ಇದು ‘ಪವರ್‌ಫುಲ್‌’ ತ್ಯಾಜ್ಯ

7

ಇದು ‘ಪವರ್‌ಫುಲ್‌’ ತ್ಯಾಜ್ಯ

Published:
Updated:
Prajavani

ತ್ಯಾಜ್ಯ ಮುಕ್ತಿಯತ್ತ ಬಿಬಿಎಂಪಿ ಪುಟ್ಟ ಹೆಜ್ಜೆಯಿಟ್ಟಿದೆ. ಯಡಿಯೂರು ವಾರ್ಡ್‌ನಲ್ಲಿ 250 ಕಿಲೋ ವಾಟ್ ಸಾಮರ್ಥ್ಯದ ವಿದ್ಯುತ್‌ ಉತ್ಪಾದನಾ ಘಟಕ ಆರಂಭ ವಾಗಿದೆ. ತ್ಯಾಜ್ಯದಿಂದಲೇ ಈ ಪ್ರಮಾಣದ ವಿದ್ಯುತ್‌ ಉತ್ಪಾದನೆ ಮಾಡುವ ದೇಶದ ಮೊದಲ ವಾರ್ಡ್‌ ಎಂಬ ಹೆಗ್ಗಳಿಕೆಯೂ ಈ ಘಟಕಕ್ಕಿದೆ. ಇದುವರೆಗೆ ಪ್ರತಿದಿನ 50 ಕಿಲೋವಾಟ್‌ ವಿದ್ಯುತ್‌ ಉತ್ಪಾದನೆ ನಡೆಯುತ್ತಿತ್ತು. ಈಗ ಅದರ ಸಾಮರ್ಥ್ಯ ಐದು ಪಟ್ಟು ಹೆಚ್ಚಿದೆ.

ಕಾರ್ಯನಿರ್ವಹಣೆ ಹೇಗೆ?

ಯಡಿಯೂರು ವಾರ್ಡ್‌ನಲ್ಲಿ ಪ್ರತಿದಿನ 5 ಟನ್‌ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಈ ತ್ಯಾಜ್ಯವನ್ನು ಪಾಲಿಕೆ ವಾಹನಗಳು ಸಂಗ್ರಹ ತೊಟ್ಟಿಗೆ ಸುರಿಯುತ್ತವೆ. ಅಲ್ಲಿ ಕೊಳೆತ ತ್ಯಾಜ್ಯವು ಮೀಥೇನ್‌ ಅನಿಲ ಉತ್ಪಾದಿಸುತ್ತದೆ. ಈ ಅನಿಲ ಬಳಸಿ ಬಾಯ್ಲರ್‌ಗಳನ್ನು ಬಿಸಿ ಮಾಡಲಾಗುತ್ತದೆ. ಬಾಯ್ಲರ್‌ನಲ್ಲಿ ಉತ್ಪತ್ತಿಯಾದ ನೀರಿನ ಹಬೆ ಉಗಿ ಯಂತ್ರವನ್ನು ಚಾಲನೆ ಮಾಡುತ್ತದೆ. ಉಗಿ ಎಂಜಿನ್‌ ಜನರೇಟರ್‌ ಅನ್ನು ತಿರುಗಿಸುತ್ತದೆ. ಒಟ್ಟಾರೆ ಉಷ್ಣ ವಿದ್ಯುತ್‌ ಸ್ಥಾವರದ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸುತ್ತದೆ. ಆದರೆ, ಇಲ್ಲಿ ಹೊಗೆ, ರಾಸಾಯನಿಕದ ಯಾವುದೇ ಮಾಲಿನ್ಯಕಾರಕಗಳು ಹೊರಬರುವುದಿಲ್ಲ.

ತ್ಯಾಜ್ಯ ದ್ರಾವಣದ ಬಳಕೆ

ತ್ಯಾಜ್ಯ ಪೂರ್ಣ ಕೊಳೆತು ಗೊಬ್ಬರವಾಗಿ ಪರಿವರ್ತನೆ ಯಾಗುತ್ತದೆ. (ಗೋಬರ್‌ ಸ್ಥಾವರದಲ್ಲಿ ಹೊರಬರುವ ಸ್ಲರಿ ಮಾದರಿ) ದ್ರವರೂಪದಲ್ಲಿರುವ ಗೊಬ್ಬರವನ್ನು ಪಾಲಿಕೆಯ ಉದ್ಯಾನಗಳಿಗೆ ಬಳಸಲಾಗುತ್ತದೆ. ಹೀಗೆ ಪ್ರತಿ ದಿನ ಉತ್ಪಾದನೆಯಾಗುವ ತ್ಯಾಜ್ಯ ದ್ರಾವಣದ ಪ್ರಮಾಣ 2 ಸಾವಿರ ಲೀಟರ್‌. ಈ ಉದ್ಯಾನಗಳಿಗೆ ಗೊಬ್ಬರಕ್ಕಾಗಿ ವ್ಯಯಿಸುತ್ತಿದ್ದ ₹ 4 ಲಕ್ಷ ಹಣ ಇಲ್ಲಿ ಉಳಿಯಲಿದೆ.

ನಷ್ಟ ಸ್ಥಗಿತದ ಆಶಯ

ಇಷ್ಟೊಂದು ಪ್ರಮಾಣದ ತ್ಯಾಜ್ಯವನ್ನು ಬೆಳ್ಳಳ್ಳಿ ಕ್ವಾರಿಗೆ ಸಾಗಿಸಲು ಪ್ರತಿ ತಿಂಗಳು ₹ 4.5 ಲಕ್ಷ ವೆಚ್ಚವಾಗುತ್ತಿತ್ತು. ಅದಕ್ಕೆ ಕಡಿವಾಣ ಬಿದ್ದಿದೆ. ವಿದ್ಯುತ್‌ ಉತ್ಪಾದನೆ, ಮಾರಾಟ, ತ್ಯಾಜ್ಯ ದ್ರಾವಣದಿಂದ ಆಗುವ ಗೊಬ್ಬರ ವೆಚ್ಚದ ಉಳಿತಾಯ ಎಲ್ಲವೂ ಸೇರಿದರೆ ಸರಾಸರಿ ಮಾಸಿಕ ₹ 25 ಲಕ್ಷ ಉಳಿತಾಯವಾಗಲಿದೆ ಎಂಬ ಆಶಯ ಬಿಬಿಎಂಪಿಯದ್ದು.

ದೂರಗಾಮಿಯಾಗಿ ಲಾಭದಾಯಕ

‘ಆರಂಭದಲ್ಲಿ ಇದೊಂದು ದೊಡ್ಡ ವೆಚ್ಚದಂತೆ ಅನಿಸಬಹುದು. ಆದರೆ ದೂರಗಾಮಿ ದೃಷ್ಟಿಯಿಂದ ನೋಡಿದರೆ ಇದು ಎಲ್ಲ ರೀತಿಯಿಂದಲೂ ಲಾಭ ತರುವ ಕ್ರಮ. ತ್ಯಾಜ್ಯ ವಿಲೇವಾರಿ ಸಮಸ್ಯೆ, ಸಾಗಾಟ ವೆಚ್ಚ ಕಡಿಮೆ ಮಾಡಲು ಪ್ರತಿ ವಾರ್ಡ್‌ಗೆ 2ರಂತೆ ನಗರದ 400 ಕಡೆಗಳಲ್ಲಿ ಇಂಥ ಘಟಕ ಸ್ಥಾಪನೆ ಮಾಡಲಾಗುವುದು’ ಎಂದರು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ಪ್ರಸಾದ್‌. 

ವಿದ್ಯುತ್‌ ಎಲ್ಲಿಗೆ? ಎಷ್ಟು ?

250 ಕಿಲೋ ವಾಟ್‌ ಪೈಕಿ 150 ಕಿಲೋವಾಟ್‌ ವಿದ್ಯುತ್‌ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಗೆ ಸೇರಿದ 17 ಕಟ್ಟಡಗಳು, 13 ಉದ್ಯಾನಗಳು ಮತ್ತು 3 ಕಿಲೋಮೀಟರ್‌ ಉದ್ದದ ಮಾದರಿ ರಸ್ತೆಯ ಬೀದಿ ದೀಪಗಳಿಗೆ ಬಳಕೆಯಾಗುತ್ತದೆ. ಇದರಿಂದ ಪ್ರತಿ ತಿಂಗಳು ಬೆಸ್ಕಾಂಗೆ ಪಾವತಿಸುತ್ತಿದ್ದ ₹ 9 ಲಕ್ಷ ವಿದ್ಯುತ್‌ ಬಿಲ್‌ ಉಳಿತಾಯವಾಗಲಿದೆ. ಇನ್ನು 100 ಕಿಲೋವಾಟ್ ವಿದ್ಯುತ್‌ನ್ನು ಬೆಸ್ಕಾಂಗೆ ಮಾರಾಟ ಮಾಡಲಾಗುತ್ತದೆ. ಇದರಿಂದ 
₹ 6 ಲಕ್ಷ ಆದಾಯ ಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !