾವು ನಿಂತಿದ್ದು ಶಿವಮೊಗ್ಗ ಜಿಲ್ಲೆಯ ಆಗುಂಬೆಯ ದಟ್ಟ ಕಾಡಿನ ನಡುವೆ. ಅಲ್ಲಿ ಗುಬ್ಬಿ ಲ್ಯಾಬ್ಸ್‌ನವರು ಆಯೋಜಿಸಿದ್ದ ‘ಪರಿಸರ ವಿಜ್ಞಾನದ ಸಂಶೋಧನಾ ವಿಧಾನಗಳಿಗೆ ಪ್ರವೇಶಿಕೆ’ (PRiMER in methods and ecological research) ಎಂಬ ಕ್ಷೇತ್ರಕಾರ್ಯದ ಕಾರ್ಯಾಗಾರದಲ್ಲಿ ಭಾಗವಹಿಸಲು ಹೋಗಿದ್ದೆವು. ಒಂದು ವಾರದ ಕೋರ್ಸ್ ಅದು. ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ನಾವು ಉಳಿದುಕೊಂಡಿದ್ದೆವು.

ಮೊದಲ ದಿನ ರಾತ್ರಿ, ಊಟ ಮುಗಿಸಿ ವಿರಮಿಸಿಕೊಳ್ಳುತ್ತಿದ್ದಾಗ, ಕಾಡಿನಲ್ಲಿ ವಿಹರಿಸಲು ಗೆಳೆಯರು ಕರೆದರು. ಆದರೆ, ಬಂದ ದಿನವೇ ನನಗೆ ಐದಾರು ಹಾವುಗಳು ‘ಸ್ವಾಗತ’ ಕೋರಿ ಎದೆಯೊಳಗೆ ನಡುಕ ಹುಟ್ಟಿಸಿದ್ದರಿಂದ, ನನ್ನ ಓಡಾಟವನ್ನು ಮಲಗುವ ಕೋಣೆ, ಊಟದ ಜಾಗಗಳಿಗಷ್ಟೇ ಸೀಮಿತಗೊಳಿಸಿಬಿಟ್ಟಿದ್ದೆ. ಈಗ ಸ್ನೇಹಿತರು ಒತ್ತಾಯಿಸಿದ್ದರಿಂದ ಮನದೊಳಗಿನ ಅಳಕನ್ನು ಅದುಮಿಟ್ಟುಕೊಂಡು ರಾತ್ರಿ ಕಾಡು ಸುತ್ತಾಟಕ್ಕೆ ಹೊರಟೆ.

ಅಮೆರಿಕದಲ್ಲಿ ವನ್ಯ ಜೀವಿಶಾಸ್ತ್ರದಲ್ಲಿ ಪದವಿ ಪಡೆದಿದ್ದ ಯತಿನ್ ಕಲ್ಕಿ ನಡಿಗೆಯ ಮುಂದಾಳತ್ವ ವಹಿಸಿದ್ದರು. ಅವರೊಂದಿಗೆ ಹತ್ತರಿಂದ–ಹದಿನೈದು ಮಂದಿ, ತಲೆಗೆ ದೀಪ (head light) ಕಟ್ಟಿಕೊಂಡು ಹೊರಟೆವು. ಗವ್ವೆನ್ನುವ ಕತ್ತಲು. ಚಿರ‍್ರೋ ಎನ್ನುವ ಹುಳುಗಳ ರಾಗ. ರಾತ್ರಿ ಸಂಚಾರಿ ಜೀವಿಗಳ ಕಿಚಿ–ಪಿಚಿಯ ಮಾತುಕತೆ. ಸರ ಸರ ಸದ್ದು ಮಾಡುವ ನಡುವೆ ಹೆಜ್ಜೆ ಹಾಕುತ್ತಿದ್ದೆ.

ತೆರೆದುಕೊಂಡ ವಿಸ್ಮಯಗಳ ಲೋಕ

ಹೆಜ್ಜೆ ಹಾಕುತ್ತಿರುವಾಗ ದೂರದಲ್ಲಿ ಮರಗಳ ನಡುವೆ ಸರ ಸರ ಎಂದು ಸದ್ದು ಕೇಳಿತು. ತಲೆ ಎತ್ತಿ ನೋಡಿದೆ. ಹೆಡ್‌ಲೈಟ್ ಬೆಳಕು ಮರದ ಮೇಲೆಯೇ ಬಿತ್ತು. ಸದ್ದು ಬಂದ ಕಡೆಗೆ ಬೈನಾಕ್ಯುಲರ್‌ನಿಂದ ನೋಡಿದೆ. ಬೆದರಿದ ಕಂಗಳ ಬಾಲವಿಲ್ಲದ ಬೆಕ್ಕಿನ ಗಾತ್ರದ ಕಾಡುಪಾಪ ಕಂಡಿತು. ಸಸ್ತನಿ ವರ್ಗದ, ಲಾರಿಸಿಡೆ ಕುಟುಂಬಕ್ಕೆ ಸೇರಿದ ಈ ವೃಕ್ಷವಾಸಿ ನಿಶಾಚರಿಗೆ ಆಂಗ್ಲ ಭಾಷೆಯಲ್ಲಿ ‘ಲಾರಿಸ್’ ಎನ್ನುವರು. ಇವುಗಳಲ್ಲಿ ಎರಡು ವಿಧ; ಸ್ಲೆಂಡರ್ ಲಾರಿಸ್ ಹಾಗೂ ಸ್ಲೋಲಾರಿಸ್. ಭೂ ವಾಸಿ ಸಸ್ತನಿಗಳಲ್ಲಿ ವಿರಳವಾಗಿರುವ ವಿಷಕಾರಿಯಾದ ಏಕೈಕ ಪ್ರಾಮುಖಿ (Primate) ಸ್ಲೋಲಾರಿಸ್‌ ಎಂಬುದು ಅದಕ್ಕಂಟಿದ ಕುಖ್ಯಾತಿ. ಅಪಾಯ ಎದುರಾದಾಗ ಎರಡೂ ಕೈಗಳನ್ನು ಮೇಲಕ್ಕೆತ್ತಿ ಕಂಕುಳಲ್ಲಿ ಸ್ರವಿಸಲ್ಪಡುವ ದ್ರವವನ್ನು ಲಾಲಾರಸದೊಂದಿಗೆ ಸೇರಿಸಿ ಕಚ್ಚಿದಲ್ಲಿ (Anaphylaxis) ಅಲರ್ಜಿಯ ಅತಿ ಪ್ರತಿಕ್ರಿಯೆಗಳು ದೇಹದಲ್ಲುಂಟಾಗಿ ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಉಬ್ಬುತ್ತಾ ಬಂದು ಹೃದಯ ಸ್ತಂಭನವಾಗಬಹುದು. ಈ ಮಾಹಿತಿ ಕೇಳಿದಾಗ, ಒಂದು ಕ್ಷಣ ಅಚ್ಚರಿಯಾಯಿತು.

ನಡಿಗೆಯ ಮುಂದಿನ ಹೆಜ್ಜೆಯಲ್ಲೇ ವಿವಿಧ ವರ್ಣಗಳಲ್ಲಿರುವ ವಿಷಕಾರಕ ಮಂಡಲದ ಹಾವು ಕಂಡಿತು. ಇದಕ್ಕೆ ಇಂಗ್ಲಿಷ್‌ನಲ್ಲಿ ಮಲಬಾರ್ ಪಿಟ್ ವೈಪರ್ (ಟ್ರೆಮೆರೆಸುರುಸ್ ಮಲಬಾರಿಕಸ್) ಎನ್ನುತ್ತಾರೆ. ಭಾರತದ ಪಶ್ಚಿಮ ಘಟ್ಟಗಳ ದಕ್ಷಿಣ ಭಾಗಗಳಲ್ಲಿ ಮಾತ್ರ ಇವು ಕಂಡುಬರುತ್ತವೆ. ನಾಸಿಕರಂಧ್ರ ಹಾಗೂ ಕಣ್ಣಿನ ಮಧ್ಯೆ ಉಷ್ಣವನ್ನು ಗ್ರಹಿಸುವ ಚಿಕ್ಕ ಕುಳಿ (Pit) ಇರುವುದರಿಂದಲೇ ಇವುಗಳನ್ನು ‘ಪಿಟ್ ವೈಪರ್’ (ಮಂಡಲದ ಹಾವು)ಗಳೆಂದು ಕರೆಯುತ್ತಾರೆ.

ಮುಂದೆ ಮರದಿಂದ ತುಂಡಾದ ರೆಂಬೆಯೊಂದು ಜೋತುಬಿದ್ದಂತೆ ಕಂಡಿತು. ಹತ್ತಿರ ಹೋಗಿ ಹೆಡ್‌ಲೈಟ್ ಬೆಳಕಲ್ಲಿ ನೋಡಿದಾಗಲೇ ಗೊತ್ತಾಗಿದ್ದು, ಅದು ಸುಮಾರು ಒಂದು ಅಡಿ ಉದ್ದದ ಬೃಹತ್ ಕಡ್ಡಿಕೀಟವೆಂದು. ಇನ್ನೊಂದು ಕಡೆ ಎಲೆಯ ಮೇಲೆ ಇನ್ನೊಂದು ಕಂದು ಬಣ್ಣದ ಕಡ್ಡಿಕೀಟ ಕಂಡಿತು. ಅದಕ್ಕೆ ಹತ್ತು ಕಾಲುಗಳಿದ್ದದ್ದನ್ನು ಕಂಡು ಅಚ್ಚರಿಗೊಂಡೆ. ಹತ್ತಿರ ಹೋಗಿ ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯಿತು, ಹೆಣ್ಣು ಕೀಟದ ಮೇಲೆ ಚಿಕ್ಕ ಗಂಡು ಕೀಟ ಕುಳಿತು ಮಿಲನದಲ್ಲಿ ತೊಡಗಿತ್ತು.

ಅತ್ತ ದೃಷ್ಟಿ ಹರಿಸುತ್ತಾ, ಪಿಸು ಮಾತನಾಡುತ್ತಿದ್ದಾಗ ಯತಿನ್ ಅವರು ನೀರಿನ ಬಳಿಯಿದ್ದ ಬಂಡೆ ಎತ್ತಿ ಸರಿಸಿದರು. ಓಹ್! ಅದರ ಕೆಳಗೆ ಹಾವೊಂದು ಕಂಡಿತು. ‘ಇದರ ಹೆಸರು ಚಕ್ಕರ್ಡ್‌ ಕೀಲ್ ಬ್ಯಾಕ್ (ಕ್ಸಿನೋಕ್ರೊಫಿಸ್ ಪಿಸ್ಕೆಟರ್). ಇದು ಏಷ್ಯಾದ ನೀರ ಹಾವು. ವಿಷಕಾರಿಯಲ್ಲದ ಈ ಹಾವುಗಳು ಕಡಿದರೆ ಆ ಜಾಗ ಸೋಂಕಿಗೊಳಗಾಗಿ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು’ ಎಂದು ಅವರು ವಿವರಿಸಿದರು.

ಪ್ರತಿನಿತ್ಯ ರಾತ್ರಿ 10ರಿಂದ 11.30ರವರೆಗೆ ನಾಲ್ಕು ಕಿ.ಮೀ (ಹೋಗಿ–ಬರುತ್ತಾ) ರಾತ್ರಿ ನಡಿಗೆ ಕಾಡಿನ ಕಾಲುದಾರಿಗಳಲ್ಲದೇ, ಕೆರೆಗಳ ದಡದಲ್ಲೂ ಸಾಗುತ್ತಿತ್ತು. ಇದು ಕೋರ್ಸ್‌ನ ಭಾಗವಾಗಿಲ್ಲ ದಿದ್ದರೂ, ಆಸಕ್ತ ವಿದ್ಯಾರ್ಥಿಗಳು ನಡಿಗೆಗೆ ಜತೆಯಾಗುತ್ತಿದ್ದರು. ಅದರಲ್ಲೂ ಮೊದಲ ದಿನದ ನಡಿಗೆಯ ಖುಷಿ, ಮುಂದೆ ಐದು ದಿನಗಳೂ ಮುಂದುವರಿಸುವಂತೆ ಉತ್ತೇಜಿಸಿತು. ನಡಿಗೆಯಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಎಲ್ಲರೂ ಹಂಚಿಕೊಳ್ಳುತ್ತಾ, ರಾತ್ರಿ 2 ಗಂಟೆಯವರೆಗೂ ಚರ್ಚೆ ಮಾಡುತ್ತಿದ್ದೆವು.

ನಿಸರ್ಗ ನಡಿಗೆ

ರಾತ್ರಿ ನಡಿಗೆ ಆಸಕ್ತಿಯ ಭಾಗವಾದರೆ, ನಿಸರ್ಗ ನಡಿಗೆ (Nature walk) ಮತ್ತು ಕಪ್ಪೆ ಗುರುತಿಸುವಿಕೆ ಕೋರ್ಸ್‌ನ ಭಾಗವಾಗಿತ್ತು. ಡಾ. ಕೆ.ವಿ. ಗುರುರಾಜ್, ಡಾ. ಶೇಷಾದ್ರಿ ಹಾಗೂ ಡಾ.ಸುಧೀರ್‌ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ, ಜೀವ ಜಗತ್ತಿನ ಹಲವು ಮಜಲುಗಳನ್ನು ಅನಾವರಣಗೊಳಿಸುತ್ತಿತ್ತು. ಸಂಜೆ ಹೊತ್ತಿಗೆ ವಿಜ್ಞಾನಿಗಳೊಂದಿಗೆ ಹೆಜ್ಜೆ ಹಾಕುವಾಗ ಹಕ್ಕಿಗಳ ಕಲರವ ಇಂಪಾಗಿರುತ್ತಿತ್ತು. ಆದರೆ ಸಿಕಾಡ ಎಂಬ ಕೀಟದ ಶಬ್ದ ಮಾತ್ರ ಕರ್ಣ ಕಠೋರ. ರಾತ್ರಿಯಾದಂತೆ ನಿಶ್ಯಬ್ದದ ನಡುವೆ ಜೀರುಂಡೆಗಳು ಗುಂಯ್‌ ಗುಟ್ಟತ್ತಾ ‘ನಾವು ಇದ್ದೇವೆ’ ಎಂದು ತಮ್ಮ ಇರುವಿಕೆಯನ್ನು ಸಾಬೀತುಪಡಿಸುತ್ತಿದ್ದವು.

ನಿಸರ್ಗದ ನಡಿಗೆಯಲ್ಲಿ ಹಲವು ಜಾತಿಯ ಕಪ್ಪೆಗಳು ಕಂಡವು. ಅವುಗಳಲ್ಲಿ ನೆನಪಿನಲ್ಲಿ ಉಳಿದದ್ದು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ಹಾರುವ ಕಪ್ಪೆ (ರಾಕೊಫೊರಸ್ ಮಲಬಾರಿಕಸ್)ಎಂಬ ವೃಕ್ಷವಾಸಿ ಹಾಗೂ ದ್ವಿವರ್ಣದ ಮಲಬಾರ್ ಕಪ್ಪೆ (ಕ್ಲೈನೋಟಾರ್ಸಸ್‌ ಕರ್ಟೈಪ್ಸ್).

ದಾರಿಯನ್ನು ಪರಿಶೀಲಿಸಲು ನೇರಳಾತೀತ ಕಿರಣದ ಬೆಳಕು ಹಾಯಿಸುತ್ತಾ ಹೆಜ್ಜೆಯಿಡುತ್ತಿದ್ದವರಿಗೆ ಒಂದೆಡೆ ಚೇಳಿನ ದರ್ಶನವಾಯಿತು. ವಿಶೇಷವೆನಿಸಿದ್ದು ಆ ಚೇಳಿನಲ್ಲಿದ್ದ ಪ್ರತಿದೀಪ್ತಿ (fluorescence). ಮಾಮೂಲಿ ಟಾರ್ಚ್‌ನಲ್ಲಿ ಅದು ಕಂದು ಬಣ್ಣದಲ್ಲಿ ಕಾಣುತ್ತಿದ್ದದು, ನೇರಳಾತೀತ ಕಿರಣದ ಟಾರ್ಚ್‌ ಬೆಳಕು ಬಿಟ್ಟಾಗ ಕೂಡಲೇ ತಿಳಿ ಹಸಿರು ಬಣ್ಣಕ್ಕೆ ಬದಲಾಗುತ್ತಿತ್ತು.

ಮರಗಳ ತುದಿಯನ್ನು ಅವಲೋಕಿಸುತ್ತಿದ್ದ ಶೇಷಾದ್ರಿ ಸರ್, ಒಂದೆಡೆ ‘ಶ್’ ಎಂದರು. ತಕ್ಷಣ ಎಲ್ಲರೂ ಸ್ತಬ್ಧರಾದೆವು. ದೂರದಲ್ಲಿ ಒಂದು ಪ್ರಾಣಿ ಕಂಡಿತು. ಎಲ್ಲರೂ ತಮ್ಮ ಕೈಯಲ್ಲಿದ್ದ ಬೈನಾಕ್ಯುಲರ್‌ನಲ್ಲಿ ಆ ಪ್ರಾಣಿ ನೋಡಿದರು. ಯಾರಿಗೂ ಗುರುತಿಸಲಾಗಲಿಲ್ಲ. ‘ಅದು ಭಾರತೀಯ ದೈತ್ಯ ಹಾರುವ ಅಳಿಲು (ಪೆಟಾರಿಸ್ಟ ಫಿಲಿಪ್ಪೆನ್ಸಿಸ್‌)’ ಎಂದರು ಅವರು. ಈ ಮಾಹಿತಿ ನೀಡುವಾಗಲೇ, ಅದು ತನ್ನ ಮುಂಗಾಲು ಹಾಗೂ ಹಿಂಗಾಲುಗಳ ನಡುವಿನ ಚರ್ಮದ ಪದರವನ್ನು ರೆಕ್ಕೆಯಂತೆ ಅಗಲಿಸುತ್ತ ಸರ‍್ರನೆ ಹಾರಿ ಹೋಯಿತು.

ಮುಂದೆ ಹೆಜ್ಜೆ ಹಾಕುತ್ತಿದ್ದಾಗ, ಜೇಡಗಳಲ್ಲೇ ವಿಷಕಾರಿಯಾದ ಟರಂಟ್ಯುಲ ಎಂಬ ವಿಧದ ಜೇಡವೊಂದು ಕಂಡಿತು. ಭಾರತೀಯ ಟರಂಟ್ಯುಲಗಳು ಅಷ್ಟೊಂದು ವಿಷಕಾರಿಗಳಲ್ಲವಾದರೂ ಕಚ್ಚಿದಲ್ಲಿ ಅತ್ಯುಗ್ರ ನೋವಂತೂ ಖಚಿತ ಎಂದರು ವಿಜ್ಞಾನಿಗಳು.

ಕಗ್ಗತ್ತಲೆಯೇ ಅಧ್ಯಯನಕ್ಕೆ ಶಕ್ತಿ

ಕಾಡಿನಲ್ಲಿರುವ ಕತ್ತಲೆಯೇ ಕಾನನದ ರಾತ್ರಿ ನಡಿಗೆಗೆ ಸಕಾರಾತ್ಮಕ ಅಂಶ. ಕತ್ತಲಲ್ಲಿ ಹೆಡ್‌ಲೈಟ್‌ ಬೆಳಕಿನಲ್ಲಿ ಮೊದಲು ಪ್ರಾಣಿಗಳ ಕಣ್ಣಿನ ಹೊಳಪು ಕಾಣುತ್ತದೆ. ಆಗ ಸಂಭ್ರಮವೋ ಸಂಭ್ರಮ. ನಂತರ ಸೂಕ್ಷ್ಮವಾಗಿ ಗಮನಿಸಿದರೆ, ಇಡೀ ಪ್ರಾಣಿಯ ದೇಹದ ಭಾಗಗಳು ಕಾಣಿಸುತ್ತವೆ. ಬೆಳಕಿನಲ್ಲಿ ನಾವು ಪ್ರಾಣಿಗಳನ್ನು ಹುಡುಕುವಾಗ ಹಾಗೂ ಆ ಪ್ರಾಣಿಗಳು ಸಿಕ್ಕಮೇಲೆ ಆಗುವ ಸಂಭ್ರಮ ವರ್ಣಿಸಲಸದಳ.

ನಿಸರ್ಗ ನಡಿಗೆ ಮತ್ತು ರಾತ್ರಿ ನಡಿಗೆಯಲ್ಲಿ ಐದು ದಿನಗಳವರೆಗೆ ಕಂಡ ಜೀವವೈವಿಧ್ಯದ ದೃಶ್ಯಗಳು ಜೀವಶಾಸ್ತ್ರ ಉಪನ್ಯಾಸಕನಾದ ನನ್ನೊಳಗೆ ಹೊಸ ಹುರುಪನ್ನು ತುಂಬಿದ್ದಂತೂ ಸತ್ಯ. ಅಷ್ಟೇ ಅಲ್ಲ, ರಾತ್ರಿ ಓಡಾಡುವಾಗ ಆಗುತ್ತಿದ್ದ ಭಯ ನಿವಾರಣೆಯಾಗಿದ್ದೂ ಹೌದು. ಬೆಳಕಿನಲ್ಲಿ ವನ್ಯಜೀವಿಗಳನ್ನು ಕಂಡು ಬೆರಗಾಗುತ್ತಿದ್ದ ನನಗೆ ರಾತ್ರಿಯ ನಡಿಗೆ, ನಿಸರ್ಗದ ಮತ್ತೊಂದು ಲೋಕವನ್ನು ಪರಿಚಯಿಸಿತು.

ಆಸಕ್ತರಿಗೊಂದಿಷ್ಟು ಮಾಹಿತಿ...

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ, ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್‌ನ (MCBT ) ಅಂಗಸಂಸ್ಥೆ. 2005ರಲ್ಲಿ ಖ್ಯಾತ ಉರಗ ತಜ್ಞ ರೊಮ್ಯುಲಸ್ ವಿಟೇಕರ್‌ ಸ್ಥಾಪಿಸಿದ ಈ ಸಂಸ್ಥೆ, ಕಾಳಿಂಗ ಸರ್ಪಗಳ ಬಗ್ಗೆ ರೇಡಿಯೊ ಟಿಲಿಮೆಟ್ರಿ ಅಧ್ಯಯನ ನಡೆಸಿದೆ. ಅಜಯ್ ಗಿರಿ ಅವರು ಈ ಕ್ಷೇತ್ರಕಾರ್ಯದ ನಿರ್ದೇಶಕರಾಗಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾ, ಉರಗ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 

ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರಕ್ಕೆ ಸುಮ್ಮನೆ ಹೋಗಿ ನೋಡಿ ಬರಲು ಅಡ್ಡಿಯಿಲ್ಲ. ಹಾಗೆ ಹೋದಾಗ, ಹಾರುವ ಓತಿ (ಡ್ರಾಕೊ), ಸಿಂಗಳೀಕ, ಹಸಿರು ಹಾವುಗಳು ಹಾಗೂ ವಿವಿಧ ಪಕ್ಷಿ ಪ್ರಭೇದಗಳನ್ನು ನೋಡಿಬರಬಹುದು. ಆದರೆ ವನ್ಯಜೀವಿಗಳ ಕುರಿತು ಆಸಕ್ತಿ ಇರುವವರು, ಅಲ್ಲಿ ಸ್ವಯಂ ಸೇವಕರಾಗಿ ಅಥವಾ ಇಂಟರ್‌ಶಿಪ್‌ಗಳ ಮೂಲಕ ಅಧ್ಯಯನ ಮಾಡಬೇಕು. ಇಂಥ ತರಬೇತಿಗಾಗಿ ಎಂಸಿಬಿಟಿ ತನ್ನ ವೆಬ್‌ತಾಣಗಳಲ್ಲಿ ಅರ್ಜಿಗಳನ್ನು ಆಹ್ವಾನಿಸುತ್ತದೆ. ಆಸಕ್ತರು ಇಮೇಲ್ ಮೂಲಕ ತಮ್ಮ ಪರಿಚಯ ಪತ್ರವನ್ನು ಕಳುಹಿಸಬೇಕು. ಸಂಸ್ಥೆಯವರು ‘ಸ್ಕೈಪ್’ ಮೂಲಕ ಸಂದರ್ಶನ ನಡೆಸುತ್ತಾರೆ. ಸಂದರ್ಶನದಲ್ಲಿ ಪಾಸಾದರೆ, ನಿರ್ದಿಷ್ಟ ಶುಲ್ಕದೊಂದಿಗೆ ಕೋರ್ಸ್‌ಗೆ ಸೇರಬಹುದು. ಈ ಕೋರ್ಸ್‌ನಲ್ಲಿ, ಪಾಠದ ಜತೆಗೆ, ಊಟ–ವಸತಿ ಸೌಲಭ್ಯಗಳನ್ನೂ ಮಾಡಿಕೊಡುತ್ತಾರೆ. ಹೆಚ್ಚಿನ ಮಾಹಿತಿಗೆ www.madrascrocodilebank.org ವೆಬ್ ಪುಟ ಸಂದರ್ಶಿಸಿರಿ.

ಚಿತ್ರಗಳು: ಹರ್ಷ, ಋತ್ವಿಕ್, ವಿಘ್ನೇಶ್ ಕಾಮತ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು