ಭಾನುವಾರ, ಏಪ್ರಿಲ್ 5, 2020
19 °C

ಇಂದು ವಿಶ್ವ ಗುಬ್ಬಿ ದಿನ | ಚೀಂವ್ ಚೀಂವ್ ಗುಬ್ಬಚ್ಚಿ...

ಕಲ್ಗುಂಡಿ ನವೀನ್ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ ಗುಬ್ಬಿ ಚೀಂವ್ ಚೀಂವ್ ಎಂದು ಕರೆಯುವ ಯಾರನ್ನು.. ?
ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು?
ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು?

ಈ ಪ್ರಾಥಮಿಕ ಶಾಲೆಯಲ್ಲಿದ್ದ ಪದ್ಯ ಅನೇಕರಿಗೆ ನೆನಪಿರಬಹುದು.ಶಾಲೆಯಲ್ಲಿ ಮೇಷ್ಟ್ರು ಹೀಗೆ ಪದ್ಯ ಹೇಳಿಕೊಡುವಾಗ ಶಾಲೆಯ ಅಂಗಳದಲ್ಲಿ ಗುಬ್ಬಿ ಕಾಳು ಹೆಕ್ಕಿ ತಿನ್ನುತ್ತಿದ್ದನ್ನು ಅನೇಕರು ನೋಡಿರುತ್ತೀರಿ, ಹೌದಲ್ಲವಾ?

ನಿಜ, ಗುಬ್ಬಿ ಎನ್ನುವುದು ನಮ್ಮ ನಿತ್ಯದ ಸಂಗಾತಿ. ‌ನಮ್ಮ ಕುಟುಂಬದ ಭಾಗವಾಗಿತ್ತು. ಬೆಂಗಳೂರಿನಂತಹ ಮಹಾನಗರದಲ್ಲೂ ಮನೆಯಂಗಳಕ್ಕೆ ಬಂದು ಕಾಳು ಹೆಕ್ಕಿ ತಿನ್ನುತ್ತಾ ಚೀಂವ್ ಚೀಂವ್ ಎಂದು ತನ್ನ ಬಳಗವನ್ನೆಲ್ಲ ಕರೆಯುತ್ತಿದ್ದಂತಹ ಪಕ್ಷಿ ಇದು. ಗುಬ್ಬಿಗಳು ಮಾನವನೊಂದಿಗೆ ಅತಿಹೆಚ್ಚು ಹೊಂದಿಕೊಂಡಿರುವ ಹಕ್ಕಿಗಳು. ಅದಕ್ಕೆ ಅವುಗಳನ್ನು ಗುಬ್ಬಕ್ಕ ಎಂದೇ ಸಂಬೋಧಿಸುತ್ತೇವೆ.

ಹೀಗೆ ಬಂಧುವಿನ ರೀತಿ ಇದ್ದ ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದೆ. ಇದು ಜಾಗತಿಕವಾಗಿ ಆಗಿರುವ ಬೆಳವಣಿಗೆ. ಇವು ಏಕೆ ಕಡಿಮೆಯಾದವು ಎಂಬುದರ ಬಗ್ಗೆ ಪಿಎಚ್‍ಡಿ ಪ್ರಬಂಧಗಳು ಸಹ ಬಂದಿವೆ. ಸಾಕಷ್ಟು ಅಧ್ಯಯನಗಳು ನಡೆದಿವೆ.

ಪ್ರಮುಖ ಕಾರಣಗಳು ಹೀಗಿವೆ

* ಪೆಟ್ರೋಲ್ ದಹನವಾದಾಗ ಬರುವ ಮೀಥೈಲ್‍ ನೈಟ್ರೇಟ್‍ನಂತಹ ರಾಸಾಯನಿಕಗಳು ಕೆಲವು ಕೀಟಗಳನ್ನು ಕೊಲ್ಲುತ್ತವೆ. ಈ ಕೀಟಗಳನ್ನು ಗುಬ್ಬಿಗಳು ತಮ್ಮ ಮರಿಗಳಿಗೆ ತಿನ್ನಿಸುತ್ತಿದ್ದವು. ಇದೂ ಗುಬ್ಬಿಗಳ ಕಣ್ಮರೆಗೆ ಕಾರಣವಾಗಿದೆ.

* ಮನೆ ನಿರ್ಮಾಣದ ಶೈಲಿ ಬದಲಾಯಿತು. ಎಲ್ಲವೂ ಕಾಂಕ್ರೀಟ್‌ಮಯವಾಗಿಬಿಟ್ಟಿತು. ಹೀಗಾಗಿ ಗೂಡುಕಟ್ಟಲು ಗುಬ್ಬಿಗಳಿಗೆ ಸೂಕ್ತ ಜಾಗವಿಲ್ಲದಂತಾಯಿತು.  

* ಈ ಹಿಂದೆ ಮನೆಗಳ ಮುಂದೆ ಧಾನ್ಯಗಳನ್ನು ಒಣಗಿ ಹಾಕುತ್ತಿದ್ದರು. ಧಾನ್ಯಗಳನ್ನು ಕೇರುತ್ತಿದ್ದರು. ಅಳಿದುಳಿದ ಧಾನ್ಯಗಳು ಗುಬ್ಬಿಗಳಿಗೆ ಆಹಾರವಾಗುತ್ತಿತ್ತು. ಈಗ ಇವೆಲ್ಲ ಸಂಪೂರ್ಣ ನಿಂತಿವೆ.

* ಹಿಂದಿನ ಕಾಲದಲ್ಲಿ ಅಂಗಡಿ, ಮುಂಗಟ್ಟುಗಳಲ್ಲಿ ಗೋಣಿ ಚೀಲದಲ್ಲಿ ಧಾನ್ಯಗಳಿರುತ್ತಿದ್ದವು ಹಾಗೂ ಅವನ್ನು ಹೊರಗೆ ಇರಿಸಿರುತ್ತಿದ್ದವು ಇದರಿಂದ ಧಾನ್ಯ ಆಯುವುದು ಗುಬ್ಬಿಗಳಿಗೆ ಸುಲಭವಾಗುತ್ತಿತ್ತು. ಈಗ ಎಲ್ಲವೂ ಪ್ಲಾಸ್ಟಿಕ್ ಕವರ್‌ಗಳಲ್ಲಿ ಬಂಧಿಯಾಗಿವೆ.

* ಮೊಬೈಲ್ ವಿಕಿರಣಗಳಿಂದ ತೊಂದರೆ ಎಂದು ಹೇಳಲಾಗುತ್ತದೆಯಾ ದರೂ ಇದಕ್ಕೆ ಈವರೆಗೂ ವೈಜ್ಞಾನಿಕ ಆಧಾರಗಳು ಸಿಕ್ಕಿಲ್ಲ.

* ಗುಬ್ಬಿಗಳಿಗೆ ಬೇಕಾದ ಆವಾಸ್ಥಾನ ಇಲ್ಲದ್ದು (ಗಿಡ–ಮರಗಳ ಸಂಖ್ಯೆ ಕಡಿಮೆಯಾಗಿದ್ದು), ಮನೆಯ ಹಿಂದೆ, ಮುಂದೆ ಕೈತೋಟಗಳು ಕ್ಷೀಣಿಸಿದ್ದು.. ಇಂಥವೂ ಅವುಗಳ ಸಂಖ್ಯೆ ಕ್ಷೀಣಿಸಲು ಕಾರಣವಾಗಿವೆ. 

ಇವೆಲ್ಲದರ ನಡುವೆಯೂ ನಗರದ ಮಾವಳ್ಳಿ, ಕೆ.ಆರ್‌.ಮಾರುಕಟ್ಟೆ ಬಸವನಗುಡಿ, ತ್ಯಾಗರಾಜನಗರ ಹಾಗೂ ರಾಜಾಜಿನಗರದ ಕೆಲವೆಡೆ ಗುಬ್ಬಿಗಳಿವೆ ಎಂಬುದು ಸಂತೋಷದ ವಿಷಯ.

ರಕ್ಷಣೆಯ ಹೊಣೆ ಮನುಷ್ಯನದ್ದೇ: ಮಾನವಕೃತ ಕಾರಣಗಳಿಂದ ಗುಬ್ಬಿಗಳು ವಿನಾಶದ ಹಾದಿಹಿಡಿದಿವೆ. ಹಾಗಾಗಿ ಅವುಗಳನ್ನು ರಕ್ಷಿಸುವುದು ಮನುಷ್ಯರ ಕರ್ತವ್ಯ. ಈ ಜಗತ್ತು, ಪ್ರಾಣಿ ಪಕ್ಷಿಗಳಿಗೆ ಸೇರಿದ್ದು ಎಂಬ ನೈತಿಕ ಪ್ರಜ್ಞೆ ಎಲ್ಲ ಜೀವ ಸಂಕುಲಗಳ ಸಂರಕ್ಷಣೆಯ ಮೂಲ ಮಂತ್ರವಾಗ ಬೇಕು.

ನಾವೇನು ಮಾಡಬಹುದು

* ಕೃತಕ ಗೂಡುಗಳು ಹಾಗೂ ಅದರಲ್ಲಿ ನೀರು, ಕಾಳುಗಳನ್ನಿಟ್ಟು ಗುಬ್ಬಿಗಳನ್ನು ರಕ್ಷಿಸಲು ಪ್ರಯತ್ನಿಸುವುದು ಒಳ್ಳೆಯದು. ಕೆಲವೆಡೆ ಪ್ರಯತ್ನ ಫಲ ನೀಡಿದೆ. (ಅನೇಕ ಬಾರಿ ಇತರ ಪಕ್ಷಿ/ಅಳಿಲುಗಳು ಸೇರಿಕೊಳ್ಳುವುದು ನಿಜ). ಕೃತಕಗೂಡುಗಳು ನೇಚರ್ ಫಾರ್ ಎವರ್ ಜಾಲತಾಣದಲ್ಲಿ ದೊರೆಯುತ್ತವೆ. (https://www.shopping.natureforever.org/categories/nature-nestboxes/cid-C...)

* ಮನೆಯ ಸುತ್ತ ಜಾಗವಿದ್ದರೆ ಗುಬ್ಬಿಗಳ ಆವಾಸಸ್ಥಾನಕ್ಕೆ ಪೂರಕ ವಾತಾವರಣ ಕಲ್ಪಿಸುವಂತಹ ಗಿಡಗಳನ್ನು ಬೆಳೆಸಬೇಕು. ಉದ್ಯಾನಗಳಲ್ಲಿ ಹಕ್ಕಿಗಳಿಗೆ ಆಹಾರ ಮತ್ತು ಗೂಡು ನೀಡಲು ಸಾಧ್ಯವಾಗುವಂತಹ ಮರ– ಗಿಡಗಳನ್ನು ಬೆಳೆಸಬೇಕು. 

* ಅಲ್ಲಲ್ಲೇ ಆಹಾರ, ನೀರು ಸಿಗುವಂತಹ ವ್ಯವಸ್ಥೆಯಾದರೆ, ಗುಬ್ಬಿಗಳ ಸಂತತಿ ತಾನಾಗಿಯೇ ವೃದ್ಧಿಯಾಗುತ್ತದೆ.

ಮಕ್ಕಳೇ, ಗುಬ್ಬಿಗಳನ್ನು ನೋಡಿದ್ದೀರಾ?, ನೋಡಿದ್ದರೆ, ಗಮನಿಸಿದ್ಧೀರಾ?, ಅವು ನಡೆಯಲಾರವು! ಕುಪ್ಪಳಿಸುತ್ತಾ ಸಾಗುತ್ತವೆ! ನೋಡಿ ನಲಿಯಿರಿ!

ನೀವೂ ಶಾಲೆಯಲ್ಲಿ ಒಂದು ಗೂಡನ್ನು ಇಟ್ಟು ಗಮನಿಸಿ. ಏನೇನು ಆಗುತ್ತದೆ ಬರೆದಿಡಿ. ಗುಬ್ಬಿಯೇ ಬಂದು ಗೂಡುಕಟ್ಟಿದರೆ ಸಂಭ್ರಮಿಸಿ. ಗುಬ್ಬಿಗಳಿಗಾಗಿ ಶ್ರಮಿಸುತ್ತಿರುವ ಮಹಮದ್ ದಿಲಾವರ್‌ ಅಣ್ಣನಿಗೆ ಒಂದು ಮಾತು ಹೇಳಿ! ಅವರು ಮಾಡಿರುವ ಪೋಸ್ಟರ್‌ ನೋಡಿ.

ಯಾರು ಮಹಮದ್ ದಿಲಾವರ್ ?
ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಹಮದ್‍ ದಿಲಾವರ್ 2009ರಲ್ಲಿ ಗುಬ್ಬಿಗಳನ್ನು ಉಳಿಸಲು ನೇಚರ್ ಫಾರ್ ಎವರ್ ಎಂಬ ಸಂಸ್ಥೆ ಸ್ಥಾಪಿಸಿದರು. ರಾಯಲ್ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಬರ್ಡ್ಸ್ ಮತ್ತಿತರ ಅಂತರರಾಷ್ಟ್ರೀಯ ಸಂಸ್ಥೆ ಗಳೊಂದಿಗೆ ಸೇರಿ ಮಹತ್ವದ ವೈಜ್ಞಾನಿಕ ಕಾರ್ಯ ಮಾಡುತ್ತಿದ್ದಾರೆ. ಸಂಸ್ಥೆ ಅನೇಕ ಪ್ರಶಸ್ತಿ ಗಳನ್ನು ಪಡೆದಿದೆ. ಟೈಮ್‍ ಪತ್ರಿಕೆ ಇವರನ್ನು ಎನ್ವಿರಾನ್ಮೆಂಟಲ್ ಹೀರೊ ಎಂದು ಗುರುತಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು