ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 3 ವಿಶ್ವ ವನ್ಯಜೀವಿಗಳ ದಿನ: ವನದಲ್ಲಿ ವನಿತೆಯರು

Last Updated 24 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಮಾರ್ಚ್‌ 3 ವಿಶ್ವ ವನ್ಯಜೀವಿಗಳ ದಿನ: ಈ ನೆಪದಲ್ಲಿ ಕಾಡಿನಲ್ಲಿ ವನ್ಯಜೀವಿಗಳ ಜಾಡು ಹಿಡಿದು, ಸ್ವಚ್ಛಂದವಾಗಿರುವ ಅವುಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವ ಹೆಣ್ಣುಮಕ್ಕಳ ಕಥನ ಇಲ್ಲಿದೆ....

***

ಲಯ ಅರಿತರೆ ಸಂವಹನ: ಪ್ರಿಯಾ ಕುಂಜಿರ್ಕಾನ
ಒಬ್ಬ ಹೆಣ್ಣುಮಗಳಾಗಿ ಫೋಟೊಗ್ರಫಿ ಅದರಲ್ಲೂ ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆ ಹಿಡಿಯುವಾಗ ಅನುಕೂಲಕ್ಕೆ ಬಂದಿದ್ದು ನನ್ನೊಳಗಿನ ತಾಳ್ಮೆ. ಇದು ಅಗಾಧ ಸಮಯ ಹಾಗೂ ತಾಳ್ಮೆಯನ್ನು ಬೇಡುವ ಪ್ರವೃತ್ತಿ. ಹಾಗಾಗಿ ವ್ಯಕ್ತಿತ್ವಕ್ಕೂ ಹೊಸ ಕಳೆಯನ್ನು ದಕ್ಕಿಸಿಕೊಟ್ಟ ಹವ್ಯಾಸವೂ ಹೌದು.

ಹುಟ್ಟಿದ್ದು ಸುಳ್ಯದ ಬಾಳಿಲ. ಅಮ್ಮ– ಅಪ್ಪ ಇಬ್ಬರೂ ಶಿಕ್ಷಕರು. ಓದಿದ್ದು ಪತ್ರಿಕೋದ್ಯಮ. ಆಕ್ಸೆಂಚರ್‌ ಕಂಪನಿಯಲ್ಲಿ ಕಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದೀನಿ. ಇದು ನನ್ನ ವೃತ್ತಿ. ಎಳವೆಯಿಂದಲೂ ಅಪ್ಪ ಅಮ್ಮನೊಂದಿಗೆ ಟ್ರೆಕ್ಕಿಂಗ್ ಮಾಡುತ್ತಿದ್ದೆ. ಒಂದೆರೆಡು ಕಿ.ಮೀ ಕ್ರಮಿಸಿದರಷ್ಟೆ ನೆರೆಮನೆ ಸಿಗುತ್ತಿದ್ದರಿಂದ ನಿಸರ್ಗದ ಜತೆಯೇ ಮೊದಲಿನಿಂದಲೂ ಸಖ್ಯ ಜಾಸ್ತಿ. ಈ ಪ್ರಕೃತಿಯೊಂದಿಗಿನ ಒಡನಾಟವೇ ವನ್ಯಜೀವಿ ಛಾಯಾಚಿತ್ರಣದತ್ತ ಎಳೆದು ತಂತು.

ನನ್ನ ಪತಿ ವಿನಯ್‌ ಕೂಡ ಫೋಟೊಗ್ರಾಫರ್‌. ಫೋಟೊಗ್ರಫಿ ದುಬಾರಿ ಹವ್ಯಾಸವೂ ಹೌದು. ನಾನು ವಿನಯ್‌ ಇಬ್ಬರೂ ಒಟ್ಟಿಗೆ ಫೋಟೊಗ್ರಫಿಯನ್ನು ಆರಂಭಿಸಿದೆವು.

ಚಿತ್ರ: ಪ್ರಿಯಾ ಕುಂಜಿರ್ಕಾನ
ಚಿತ್ರ: ಪ್ರಿಯಾ ಕುಂಜಿರ್ಕಾನ

ಪಕ್ಷಿ ಇರಲಿ, ಪ್ರಾಣಿಯೇ ಇರಲಿ ಅದರ ಚಂದದ ಚಿತ್ರಗಳನ್ನು ತೆಗೆಯಬೇಕು ಅಂದರೆ ಮೊದಲಿಗೆ ಅದರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕು. ಅದರ ಗುಣಲಕ್ಷಣ, ನಡೆ, ಹಾವಭಾವ, ಭಂಗಿ ಎಲ್ಲದರ ಬಗ್ಗೆ ಸಂಶೋಧನಾತ್ಮಕವಾಗಿ ಅಧ್ಯಯನ ನಡೆಸಿದಾಗ ಮಾತ್ರ ಅದರ ಲಯವನ್ನು ಅರ್ಥ ಮಾಡಿಕೊಳ್ಳಬಹುದು. ಪ್ರತಿ ಜೀವಿಯ ಬದುಕು ಲಯಬದ್ಧವಾಗಿರುತ್ತದೆ. ಅದನ್ನು ಅರ್ಥಮಾಡಿಕೊಂಡಾಗಷ್ಟೆ ಅದರ ಜತೆ ಸಂವಹನ ಸಾಧ್ಯ. ಹೀಗೆ ಕಣ್ಣಲ್ಲಿ ಕಂಡು ಸಂತೋಷಪಟ್ಟಿದ್ದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವ ಹೊಸ ಖಯಾಲಿ ಶುರು ಆಯಿತು.

ಆರಂಭದಲ್ಲಿ ಕಬಿನಿ, ಬಂಡೀಪುರಕ್ಕೆ ಹೋಗುತ್ತಿದ್ದೆವು. ವನ್ಯಜೀವಿ ಹಾಗೂ ಪಕ್ಷಿಗಳ ಫೋಟೊಗ್ರಫಿ ಕಡೆಗೆ ಮುಖ ಮಾಡುವಂತೆ ಪ್ರೇರೇಪಿಸಿದ್ದು ನನ್ನ ಗಂಡನೇ. ಸಲೀಂ ಆಲಿ ಅವರ ದೊಡ್ಡ ಪುಸ್ತಕವೊಂದನ್ನು ಕೈಗಿತ್ತು, ಬಗೆ ಬಗೆಯ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವಂತೆ ಹೇಳಿದರು. ಹಿರಿಯ ಫೋಟೊಗ್ರಾಫರ್‌ ಸುರೇಶ್‌ ಬಸವರಾಜು ಅವರೊಂದಿಗೆ ಬೆಂಗಳೂರು, ತುಮಕೂರಿನ ಸುತ್ತಮುತ್ತಲಿರುವ ಪಕ್ಷಿಧಾಮಗಳಿಗೆ ಹೋಗುತ್ತಿದ್ದೆವು.

ನಮ್ಮ ನಡೆ ಪ್ರಕೃತಿಯ ಲಯಕ್ಕೆ ಅನುಗುಣವಾಗಿದ್ದಾಗ ಮಾತ್ರ ವನ್ಯಜೀವಿಗಳು ಆ ಪ್ರದೇಶದಲ್ಲಿ ಇರುತ್ತವೆ. ಸುರಕ್ಷಿತವಲ್ಲ ಅನಿಸಿದ ಮರುಕ್ಷಣವೇ ಅವು ಅಲ್ಲಿಂದ ದೂರ ಸರಿಯುತ್ತವೆ. ಎಷ್ಟೋ ಬಾರಿ ಬೆಳಗಿನ ಜಾವ 4ಕ್ಕೆ ಹೋದರೆ ಸಂಜೆ 8 ಗಂಟೆಗೆ ಬರುತ್ತಿದ್ದೆವು. ಮಗಳು ಐದು ತಿಂಗಳ ಮಗುವಾಗಿದ್ದಾಗಲೂ ಅವಳನ್ನು ಜತೆಗೆ ಕರೆದುಕೊಂಡು ಪ್ರಾಣಿಗಳ ಫೋಟೊ ತೆಗೆಯುವುದಕ್ಕೆ ಹೋಗಿದ್ದಿದೆ.

ಹೆಣ್ಣುಮಕ್ಕಳು ವೈಲ್ಡ್‌ಲೈಫ್‌ ಫೋಟೊಗ್ರಫಿ ಮಾಡುತ್ತಾರೆ ಅಂದರೆ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ; ಉಪೇಕ್ಷೆ ಮಾಡುತ್ತಾರೆ. ಹೆಜ್ಜೆ ಹೆಜ್ಜೆಗೂ ನಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ಸಂಶಯ ಪ‍ಡುವವರೇ ಹೆಚ್ಚು. ನಾಲ್ಕು ಪಕ್ಷಿ ಸೆರೆ ಹಿಡಿದಿದ್ದೀರಾ ಅಂದರೆ ಹಿತ್ತಲಿನದೋ, ಮನೆಯ ಸಮೀಪದ್ದು ಎಂದುಕೊಳ್ಳುವವರ ಸಂಖ್ಯೆನೂ ಕಡಿಮೆ ಇಲ್ಲ. ಈ ಸವಾಲುಗಳ ನಡುವೆಯೂ ಅನಿಸಿದ್ದನ್ನು ಮಾಡಬೇಕು. ವನ್ಯಜೀವಿ ಸಂರಕ್ಷಣಾ ಕಾರ್ಯದಲ್ಲಿಯೂ ಅಳಿಲು ಸೇವೆ ಮಾಡುವ ಆಸೆಯಿದೆ. ವೈಲ್ಡ್‌ ಲೈಫ್‌ ಕರ್ನ್ಸವೇಷನ್‌ ಟ್ರಸ್ಟ್‌ನೊಂದಿಗೆ ಸೇರಿ ಕಾಡುಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದೇವೆ. ನಾಗರಹೊಳೆ, ಕಬಿನಿಯಲ್ಲಿರುವ ಬುಡಕಟ್ಟು ಜನಾಂಗದವರಿಗೆ ಪುನಃಶ್ಚೇತನ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಕಾಡಿನ ಬಗ್ಗೆ ಅವರಿಗಿರುವ ಜ್ಞಾನ ಅಗಾಧವಾದದ್ದು. ಅದರ ಬಗ್ಗೆ ಅವರಿಗೆ ಅರಿವಿಲ್ಲ. ಅದಕ್ಕೆ ಮನ್ನಣೆ ಸಿಗುವ ಕೆಲಸ ಆಗಬೇಕಿದೆ.

ಪ್ರಿಯಾ ಕುಂಜಿರ್ಕಾನ
ಪ್ರಿಯಾ ಕುಂಜಿರ್ಕಾನ

ಹಲವು ಛಾಯಾಚಿತ್ರ ಪ್ರದರ್ಶನ ನಡೆಸಿದ್ದೇನೆ. ಕರ್ನಾಟಕ ಅರಣ್ಯ ಇಲಾಖೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಸಿಕ್ಕಿತ್ತು. ಇಂಡಿಯಾ ನೇಚರ್ ವಾಚ್‌ ಎನ್ನುವ ವೆಬ್‌ಸೈಟ್‌ನಿಂದ ಭಾರತದ ವಿವಿಧೆಡೆ ವನ್ಯಜೀವಿ ಫೋಟೊಗ್ರಾಫರ್‌ಗಳ ಪರಿಚಯ ಆಗಿದೆ. ಯಾವ ಋತುವಿನಲ್ಲಿ ಯಾವ ಪಕ್ಷಿ, ಪ್ರಾಣಿಗಳು ಯಾವ ಸಮಯದಲ್ಲಿ ಇರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯವಾಗಿದೆ. ಹೆಣ್ಣುಮಕ್ಕಳಲ್ಲಿ ಸೃಜನಶೀಲತೆ ತುಸು ಹೆಚ್ಚೇ ಇದೆ. ಅದಕ್ಕೆ ಸೂಕ್ತ ವೇದಿಕೆ ಸಿಗಬೇಕಷ್ಟೆ.

(ನಿರೂಪಣೆ: ರೂಪಾ ಕೆ.ಎಂ)

***

ಕಾಡಿನ ಪಾಠ ಅರಿತರೆ ಫೋಟೋ..: ವೈದೇಹಿ ಗುಂಜಾಳ
ಹವ್ಯಾಸಕ್ಕೆ ವಯಸ್ಸಿನ ಹಂಗಿಲ್ಲ. ಜೀವನದ ಒತ್ತಡದಲ್ಲೂ ಸಮಯ ನೀಡಿದಾಗ ಹವ್ಯಾಸ ಸದಾ ಜೀವಂತವಾಗಿರುತ್ತದೆ. 56ನೇ ವಯಸ್ಸಿನಲ್ಲೂ ಕ್ಯಾಮೆರಾ ಹೆಗಲಿಗೇರಿಸಿಕೊಂಡು, ಕಾರು ಚಲಾಯಿಸಿಕೊಂಡು ರಾಜ್ಯದ ಗಡಿ ದಾಟಿ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತೇನೆ.

ನಾನು ಹುಟ್ಟಿದ್ದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ. ಶಿಕ್ಷಣ ಮುಗಿಸಿದ್ದು ಬೆಳಗಾವಿ ಹಾಗೂ ಸಾಂಗ್ಲಿಯಲ್ಲಿ. ಮದುವೆ ನಂತರ ಬೆಂಗಳೂರಿನಲ್ಲಿ ವಾಸವಾಗಿದ್ದೆ, 2009ರಿಂದ ಪತಿ ಹಾಗೂ ಮಗನೊಂದಿಗೆ ಧಾರವಾಡದ ರಜತಗಿರಿಯಲ್ಲಿ ನೆಲೆಸಿದ್ದೇನೆ. ಸಾಂಗ್ಲಿ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್‌ ಆಫ್‌ ಫೈನ್‌ ಆರ್ಟ್‌ ಮುಗಿಸಿದೆ. ನನ್ನ ತಂಗಿಯೊಟ್ಟಿಗೆ ಸೇರಿ ಮನೆ ಅಲಂಕಾರಕ್ಕಾಗಿ ಬಳಸುವ ಸುಂದರವಾದ ಪೇಂಟಿಂಗ್‌ಗಳನ್ನೂ ರಚಿಸಿ, ಮಾರಾಟ ಮಾಡುತ್ತೇನೆ.

ಛಾಯಾಗ್ರಹಣ ಎನ್ನುವುದು ಹವ್ಯಾಸ ಮಾತ್ರವಲ್ಲದೇ, ವೃತ್ತಿ, ಜೀವನದಲ್ಲಿ ತಾಳ್ಮೆ ಹಾಗೂ ನಮ್ಮ ಸುತ್ತಲಿನ ಜನ, ವಸ್ತು, ಜೀವಿ ಪ್ರತಿಯೊಂದನ್ನು ಪ್ರೀತಿಸುವ ಹಾಗೂ ಗೌರವಿಸುವ ಪಾಠ ಕಲಿಸುತ್ತದೆ.

ನಾನು ಬಾಲ್ಯದಿಂದಲೇ ಮನೆ ತೋಟ, ಸುತ್ತ ಮುತ್ತಲಿನ ಗಾರ್ಡನ್‌ಗಳಲ್ಲಿ ಕೀಟಗಳ, ಪಕ್ಷಿ ಫೋಟೊ ಸೆರೆಹಿಡಿಯುತ್ತಿದ್ದೆ. ಛಾಯಾಚಿತ್ರ ತೆಗೆಯುವವರಿಗೆ ಎಲ್ಲವೂ ಸುಂದರವಾಗಿಯೇ ಕಾಣಿಸುತ್ತದೆ. ಆಗ ಕ್ಯಾಮೆರಾ ಇರಲಿಲ್ಲ. ಆದರೆ ಆಸಕ್ತಿ ಕುಂದಿರಲಿಲ್ಲ. 2015ರಲ್ಲಿ ಕ್ಯಾಮೆರಾ ಖರೀದಿಸಿ, ಪಕ್ಷಿಯ ಬೆನ್ನೆತ್ತಿ ಹೊರಟೆ. ಮನೆಯವರ ಬೆಂಬಲ ಇನ್ನಷ್ಟು ಉತ್ಸಾಹಿಯನ್ನಾಗಿ ಮಾಡಿತು.

ಚಿತ್ರ : ಪ್ರಿಯಾ ಕುಂಜಿರ್ಕಾನ
ಚಿತ್ರ : ಪ್ರಿಯಾ ಕುಂಜಿರ್ಕಾನ

ಧಾರವಾಡದ ಸುತ್ತ ಮುತ್ತ ಅನೇಕ ಸುಂದರ ತಾಣಗಳಿವೆ, ಇಲ್ಲಿಯೂ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಆದರೆ ಅವುಗಳನ್ನು ಸೆರೆ ಹಿಡಿಯುವುದು ಸುಲಭವಲ್ಲ. ಅದಕ್ಕಾಗಿ ಗಂಟೆಗಟ್ಟಲೆ ಸಂಯಮದಿಂದ ಕಾಯಬೇಕು ಹಾಗೂ ಕೈಯಲ್ಲಿ ಕ್ಯಾಮೆರಾ ಆನ್‌ ಆಗಿರಬೇಕು. ಆ್ಯಕ್ಷನ್‌ ಫೋಟೊ ಸೆರೆಹಿಡಿಯಬೇಕಾದರೆ ಅಲರ್ಟ್‌ ಆಗಿರಬೇಕು, ಸದ್ದಾಗದಂತೆ ಎಚ್ಚರಿಕೆ ವಹಿಸಬೇಕು.

ಹೀಗೆ ಕೈಗೆ ಕ್ಯಾಮೆರಾ ಸಿಕ್ಕಮೇಲೆ ಅಸ್ಸಾಂ, ಅರುಣಾಚಲ ಪ್ರದೇಶ,ಸುಂದರಬನ, ಚಂದೋಲಿ, ಕ್ಯಾಸಲ್‌ರಾಕ್‌, ಗೋವಾ ಹಾಗೂ ಕೊಡಗು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸುತ್ತಾಡಿ ಸಾವಿರಾರು ಪಕ್ಷಿ ಫೋಟೊಗಳನ್ನು ಕ್ಲಿಕ್ಕಿಸಿದ್ದೇನೆ. ಹಾಗೇ ಕ್ಲಿಕ್ಕಿಸುವಾಗ ಅನೇಕ ಬಾರಿ ಕಾಲಿಗೆ ಗಾಯವನ್ನು ಮಾಡಿಕೊಂಡಿದ್ದೇನೆ. ಪ್ರತಿಯೊಂದು ಫೋಟೊ ಸೆರೆ ಹಿಡಿದಿದ್ದರ ಹಿಂದೆ ತನ್ನದೇ ಆದ ಕಥೆಗಳಿವೆ. ಅವುಗಳನ್ನು ಮಾತಿನಲ್ಲಿ ವಿವರಿಸುವುದು ಅಸಾಧ್ಯ.

ಹೊಸ ಜಾತಿಯ ಪಕ್ಷಿ ಛಾಯಾಚಿತ್ರ ಸೆರೆಹಿಡಿದ ನಂತರ ಅವುಗಳ ಬಗೆಗೆನ ಕುತೂಹಲ ಹೆಚ್ಚಾಗಿ, ಅವುಗಳ ಜೀವನಶೈಲಿ, ಆಹಾರಶೈಲಿ ಕುರಿತು ಮಾಹಿತಿ ಕಲೆ ಹಾಕಿ ಡಾಕ್ಯುಮೆಂಟೆಶನ್‌ ಸಹ ಮಾಡುತ್ತಿದ್ದೇನೆ. ಇದರಿಂದ ಪಕ್ಷಿಸಂಕುಲ ವೈವಿಧ್ಯದ ಬಗ್ಗೆ ತಿಳಿದುಕೊಂಡಿದ್ದೇನೆ. ಸೆರೆಹಿಡಿದ ಪಕ್ಷಿ ಚಿತ್ರಗಳನ್ನು ನೋಡಿ ಪೇಂಟಿಂಗ್ ಸಹ ಮಾಡಿದ್ದೇನೆ. ಪ್ರತಿಷ್ಠಿತ ನಿಯತಕಾಲಿಕೆಗಳಲ್ಲೂ ಅವು ಪ್ರಕಟವಾಗಿವೆ.

ಬೆಳಗಿನಜಾವ ಹಾಗೂ ಸಂಜೆ ಪಕ್ಷಿ ಛಾಯಾಚಿತ್ರಕ್ಕೆ ಹೇಳಿ ಮಾಡಿಸಿದ ಸಮಯ. ಸಾಧ್ಯವಾದಷ್ಟು ಗುಂಪಿನೊಂದಿಗೆ ಹೋಗುವುದು ಒಳಿತು, ಮೊಬೈಲ್‌ ಸದಾ ಜೊತೆಗೆ ಇರಲಿ, ಕುಡಿಯುವ ನೀರಿನ ಬಾಟಲಿ, ತಿನಿಸು ಕೊಂಡೊಯ್ಯಬೇಕು. ಒಬ್ಬರೇ ಹೋಗುವುದಾದರೆ ಸದಾ ಜಾಗೃತರಾಗಿರಬೇಕು. ಸಾಧ್ಯವಾದಷ್ಟು ನಮ್ಮ ವಾಹನದ ಬಳಿಯೇ ಇರುವುದು ಉತ್ತಮ.

ವೈದೇಹಿ ಗುಂಜಾಳ
ವೈದೇಹಿ ಗುಂಜಾಳ

ವಿವಾಹಿತ ಮಹಿಳೆಯರು ಫೋಟೊಗ್ರಫಿಯಲ್ಲಿ ಹವ್ಯಾಸ ಹೊಂದಿದ್ದರೆ, ಸಮಯ ನಿರ್ವಹಣೆಗೆ ಆದ್ಯತೆ ನೀಡಬೇಕು. ಮಹಿಳೆಯರು ಸೀಮಾತೀತರು. ಎಲ್ಲ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಯೂ ತಮ್ಮೊಳಗಿನ ಆಸಕ್ತಿಗೆ ಕುಂದು ಬಾರದಂತೆ ನೋಡಿಕೊಳ್ಳಬೇಕಷ್ಟೆ.

(ನಿರೂಪಣೆ: ಗೌರಮ್ಮ ಕಟ್ಟಿಮನಿ)

***

ಕಾಡು ಕಲಿಸುವ ಗುರು: ದೇವಮಣಿ ಎಂ.
ನನ್ನದು ನಂಜನಗೂಡು ತಾಲ್ಲೂಕಿನ ಶಿರಮಳ್ಳಿ. ಇಬ್ಬರು ಅಕ್ಕಂದಿರು, ಒಬ್ಬ ತಮ್ಮನೊಂದಿಗೆ ಬೆಳೆದ ನನಗೆ ಬಾಲ್ಯದಿಂದಲೇ ಪ್ರಕೃತಿಯತ್ತ ವಿಸ್ಮಯದ ನೋಟವಿತ್ತು. ಶಾಲೆ–ಕಾಲೇಜು ಓದುವಾಗ ಬಸ್‌ನಲ್ಲಿ ಕುಳಿತು, ಹಿಂದಕ್ಕೆ ಓಡುವ ಮರಗಿಡಗಳು, ಕೆರೆಗಳು, ಹಾರುವ ಪಕ್ಷಿಗಳನ್ನು ನೋಡುತ್ತಿದ್ದೆ.

ಚಿತ್ರಕಲೆ, ಫೋಟೊ ಪ್ರದರ್ಶನಗಳನ್ನು ತಪ್ಪಿಸಿ ಕೊಳ್ಳುತ್ತಿರಲಿಲ್ಲ. ಮೊಬೈಲ್‌ ಫೋನ್‌ನಲ್ಲಿ ಫೋಟೊ ತೆಗೆಯುತ್ತಿದ್ದೆ. ಸಾಲಿಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕಿಯಾದ ನಂತರ ಮೊದಲ ಸಂಬಳದಿಂದ ಸೋನಿ ಕ್ಯಾಮೆರಾ ಖರೀದಿಸಿದೆ. ಹೂವು, ಮರಗಿಡ, ಮಳೆ ಹನಿ, ಸೂರ್ಯಾಸ್ತ, ಸೂರ್ಯೋದಯ ಹೀಗೆ.. ಮೈಸೂರು– ಸಾಲಿಗ್ರಾಮ ನಡುವೆ ಪ್ರಯಾಣಿಸುತ್ತಿದ್ದಾಗ ತೆಗೆಯುತ್ತಿದ್ದ ಫೋಟೊಗಳ ಬಗ್ಗೆ ಸ್ನೇಹಿತರ ಒಳ್ಳೆಯ ಮಾತಾಡಿದರು.

ಪೂರ್ಣಚಂದ್ರ ತೇಜಸ್ವಿಯವರ ಪಾಠಗಳನ್ನು ಓದಿದ್ದೆ. ಪಕ್ಷಿಗಳು, ಕಾಡಿನ ಚಿತ್ರಗಳನ್ನು ನೋಡುವಾಗ ನಾನೂ ಅಂಥ ಒಳ್ಳೆಯ ಫೋಟೊ ತೆಗೆಯಬೇಕೆನ್ನಿಸುತ್ತಿತ್ತು. ಕೆಲಸ ಸಿಕ್ಕಿದರೂ ತೃಪ್ತಿಯಿರಲಿಲ್ಲ. ‘ಇನ್ನೂ ಏನೋ ಮಾಡುವುದಿದೆ’ ಎಂದೆನ್ನಿಸುತ್ತಿದ್ದರೂ ಸ್ಪಷ್ಟತೆಯಿರಲಿಲ್ಲ. ಡಿಜಿಟಲ್‌ ಕ್ಯಾಮೆರಾ ಬಂದಿದ್ದರೂ ವಿಶ್ವಾಸವಿರಲಿಲ್ಲ. ಕುಪ್ಪಳಿಗೂ ಹೋಗಿ ಫೋಟೊಗಳನ್ನು ತೆಗೆದಿದ್ದೆ.

ಮೈಸೂರಿನ ಮಹಾರಾಣಿ ಕಲಾ ಕಾಲೇಜಿಗೆ ವರ್ಗಾವಣೆಯಾಯಿತು. ಆ ಸಮಯದಲ್ಲಿ ಅನುಭವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆಯವರು ರಂಗನತಿಟ್ಟಿನಲ್ಲಿ ಹಮ್ಮಿಕೊಂಡ ಫೋಟೊಗ್ರಫಿ ಕಾರ್ಯಾಗಾರದಲ್ಲಿ ಪಾಲ್ಗೊಂಡೆ. ಅದು ನನ್ನ ಬದುಕನ್ನೇ ಬದಲಾಯಿಸಿತು. ‌ಕ್ಯಾಮೆರಾ ಬಳಕೆ ಗೊತ್ತಾಯಿತು. ಅಲ್ಲಿದ್ದ ಬಹುತೇಕರಲ್ಲಿ ದೊಡ್ಡ ಕ್ಯಾಮೆರಾಗಳಿದ್ದವು. ನಾನೂ ದೊಡ್ಡ ಕ್ಯಾಮೆರಾ ತೆಗೆದುಕೊಂಡ ಬಳಿಕ ಲೋಕೇಶ್ ಅವರೊಂದಿಗೆ ರಂಗನತಿಟ್ಟು, ದಾಂಡೇಲಿಗೆ ಹೋಗಿದ್ದೆ. ಕಬಿನಿ ಹಿನ್ನೀರು–ಕಾಡನ್ನು ಹೆಚ್ಚು ಸುತ್ತಿದ್ದು ಅಲ್ಲಿಯೇ.

ವೈಲ್ಡ್‌ಲೈಫ್‌ ಫೋಟೊಗ್ರಫಿ ಬಹಳ ಭಿನ್ನ ಪ್ರಕಾರ. ಪ್ರಾಣಿ, ಪಕ್ಷಿ, ಮರಗಿಡಗಳ ಜೀವನಶೈಲಿಯನ್ನು ಅರ್ಥ ಮಾಡಿಕೊಳ್ಳುವುದೇ ಮುಖ್ಯ. ಫೋಟೊಗ್ರಫಿ ನೆಪವಷ್ಟೆ. ಕಾಡು ಹಲವು ವಿಷಯಗಳನ್ನು ಕಲಿಸುವ ಗುರು.

ಕುಟುಂಬವೆಂಬ ವ್ಯವಸ್ಥೆ ಪ್ರಾಣಿಗಳಲ್ಲಿಲ್ಲವೆಂಬ ನನ್ನ ತಿಳಿವಳಿಕೆಯನ್ನು ಕಾಡು ಬದಲಾಯಿಸಿತು. ಕಬಿನಿಯಲ್ಲಿ ಸಫಾರಿ ಹೋಗುವಾಗ ಗುಂಪಿನಲ್ಲಿದ್ದ ಹೆಣ್ಣಾನೆಯ ಕಡೆಗೆ ಬೇರೊಂದು ಗಂಡಾನೆ ಬಂದಾಗ, ಗುಂಪಿನಲ್ಲಿದ್ದ ಗಂಡಾನೆ ಅದನ್ನು ಅಟ್ಟಿಸಿಕೊಂಡು ಹೋಗಿದ್ದ ಸರಣಿ ಫೋಟೊಗಳನ್ನು ತೆಗೆದದ್ದನ್ನು ಮರೆಯಲಾರೆ. ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಯ ಫೋಟೊ ತೆಗೆಯುವ ಅವಕಾಶವೂ ಅಂಥದ್ದೇ. ಪಕ್ಷಿ ಜಗತ್ತಿನಲ್ಲಿ ಬಹಳ ಸುಂದರವಾದದ್ದು ಗಂಡು. ಬಣ್ಣ ನೋಡಿಯೇ ಅದು ಗಂಡೋ–ಹೆಣ್ಣೋ ಹೇಳಬಲ್ಲೆ. ಛಾಯಾಗ್ರಹಣದ ಹವ್ಯಾಸ ಅಂಥದ್ದೊಂದು ಪರಿಸರ ಪಾಠ ಕಲಿಸಿದೆ.

ದೇವಮಣಿ ಎಂ.
ದೇವಮಣಿ ಎಂ.

ವೈಲ್ಡ್‌ಲೈಫ್‌ ಫೋಟೊಗ್ರಫಿಗಾಗಿ ಪುರುಷರ ಗುಂಪಿ ನೊಂದಿಗೆ ಹೋಗಲು ಧೈರ್ಯವಿರಬೇಕು. ಕಾಡಲ್ಲಿ ನನಗೆ ಇನ್ನೊಬ್ಬ ಮಹಿಳೆ ಸಿಗಬಹುದಷ್ಟೇ. ಆದರೂ ಅಂಥದ್ದೊಂದು ಹುಚ್ಚುತನ ಮಾಡುತ್ತೇನೆ. ಜೊತೆ ಯಲ್ಲಿರುವವರಲ್ಲಿ ನಂಬಿಕೆ ಇಟ್ಟಿರುತ್ತೇನೆ. ಲೋಕೇಶ್ ಮೊಸಳೆಯವರು ಒಮ್ಮೆ ನನ್ನ ಜೊತೆ ತಮ್ಮ ಮಗಳನ್ನೂ ಕಾಡಿಗೆ ಕರೆತಂದು, ನನ್ನ ಒಂಟಿತನಕ್ಕೆ ವಿಶೇಷ ಬೆಂಬಲ ನೀಡಿದ್ದರು. ಪ್ರತಿ ಬಾರಿ ಕಾಡಿಗೆ ಹೋಗುವಾಗ ಬೆನ್ನು ತಟ್ಟುವ ನನ್ನ ಪತಿ ಎಚ್.ಎನ್.ಮಯೂರ‌ರ ಉತ್ತೇಜನವೇ ದೊಡ್ಡ ಶಕ್ತಿ.

ಭಾರವಾದ ಕ್ಯಾಮೆರಾ, ಲೆನ್ಸ್‌, ಟ್ರೈಪಾಡ್‌ ಹೊತ್ತು ನಡೆಯುವುದು ಕಷ್ಟವೆನಿಸುತ್ತದೆ. ಪುರುಷರಂತೆ ಸಲೀಸಾಗಿ ಹೆಚ್ಚು ದೂರ ಪ್ರಯಾಣಿಸಲು ಆಗುವುದಿಲ್ಲ. ಆದರೆ ಕ್ಯಾಮೆರಾ ಕೈಯಲ್ಲಿ ಹಿಡಿದರೆ ಎಲ್ಲ ಮರೆತು ಹೋಗುತ್ತದೆ. ಹೆಣ್ಣೆಂಬುದು ಮಿತಿಯೇನೂ ಅಲ್ಲ. ಆಸಕ್ತಿ ಇದ್ದರೆ ಎಲ್ಲ ವನ್ನೂ ಗೆಲ್ಲಬಹುದು. ಕಾಡಾದರೂ, ನಾಡಾದರೂ...

(ನಿರೂಪಣೆ: ಕೆ.ನರಸಿಂಹಮೂರ್ತಿ)

***

ಕಾಡ ಹಕ್ಕಿಯ ಹಾಡು ಕೇಳುತ.... –ಶೃತಿ ಲಕ್ಕೋಳ್‌
ಮೈಯೆಲ್ಲ ಕಣ್ಣಾಗಿಸಿ ನೋಡೋದು ಅಂತಾರಲ್ಲ ಹಾಗೇ. ಗಮನವಿಟ್ಟು ನೋಡುವ, ಕೇಳುವ ಹೊಸ ಸಾಧ್ಯತೆಯನ್ನು ವೈಲ್ಡ್‌ಲೈಫ್‌ ಫೋಟೊಗ್ರಫಿ ಕಲಿಸಿದೆ. ಕಲಿತದ್ದು ಸಿವಿಲ್‌ ಎಂಜಿನಿಯರಿಂಗ್ ಆದರೂ ಬಾಲ್ಯದಿಂದಲೂ ಕ್ಯಾಮೆರಾದ ಬಗ್ಗೆ ಸೆಳೆತವಿತ್ತು. ಐದು ವರ್ಷಗಳಿಂದೀಚೆಗೆ ವೈಲ್ಡ್‌ ಲೈಫ್‌ ಫೋಟೊಗ್ರಫಿ ಮಾಡ್ತಿದ್ದೀನಿ. ಇರುವ ಕೆಲಸ ಬಿಟ್ಟು ಫೋಟೊಗ್ರಫಿಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೀನಿ.

ಕಬಿನಿ, ಬಂಡೀಪುರ, ಮಹಾರಾಷ್ಟ್ರ ಹೀಗೆ ಹಲವು ಕಡೆ ವನ್ಯಜೀವಿಗಳನ್ನು ಹುಡುಕಿಕೊಂಡು ಹೋಗಿದ್ದೇನೆ. ಮನುಷ್ಯರು ಎಷ್ಟು ಹೊತ್ತು ಬೇಕಾದರೂ ಕ್ಯಾಮೆರಾಗೆ ಫೋಸು ಕೊಡಬಲ್ಲರು. ಆದರೆ, ಪ್ರಾಣಿ– ಪಕ್ಷಿಗಳು ಯಾವ ಪ್ರಚಾರದ ಹಂಗೂ ಇಲ್ಲದೇ, ತಮ್ಮಷ್ಟಕ್ಕೆ ತಾವು ತಮಗಿಷ್ಟ ಬಂದ ರೀತಿಯಲ್ಲಿ ಬದುಕುತ್ತವೆ. ಅವುಗಳ ಆ ಸ್ವಚ್ಛಂದದ ಜೀವನ ಇದೆಯಲ್ಲಾ ಅದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯುವಾಗ ಸಿಗುವ ಖುಷಿ ಬೇರೆ ಎಲ್ಲೂ ಸಿಗುವುದಿಲ್ಲ. ಆದರೆ, ಇದು ಅಷ್ಟು ಸುಲಭದ ಮಾತಲ್ಲ. ಅವುಗಳ ಮುಕ್ತ ಜೀವನ ಎಲ್ಲ ಸಮಯದಲ್ಲಿಯೂ ನಮ್ಮ ದುಬಾರಿ ಲೆನ್ಸ್‌ಗಳಿಗೆ ದಕ್ಕದೇ ಹೋಗಬಹುದು.

ಮೂರು ನಾಲ್ಕು ಬಾರಿ ಸಫಾರಿಗೆ ಹೋಗಿ ಬಂದಾಗ ಒಂದೂ ಪ್ರಾಣಿ ಸಿಗದೇ ವಾಪಸ್ ಬರಬಹುದು. ಇದಕ್ಕೆಲ್ಲ ಬೇಸರ ಮಾಡಿಕೊಳ್ಳಬಾರದು. ಕಳೆದ ಸೆಪ್ಟೆಂಬರ್‌ನಲ್ಲಿ ಸಫಾರಿಗೆ ಅಂತ ಹೋಗಿದ್ದಾಗ ಇನ್ನೇನೂ ಸಫಾರಿ ಮುಗಿಯಬೇಕು ಎನ್ನುವಾಗ ಜಿಂಕೆಯೊಂದು ಕಂಡಿತ್ತು. ಅದರ ವಿಶಿಷ್ಟ ಭಂಗಿಯನ್ನು ಸೆರೆ ಹಿಡಿದಿದ್ದೆ. ಅದು ‘ನ್ಯಾಷನಲ್‌ ಜಿಯಾಗ್ರಫಿ’ ನಿಯತಕಾಲಿಕೆಯಲ್ಲಿ ಫೀಚರ್‌ ಆಯ್ತು. ಲಾಲ್‌ಬಾಗ್‌ಗೆ ಚಳಿಗಾಲದಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಪಕ್ಷಿಗಳು ವಲಸೆ ಬರುತ್ತವೆ. ಕೆಲವು ಅಷ್ಟು ಜಾತಿಯ ಪಕ್ಷಿಗಳು ಬಂದರೂ ಕ್ಯಾಮೆರಾ ಕಣ್ಣಿಗೆ ಸಿಗದೇ ಹೋಗಬಹುದು. ಸಾಮಾನ್ಯವಾಗಿ ಕಾಡಿನಲ್ಲಿ ಆನೆ ಮತ್ತು ಕರಡಿಗಳ ದಾಳಿ ಹೆಚ್ಚಿರುತ್ತವೆ. ಅವು ಇದ್ದಕ್ಕಿದ್ದಂತೆ ಉದ್ವೇಗಕ್ಕೆ ಒಳಗಾಗಿ ದಾಳಿ ಮಾಡುವ ಸಾಧ್ಯತೆ ಇರುತ್ತವೆ. ಹಾಗಾಗಿ ಅವುಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ಉತ್ತಮ.

ಒಂದು ಕಾಡಿನಲ್ಲಿ ಪ್ರಾಣಿಯೊಂದು ತನ್ನಷ್ಟಕ್ಕೆ ತಾನಿದೆ. ಅದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಬೇಕು ಎಂದುಕೊಂಡು ಉತ್ಸಾಹದಲ್ಲಿ ಹೊರಟರೂ ಒಬ್ಬ ಹುಡುಗಿಯಾಗಿ ಅಲ್ಲಿಗೆ ಹೋಗಲು ಆಗುವುದಿಲ್ಲವೆಂಬುದೇ ದೊಡ್ಡ ಮಿತಿ. ಅಲ್ಲಿ ಹೋಗುವ ಮುಂಚೆ ಪ್ರಾಣಿಭೀತಿಗಿಂತಲೂ ಮನುಷ್ಯರ ಭೀತಿ ಇದೆಯೇ ಎಂದು ಮೊದಲು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಪ್ರಾಣಿ ಅಥವಾ ಪಕ್ಷಿ ವೀಕ್ಷಣೆಗೆಂದು ಕಾಡಂಚಲ್ಲಿ ತಿರುಗುವಾಗೆಲ್ಲ ‘ಈ ದಾರಿಯಲ್ಲಿ ಹುಡುಗರು ಇದ್ದಾರೆ’ ಅಂತ ಎಚ್ಚರಿಸುವ ದನಿಗಳೇ ಹೆಚ್ಚಿರುತ್ತವೆ. ಹಾಗಾಗಿ ಇವೆಲ್ಲವೂ ಮಿತಿಯೇ.

ಶೃತಿ ಲಕ್ಕೋಳ್‌
ಶೃತಿ ಲಕ್ಕೋಳ್‌

ಮಿತಿಯೆಂದು ಹಲಬುತ್ತ ಕುಳಿತರೆ ಆಸಕ್ತಿಯನ್ನು ಪೋಷಿಸುವವರು ಯಾರು? ಕೊನೆಗೂ ನಮ್ಮೊಳಗಿನ ಆಸಕ್ತಿ, ಅಭಿರುಚಿಗೆ ಪ್ರೋತ್ಸಾಹ ನೀಡಬೇಕಿರುವವರು ನಾವೇ ಅಲ್ಲವೇ?.

(ನಿರೂಪಣೆ: ರೂಪಾ ಕೆ.ಎಂ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT