ಇವರು ಕಾಡು ಮರಗಳ ಡೈರೆಕ್ಟರಿ!

7

ಇವರು ಕಾಡು ಮರಗಳ ಡೈರೆಕ್ಟರಿ!

Published:
Updated:

ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ಸಮೀಪದ ಇಡುಗುಂದಿಯ ಅರಬೈಲ್ ಹೆದ್ದಾರಿ 63ರ ಬದಿಯಲ್ಲಿ ಹಸಿರ ಸಿರಿಯ ತಾಣವೊಂದು ಕೈಬೀಸಿ ಕರೆಯುತ್ತದೆ. ಹಾಗೇ ಒಳ ಹೊಕ್ಕರೆ ಚಿಗುರಿನ ಸಂಭ್ರಮದಲ್ಲಿರುವ ಸಸಿಗಳ ನಡುವೆ ಹಸಿರು ಟೊಪ್ಪಿ, ಖಾಕಿ ದಿರಿಸು ಧರಿಸಿರುವ ವ್ಯಕ್ತಿಯೊಬ್ಬರು ಲಗುಬಗೆಯಿಂದ ಓಡಾಡುತ್ತಾ, ಗಿಡಗಳನ್ನು ಆರೈಕೆ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಅವರೇ ಅರಣ್ಯ ಇಲಾಖೆಯ ವನಪಾಲಕ ನಾರಾಯಣ ಬಿಲ್ಲಚತ್ರಿ.

ಇಡುಗುಂದಿ ವಲಯದ ಅರಣ್ಯ ಇಲಾಖೆಯಲ್ಲಿ 29 ವರ್ಷಗಳಿಂದ ವನಪಾಲಕರಾಗಿರುವ ನಾರಾಯಣ, ಉತ್ತರ ಕನ್ನಡದ ಕಾಡು ಗಿಡಗಳ ಮಾಹಿತಿ ಭಂಡಾರ. ಕಾಡು ಹಾದಿಯಲ್ಲಿ ಹೆಜ್ಜೆ ಹಾಕಿದರೆ ಸಾಕು, ‘ಇದು ನೋಡಿ ಮತ್ತಿ ಮರ, ಅದೋ ಅಲ್ಲಿರುವುದು ಅಪರೂಪದ ದೇವದಾರಿ, ಇತ್ತ ಎಡಕ್ಕಿರುವುದು ಗೊತ್ತಿಲ್ಲವೇ ನಿಮಗೆ ತೇಗ ಅದು’ ಎನ್ನುತ್ತ ಹೆಜ್ಜೆ ಹಾಕುತ್ತಾರೆ. ಅವರ ಹಿಂದೆ ನಾವು ಹೋಗುತ್ತಾ, ಅವರ ಮಾತುಗಳಿಗೆ ಕಿವಿಯಾದರೆ ಕಾಡಿನ ಕೌತುಕಗಳೇ ಅಲ್ಲಿ ಅನಾವರಣಗೊಳ್ಳುತ್ತವೆ.

ಗಗನಮುಖಿಯಾಗಿರುವ ಬೃಹತ್ ಮರಗಳು ಮಾತ್ರವಲ್ಲ, ಗಿಡಮೂಲಿಕೆಗಳ ಜತೆಗೂ ನಂಟು ಹೊಂದಿರುವ ಅವರು ಯಾವ ಗಿಡ, ಯಾವ ಕಾಯಿಲೆಗೆ ಮದ್ದಾಗಬಲ್ಲದು ಎಂಬುದನ್ನು ಅರಳು ಹುರಿದಂತೆ ಹೇಳಬಲ್ಲರು. ಅಪರೂಪದ ಔಷಧ ಸಸ್ಯಗಳ ವಿರಾಟ್ ದರ್ಶನ ಮಾಡಿಸುವ ನಾರಾಯಣ ಅವರು ‘ಕಾಡು ಮರಗಳ ಡೈರೆಕ್ಟರಿ’ಯಂತಿದ್ದಾರೆ.

(ಇಲಾಖೆಗೆ ಸೇರಿದ ಆರಂಭದಲ್ಲಿ ನೆಟ್ಟ ಬೈನೆ ಮರ)

ಬೆರಗು ಮೂಡಿಸುವ ಸಸ್ಯ ಜ್ಞಾನ: ಸಿದ್ದಾಪುರ ತಾಲ್ಲೂಕಿನ ಕಡಿಕೇರಿ ಕಾನಹಳ್ಳಿಯ ನಾರಾಯಣ, ಓದಿದ್ದು ಏಳನೇ ಕ್ಲಾಸ್‌ವರೆಗೆ. ಆದರೆ, ಅವರಿಗಿರುವ ಸಸ್ಯಜ್ಞಾನ ಮಾತ್ರ ಸಸ್ಯಶಾಸ್ತ್ರಜ್ಞರನ್ನೂ ಬೆರಗಾಗಿಸುವಂಥದ್ದು. ಬಾಲ್ಯದಿಂದಲೂ ಕಾಡಿನ ಬಗ್ಗೆ ಅತೀವ ಪ್ರೀತಿ ಬೆಳೆಸಿಕೊಂಡು, ಕೃಷಿಕರು ಹೇಳುತ್ತಿದ್ದ ಕಾಡಿನ ರೋಚಕ ಕಥೆಗಳನ್ನು ಕೇಳಿಕೊಂಡು ಬೆಳೆದಿರುವ ಅವರಿಗೆ, ಕಾಡು ಸಸಿಗಳನ್ನು ಬೆಳೆಸುವ ಜ್ಞಾನ ಕರಗತವಾಗಿದೆ.‌

‘ಕಾಡು ಸುತ್ತುವಾಗ ಮಳೆ ಬಂದರೆ ಮೈ ನೆನೆಯದ ಹಾಗೆ ತಾಳೆ ಹೆಡೆ ಹೊದ್ದುಕೊಳ್ಳುತ್ತಿದ್ದೆ. ಹಸಿವಾದರೆ ನೆರತೆ ಸೊಪ್ಪು ತಿನ್ನುತ್ತಿದ್ದೆ. ಕೈ ಕಾಲಿಗೆ ಗಾಯವಾದರೆ ಕಾಡು ತೊಂಡೆಯಗಿಡದ ರಸ ಹಚ್ಚಿಕೊಳ್ಳುತ್ತಿದ್ದೆ. ಬಾಯಾರಿಕೆಯಾದರೆ ಮತ್ತಿ ಮರದ ಕಾಂಡದ ಬೊಡ್ಡೆಯಂತಹ ಭಾಗವನ್ನು ಚಿಕ್ಕದಾಗಿ ಸೀಳಿ, ಅದರಿಂದ ನಲ್ಲಿಯ ನೀರಿನಂತೆ ಲೀಟರುಗಟ್ಟಲೆ ಸುರಿಯುವ ಸಿಹಿ ನೀರು ಕುಡಿತು ದಾಹ ತಣಿಸಿಕೊಳ್ಳುತ್ತಿದ್ದೆ’ ಎನ್ನುತ್ತಾ ಬಾಲ್ಯದಲ್ಲಿ ಕಲಿತ ಕಾಡಿನ ಪಾಠಗಳನ್ನು ನಾರಾಯಣ ನೆನಪಿಸಿಕೊಳ್ಳುತ್ತಾರೆ.

ಎಲೆಗಳ ರಚನೆಯಿಂದ ಮರಗಳನ್ನು ಗುರುತಿಸುವಂತಹ ಸಾಂಪ್ರದಾಯಿಕ ಜ್ಞಾನ ನಾರಾಯಣ ಅವರಲ್ಲಿದೆ. ಬೇರಿನ ಮೂಲಕ ನೆಲದ ತೇವವನ್ನು ಹೀರಿ, ಬೆಳಕು ಗಾಳಿಯನ್ನು ಅನುಸರಿಸಿ ಬೆಳೆಯುವ ಸಸ್ಯಗಳಿಂದ ಹಿಡಿದು ಮುಗಿಲೆತ್ತರಕ್ಕೆ ಬೆಳೆದು ನಿಲ್ಲುವರೆಗಿನ ಕಾಡಿನ ಮರಗಳ ಬೆಳವಣಿಗೆಯನ್ನು ತುಂಬಾ ಸೂಕ್ಷ್ಮವಾಗಿ ಅವರು ಗುರುತಿಸುತ್ತಾರೆ. ‘ಇಂಥ ಸೂಕ್ಷ್ಮಗಳಿಂದ ಪ್ರತಿ ಹಂತದಲ್ಲೂ ಕಾಡಿನಲ್ಲಾಗುವ ಪಲ್ಲಟಗಳನ್ನು ಗುರುತಿಸಬಹುದು’ ಎಂಬುದು ಅವರು ಅಭಿಪ್ರಾಯ.

ಕಾಡು ಮರ – ಬೀಜೋಪಚಾರ: ಬೇಸಿಗೆಯಲ್ಲಿ ಕಾಡು ಸುತ್ತಾಡುವಾಗ ಸಿಗುವ ಬೀಜಗಳನ್ನು ಸಂಗ್ರಹಿಸುತ್ತಾರೆ. ಪ್ರತಿ ತಳಿಯ ಬೀಜವನ್ನು ಉಪಚಾರ ಮಾಡಿ, ಬಿಸಿಲಿಗೆ ಒಣಗಿಸಿ ಸಸಿಮಡಿಯಲ್ಲಿ ಬೆಳೆಸುತ್ತಾರೆ ನಾರಾಯಣ. ವಲಯ ಅರಣ್ಯಾಧಿಕಾರಿ ಹಿಮವತಿ ಭಟ್ ಹೇಳುವಂತೆ, ‘ನಾರಾಯಣ ಅವರು ಬೀಜೋಪಚಾರ ಮಾಡಿ, ನಾಟಿ ಮಾಡಿದ ಗಿಡಗಳು ಆರೋಗ್ಯ ಪೂರ್ಣವಾಗಿ ಬೆಳೆಯುತ್ತವೆ. ಇದರಿಂದಾಗಿಯೇ ಅವರು ಉಳಿದ ವನಪಾಲಕರಿಂತ ಭಿನ್ನವಾಗಿ ಕಾಣುತ್ತಾರೆ’.

ಹೆಬ್ಬೇವಿನ ಬೀಜಗಳ ಸಿಪ್ಪೆ ತೆಗೆದು, ಬೀಜ ಮೊಳೆಯಲು ಸಿದ್ದತೆ ಮಾಡುತ್ತಾರೆ. ತೊಗಟೆ ಗಟ್ಟಿಯಿರುವ ಬನಾಟೆ, ರಾಮಪತ್ರೆ, ಸಿಸಮ್, ಧೂಪ, ಬರಣಗಿ, ನಂದಿ, ಕಲಂ, ಹೆದ್ದಿ..

ಹೀಗೆ ಕಾಡಿನ ಹಲವು ಸಸ್ಯಗಳಿಗೆ ನರ್ಸರಿಯಲ್ಲಿ ಜಾಗ ಕೊಟ್ಟು, ಮುಂದಿನ ಮಳೆಗಾಲಕ್ಕೆ ಸಸಿಗಳನ್ನಾಗಿಸುತ್ತಾರೆ. ಕಾಡಿನ ನೆಲದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಸಸಿಗಳಿಗೂ ನರ್ಸರಿಯಲ್ಲಿ ಬೆಳೆಸಿ ದೊಡ್ಡವಾಗಿಸುತ್ತಾರೆ. ಪ್ರತಿ ವರ್ಷ ನೆಡುತೋಪಿಗಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಸಿಗಳನ್ನು ಬೆಳೆಸಿ ಕೊಡುತ್ತಿದ್ದಾರೆ. ಕಳೆದ ಬಾರಿ ಬೆಳೆಸಿದ ಔಷಧ ಗಿಡಗಳು ಚಾಮರಾಜನಗರದ ಕೊಳ್ಳೆಗಾಲ, ಬೆಳಗಾವಿಯ ಖಾನಾಪುರ ತಲುಪಿವೆ.

ಅರಣ್ಯ ಇಲಾಖೆಯಲ್ಲಿ 29 ವರ್ಷಗಳು ಸಲ್ಲಿಸಿರುವ ಸೇವೆಗೆ ಅರಣ್ಯ ಇಲಾಖೆಯ ನರ್ಸರಿ ಆವರಣದಲ್ಲಿರುವ ಅನೇಕ ಗಿಡ ಮರಗಳು ಸಾಕ್ಷಿಯಾಗಿವೆ. ಕೆಲಸಕ್ಕೆ ಸೇರಿದಾಗ ಆ ಜಾಗದಲ್ಲೇ ನೆಟ್ಟಿದ್ದ ಬೈನೆ ಗಿಡವೊಂದು ಈಗ ಬೆಳೆದು ದೊಡ್ಡದಾಗಿದೆ. ಅದು ನಾರಾಯಣ ಅವರ ಎರಡು ದಶಕಗಳ ‘ಸಸ್ಯ ಶಾಮಲೆ’ಯ ಸೇವೆಯನ್ನು ಜ್ಞಾಪಿಸುತ್ತದೆ. ಪತ್ನಿ ಗುಲಾಬಿ, ಮಕ್ಕಳಾದ ಪ್ರವೀಣಾ, ಕಿರಣ್ ಸಹಕಾರ ಅವರ ಸೇವೆಗೆ ಆನೆಬಲ ತುಂಬಿದೆ.

62 ಗಿಡಮೂಲಿಕೆಗಳ ಔಷಧೀಯ ವನ

‌ನಾರಾಯಣರ ಮಾಹಿತಿಕೋಶದಲ್ಲಿ ಕಾಡು ಸಸಿಗಳಷ್ಟೇ, ಸಾಕಷ್ಟು ಔಷಧೀಯ ಸಸ್ಯಗಳ ಬಗೆಗಿನ ಮಾಹಿತಿ ಇದೆ. ಇಡಗುಂದಿ ವಲಯ ಅರಣ್ಯ ಅಧಿಕಾರಿ ಹಿಮವತಿ ಭಟ್ ಸಲಹೆಯಂತೆ ನರ್ಸರಿ ವ್ಯಾಪ್ತಿಯಲ್ಲಿ 62 ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಈ ಔಷಧೀಯ ವನದಲ್ಲಿ ಕೃಷ್ಣ ತುಳಸಿ, ಕಪ್ಪು ಮತ್ತು ಕೆಂಪು ತುಳಸಿ, ರಕ್ತಚಂದನ, ಪಿನಾರೆ, ಮರ ಅರಿಸಿನ, ಉತ್ತರಾಣೆ, ಕಲ್ಲು ತುಂಬೆ, ಕೆಂಪು-ಬಿಳಿ ತುಂಬೆ, ನೆಲ ನೆಲ್ಲಿ, ಚಿರಾತಕಡ್ಡಿ, ಜಂತಾಲೆಗಿಡ, ಔಡಲ, ಬಿಳಿ ಸುರುಳಿ, ಕೊಡಸೆ ಮತ್ತು ಚಂಡಂಗಲು, ಕಷಾಯಕ್ಕೆ ಅಮೃತಬಳ್ಳಿ, ಹಾಲಬಳ್ಳಿ, ಬಜೆಕೊಂಬು, ಭೃಂಗರಾಜ, ಗೌರಿ ಬಳ್ಳಿಯಂತಹ ಗಿಡಗಳು ಸ್ಥಾನ ಪಡೆದಿವೆ.

ನಾರಾಯಣ ಅವರು ಔಷಧೀಯ ಸಸ್ಯಗಳನ್ನು ಬೆಳೆಸುವ ಜತೆಗೆ, ಅವುಗಳ ಔಷಧೀಯ ಗುಣಗಳನ್ನು ಜನರಿಗೆ ಪರಿಚಯಿಸುತ್ತಾರೆ. ಬಳಕೆಯ ಬಗೆಗೆ ಪರಿಚಯಿಸಿದರೂ, ಒಮ್ಮೆ ವೈದ್ಯರ ಸಲಹೆ ಪಡೆಯಲು ಸೂಚಿಸುವುದನ್ನು ಮರೆಯುವುದಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry